ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು: ಮಹಿಳೆ ಹತ್ಯೆ,ಇಬ್ಬರ ಬಂಧನ

ಚಿನ್ನಾಭರಣ ದೋಚುವ ಉದ್ದೇಶದಿಂದ ಕೊಲೆ
Last Updated 8 ಅಕ್ಟೋಬರ್ 2020, 2:11 IST
ಅಕ್ಷರ ಗಾತ್ರ

ಮೈಸೂರು: ಒಂದೂವರೆ ತಿಂಗಳ ಹಿಂದೆ ಮಹಿಳೆಯೊಬ್ಬರನ್ನು ಕೊಲೆ ಮಾಡಿ ಚಿನ್ನಾಭರಣ ದೋಚಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ..

ಕುಮಾರಸ್ವಾಮಿ ಆಲಿಯಾಸ್ ಮದನ್ (20 ವರ್ಷ) ಹಾಗೂ ನಾಗೇಂದ್ರ ಆಲಿಯಾಸ್ ಅಪ್ಪು (20) ಬಂಧಿತ ಆರೋಪಿಗಳು.

ತಿ.ನರಸೀಪುರ ತಾಲ್ಲೂಕಿನ ಬನ್ನೂರು ಠಾಣಾ ವ್ಯಾಪ್ತಿಯ ನುಗ್ಗಹಳ್ಳಿ ಕೊಪ್ಪಲು ಗ್ರಾಮದ ಪುಟ್ಟಸ್ವಾಮಿ ಎಂಬುವವರ ಪತ್ನಿ ಮಹದೇವಿ (45) ಎಂಬುವವರನ್ನು ಆಗಸ್ಟ್‌ 18ರಂದು ದುಷ್ಕರ್ಮಿಗಳು ಕೊಲೆ ಮಾಡಿದ್ದರು. ಗ್ರಾಮದ ಹೊರವಲಯದ ತೋಪಿನಲ್ಲಿ ಚಿನ್ನಾಭರಣ ದೋಚುವ ಉದ್ದೇಶದಿಂದ ಹೊಂಚು ಹಾಕಿ, ಮಾರಕಾಸ್ತ್ರಗಳಿಂದ ತಲೆಗೆ ಹೊಡೆದು ಕತ್ತು ಬಿಗಿದು ಈ ಕೃತ್ಯ ಎಸಗಿದ್ದರು. ಮಹಿಳೆಯ ಕಿವಿ ಓಲೆ, ಮಾಂಗಲ್ಯ ಕರಿಮಣಿ ಸರ ತೆಗೆದುಕೊಂಡು ಪರಾರಿಯಾಗಿದ್ದರು. ಬನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣದ ತನಿಖೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ಅವರು ಡಿವೈಎಸ್ಪಿ ಪ್ರಭಾಕರ್ ಸಿಂಧೆ ಮಾರ್ಗದರ್ಶನದಲ್ಲಿ ಮತ್ತು ತಿ.ನರಸೀಪುರ ಸಿಪಿಐ ಲವ ನೇತೃತ್ವದಲ್ಲಿ ತಂಡ ರಚಿಸಿದ್ದರು. ಇವರು ಆರೋಪಿಗಳನ್ನು ಪತ್ತೆ ಹಚ್ಚಿ ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ.

ಮಹದೇವಿ ಅವರು ಎಮ್ಮೆ ಮೇಯಿಸಲು ತೋಪಿನ ಹತ್ತಿರ ಒಬ್ಬರೇ ಬರುವುದನ್ನು ನೋಡಿ, 3–4 ದಿನ ಹೊಂಚು ಹಾಕಿ ಚಿನ್ನಾಭರಣ ದೋಚುವ ಉದ್ದೇಶದಿಂದ ಹತ್ಯೆ ಮಾಡಲಾಯಿತು ಎಂದು ಆರೋಪಿಗಳು ಹೇಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಪಿಎಸ್‌ಐ ಪುನೀತ್, ಹೆಡ್‌ ಕಾನ್‌ಸ್ಟೆಬಲ್‌ ಪ್ರಭಾಕರ್, ಸತೀಶ್, ರಮೇಶ್, ಭಾಸ್ಕರ್, ನಾರಾಯಣ್, ಮಂಜುನಾಥ್, ಸೋಮಶೇಖರ್, ಕಾನ್‌ಸ್ಟೆಬಲ್‌ಗಳಾದ ಇಸ್ಮಾಯಿಲ್, ಮಂಜು, ಬೈರಪ್ಪ, ಅಲ್ಲಾವುದ್ದೀನ್, ಗಿರೀಶ್‌ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT