ಮೈಸೂರು: ‘ಸಣ್ಣ ಪ್ರಮಾಣದಲ್ಲಿರುವ ಅರಸು ಜನಾಂಗದ ಅಭಿವೃದ್ಧಿಗೆ ಯುವಕರು ಮುಂದಾಗಬೇಕು’ ಎಂದು ಕಪ್ಪಡಿ, ಮಳವಳ್ಳಿ ಹಾಗೂ ಹೊನ್ನಾಯಕನಹಳ್ಳಿಯ ಪೀಠಾಧಿಪತಿ ವರ್ಚಸ್ವಿ ಶ್ರೀಕಂಠಸಿದ್ದಲಿಂಗರಾಜೇ ಅರಸ್ ಸಲಹೆ ನೀಡಿದರು.
ಕರ್ನಾಟಕ ಅರಸು ಮಹಾಮಂಡಳಿ ಚಾರಿಟಬಲ್ ಟ್ರಸ್ಟ್ ವತಿಯಿಂದ ತ್ಯಾಗರಾಜ ರಸ್ತೆಯ ವೇಣುಗೋಪಾಲಸ್ವಾಮಿ ದೇವಸ್ಥಾನದಲ್ಲಿ ಭಾನುವಾರ ಏರ್ಪಡಿಸಿದ್ದ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಜಯಂತಿ, ಯಶೋಗಾಥೆ- ಅರಸು ಜನಾಂಗದ ಸಾಧಕರು ಕೃತಿ ಬಿಡುಗಡೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
‘ಅರಸು ಸಮಾಜದವರು ಬೆಂಗಳೂರು, ಮೈಸೂರು ಎಲ್ಲಾ ಸೇರಿ 50ಸಾವಿರದಿಂದ 60ಸಾವಿರ ಮಂದಿ ಇರಬಹುದಷ್ಟೆ. ಹೀಗಾಗಿ ನಾವು ಸೂಕ್ಷ್ಮಾತಿಸೂಕ್ಷ್ಮ ವರ್ಗಕ್ಕೂ ಬರುವುದಿಲ್ಲ. ಈ ಜನಾಂಗದ ಬೆಳವಣಿಗೆಗೆ ಡಿ. ದೇವರಾಜ ಅರಸು ಕಾರಣ. ಆದರೆ ಇತ್ತೀಚೆಗೆ ಯುವಕರು ಜನಾಂಗದ ಚಟುವಟಿಕೆಗಳಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳುತ್ತಿಲ್ಲ. ಮುಂದಾದರೂ ಹಿರಿಯರ ಮಾರ್ಗದರ್ಶನದಲ್ಲಿ ಸಮಾಜಕ್ಕೆ ಸಹಕರಿಸಲು ಮುಂದೆ ಬರಬೇಕು’ ಎಂದು ತಿಳಿಸಿದರು.
ಟ್ರಸ್ಟ್ ಉಪಾಧ್ಯಕ್ಷ ಡಾ.ಎಂ.ಜಿ.ಆರ್. ಅರಸು ಮಾತನಾಡಿ, ‘ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗೆ ಮರಣೋತ್ತರವಾಗಿ ಭಾರತರತ್ನ ನೀಡಬೇಕು’ ಎಂದು ಆಗ್ರಹಿಸಿದರು.
ಭವನಕ್ಕೆ ಅನುದಾನ ಮಂಜೂರು: ‘ರಾಮಕೃಷ್ಣನಗರ ವೃತ್ತದ ಬಳಿ ಅರ್ಧ ಎಕರೆ ಪ್ರದೇಶದಲ್ಲಿ ಡಿ. ದೇವರಾಜ ಅರಸು ಭವನ ನಿರ್ಮಾಣಗೊಳ್ಳಲಿದೆ. ಇದಕ್ಕಾಗಿ ರಾಜ್ಯ ಸರ್ಕಾರ ₹ 1.5 ಕೋಟಿ ಮಂಜೂರು ಮಾಡಿದ್ದು, ಈಗಾಗಲೇ ನಿರ್ಮಿತಿ ಕೇಂದ್ರಕ್ಕೆ ₹ 30 ಲಕ್ಷ ಬಿಡುಗಡೆ ಮಾಡಿದೆ’ ಎಂದು ತಿಳಿಸಿದರು.
ಕೆ.ಪಿ. ಲಕ್ಷ್ಮೀಕಾಂತರಾಜೇ ಅರಸ್ ಸಂಪಾದಕತ್ವದ ‘ಯಶೋಗಾಥೆ’ ಅರಸು ಜನಾಂಗದ ಸಾಧಕರ ಕುರಿತ ಕೃತಿ ಬಿಡುಗಡೆ ಮಾಡಿದ ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ‘ಕೃತಿಯಲ್ಲಿ 16 ವ್ಯಕ್ತಿಗಳು, ಒಂದು ಸಂಸ್ಥೆಯ ಸಾಧನೆಯನ್ನು ದಾಖಲಿಸಲಾಗಿದೆ. ಅರಸು ಜನಾಂಗ ಸ್ಥೂಲ ನೋಟವೂ ಇದೆ. ಇಂತಹ ಸಾಧಕರ ಸಾಧನೆಗಳನ್ನು ಮುಂದಿನ ಪೀಳಿಗೆಗೆ ದಾಟಿಸಬೇಕು. ಜೊತೆಗೆ ಇದನ್ನು ಓದುವ ಮೂಲಕ ವಿದ್ಯಾರ್ಥಿಗಳು ಸ್ಫೂರ್ತಿ ಪಡೆಯಬೇಕು’ ಎಂದರು.
ತಮಿಳುನಾಡು ಬರಗೂರು ಬೆಟ್ಟದ ಅಶೋಕ ರಾಜೇಂದ್ರಸ್ವಾಮಿ, ಟ್ರಸ್ಟಿನ ಗೌರವಾಧ್ಯಕ್ಷ ಎಂ.ಎಲ್. ಬಸವರಾಜೇ ಅರಸ್, ಟ್ರಸ್ಟ್ ಅಧ್ಯಕ್ಷ ಬಿ.ಎಸ್. ಶ್ರೀಧರರಾಜೇ ಅರಸ್, ಕೃಷ್ಣರಾಜ ಕ್ಷೇತ್ರದ ಶಾಸಕ ಟಿ.ಎಸ್. ಶ್ರೀವತ್ಸ ಮಾತನಾಡಿದರು.
ಎಸ್ಎಸ್ಎಲ್‌ಸಿ, ಪಿಯುಸಿ, ಪದವಿ, ಎಂಜಿನಿಯರಿಂಗ್, ವೈದ್ಯಕೀಯ, ದಂತ ವೈದ್ಯಕೀಯ, ಸಿಎ ಮೊದಲಾದ ಕೋರ್ಸ್‌ಗಳಲ್ಲಿ ಅತ್ಯುತ್ತಮ ಅಂಕಗಳನ್ನು ಗಳಿಸಿದ 56 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಟ್ರಸ್ಟ್ ಕಾರ್ಯದರ್ಶಿ ವೈ.ಎಂ. ಕಿರಣ್, ಉಪಾಧ್ಯಕ್ಷರಾದ ಎಚ್‌ಎಂಟಿ ಲಿಂಗರಾಜೇ ಅರಸ್ ಹಾಗೂ ಇಂದುಕಲಾ ಅರಸ್ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.