ಬುಧವಾರ, 19 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು: ಮದುವೆ ‍ಫೋಟೊ ತೆಗೆಯಲು ಬಂತು ರೋಬೊಟ್‌ !

‘ಇಂಡಿಬೊಟ್‌’ ಕಂಪನಿ ಸಂಸ್ಥಾಪಕ ಸಿದ್ದಯ್ಯ ವಿವಾಹದಲ್ಲಿ ಪ್ರಯೋಗ
Published 29 ಮೇ 2024, 5:36 IST
Last Updated 29 ಮೇ 2024, 5:36 IST
ಅಕ್ಷರ ಗಾತ್ರ

ಮೈಸೂರು: ಕೃತಕ ಬುದ್ಧಿಮತ್ತೆ (ಎ.ಐ) ತಂತ್ರಜ್ಞಾನದಲ್ಲಿ ಅಭಿವೃದ್ಧಿ ಪಡಿಸಿದ ರೋಬೊಟ್‌, ಮೊಟ್ಟಮೊದಲಿಗೆ ತನ್ನ ಸೃಷ್ಟಿಕರ್ತನ ವಿವಾಹದ ಫೋಟೊಗಳನ್ನು ತೆಗೆಯಲಿದೆ!

ಬೆಂಗಳೂರಿನ ‘ಇಂಡಿಬೊಟ್‌ ರೋಬೊಟಿಕ್ಸ್‌ ಕಂಪನಿ’ ಸಂಸ್ಥಾಪಕ ಸಿದ್ಧಯ್ಯ ಸ್ವಾಮಿ ಅವರ ವಿವಾಹ ಕಾವ್ಯಾ ಅವರೊಂದಿಗೆ ಜೂನ್ 2ರಂದು ಜಿಲ್ಲೆಯ ಪಿರಿಯಾಪಟ್ಟಣದ ಸಮೃದ್ಧಿ ಭವನದಲ್ಲಿ ನಡೆಯಲಿದ್ದು, ಫೋಟೊಗ್ರಾಫರ್‌ ಕೆಲಸವನ್ನು ತಾನೇ ‌ಮಾಡಲಿದೆ.

5 ಗಂಟೆಯಿಂದ 8 ಗಂಟೆವರೆಗೆ ಸತತ ಫೋಟೊ, ವಿಡಿಯೊ ತೆಗೆಯುವ ಶಕ್ತಿ ಈ ರೋಬೊಟ್‌ಗಿದೆ. ಅತಿಥಿಯ ಹೆಸರು ಹಾಗೂ ಫೋನ್ ನಂಬರ್ ನೀಡಿದರೆ, ತಾನೇ ಸಂಗ್ರಹಿಸಿಕೊಂಡ ಮದುವೆ ಆಲ್ಬಂನ ಸಾವಿರ ಫೋಟೊಗಳಲ್ಲಿ ಅವರ ಫೋಟೋಗಳನ್ನು ಹುಡುಕಿ ವಾಟ್ಸ್‌ಆ್ಯಪ್‌ಗೆ ಕಳುಹಿಸಲಿದೆ. ಪ್ರಿಂಟರ್‌ ಕೂಡ ಇರಲಿದ್ದು, ಚಿತ್ರವನ್ನೂ ಸ್ಥಳದಲ್ಲಿಯೇ ನೀಡುವುದು ಇನ್ನೊಂದು ವಿಶೇಷ!

ಕೆ.ಆರ್‌.ಪೇಟೆಯ ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಸಿವಿಲ್‌ ಎಂಜಿನಿಯರಿಂಗ್ ಓದಿದ್ದ ಬೀದರ್‌ನ ಔರದ್‌ ತಾಲ್ಲೂಕಿನ ಸಂತಪುರದ ಸಿದ್ಧಯ್ಯ, ಛಾಯಾಗ್ರಾಹಕರಾಗಿ ದಶಕದ ಕಾಲ ಕೆಲಸ ಮಾಡಿದ್ದಾರೆ. ಹೀಗಾಗಿಯೇ ಹೊಸ ಅನ್ವೇಷಣೆ ಮಾಡಿದ್ದಾರೆ.

‘ಫೋಟೊಗಳನ್ನು ತೆಗೆಸಿಕೊಂಡವರಿಗೆ ಚಿತ್ರಗಳನ್ನು ಬೇಗನೆ ಕಳುಹಿಸುತ್ತದೆ. ಸಾಮಾಜಿಕ ಜಾಲತಾಣಗಳ ಖಾತೆಗಳಲ್ಲಿ ಕೂಡಲೇ ಪೋಸ್ಟ್ ಮಾಡಿಕೊಳ್ಳುವ ಅವಕಾಶವೂ ಸಿಗಲಿದೆ. ಫೋಟೊಗ್ರಫಿ ಕ್ಷೇತ್ರದಲ್ಲಿ ಅತ್ಯಾಧುನಿಕ ಕ್ಯಾಮೆರಾಗಳು ಬಂದಿವೆ. ಆದರೆ, ಮದುವೆ ಫೋಟೊಗಳನ್ನು ಹಂಚಿಕೊಳ್ಳುವ ವಿಧಾನ ಮಾತ್ರ ಹಳೆಯದ್ದಾಗಿದೆ. ಹೀಗಾಗಿಯೇ ಹೊಸ ಪ್ರಯೋಗ ಮಾಡಲಾಗಿದೆ’ ಎನ್ನುತ್ತಾರೆ ಸಿದ್ದಯ್ಯ. 

‘6 ತಿಂಗಳ ಹಿಂದೆಯೇ ಸಾಫ್ಟ್‌ವೇರ್‌ ಅಭಿವೃದ್ಧಿ ಪಡಿಸಿದ್ದು, ರೋಬೊಟ್‌ ಮದುವೆ ಸಮಾರಂಭದಲ್ಲಿ ಫೋಟೊ ತೆಗೆದರೆ, ರೆಸ್ಟೋರೆಂಟ್‌ಗಳಲ್ಲಿ ಸರ್ವರ್‌ ಆಗಿ ಕೆಲಸ ಮಾಡುತ್ತದೆ. ದತ್ತಾಂಶ ಸಂಗ್ರಹ ಇರಲಿದ್ದು, ನಿಮಗ್ಯಾವ ತಿಂಡಿ ಇಷ್ಟ, ಎಂಬುದನ್ನು ಗುರುತಿಸುತ್ತದೆ’ ಎಂದು ಹೇಳಿದರು. 

‘ದಕ್ಷಿಣ ಕೊರಿಯಾದಲ್ಲಿ ಇಂಥವೇ ಮಾದರಿಯ ರೋಬೊಟ್‌ಗಳನ್ನು ನೋಡಿದ್ದೆ. ಅದರ ಸ್ಫೂರ್ತಿ ಪಡೆದು ಸಹ ಸಂಸ್ಥಾಪಕ ಎಂ.ಮನೋಕರನ್ ಅವರೊಂದಿಗೆ ಸೇರಿ ತಂಡದ ಶ್ರಮದಿಂದ ಭಾರತೀಯರ ಅಗತ್ಯಕ್ಕೆ ತಕ್ಕಂತೆ ಅಭಿವೃದ್ಧಿ ಪಡಿಸಲಾಗಿದೆ. ಕ್ಯಾಮೆರಾ, ಫೇಸ್‌ ರೆಕಗ್ನೈಸರ್, ಟಚ್‌ ಸ್ಕ್ರೀನ್‌, ಪ್ರಿಂಟರ್ ಇದ್ದು, ಸುಲಭವಾಗಿ ಎಲ್ಲೆಡೆ ಓಡಾಡುತ್ತದೆ. ಈ ರೋಬೊಟ್‌ಗೆ ನನ್ನ ವಿವಾಹವೇ ಮೊದಲ ವೇದಿಕೆಯಾಗಿದೆ’ ಎಂದು ಸಂತಸ ಹಂಚಿಕೊಂಡರು.

‘ಮದುವೆಯಲ್ಲಿ ಜನ ಗಿಜಿಗುಡುವುದರಿಂದ ರಿಮೋಟ್‌ನಿಂದ ಕೂಡ ನಿಯಂತ್ರಿಸುವ ವ್ಯವಸ್ಥೆ ಮಾಡಲಾಗಿದೆ. ಬೇರೆಡೆ ಎ.ಐ ಮಾತ್ರವೇ ಎಲ್ಲವನ್ನೂ ಮಾಡುತ್ತದೆ. ಬೆಲೆಯನ್ನು ಇನ್ನೂ ಅಂತಿಮಗೊಳಿಸಿಲ್ಲ. ಕೆಲವೇ ತಿಂಗಳಲ್ಲಿ ಮಾರುಕಟ್ಟೆ ಪ್ರವೇಶಿಸಲಿದೆ’ ಎಂದರು.

ಸಿದ್ದಯ್ಯಸ್ವಾಮಿ
ಸಿದ್ದಯ್ಯಸ್ವಾಮಿ
ದತ್ತಾಂಶ ಭದ್ರತೆ ಇರಲಿದ್ದು ಉದ್ಯೋಗವನ್ನೇನೂ ಕಡಿಮೆ ಮಾಡದು. ಡ್ರೋನ್‌ಗಳನ್ನು ಮದುವೆಗಳಲ್ಲಿ ಬಳಸುವಂತೆಯೇ ಇದನ್ನೂ ಬಳಸಬಹುದು
–ಸಿದ್ದಯ್ಯ ಸ್ವಾಮಿ ಸಿಇಒ ‘ಇಂಡಿಬೊಟ್‌ ರೋಬೊಟಿಕ್ಸ್‌ ಕಂಪನಿ’

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT