ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು: ಈ ಮಹಿಳೆಗೆ ಬಸ್ ನಿಲ್ದಾಣವೇ ಆಸರೆ!

ಕೆಲವು ದಿನಗಳಿಂದ ಸಾಮಗ್ರಿಗಳೊಂದಿಗೆ ತಂಗಿರುವ ವೃದ್ಧೆ
Last Updated 22 ಜುಲೈ 2022, 19:45 IST
ಅಕ್ಷರ ಗಾತ್ರ

ಮೈಸೂರು: ಅಸಹಾಯಕ ಮಹಿಳೆಯೊಬ್ಬರು ಇಲ್ಲಿನ ಜಯನಗರ ಮುಖ್ಯ ರಸ್ತೆಯಲ್ಲಿರುವ ಪ್ರಯಾಣಿಕರ ತಂಗುದಾಣವನ್ನೇ ಮನೆ ಮಾಡಿಕೊಂಡಿದ್ದಾರೆ!

ಕೆಲವು ದಿನಗಳಿಂದ ಅವರು, ದಿನಬಳಕೆಯ ವಸ್ತುಗಳು, ಬಕೆಟ್‌ಗಳು, ಬಟ್ಟೆಗಳು, ಕೆಲವು ಬ್ಯಾಗ್‌ಗಳು, ಕನ್ನಡಿ, ಒಂದಷ್ಟು ದಾಖಲೆಪತ್ರಗಳು ಮೊದಲಾದವುಗಳೊಂದಿಗೆ ತಂಗಿದ್ದಾರೆ. ಮೈಕೊರೆಯುವ ಚಳಿಯ ನಡುವೆಯೂ ರಾತ್ರಿ ಕಳೆಯುತ್ತಿದ್ದಾರೆ. ಇದನ್ನು ಗಮನಿಸಿದ ದಾರಿಹೋಕರು ಮಹಿಳೆಯ ಬಗ್ಗೆ ಕನಿಕರ ವ್ಯಕ್ತಪಡಿಸುತ್ತಿದ್ದಾರೆ.

ಕನ್ನಡ ಹಾಗೂ ತೆಲುಗು ಭಾಷೆಯಲ್ಲಿ ಮಾತನಾಡುವ ಅವರು, ವೈಯಕ್ತಿಕ ವಿವರವನ್ನು ಹೇಳಿಕೊಳ್ಳಲು ನಿರಾಕರಿಸಿದರು. ‘ಜಯನಗರದಲ್ಲೇ ಇರುವ ವೃದ್ಧಾಶ್ರಮವೊಂದರಲ್ಲಿ ಎರಡು ವರ್ಷಗಳಿಂದ ಇದ್ದೆ. ಬೋಗಸ್‌ ಟ್ರಸ್ಟ್‌ ಹಾಗೂ ನಾನಿದ್ದ ವೃದ್ಧಾಶ್ರಮದ ಟ್ರಸ್ಟ್ ನಡುವಿನ ಜಗಳದಿಂದ ನನ್ನನ್ನು ಹೊರ ಹಾಕಿದರು. ಆದ್ದರಿಂದ ಕೆಲವು ದಿನಗಳಿಂದಲೂ ಇಲ್ಲಿದ್ದೇನೆ. ನನಗೆ ಯಾರೂ ಇಲ್ಲ ಎಂದುಕೊಳ್ಳಬೇಡಿ. ಬಂಧುಗಳ ಬಹಳಷ್ಟು ಮಂದಿ ಇದ್ದಾರೆ’ ಎಂದು ತಿಳಿಸಿದರು. ತೆಲುಗು ಚಲನಚಿತ್ರ ರಂಗದ ಪ್ರಖ್ಯಾತ ನಟರೆಲ್ಲರೂ ನನಗೆ ಗೊತ್ತು ಎಂದೂ ಹೇಳಿದರು.

ಪೊರಕೆ, ಕೋಲು:

ವಿಚಾರಿಸಲು ಬಂದವರನ್ನೆಲ್ಲಾ ಗದರುವ ಆ ಮಹಿಳೆ, ಮಾನಸಿಕವಾಗಿ ಬಹಳ ನೊಂದಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿತ್ತು. ಸಹಾಯ ಮಾಡುವುದಕ್ಕೆ ಬರುವವರನ್ನೂ ಅನುಮಾನದಿಂದ ಕಂಡು, ಸಹಾಯ ನಿರಾಕರಿಸುತ್ತಿದ್ದಾರೆ. ನನ್ನನ್ನು ಯಾರೂ ಮಾತನಾಡಿಸಬೇಡಿ ಎಂದು ಹೇಳುತ್ತಿದ್ದರು. ಚಾಪೆ, ಹೊದಿಕೆ–ದಿಂಬು ಮೊದಲಾದವುಗಳನ್ನೂ ಇಟ್ಟುಕೊಂಡು, ತಂಗುದಾಣದಲ್ಲೇ ನಿದ್ರಿಸುತ್ತಾರೆ. ಬೀದಿ ನಾಯಿಗಳ ಕಾಟದ ನಡುವೆಯೂ ಅವರು ಅಲ್ಲಿಯೇ ಇದ್ದಾರೆ. ಅವುಗಳನ್ನು ಓಡಿಸುವುದಕ್ಕಾಗಿ ಪೊರಕೆ, ಕೋಲುಗಳನ್ನೂ ಇಟ್ಟುಕೊಂಡಿದ್ದಾರೆ.

‘ಬಸ್ ನಿಲ್ದಾಣದಲ್ಲಿ ಎಷ್ಟು ದಿನ ಇರುತ್ತೀರಿ? ಇದು ಸುರಕ್ಷಿತವಲ್ಲ, ನಿಮ್ಮ ಕುಟುಂಬದವರ ಮಾಹಿತಿ ಕೊಟ್ಟರೆ ಕಳುಹಿಸಲು ವ್ಯವಸ್ಥೆ ಮಾಡಬಹುದು’ ಎಂದು ದಾರಿಹೋಕರೊಬ್ಬರು ಕೇಳಿದಾಗಲೂ ಗದರಿದರು. ‘ಬಿಎ ಪ್ರಥಮ ಶ್ರೇಣಿಯಲ್ಲಿ ಮುಗಿಸಿದ್ದೇನೆ. ಯಾರ ಸಹಾಯವೂ ಬೇಡ. ಊಟ, ಉಪಾಹಾರಕ್ಕೆ ಹೋಟೆಲ್‌ನಲ್ಲಿ ಮಾಡುತ್ತೇನೆ’ ಎಂದು ಉತ್ತರಿಸಿದರು.

ಅವರಿಗೆ ನೆರವಾಗಲಿ:

‘ಪಾಪ, ಅವರು ಶೌಚಕ್ಕೆ ಏನು ಮಾಡುತ್ತಾರೋ. ಅವರ ಸ್ಥಿತಿ ನೆನೆದರೆ ನೋವಾಗುತ್ತದೆ. ಸಹಾಯ ಮಾಡೋಣ ಎಂದು ವಿಚಾರಿಸಿದರೆ ಏನೇನೋ ಮಾತನಾಡುತ್ತಾರೆ. ವಿಚಾರಿಸುವವರನ್ನೆಲ್ಲಾ ಬೈತಾರೆ. ಅಸಹಾಯಕ ಸ್ಥಿತಿಯಲ್ಲಿರುವ ಅವರಿಗೆ ಸಂಬಂಧಿಸಿದ ಇಲಾಖೆಯವರು ನೆರವಾಗಬೇಕು’ ಎಂದು ಬಸ್‌ ನಿಲ್ದಾಣದ ಸಮೀಪದ ಮನೆಯ ಮಹಿಳೆಯೊಬ್ಬರು ಕೋರಿದರು.

‘ಮಹಿಳೆಯು ಮಾನಸಿಕವಾಗಿ ಬಹಳ ನೊಂದಂತೆ ಕಾಣುತ್ತದೆ. ತೀರಾ ಬಡವರಂತೆಯೂ ಕಾಣಿಸುವುದಿಲ್ಲ. ದಿನವೆಲ್ಲಾ, ಅದರಲ್ಲೂ ರಾತ್ರಿಯಲ್ಲಿ ಬಸ್‌ ನಿಲ್ದಾಣದಲ್ಲಿ ಅವರು ತಂಗುವುದು ಸುರಕ್ಷಿತವಲ್ಲ. ಅವರ ಹಿನ್ನೆಲೆ ಅಥವಾ ಕುಟುಂಬದ ಸ್ಥಿತಿಯನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಥವಾ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯವರು ತಿಳಿದುಕೊಂಡು ನೆರವಾಗಬೇಕು. ಸ್ಥಳೀಯ ಜನಪ್ರತಿನಿಧಿಗಳು ಇತ್ತ ಗಮನಹರಿಸಬೇಕು. ನಿರಾಶ್ರಿತರ ಕೇಂದ್ರಕ್ಕೋ ಅಥವಾ ವೃದ್ಧಾಶ್ರಮಕ್ಕೋ ಸೇರಿಸಿ ಆಶ್ರಯ ನೀಡುವ ಕೆಲಸವಾಗಬೇಕು. ಕುಟುಂಬವಿದ್ದಲ್ಲಿ, ಅಲ್ಲಿಗೆ ಸೇರುವಂತೆಯಾದರೂ ಮಾಡಬೇಕು’ ಎನ್ನುತ್ತಾರೆ ವಕೀಲ ಪಿ.ಜೆ.ರಾಘವೇಂದ್ರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT