ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಗಾಯಣದಲ್ಲಿ ‘ವಿಶ್ವ ಪರಿಸರ ದಿನ’ ವಿಶಿಷ್ಟ ರೀತಿಯಲ್ಲಿ ಆಚರಣೆ

ಪರಿಸರ ಗೀತೆಯ ಜತೆ ‘ರಂಗ ಹೊನ್ನಾರು’
Last Updated 6 ಜೂನ್ 2020, 8:53 IST
ಅಕ್ಷರ ಗಾತ್ರ

ಮೈಸೂರು: ವಸಂತದಿಂದ ವಸಂತದೆಡೆಗೆ... ಅನಂತವಾಗಿಹ ಪಯಣದ ನಡಿಗೆ... ಹಾಡು ಇಂಪಾಗಿ ಕೇಳಿಬರುತ್ತಿದ್ದರೆ, ರಂಗಾಯಣದ ಕಲಾವಿದರು ಗಿಡಗಳನ್ನು ನೆಟ್ಟು ನೀರು ಹಾಕಿದರು.

ರಂಗ ಚಟುವಟಿಕೆಯ ಕೇಂದ್ರವಾಗಿರುವ ರಂಗಾಯಣದ ಆವರಣದಲ್ಲಿ ಶುಕ್ರವಾರ ಕಂಡುಬಂದ ದೃಶ್ಯವಿದು. ವಿಶ್ವ ಪರಿಸರ ದಿನವನ್ನು ಈ ಬಾರಿ ‘ರಂಗ ಹೊನ್ನಾರು’ ಎಂಬ ಹೆಸರಿನೊಂದಿಗೆ ಅರ್ಥಪೂರ್ಣವಾಗಿ ಆಚರಿಸಲಾಯಿತು.

‘ಲಾಕ್‌ಡೌನ್‌’ನಿಂದಾಗಿ ರಂಗಾಯಣದ ಚಟುವಟಿಕೆಗಳು ನಿಂತಿದ್ದವು. ಇದೀಗ ಲಾಕ್‌ಡೌನ್‌ ಬಳಿಕದ ಕಾರ್ಯಕ್ರಮಗಳಿಗೆ ‘ರಂಗ ಹೊನ್ನಾರು’ ಮೂಲಕ ಚಾಲನೆ ನೀಡಿತು. ಅರಣ್ಯ ಇಲಾಖೆ ಕೂಡಾ ಸಾಥ್‌ ನೀಡಿತು. ವಿವಿಧ ಜಾತಿಯ 100 ಗಿಡಗಳನ್ನು ನೆಡಲಾಯಿತು.

ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಸಿಸಿಎಫ್‌) ಹೀರಾಲಾಲ್‌ ಅವರು ಗಿಡನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಅರಣ್ಯ ಇಲಾಖೆ 50 ಗಿಡಗಳನ್ನು ನೀಡಿದ್ದರೆ, ರಂಗಾಯಣದ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ಅವರು ಕೊಡಗಿನಿಂದ ಗಿಡಗಳನ್ನು ತರಿಸಿದ್ದರು. ಎಲ್ಲ ಸೇರಿ 100 ಗಿಡಗಳನ್ನು ನೆಡಲಾಯಿತು.

ಸಾಕ್ಷ್ಯಚಿತ್ರ ಬಿಡುಗಡೆ: ಇತ್ತೀಚೆಗೆ ನಡೆದ ಬಹುರೂಪಿ–2020 ರಾಷ್ಟ್ರೀಯ ನಾಟಕೋತ್ಸವದ ಸಾಕ್ಷ್ಯಚಿತ್ರವನ್ನು ಇದೇ ವೇಳೆ ಬಿಡುಗಡೆ ಮಾಡಲಾಯಿತು.

‘ರಂಗಾಯಣ ಕಳೆದ 30 ವರ್ಷಗಳಿಂದ ಹಲವಾರು ಚಟುವಟಿಕೆಗಳನ್ನು ನಡೆಸುತ್ತಾ ಬಂದಿದೆ. ಆದರೆ ಬಹುತೇಕ ಕಾರ್ಯಕ್ರಮಗಳ ದಾಖಲೀಕರಣ ಆಗಿಲ್ಲ. ರಂಗಾಯಣದ ಚಟುವಟಿಕೆಗಳನ್ನು ದಾಖಲಿಸಿ ಮುಂದಿನ ಪೀಳಿಗೆಯವರಿಗೆ ಉಳಿಸಿಕೊಳ್ಳುವ ಕೆಲಸ ನಡೆಯಬೇಕಿದೆ. ಮೊದಲ ಹೆಜ್ಜೆಯಾಗಿ ಬಹುರೂಪಿ–2020 ಸಾಕ್ಷ್ಯಚಿತ್ರ ನಿರ್ಮಿಸಿದ್ದೇವೆ’ ಎಂದು ಕಾರ್ಯಪ್ಪ ತಿಳಿಸಿದರು.

ವನ್ಯಜೀವಿ ತಜ್ಞ ಕೃಪಾಕರ, ಡಿಸಿಎಫ್‌ಗಳಾದ ಅಲೆಕ್ಸಾಂಡರ್‌, ಕೆ.ಸಿ.ಪ್ರಶಾಂತ್ ಕುಮಾರ್, ಶ್ರೀಧರ್, ರಂಗಾಯಣದ ಜಂಟಿ ನಿರ್ದೇಶಕ ವಿ.ಎಸ್.ಮಲ್ಲಿಕಾರ್ಜುನ ಸ್ವಾಮಿ, ರಂಗಾಯಣ ಕಲಾವಿದರು ಹಾಜರಿದ್ದರು.

‘30 ಯೋಜನೆಗಳಿಗೆ ಒಪ್ಪಿಗೆ ಆಘಾತಕಾರಿ’

‘ಸರ್ಕಾರವು ದಟ್ಟ ಅರಣ್ಯ ಪ್ರದೇಶಗಳಲ್ಲಿ ಕೈಗೊಳ್ಳುವ ಸುಮಾರು 30 ಮೆಗಾ ಯೋಜನೆಗಳಿಗೆ ಒಪ್ಪಿಗೆ ನೀಡಿದೆ. ಇದು ನಿಜಕ್ಕೂ ಆಘಾತಕಾರಿ. ಕೊರೊನಾ ಲಾಕ್‌ಡೌನ್‌ ಅವಧಿಯಲ್ಲಿ ಸದ್ದಿಲ್ಲದೆ ಈ ಕೆಲಸ ನಡೆದಿದೆ’ ಎಂದು ವನ್ಯಜೀವಿ ತಜ್ಞ ಕೃಪಾಕರ ಹೇಳಿದರು.

‘ಒಂದು ಕಡೆಯಲ್ಲಿ ಹುಲಿ ಯೋಜನೆ, ಪರಿಸರ ಯೋಜನೆ ಎಂದು ಸರ್ಕಾರ ಕೋಟ್ಯಾಂತರ ಹಣ ಖರ್ಚು ಮಾಡುತ್ತದೆ. ಇನ್ನೊಂದು ಕಡೆ ಹುಲಿ ಸಂರಕ್ಷಣೆ ಪ್ರದೇಶದಲ್ಲಿ ಹೆದ್ದಾರಿ ನಿರ್ಮಿಸಲು ಒಪ್ಪಿಗೆ ನೀಡುತ್ತದೆ’ ಎಂದು ಟೀಕಿಸಿದರು.

ಅಭಿವೃದ್ಧಿ ಬೇಕು. ಆದರೆ ಅದಕ್ಕೆ ಒಂದು ಒಳನೋಟ ಇರಬೇಕು. ಒಂದು ಇಡೀ ಜೀವ ಪರಿಸರದ ಉಳಿವು ಇರುವುದು ವೈವಿಧ್ಯತೆ ಅಥವಾ ಬಹುತ್ವದಲ್ಲಿ. ಒಂದು ಕಾಡಿನಲ್ಲಿ ಹುಲಿ ಇದ್ದರೆ ಮಾತ್ರ ಅದು ಕಾಡು ಎನಿಸುವುದಿಲ್ಲ. ಬಹುತ್ವ ಇದ್ದರೆ ಮಾತ್ರ ಕಾಡು, ಪರಿಸರ ಎನಿಸಿಕೊಳ್ಳುತ್ತದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT