ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿರಿಯಾಪಟ್ಟಣ: ಕಾವೇರಿ ನೀರು ಪೂರೈಕೆಗೆ ಕ್ರಿಯಾಯೋಜನೆ ಸಿದ್ಧ

₹115 ಕೋಟಿ ವೆಚ್ಚದ ಯೋಜನೆ: ಶಾಸಕ ಕೆ.ಮಹದೇವ್
Last Updated 12 ಸೆಪ್ಟೆಂಬರ್ 2021, 4:50 IST
ಅಕ್ಷರ ಗಾತ್ರ

ಪಿರಿಯಾಪಟ್ಟಣ: ‘ಪಟ್ಟಣದ ಪ್ರತಿ ಮನೆಗೂ ಕಾವೇರಿ ನೀರು ಪೂರೈಸಲು ಜನಜೀವನ ಮಿಷನ್ ಯೋಜನೆಯಡಿ ₹115 ಕೋಟಿ ವೆಚ್ಚದ ಕ್ರಿಯಾಯೋಜನೆ ತಯಾರಿಸಲಾಗಿದೆ’ ಎಂದು ಶಾಸಕ ಕೆ.ಮಹದೇವ್ ತಿಳಿಸಿದರು.

ಪಟ್ಟಣದ ಮೇದರ ಬ್ಲಾಕ್‌ ಬಡಾವಣೆಯಲ್ಲಿ ₹25 ಲಕ್ಷ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಶನಿವಾರ ಚಾಲನೆ ನೀಡಿ ಮಾತನಾಡಿದರು.

‘ಪುರಸಭೆ ವ್ಯಾಪ್ತಿಯ ನಿವೇಶನರಹಿತರಿಗೆ 2,000 ನಿವೇಶನ ನೀಡಲು ಸೂಕ್ತ ಜಾಗವನ್ನು ಗುರುತಿಸಲಾಗುವುದು. ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ₹20 ಕೋಟಿ ಅನುದಾನಕ್ಕೆ ನಗರಾಭಿವೃದ್ಧಿ ಇಲಾಖೆಗೆ ಪ್ರಸ್ತಾವ ಸಲ್ಲಿಸಲಾಗಿದೆ. 15 ದಿನಗಳಲ್ಲಿ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಟ್ರಾಫಿಕ್ ಸಿಗ್ನಲ್ ಅಳವಡಿಸಲಾಗುವುದು. ತಾಲ್ಲೂಕು ಕಚೇರಿ ಜಂಕ್ಷನ್, ಸಾರ್ವಜನಿಕ ಆಸ್ಪತ್ರೆ ಮತ್ತು ಉಪ್ಪಾರಗೇರಿ ಜಂಕ್ಷನ್ ಬಳಿ ಟ್ರಾಫಿಕ್ ಸಿಗ್ನಲ್ ಅಳವಡಿಕೆಗೆ ಚಿಂತನೆ ನಡೆಸಲಾಗುತ್ತಿದೆ’ ಎಂದರು.

‘ಹಂದಿ ಜೋಗಿಗಳಿಗೆ ಪುನರ್ವಸತಿ ಕಲ್ಪಿಸಲು ಪಟ್ಟಣದ ಹುಣಸೆಕುಪ್ಪೆ ರಸ್ತೆಯಲ್ಲಿ ಒಂದು ಎಕರೆ ಪ್ರದೇಶದಲ್ಲಿ ಸುಸಜ್ಜಿತ ವಸತಿ ಸಮುಚ್ಚಯ ನಿರ್ಮಿಸಲಾಗುವುದು. ಮತ್ತೊಂದು ಎಕರೆ ಜಾಗ ಖರೀದಿಸಲು ಕ್ರಮ ಕೈಗೊಳ್ಳಲಾಗುತ್ತಿದೆ’ ಎಂದು ತಿಳಿಸಿದರು.

ಪುರಸಭೆ ಅಧ್ಯಕ್ಷ ಮಂಜುನಾಥ್ ಸಿಂಗ್ ಮಾತನಾಡಿ, ‘ಹಿಂದುಳಿದಿದ್ದ ಮೇದರ ಬ್ಲಾಕ್‌ ಬಡಾವಣೆಗೆ ಅಗತ್ಯ ಮೂಲ ಸೌಕರ್ಯ ಕಲ್ಪಿಸುತ್ತಿದ್ದು, ಅಭಿವೃದ್ಧಿ ಹೊಂದುತ್ತಿದೆ’ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಅಣ್ಣಯ್ಯ ಶೆಟ್ಟಿ, ಎಂಡಿಸಿಸಿ ಬ್ಯಾಂಕ್ ನಿರ್ದೇಶಕ ಸಿ.ಎನ್.ರವಿ, ಪುರಸಭಾ ಸದಸ್ಯರಾದ ಪಿ.ಸಿ.ಕೃಷ್ಣ, ಪ್ರಕಾಶ್ ಸಿಂಗ್, ಪಿ.ಎನ್.ವಿನೋದ್, ರವಿ, ಭಾರತಿ, ನಳಿನಿ, ಮುಖಂಡರಾದ ಉಮೇಶ್, ಮುರಳಿ, ತಿಮ್ಮನಾಯಕ, ಚಂದ್ರು, ಪೆಪ್ಸಿ ಕುಮಾರ್, ಇಲಿಯಾಸ್ ಅಹ್ಮದ್, ಮುಶೀರ್ ಅಹ್ಮದ್, ಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT