ಮೈಸೂರು: ರೇಷ್ಮೆಯಿಂದ ತಯಾರಿಸಿದ ವಿಭಿನ್ನ ಉಡುಗೆಗಳನ್ನು ತೊಟ್ಟಿದ್ದ ಜನರು ಕೇಂದ್ರ ರೇಷ್ಮೆ ಮಂಡಳಿಯ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಗಮನಸೆಳೆದರು. ಅವರೊಂದಿಗೆ ನಿಂತು ಸೆಲ್ಫಿ ಕ್ಲಿಕ್ಕಿಸಿ ಖುಷಿಪಟ್ಟರು.
ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಘಟಿಕೋತ್ಸವ ಭವನದಲ್ಲಿ ಕೇಂದ್ರ ಜವಳಿ ಸಚಿವಾಲಯವು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಲ್ಬೆರಿ ರೇಷ್ಮೆ ಸೀರೆ, ಟಸ್ಸಾರ್ ರೇಷ್ಮೆಯಿಂದ ತಯಾರಿಸಿದ ಸೀರೆ, ಶಾಲು ಹಾಗೂ ಸಾಂಪ್ರದಾಯಿಕ ಉಡುಪುಗಳು, ಏರಿ ರೇಷ್ಮೆ ಸೀರೆ, ಅಸ್ಸಾಂನಲ್ಲಿ ಉತ್ಪಾದಿಸುವ ಮುಗಾ ರೇಷ್ಮೆ ವಸ್ತ್ರಗಳ ಪ್ರದರ್ಶನ ಹಾಗೂ ಮಾರಾಟಕ್ಕೆ ಲಭ್ಯವಿದ್ದವು. ವಿಭಿನ್ನ ದಿರಿಸು ಧರಿಸಿದ್ದ ಜನರು ಫ್ಯಾಷನ್ ಶೋನಲ್ಲಿ ಭಾಗವಹಿಸಿ ಗಮನಸೆಳೆದರು.
ಸಭಾ ಕಾರ್ಯಕ್ರಮದಲ್ಲಿ ರೇಷ್ಮೆ ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ನಿವೃತ್ತ ಅಧಿಕಾರಿಗಳನ್ನು ಗುರುತಿಸಿ ‘ಜೀವಮಾನ ಸಾಧನೆ’ ಪ್ರಶಸ್ತಿ ಪ್ರದಾನ ಮಾಡಲಾಯಿತು. ವಿ.ಬಾಲಸುಬ್ರಹ್ಮನ್ಯನ್, ಎಂ.ಎನ್.ನರಸಿಂಹಣ್ಣ, ಆರ್.ಕೆ.ದತ್ತ, ಟಿ.ಎನ್.ಸೋನ್‌ವಾಲ್ಕರ್, ಧಿರೇಂದ್ರ ಕುಮಾರ್ ಅವರಿಗೆ ಕೇಂದ್ರ ಜವಳಿ ಸಚಿವ ಗಿರಿರಾಜ್ ಸಿಂಗ್ ಪ್ರಶಸ್ತಿ ಪ್ರದಾನ ಮಾಡಿದರು. ರೇಷ್ಮೆ ಬೆಳೆಯಲ್ಲಿ ವಿಶೇಷ ಸಾಧನೆ ಮಾಡಿದ ಬೆಳೆಗಾರರನ್ನು ಹಾಗೂ ಸಂಶೋಧನೆಯಲ್ಲಿ ತೊಡಗಿರುವ ವಿಜ್ಞಾನಿಗಳನ್ನು ಗುರುತಿಸಿ ಸನ್ಮಾನಿಸಲಾಯಿತು.
ಸಂಸದ ಕೆ.ಸುಧಾಕರ್ ಮಾತನಾಡಿ, ‘ರೇಷ್ಮೆ ಮಾರುಕಟ್ಟೆಯಿಂದ ಮಧ್ಯವರ್ತಿಗಳನ್ನು ಹೊರಗಿಡಬೇಕು. ಅವರಿಂದಾಗಿ ಬೆಳೆಗಾರರಿಗೆ ಸಿಗಬೇಕಾದ ಪಾಲು ದೊರೆಯುತ್ತಿಲ್ಲ. ಹೊಸ ತಂತ್ರಜ್ಞಾನದಿಂದ ಇಳುವರಿ ಹೆಚ್ಚಿದ್ದು, ಬಿಜೆಪಿ ಸರ್ಕಾರದ ಅವಧಿಯಲ್ಲಿ ಶಿಡ್ಲಘಟ್ಟದಲ್ಲಿ ಹೈಟೆಕ್ ಮಾರುಕಟ್ಟೆ ಆರಂಭಿಸಲಾಗಿದ್ದು, ಅದನ್ನು ಮತ್ತಷ್ಟು ಅಭಿವೃದ್ಧಿಪಡಿಸಬೇಕಿದೆ’ ಎಂದು ತಿಳಿಸಿದರು.
ಶಾಸಕ ಜಿ.ಟಿ.ದೇವೇಗೌಡ ಮಾತನಾಡಿ, ‘ರೇಷ್ಮೆ ಬೆಳೆಗೆ ಸಬ್ಸಿಡಿಯ ಸಾಲ ಯೋಜನೆ, ಉಚಿತ ಉಪಕರಣ ನೀಡುವ ಕಾರ್ಯಕ್ರಮಗಳು ಕಡಿಮೆಯಾಗಿವೆ. ಕೇಂದ್ರ ಸರ್ಕಾರವು ರೇಷ್ಮೆ ಮಾರುಕಟ್ಟೆಯಲ್ಲಿ ನೇರ ಖರೀದಿಗೆ ಮುಂದಾಗಬೇಕು’ ಎಂದು ಆಗ್ರಹಿಸಿದರು.
ರಾಜ್ಯಸಭಾ ಸದಸ್ಯ ನಾರಾಯಣ ಕೊರಗಪ್ಪ ಮಾತನಾಡಿ, ‘ರೇಷ್ಮೆ ಉದ್ಯಮ ಬೆಳೆಯಲು ನೇಕಾರರ ಕೊಡುಗೆಯೂ ಅಗತ್ಯ. ಆದರೆ, ಅವರು ಮಗ್ಗ ಮಡಿಚಿಟ್ಟಿದ್ದಾರೆ. ಮಾರುಕಟ್ಟೆ ಸಮಸ್ಯೆ ಕಾಡುತ್ತಿದೆ. ನೇಕಾರರಿಗೆ ಹಾಗೂ ರೇಷ್ಮೆ ಬೆಳೆಗಾರರಿಗೆ 60 ವರ್ಷದ ಬಳಿಕ ಉಚಿತ ಪಿಂಚಣಿ ಹಾಗೂ ಆರೋಗ್ಯ ಕಾರ್ಡ್ ವಿತರಿಸಬೇಕು’ ಎಂದು ಒತ್ತಾಯಿಸಿದರು.
ಕೇಂದ್ರ ವಿದೇಶಾಂಗ ವ್ಯವಹಾರ ಹಾಗೂ ಜವಳಿ ಖಾತೆಯ ರಾಜ್ಯ ಸಚಿವ ಪಬಿತ್ರಾ ಮಾರ್ಗರಿಟಾ ಮಾತನಾಡಿ, ‘ರೇಷ್ಮೆ ಗ್ರಾಮೀಣ ಭಾಗದ ಆರ್ಥಿಕತೆಯ ಶಕ್ತಿ. ಅದನ್ನು ಬೆಳೆಸಲು ಬೇಕಾದ ಸೌಲಭ್ಯ ಒದಗಿಸಲು ಸರ್ಕಾರ ಬದ್ಧವಾಗಿದೆ. ಮಧ್ಯವರ್ತಿಗಳ ಹಾವಳಿ ತಪ್ಪಿಸಲು ಕ್ರಮವಹಿಸಲಾಗುವುದು’ ಎಂದು ತಿಳಿಸಿದರು.
ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಮಾತನಾಡಿ, ‘ರೇಷ್ಮೆ ಉತ್ಪನ್ನದ ರಫ್ತಿನಿಂದ ₹42 ಲಕ್ಷ ದೊರೆಯುತ್ತಿತ್ತು. ಆದರೆ, ಈಗ ₹2,800 ಕೋಟಿ ಆದಾಯ ಬರುತ್ತಿದೆ. ಬೆಳೆಗಾರರ ಸಮಸ್ಯೆಯನ್ನು ಅಧಿಕಾರಿಗಳು ಸ್ಪಷ್ಟವಾಗಿ ತಿಳಿಸಿದರೆ ಕೇಂದ್ರ ಮಟ್ಟದಲ್ಲಿ ಪರಿಹಾರ ಒದಗಿಸುವ ಕೆಲಸ ಮಾಡುತ್ತೇವೆ’ ಎಂದು ಹೇಳಿದರು.
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಜವಳಿ ಸಚಿವಾಲಯದ ಕಾರ್ಯದರ್ಶಿ ರಚನಾ ಶಾ, ಕಾರ್ಯದರ್ಶಿ ಪ್ರಜಕ್ತಾ ಎಲ್.ವರ್ಮ, ಕೇಂದ್ರ ರೇಷ್ಮೆ ಮಂಡಳಿಯ ಸದಸ್ಯ ಕಾರ್ಯದರ್ಶಿ ಶಿವಕುಮಾರ್, ರೇಷ್ಮೆ ವ್ಯವಸಾಯ ಇಲಾಖೆಯ ಆಯುಕ್ತ ಎಂ.ಬಿ.ರಾಜೇಶ್ ಗೌಡ ಇದ್ದರು.
ಇಂಗ್ಲಿಷ್ ಹಿಂದಿ ಭಾಷಣಕ್ಕೆ ಆಕ್ಷೇಪ
ಸಭಾ ಕಾರ್ಯಕ್ರಮದಲ್ಲಿ ಹಿಂದಿ ಇಂಗ್ಲಿಷ್ ಭಾಷಣ ಮಾಡಿದ್ದಕ್ಕೆ ಪಶುಸಂಗೋಪನಾ ಮತ್ತು ರೇಷ್ಮೆ ಸಚಿವ ಕೆ.ವೆಂಕಟೇಶ್ ತಮ್ಮ ಭಾಷಣದ ಆರಂಭದಲ್ಲಿ ‘ಇಲ್ಲಿ ಬಹುತೇಕ ಎಲ್ಲರೂ ಹಿಂದಿ ಇಂಗ್ಲಿಷ್‌ನಲ್ಲಿ ಭಾಷಣ ಮಾಡಿದರು. ನಿಮಗೆ ಏನು ಗೊತ್ತಾಯಿತೆಂದು ತಿಳಿಯಲಿಲ್ಲ. ನನಗಂತೂ ಏನೂ ಗೊತ್ತಾಗಲಿಲ್ಲ’ ಎಂದರು. ಕೇಂದ್ರ ಜವಳಿ ಖಾತೆ ಸಚಿವ ಗಿರಿರಾಜ್ ಸಿಂಗ್ ಭಾಷಣ ಆರಂಭಿಸುವಾಗ ‘ನನಗೆ ಕನ್ನಡ ಗೊತ್ತಿಲ್ಲ ಇಂಗ್ಲಿಷ್ ಬರಲ್ಲ. ಹಿಂದಿ ಮಾತ್ರ ಗೊತ್ತಿರೋದು. ಹೀಗಾಗಿ ನಾನು ಹಿಂದಿಯಲ್ಲಿ ಮಾತನಾಡಲೇ’ ಎಂದು ಸಭಿಕರಲ್ಲಿ ಮನವಿ ಮಾಡಿದರು. ಕೇಂದ್ರ ವಿದೇಶಾಂಗ ವ್ಯವಹಾರ ಹಾಗೂ ಜವಳಿ ಖಾತೆಯ ರಾಜ್ಯ ಸಚಿವ ಪಬಿತ್ರಾ ಮಾರ್ಗರಿಟಾ ತಮ್ಮ ಭಾಷಣವನ್ನು ಕನ್ನಡದಲ್ಲೇ ಆರಂಭಿಸಿ ಗಮನಸೆಳೆದರು. ‘ಕನ್ನಡ ಶ್ರೀಮಂತ ಭಾಷೆ. ಮುಂದಿನ ಬಾರಿ ಅದನ್ನು ಕಲಿತುಕೊಂಡು ಬಂದು ಭಾಷಣ ಮಾಡುತ್ತೇನೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.