ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರ ರಾತ್ರಿ ಪಾಳಿಗೆ ಮುಕ್ತಿ ಎಂದು?: ವಿದ್ಯುತ್‌ ಬೆಳಿಗ್ಗೆಯೇ ಪೂರೈಸುವಂತೆ ಆಗ್ರಹ

ಗುಣಮಟ್ಟದ ವಿದ್ಯುತ್‌ ಬೆಳಿಗ್ಗೆಯೇ ಪೂರೈಸುವಂತೆ ರೈತರ ಆಗ್ರಹ
Published 8 ಮೇ 2023, 20:13 IST
Last Updated 8 ಮೇ 2023, 20:13 IST
ಅಕ್ಷರ ಗಾತ್ರ

ಮೈಸೂರು: ಬೆಳೆಗಳಿಗೆ ನೀರು ಹಾಯಿಸಲು ಅನಿವಾರ್ಯವಾದ ರಾತ್ರಿ ಪಾಳಿಯಿಂದ ಮುಕ್ತಿ ಸಿಗುವುದು ಯಾವಾಗ ಎಂಬ ಚಿಂತೆ ಜಿಲ್ಲೆಯ‌ ರೈತರದ್ದಾಗಿದೆ. ಬೆಳೆ ರೋಗಗಳು, ಇಳುವರಿ ಹಾಗೂ ಬೆಲೆ ಕುಸಿತದಂಥ ಸಮಸ್ಯೆಗಳ ಜೊತೆಗೆ ಈಗ ವಿದ್ಯುತ್‌ ಸಮಸ್ಯೆಯೂ ಅವರನ್ನು ಬಾಧಿಸುತ್ತಿದೆ. 

ಸದ್ಯ ಪಂಪ್‌ಸೆಟ್‌ಗಳಿಗೆ ಬೆಳಿಗ್ಗೆ 4 ಗಂಟೆ ಹಾಗೂ ರಾತ್ರಿ 3 ಗಂಟೆ ಕಾಲ ವಿದ್ಯುತ್‌ ಪೂರೈಸಲಾಗುತ್ತಿದೆ. ಆದರೆ, ಮಧ್ಯರಾತ್ರಿ ವೇಳೆ ವಿದ್ಯುತ್ ಪೂರೈಕೆಯಾಗುವುದರಿಂದ ರಾತ್ರಿ ಪಾಳಿಯಲ್ಲಿ ಕೆಲಸ ಮಾಡಲೇಬೇಕು. ಕೆಲವೆಡೆ ತಿಂಗಳುಗಳಿಂದ ಕಡಿಮೆ ವಿದ್ಯುತ್‌ ಪೂರೈಸಲಾಗುತ್ತಿದೆ ಎಂಬ ಆರೋಪವೂ ಇದೆ.

ಮನೆಯಿಂದ ದೂರದಲ್ಲಿರುವ ತೋಟಕ್ಕೆ ನೀರು ಹಾಯಿಸಲು ಮಧ್ಯರಾತ್ರಿ 12 ಗಂಟೆಗೆ ಟಾರ್ಚ್‌ ಹಿಡಿದು ತೆರಳುವ ರೈತರು ಹಾವು ಹಾಗೂ ಕಾಡುಪ್ರಾಣಿಗಳ ದಾಳಿಗೂ ಗುರಿಯಾಗಬೇಕಾಗುತ್ತದೆ. ನಿದ್ದೆಗಣ್ಣಿನಲ್ಲಿ ಬದುವಿನಲ್ಲಿ ನಡೆಯುವಾಗ ಕಾಲು ಜಾರಿ ಬೀಳುವ ಘಟನೆಗಳೂ ನಡೆಯುತ್ತವೆ. ರೈತರು, ಇಂಥ ಅಪಾಯದ ನಡುವೆಯೇ ಬೆಳೆ ರಕ್ಷಿಸಿಕೊಳ್ಳಬೇಕಾಗಿದೆ. ಹೀಗಾಗಿಯೇ, ‘7 ಗಂಟೆ ಕಾಲದ ವಿದ್ಯುತ್‌ ಅನ್ನು ಬೆಳಗಿನ ವೇಳೆಯಲ್ಲೇ ಪೂರೈಸಬೇಕು’ ಎಂಬುದು ರೈತರ ಆಗ್ರಹ.

ಅದಕ್ಕೆ ರೈತ ಸಂಘಟನೆಗಳೂ ದನಿ ಕೊಟ್ಟಿವೆ. ‘ಸಮಪರ್ಕವಾಗಿ ವಿದ್ಯುತ್‌ ಪೂರೈಕೆಯಾಗುತ್ತಿದೆ’ ಎಂಬ ಅಧಿಕಾರಿಗಳ ಮಾತನ್ನು ರೈತರು ಒಪ್ಪುವುದಿಲ್ಲ. 

‘ನಿಗದಿಯಾಗಿರುವುದಕ್ಕಿಂತಲೂ 2 ತಾಸು ಕಡಿಮೆ ವಿದ್ಯುತ್‌ ಪೂರೈಕೆಯಾಗುತ್ತಿದೆ. ಪೂರೈಕೆಯ ಅವಧಿಯನ್ನು ವಾರಕ್ಕೊಮ್ಮೆ ಮೂರು ಹಂತಗಳಲ್ಲಿ ಬದಲಾಯಿಸುತ್ತಾರೆ. ಮಧ್ಯರಾತ್ರಿ 12ಕ್ಕೆ, ಬೆಳಗಿನ ಜಾವ 2 ಗಂಟೆ ಹಾಗೂ 4 ಗಂಟೆಗೆ ಪೂರೈಕೆಯಾಗುವುದರಿಂದ ನಿದ್ದೆಗೆಟ್ಟು ತೋಟಕ್ಕೆ ಹೋಗಬೇಕು’ ಎಂಬುದು ನಂಜನಗೂಡಿನ ರೈತ ಮುಖಂಡ ವಿದ್ಯಾಸಾಗರ್‌ ಅವರ ಸಂಕಟದ ನುಡಿ.

‌‘ಬೆಳಿಗ್ಗೆ ಹಾಗೂ ರಾತ್ರಿ ತಲಾ 3 ಗಂಟೆಯಷ್ಟೇ ವಿದ್ಯುತ್‌ ಪೂರೈಕೆಯಾಗುತ್ತಿದೆ. ಕೆಲವು ದಿನ ಅಷ್ಟೂ ಪೂರೈಕೆಯಾಗುವುದಿಲ್ಲ. ಅಧಿಕಾರಿಗಳು ಮೇಲಾಧಿಕಾರಿಗಳ ಕಡೆಗೆ ಬೆರಳು ತೋರಿಸುತ್ತಾರೆ’ ಎಂಬುದು ಕಬ್ಬು ಬೆಳೆಗಾರರ ಸಂಘದ ತಾಲ್ಲೂಕು ಅಧ್ಯಕ್ಷ ಕುರುಬೂರು ಸಿದ್ದೇಶ್ ಅವರ ಆರೋಪ.

ಎಚ್‌.ಡಿ.ಕೋಟೆ ತಾಲ್ಲೂಕಿನ ಹುಣಸಹಳ್ಳಿ, ಮನುಗನಹಳ್ಳಿ, ಕೂಲ್ಯ, ಶಾಂತಿಪುರ, ರೈತರಿಗೆ 3 ತಿಂಗಳಿನಿಂದ ಕೇವಲ 4 ಗಂಟೆ ಕಾಲವಷ್ಟೇ ತ್ರಿಫೇಸ್‌ ವಿದ್ಯುತ್‌ ಸಿಗುತ್ತಿದೆ. ಅದೂ ನಿರಂತರವಾಗಿಲ್ಲ. ಅಧಿಕಾರಿಗಳು ತಾಂತ್ರಿಕ ದೋಷದ ನೆಪ ಹೇಳುತ್ತಿದ್ದಾರೆ. ಪ್ರತಿವರ್ಷವೂ ಇದೇ ಸಮಸ್ಯೆ. ಬೆಳೆಗೆ ನೀರು ಒದಗಿಸಲಾಗದೆ ಕಂಗಲಾಗಿದ್ದೇವೆ.ರಾತ್ರಿ ವೇಳೆ ನಿದ್ದೆಗೆಟ್ಟು ಆರೋಗ್ಯವೂ ಕೆಟ್ಟಿದೆ’ ಎಂದು ಹುಣಸಹಳ್ಳಿಯ ರೈತ ಜಾನಕಿರಾಮ್, ಜಯಪುರ ತಾಲ್ಲೂಕಿನ ಆನಂದ್ ಅಲವತ್ತುಕೊಂಡರು.

ಚಿರತೆ ದಾಳಿಯ ಭಯ ಮಾಸಿಲ್ಲ

‘ಕೆಲವು ತಿಂಗಳ ಹಿಂದೆ ನಡೆದ ಚಿರತೆ ದಾಳಿಯ ನೆನಪು ಇನ್ನೂ ಮಾಸಿಲ್ಲ. ಕಬ್ಬು, ಭತ್ತದ ಬೆಳೆ ನಡುವೆ ಕಾಡು ಪ್ರಾಣಿಗಳು ಅವಿತಿದ್ದರೂ ತಿಳಿಯುವುದಿಲ್ಲ’ ಎಂದು ಮೈಸೂರು ತಾಲ್ಲೂಕಿನ ಅರಸನಕೆರೆ ಗ್ರಾಮದ ರೈತ ಶಿವಾನಂದ ತಿಳಿಸಿದರು.

Highlights - ಮಧ್ಯರಾತ್ರಿ ಗುಣಮಟ್ಟದ (ತ್ರಿಫೇಸ್) ವಿದ್ಯುತ್‌ ಪೂರೈಕೆ ಕೆಲವೆಡೆ ನಿಗದಿಗಿಂತ ಕಡಿಮೆ ವಿದ್ಯುತ್‌  ಪ್ರಾಣ ಭಯದೊಂದಿಗೆ ತೋಟಕ್ಕೆ ತೆರಳುತ್ತಿರುವ ರೈತ

‘ಜೂನ್‌ನಿಂದ ನಿರಂತರ ಪೂರೈಕೆ’

ಸಮಸ್ಯೆ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಸೆಸ್ಕ್ ವ್ಯವಸ್ಥಾಪಕ ನಿರ್ದೇಶಕ ಜಯವಿಭವಸ್ವಾಮಿ ‘ಬೇಸಿಗೆಯಲ್ಲಿ ಓವರ್ ಲೋಡ್ ಆಗುವುದರಿಂದ ಎಲ್ಲಾ ಫೀಡರ್‌ಗಳಿಗೂ ಏಕಕಾಲದಲ್ಲಿ ವಿದ್ಯುತ್‌ ಪೂರೈಕೆ ಅಸಾಧ್ಯ. ವಿದ್ಯುತ್ ಉತ್ಪಾದನಾ ಪ್ರಮಾಣ ಕಡಿಮೆ ಇದ್ದುದರಿಂದ ತ್ರಿಫೇಸ್ ವಿದ್ಯುತ್‌ ಅನ್ನು ಎರಡು ಹಂತದಲ್ಲಿ ಪೂರೈಸಲಾಗುತ್ತಿದೆ. ಆದರೆ ಬೆಳಗಿನ ವೇಳೆಯಲ್ಲೇ 7 ಗಂಟೆ ಕಾಲ ವಿದ್ಯುತ್‌ ಪೂರೈಸಬೇಕೆಂದು ರೈತರು ಆಗ್ರಹಿಸುತ್ತಿದ್ದಾರೆ. ಮಳೆ ಶುರುವಾದರೆ ಜೂನ್‌ ತಿಂಗಳಿನಿಂದ ನಿರಂತರ ವಿದ್ಯುತ್ ಪೂರೈಕೆ ಮಾಡಲಾಗುವುದು’ ಎಂದರು. ‘ಸೌರ ವಿದ್ಯುತ್‌ ಉತ್ಪಾದನೆಗೆ ಉತ್ತೇಜನ ನೀಡುವ ಮೂಲಕವೂ ಲೋಡ್‌ಶೆಡ್ಡಿಂಗ್‌ ಸಮಸ್ಯೆಯನ್ನು ತಕ್ಕಮಟ್ಟಿಗೆ ಪರಿಹರಿಸಲು ಸಾಧ್ಯ’ ಎಂದೂ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT