ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಇನ್ಮುಂದೆ ರಾತ್ರಿಯೂ ‘ಅನ್ನದಾಸೋಹ’

ಪ್ರಾಧಿಕಾರದಿಂದ ಕ್ರಮ; ಈವರೆಗೂ ಮಧ್ಯಾಹ್ನ ಮಾತ್ರವೇ ಇತ್ತು
Published : 9 ಸೆಪ್ಟೆಂಬರ್ 2024, 0:25 IST
Last Updated : 9 ಸೆಪ್ಟೆಂಬರ್ 2024, 0:25 IST
ಫಾಲೋ ಮಾಡಿ
Comments

ಮೈಸೂರು: ಇಲ್ಲಿನ ಚಾಮುಂಡಿಬೆಟ್ಟದ ಚಾಮುಂಡೇಶ್ವರಿ ದೇವಸ್ಥಾನದ ದಾಸೋಹ ಭವನದಲ್ಲಿ ರಾತ್ರಿಯೂ ‘ಅನ್ನದಾಸೋಹ’ ಸೇವೆ ಆರಂಭಿಸಲಾಗಿದೆ.

ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದಿಂದ ಈ ಕ್ರಮ ಕೈಗೊಳ್ಳಲಾಗಿದೆ. ದಕ್ಷಿಣ ಭಾರತದ ಪ್ರಮುಖ ಧಾರ್ಮಿಕ ಹಾಗೂ ಯಾತ್ರಾ ಸ್ಥಳವೂ ಆಗಿರುವ ಬೆಟ್ಟಕ್ಕೆ ಬರುವ ಭಕ್ತರು ಹಾಗೂ ಪ್ರವಾಸಿಗರ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಸಂಜೆ ಹಾಗೂ ರಾತ್ರಿಯೂ ಸಾವಿರಾರು ಮಂದಿ ಪ್ರವಾಸಿಗರು ಬರುತ್ತಾರೆ. ಹೀಗೆ ಬರುವವರಿಗೆ ಅನ್ನಪ್ರಸಾದ ನೀಡುವ ಕೆಲಸವನ್ನು ಮಾಡಲಾಗುತ್ತಿದೆ. ಈವರೆಗೆ ಮಧ್ಯಾಹ್ನ ಮಾತ್ರವೇ ಅನ್ನದಾಸೋಹ ನಡೆಯುತ್ತಿತ್ತು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಈಚೆಗೆ ನಡೆದ ಪ್ರಾಧಿಕಾರದ ಮೊದಲ ಸಭೆಯಲ್ಲಿ, ಭಕ್ತರಿಗೆ ಗುಣಮಟ್ಟದ ಸೇವೆ ಒದಗಿಸಲು ನಿರ್ಣಯ ಕೈಗೊಳ್ಳಲಾಗಿತ್ತು. ಈ ಹಿನ್ನೆಲೆಯಲ್ಲಿ ಮೊದಲ ಕಾರ್ಯಕ್ರಮವಾಗಿ ರಾತ್ರಿಯೂ ಅನ್ನ ದಾಸೋಹಕ್ಕೆ ಚಾಲನೆ ನೀಡಲಾಗಿದೆ. ಇದು, ಭಕ್ತರ ಸಂಭ್ರಮಕ್ಕೆ ಕಾರಣವಾಗಿದೆ.

ಈಗ, ಪ್ರಸ್ತುತ ಪ್ರತಿ ದಿನ ಬೆಳಿಗ್ಗೆ 7ರಿಂದ 10.30ರವರೆಗೆ ಉಪಾಹಾರ, ಮಧ್ಯಾಹ್ನ 1ರಿಂದ ಮಧ್ಯಾಹ್ನ 3.30ರವರೆಗೆ ಅನ್ನಪ್ರಸಾದ ನೀಡಲಾಗುತ್ತಿತ್ತು. ಈಗ ಸಂಜೆ 7.30ರಿಂದ 9.30ರವರೆಗೆ ದಾಸೋಹ ವ್ಯವಸ್ಥೆ ಮಾಡಲಾಗಿದೆ. ಚಾಮುಂಡಿಬೆಟ್ಟಕ್ಕೆ ಮಂಗಳವಾರ, ಶುಕ್ರವಾರ, ಶನಿವಾರ ಹಾಗೂ ಭಾನುವಾರ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಸರ್ಕಾರಿ ರಜಾ ದಿನಗಳಲ್ಲೂ ಸಾವಿರಾರು ಭಕ್ತರು ಭೇಟಿ ಕೊಡುತ್ತಾರೆ. ರಾತ್ರಿ ವೇಳೆ ಬೆಟ್ಟಕ್ಕೆ ಬರುವ ಭಕ್ತರಿಗೆ ಅನ್ನಪ್ರಸಾದ ಸಿಗದೆ ಆಗುತ್ತಿದ್ದ ನಿರಾಸೆಯನ್ನು ತಪ್ಪಿಸುವ ಕೆಲಸವನ್ನು ಪ್ರಾಧಿಕಾರ ಮಾಡಿದೆ.

‘ಭಕ್ತರ ಅನುಕೂಲಕ್ಕಾಗಿ ಹೊಸ ಕ್ರಮವನ್ನು ಕೆಲ ದಿನಗಳಿಂದ ಕೈಗೊಳ್ಳಲಾಗಿದೆ. ವಾರಾಂತ್ಯದಲ್ಲಿ ವಿಶೇಷ ತಿನಿಸು ಬಡಿಸಲು ಯೋಜಿಸಲಾಗಿದೆ. ಯಾವ್ಯಾವ ದಿನ ಏನೇನು ಆಹಾರ ಕೊಡಬೇಕೆಂಬ ಬಗ್ಗೆ ಸೋಮವಾರ ಸಭೆ ನಡೆಸಿ ‘ಮೆನು’ ಅಂತಿಮಗೊಳಿಸಲಾಗುವುದು’ ಎಂದು ಪ್ರಾಧಿಕಾರದ ಕಾರ್ಯದರ್ಶಿ ಎಂ.ಜೆ. ರೂಪಾ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT