ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರಸಾದ್, ಶೇಖ್‌, ವಿದ್ಯಾರಣ್ಯಗೆ ‘ಅಕಾಡೆಮಿ’ ಗರಿ

ಸಾಂಸ್ಕೃತಿಕ ನಗರಿಯ ರಂಗಕರ್ಮಿಗಳಿಗೆ ‘ಕರ್ನಾಟಕ ನಾಟಕ ಅಕಾಡೆಮಿ’ ವಾರ್ಷಿಕ ಪ್ರಶಸ್ತಿ
Published : 9 ಆಗಸ್ಟ್ 2024, 5:31 IST
Last Updated : 9 ಆಗಸ್ಟ್ 2024, 5:31 IST
ಫಾಲೋ ಮಾಡಿ
Comments

ಕರ್ನಾಟಕ ನಾಟಕ ಅಕಾಡೆಮಿ ನೀಡುವ ಪ್ರತಿಷ್ಠಿತ ‘ನಾಟಕ ಅಕಾಡೆಮಿ ವಾರ್ಷಿಕ ಪ್ರಶಸ್ತಿ’ಗೆ ಸಾಂಸ್ಕೃತಿಕ ನಗರಿಯ ರಂಗಕರ್ಮಿಗಳಾದ ನೂರ್‌ ಅಹ್ಮದ್‌ ಶೇಖ್‌, ಪ್ರಸಾದ್‌ ಕುಂದೂರು, ಹಾಗೂ ಬಿ.ಎಸ್‌.ವಿದ್ಯಾರಣ್ಯ ಭಾಜನರಾಗಿದ್ದಾರೆ. ನಾಟಕ ಅಕಾಡೆಮಿಯು ಕಳೆದ 3 ವರ್ಷದ ಪ್ರಶಸ್ತಿಯನ್ನು ಗುರುವಾರ ಘೋಷಿಸಿದ್ದು, ಮೂವರನ್ನು ಕ್ರಮವಾಗಿ 2022–23, 2023–24, 2024–25ರ ಸಾಲಿನ ಪ್ರಶಸ್ತಿಗೆ ಆಯ್ಕೆ ಮಾಡಿದೆ.

ರಂಗ ಸಂಘಟಕ, ನಟ, ನಿರ್ದೇಶಕ ‌

ಮೂರು ದಶಕದಿಂದ ರಂಗಭೂಮಿಯಲ್ಲಿ ನಟ, ನಿರ್ದೇಶಕ, ನಾಟಕಕಾರ, ವಿನ್ಯಾಸಕಾರ ಹಾಗೂ ರಂಗ ಸಂಘಟಕ.. ಹೀಗೆ ‘ನಿರಂತರ’ವಾಗಿ ತೊಡಗಿಸಿಕೊಂಡಿರುವ ಪ್ರಸಾದ್‌, ಹಾಸನದ ಚನ್ನರಾಯಪಟ್ಟಣ ತಾಲ್ಲೂಕಿನ ಕುಂದೂರಿನವರು.

ಬಾಲ್ಯದಲ್ಲಿ ಚಿಕ್ಕಪ್ಪ ನುಡಿಸುತ್ತಿದ್ದ ಹಾರ್ಮೋನಿಯಂಗೆ ಜೇನುಮುತ್ತುವಂತೆ ಅಣ್ಣ ಹಾಗೂ ಗೆಳೆಯರೊಂದಿಗೆ ಮುತ್ತುತ್ತಿದ್ದ ಪ್ರಸಾದ್‌, ವೃತ್ತಿ ರಂಗಭೂಮಿ ಹಾಡುಗಳನ್ನು ಕಲಿತರು. ತಂದೆ ಮಾಡಿಸುತ್ತಿದ್ದ ಶಾಲಾ ನಾಟಕಗಳಲ್ಲಿ ಬಣ್ಣ ಹಚ್ಚಿದ ಅವರು, ಪ್ರೌಢಶಾಲೆ ಕಲಿಯುವಾಗ ಹಾಸನದ ವಸ್ತುಪ್ರದರ್ಶನ ಮೈದಾನದಲ್ಲಿ ನೋಡಿದ ಸಿಜಿಕೆ ಅವರ ‘ಬೆಲ್ಚಿ’ ನಾಟಕ, ರಂಗಭೂಮಿ ಕ್ಷೇತ್ರದಲ್ಲಿ ಶಾಶ್ವತವಾಗಿ ತೊಡಗಿಸಿಕೊಳ್ಳುವಂತೆ ಮಾಡಿತು.

10ನೇ ತರಗತಿ ಓದಲು ಮೈಸೂರಿಗೆ ಬಂದ ಅವರು ಜೆಎಸ್‌ಎಸ್‌ ಪ್ರೌಢಶಾಲೆ, ಮರಿಮಲ್ಲಪ್ಪ ಪಿಯು ಕಾಲೇಜು, ಮಹಾರಾಜ ಕಾಲೇಜು, ಮಾನಸಗಂಗೋತ್ರಿಯಲ್ಲಿ ಓದಿದರು. ನೆಳಲು–ಬೆಳಕು, ಜನಮನ ಸೇರಿದಂತೆ ರಂಗ ತಂಡಗಳ ಹುಟ್ಟಿಗೆ ಕಾರಣರಾದರು. ‘ಸಮುದಾಯ’ದ ರಂಗಮೇಳದಲ್ಲಿ ಹತ್ತಾರು ನಾಟಕ ಮಾಡಿದರು.

ಪಿಯು ಓದುವಾಗಲೇ ತೇಜಸ್ವಿ ಅವರ ‘ಮಾಯಾಮೃಗ’ ನಾಟಕವನ್ನು ಮಾಡಿದ್ದರು. ಗೆಳೆಯರೇ ಬರೆಯುತ್ತಿದ್ದ ನಾಟಕಗಳನ್ನು ನಿರ್ದೇಶಿಸಿದ್ದರು. ಲಂಕೇಶ್‌, ತೇಜಸ್ವಿ, ಅನಂತಮೂರ್ತಿ, ಕಂಬಾರ, ಕಾರ್ನಾಡರ ಕೃತಿಗಳ ಓದು, ಪ್ರೊ.ಕೆ.ರಾಮದಾಸ್‌ ಅವರ ಪಾಠಗಳು, ರೈತ– ದಲಿತ ಚಳವಳಿಗಳು ‘ಬದ್ಧ ರಂಗಭೂಮಿ’ಯಲ್ಲಿ ಇರುವಂತೆ ಮಾಡಿತು.  

ಗಂಗೋತ್ರಿಯಲ್ಲಿ ಓದುವಾಗ ಪರಶು, ಕೃಷ್ಣ, ಮಂದಾಕಿನಿ ಸೇರಿದಂತೆ ಹಲವರೊಂದಿಗೆ ಶುರು ಮಾಡಿದ ‘ಜನಮನ’ದಲ್ಲಿ ಚದುರಂಗರ ‘ಬಿಂಬ’, ಲಂಕೇಶ್‌ರ ‘ಮುಟ್ಟಿಸಿಕೊಂಡವನು’ ಸೇರಿದಂತೆ ಹತ್ತಾರು ನಾಟಕಗಳನ್ನು ಮಾಡಿದ್ದಾರೆ. 

ಸಮಾನ ಮನಸ್ಕರೊಂದಿಗೆ ಕಟ್ಟಿದ ‘ನಿರಂತರ ಫೌಂಡೇಶನ್‌’ ಮೂಲಕ ಕಾಲೇಜು ವಿದ್ಯಾರ್ಥಿಗಳಿಗಾಗಿ ‘ಸಹಜ ರಂಗ’ ರಂಗತರಬೇತಿ ಶಿಬಿರ, ರಂಗೋತ್ಸವ, ರಾಷ್ಟ್ರೀಯ ನಾಟಕೋತ್ಸವ ಆಯೋಜಿಸಿದ್ದಾರೆ. ‘ನಿರಂತರ’ ಅಭಿನಯಿಸಿದ ಟೀಹೌಸ್‌, ಶಿವರಾತ್ರಿ, ಕೂಡಲಸಂಗಮ, ಭೋಮ, ದಾರಿ, ಮೆರವಣಿಗೆ, ಕುರಿ, ಗೊರೂರು ಸೇರಿದಂತೆ 50ಕ್ಕೂ ಹೆಚ್ಚು ನಾಟಕಗಳ ಹಿಂದಿದ್ದಾರೆ. ‘ಬೀದಿ: ಹೋರಾಟದ ನೆಲೆ, ಸಾಂಸ್ಕೃತಿಕ ಸೆಲೆ’ ಇವರ ಸಂಪಾದಿತ ಕೃತಿ.  

‘ನಾಟಕ ಅಕಾಡೆಮಿ ವಾರ್ಷಿಕ ಪ್ರಶಸ್ತಿ’ಯ ಖುಷಿಯನ್ನು ‘ಪ್ರಜಾವಾಣಿ’ ಜೊತೆ ಹಂಚಿಕೊಂಡ ಪ್ರಸಾದ್‌ ಕುಂದೂರು, ‘ಬದ್ಧ ರಂಗಭೂಮಿಗೆ ಸಿಕ್ಕ ಸಮ್ಮಾನವಾಗಿದೆ. ಅಣ್ಣ, ಅತ್ತಿಗೆ, ಕುಟುಂಬ, ಒಡನಾಡಿದ– ಸ್ಫೂರ್ತಿ ತುಂಬಿದ ಎಲ್ಲ ರಂಗ ಮನಸ್ಸುಗಳನ್ನು ನೆನೆಯುವೆ. ಇಲ್ಲಿ ನನಗೆ ಎಂಬುದೇನಿಲ್ಲ. ಎಲ್ಲ ಎಲ್ಲರಿಗೆ’ ಎಂದರು.

ನೂರ್ ಅಹ್ಮದ್‌ ಶೇಖ್
ನೂರ್ ಅಹ್ಮದ್‌ ಶೇಖ್
ಬಿ.ಎಸ್‌.ವಿದ್ಯಾರಣ್ಯ
ಬಿ.ಎಸ್‌.ವಿದ್ಯಾರಣ್ಯ
ಅರಣ್ಯಕಾಂಡ ನಾಟಕದಲ್ಲಿ ಜಟಾಯು ಪಾತ್ರದಲ್ಲಿ ನೂರ್‌ ಅಹ್ಮದ್‌ ಶೇಖ್
ಅರಣ್ಯಕಾಂಡ ನಾಟಕದಲ್ಲಿ ಜಟಾಯು ಪಾತ್ರದಲ್ಲಿ ನೂರ್‌ ಅಹ್ಮದ್‌ ಶೇಖ್

ಮಾತು– ಮೌನದ ಚತುರ ಕಲಾವಿದ!

ರಂಗಾಯಣದ ನಿವೃತ್ತ ಕಲಾವಿದ ನೂರ್‌ ಅಹ್ಮದ್‌ ಶೇಖ್‌ ಅವರ ರಂಗ ಪಯಣವು ಚಿತ್ರದುರ್ಗ ಧಾರವಾಡ ಬೆಂಗಳೂರು ಮೈಸೂರು ಸೇರಿದಂತೆ ರಾಜ್ಯದ ಉದ್ದಗಲಕ್ಕೂ ಚಾಚುತ್ತದೆ. ಮೌನ– ಮಾತುಗಳ ನಡುವಿನ ಭಾವ ಹಿಡಿದು– ಹೊಮ್ಮಿಸುವ ಚತುರತೆ ಸಹೃದಯರನ್ನು ಸೆಳೆಯುತ್ತದೆ. ‘ಪುಗಳೇಂದಿ ಪ್ರಹಸನ’ ನಾಟಕದಲ್ಲಿ ಮಾತೇ ಇಲ್ಲದಿದ್ದರೂ ದೃಶ್ಯ– ದೃಶ್ಯಕ್ಕೆ ನಾಟಕ ಹೊರಳುವಾಗ ಪರದೆ ಸರಿಸುವವನಾಗಿ ಬರುವ ದೃಶ್ಯವೇ ಸಾಕು. ಮಾತೇ ಆಡದೇ ನಗೆಯುಕ್ಕಿಸಿದ್ದನ್ನು ಮೈಸೂರಿಗರಾರೂ ಮರೆಯಲಾರರು.  ಚಿತ್ರದುರ್ಗದ ನಾಯಕನಹಟ್ಟಿಯಲ್ಲಿ ಜನಿಸಿದ ಅವರು 1957ರಲ್ಲಿ ಜನಿಸಿದ ಅವರು ಧಾರವಾಡದ ಸಿಎಸ್‌ಐ ಕಾಲೇಜಿನಲ್ಲಿ ಬಿ.ಕಾಂ ‍ಪದವಿ ಪಡೆದರು. 1983ರಲ್ಲಿ ಜಯತೀರ್ಥ ಜೋಶಿ ನಿರ್ದೇಶನದ ‘ಮೃಚ್ಛಕಟಿಕ’ ನಾಟಕದಲ್ಲಿ ಅಭಿನಯಿಸಿದ ಅವರು 500ಕ್ಕೂ ಹೆಚ್ಚು ಪ್ರದರ್ಶನ ನೀಡಿದ್ದರು.  ಧಾರವಾಡದಲ್ಲಿ ‘ಮುದ್ರಾ ರಾಕ್ಷಸ’ ‘ಒಂದು ಹೋರಾಟದ ಹಿಂದೆ’ ‘ಗುಬ್ಬಕ್ಕ ಗುಬ್ಬಕ್ಕ ಬಾಗಲ ತೆಗಿ’ ನಾಟಗಳಲ್ಲಿ ಅಭಿನಯಿಸಿದ ಅವರು ‘ಜಿಪ್ಸಿಗಳು’ ನಾಟಕ ನಿರ್ದೇಶಿಸಿದ್ದರು. ಬೆಂಗಳೂರಿನ ಜನನಾಟ್ಯ ಮಂಡಳಿ ರೆಪರ್ಟರಿ ಸೇರಿದ ಅವರು ಆರ್.ನಾಗೇಶ್‌ ನಿರ್ದೇಶನದಲ್ಲಿ ‘ಹಯವದನ’ ಮತ್ತು ‘ಏಕಲವ್ಯ’ ನಾಟಕಗಳಲ್ಲಿ ಅಭಿನಯಿಸಿದರು.  ರಂಗಾಯಣದಲ್ಲಿ 1989ರಲ್ಲಿ ಸೇರಿದ ಅವರು ಬಿ.ವಿ.ಕಾರಂತ ಪ್ರಸನ್ನ ಸೇರಿದಂತೆ ನೂರಾರು ರಂಗ ನಿರ್ದೇಶಕರೊಂದಿಗೆ ಕೆಲಸ ಮಾಡಿದ್ದಾರೆ. ಎಲ್ಲ ಕೆಲಸಗಳನ್ನೂ ಮಾಡಿದ್ದಾರೆ. ‘ಕಿಂದರಿ ಜೋಗಿ’ ‘ಗೋವಿನ ಹಾಡು’  ‘ಹಿಪೋಲಿಟಸ್’ ‘ಮಿಡ್ ಸಮರ್ ನೈಟ್ ಡ್ರೀಮ್ಸ್’ ' ಹ್ಯಾಮ್ಲೆಟ್' ‘ಗುಣಮು’ ‘ಟಿಪ್ಪುವಿನ ಕನಸುಗಳು’ 'ಶ್ರೀ ಕೃಷ್ಣ ಸಂಧಾನ' ‌‘ಚಿರೇಬಂದಿವಾಡೆ’ ‘ಕುಸುಮಬಾಲೆ’  ಸೇರಿದಂತೆ ನೂರಾರು ನಾಟಕಗಳಲ್ಲಿ ಅಭಿನಯಿಸಿದ್ದಾರೆ.   ‘ನಾನೇನು ಹೇಳಲಿ. ಪ್ರಶಸ್ತಿಯು ಖುಷಿ ತಂದಿದೆ. ಎಲ್ಲ ಗುರುಗಳನ್ನು ರಂಗಗೆಳೆಯರನ್ನು ಸ್ಮರಿಸುವೆ’ ಎಂದು ‘‍ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ರಂಗ ಸಂಘಟಕ ಪ್ರಕಾಶಕ..

ಮೈಸೂರಿನ ಅಶೋಕ ರಸ್ತೆಯಲ್ಲಿ ಜನಿಸಿದ ಬಿ.ಎಸ್‌.ವಿದ್ಯಾರಣ್ಯ ಅವರ ರಂಗ ಕಾರ್ಯಕ್ಷೇತ್ರ ಬೆಂಗಳೂರು. ಪತ್ರಕರ್ತರಾಗಿದ್ದ ಅವರು ಹವ್ಯಾಸಿ ರಂಗಭೂಮಿಯಲ್ಲಿ ಮೂರು ದಶಕ ದುಡಿದಿದ್ದಾರೆ. ರಂಗ ಶಿಕ್ಷಣ ಕ್ಷೇತ್ರಕ್ಕೆ ಅವರ ಕೊಡುಗೆ ಅನನ್ಯ. 1983ರಲ್ಲಿ ‘ತಾರಾಧ್ವನಿ’ ರಂಗತಂಡಕ್ಕೆ ‘ವಿಷಜ್ವಾಲೆ’ ನಾಟಕ ನಿರ್ದೇಶಿಸಿದ್ದರು. ಶಾಲಾ– ಕಾಲೇಜುಗಳಲ್ಲಿ ರಂಗ ತರಬೇತಿ ಶಿಬಿರಗಳನ್ನು ನಿರಂತರವಾಗಿ ಆಯೋಜಿಸಿ ಹತ್ತಾರು ನಾಟಕಗಳನ್ನು ನಿರ್ದೇಶಿಸಿದರು. ವಿವಿಧ ರಂಗ ತಜ್ಞರಿಗೂ ನೆರವಾಗಿದ್ದಾರೆ. 1988ರಲ್ಲಿ ಹೆಗ್ಗೋಡಿನ ನೀನಾಸಂ ರಂಗಶಿಕ್ಷಣ ಕೇಂದ್ರದಲ್ಲಿ ಡಿಪ್ಲೊಮಾ ತರಬೇತಿ ಪಡೆದ ನಂತರ ‘ನೀನಾಸಂ ತಿರುಗಾಟ’ದಲ್ಲಿ ‘ಚಿದಂಬರ ರಹಸ್ಯ’ ‘ಕಿಂಗ್ ಲಿಯರ್’ ‘ಬೆಪ್ಪುತಕ್ಕಡಿ ಬೋಳೆ ಶಂಕರ’ ‘ಚಾಣಕ್ಯ ಪ್ರಪಂಚ’ ಸೇರಿದಂತೆ ಹತ್ತಾರು ನಾಟಕಗಳ 160ಕ್ಕೂ ಹೆಚ್ಚು ಪ್ರದರ್ಶನ ನೀಡಿದ್ದರು.  ‘ರಾಗಸಂಗಮ’ ‘ಚುಟುಕ’ ‘ವಿಕ್ರಾಂತ ಕರ್ನಾಟಕ’ ಸೇರಿದಂತೆ ಪತ್ರಿಕೆ ನಿಯತಕಾಲಿಕೆಗಳ ಸಂಪಾದಕ ಪತ್ರಕರ್ತರಾಗಿ ದುಡಿದಿದ್ದಾರೆ. ಜೊತೆಯಲ್ಲಿಯೇ ‘ಚಾರುಮತಿ’ ಪ್ರಕಾಶನದ ಮೂಲಕ ಕೃತಿಗಳನ್ನು ಪ್ರಕಟಿಸಿದ್ದಾರೆ.    ಸುಚಿತ್ರ ಫಿಲಂ ಸೊಸೈಟಿ ಬೆನಕ ರಂಗಾಯಣ ಸೇರಿದಂತೆ ವಿವಿಧ ರೆಪರ್ಟರಿ ರಂಗ ಸಂಸ್ಥೆ ತಂಡಗಳಲ್ಲಿನ ತರಬೇತಿ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕೆಲಸ ಮಾಡಿದ್ದಾರೆ. ಶಾಲೆಗಳಲ್ಲಿ ರಂಗಶಿಕ್ಷಕರ ನೇಮಕಾತಿ ಹೋರಾಟವನ್ನೂ ನಡೆಸಿದ್ದರು. 75ಕ್ಕೂ ಹೆಚ್ಚು ರಂಗ ಶಿಕ್ಷಕರಿಗೆ ಸರ್ಕಾರಿ ಉದ್ಯೋಗ ಸಿಗುವಲ್ಲಿ ವಿದ್ಯಾರಣ್ಯ ಅವರ ಶ್ರಮವಿದೆ.    ‘ಪ್ರಶಸ್ತಿ ನೀಡಿರುವುದು ಸಂತಸ ತಂದಿದೆ. ನಿರೀಕ್ಷೆ ಮಾಡಿರಲಿಲ್ಲ. ರಂಗ ಶಿಕ್ಷಣ ಕ್ಷೇತ್ರದಲ್ಲಿ ದುಡಿಯುತ್ತಿರುವ ಎಲ್ಲರಿಗೂ ಸಂದ ಪ್ರಶಸ್ತಿಯಾಗಿದೆ’ ಎಂದು ವಿದ್ಯಾರಣ್ಯ ಪ್ರತಿಕ್ರಿಯಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT