ಹುಣಸೂರು: 'ರತ್ನಾಪುರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ತಾಲ್ಲೂಕಿನಲ್ಲಿ ಅತ್ಯುತ್ತಮ ಕಾರ್ಯ ನಿರ್ವಹಿಸಿ ಜಿಲ್ಲಾ ಪ್ರಶಸ್ತಿಗೆ ಭಾಜನವಾಗಿರುವುದು ಹೆಮ್ಮೆಯ ಸಂಗತಿ" ಎಂದು ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಮತ್ತು ಸಹಕಾರಿ ಸಂಘದ ಮಾಜಿ ಅಧ್ಯಕ್ಷ ಹೊಸೂರು ಕುಮಾರ್ ಹೇಳಿದರು.
ತಾಲ್ಲೂಕಿನ ರತ್ನಾಪುರಿ ಗ್ರಾಮದಲ್ಲಿ ನಡೆದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಸಭೆಯಲ್ಲಿ ಮಾತನಾಡಿ, 'ಪ್ರಸ್ತುತ ಸಾಲಿನಲ್ಲಿ ಸಂಘದ ಆಡಳಿತ ಮಂಡಳಿ ಮತ್ತು ಅಧಿಕಾರಿಗಳ ತಂಡ ಉತ್ತಮ ಕಾರ್ಯ ನಿರ್ವಹಿಸಿದ ಪರಿಣಾಮ ಜಿಲ್ಲಾ ಮಟ್ಟದ ಪ್ರಶಸ್ತಿ ಪಡೆಯಲು ಸಹಕಾರಿ ಆಗಿದೆ. ಗ್ರಾಮೀಣ ಜನರ ಜೀವನ ಹಸನಾಗಿಸುವ ದಿಕ್ಕಿನಲ್ಲಿ ಸಹಕಾರಿ ಸಂಘ ಕಾರ್ಯ ನಿರ್ವಹಿಸಿ ಆರ್ಥಿಕ ಸಹಾಯ ನೀಡಿ ರೈತರಿಗೆ ಒತ್ತಾಸೆಯಾಗಿ ನಿಂತಿದೆ’ ಎಂದರು.
‘1995 ರಲ್ಲಿ ಅಧ್ಯಕ್ಷನಾಗಿದ್ದ ಅವಧಿಯಲ್ಲಿ ಜಿಲ್ಲಾ ಮಟ್ಟದ ಪ್ರಶಸ್ತಿ ಸಂಘ ಪಡೆದಿದ್ದು, ನಂತರದಲ್ಲಿ ಪ್ರಶಸ್ತಿ ಮುಂದುವರಿದಿರುವದು ಶ್ಲಾಘನೀಯ. ಈ ಸಾಧನೆಯ ಹಿಂದೆ ರೈತರು ಪಡೆದ ಸಾಲವನ್ನು ಸಕಾಲದಲ್ಲಿ ಮರುಪಾವತಿಸಿ ಸಹಕಾರಿ ಸಂಘ ಆರ್ಥಿಕವಾಗಿ ಸದೃಢವಾಗಿ ಅಭಿವೃದ್ಧಿ ಹೊಂದಲು ಸಹಕಾರಿ ಆಗಿದೆ. ರೈತರು ಸಾಲ ಪಡೆದು ಬೆಳೆ ನಷ್ಟವಾಗಿದೆ ಎಂದು ಸುಸ್ತಿಯಾಗದೆ ಸಿಕ್ಕ ಲಾಭಾಂಶದಲ್ಲಿ ಸಾಲದ ಬಾಬತ್ತು ತೀರಿಸುವ ಪ್ರಾಮಾಣಿಕತನದಿಂದ ಸಂಘ ಉಳಿದಿದೆ’ ಎಂದರು.
ಸಂಘದ ಅಧ್ಯಕ್ಷ ನಾಗೇಗೌಡ ಮಾತನಾಡಿ, ಪ್ರಸ್ತುತ ಸಾಲಿನಲ್ಲಿ ಸಂಘವು ₹ 45 ಸಾವಿರ ಲಾಭ ಗಳಿಸಿದೆ. ಸಂಘಕ್ಕೆ ಆದಾಯ ಹೆಚ್ಚಿಸುವ ಉದ್ದೇಶದಲ್ಲಿ ವಾಣಿಜ್ಯ ಮಳಿಗೆ ನಿರ್ಮಿಸಿದೆ. ಉಳಿದ ಖಾಲಿ ನಿವೇಶನದಲ್ಲೂ ವಾಣಿಜ್ಯ ಮಳಿಗೆ ನಿರ್ಮಿಸಿ ಬಾಡಿಗೆ ನೀಡುವುದರಿಂದ ಸಂಘದ ಆರ್ಥಿಕ ಶಕ್ತಿ ವೃದ್ಧಿಯಾಗಲಿದೆ’ ಎಂದರು.
ಸಭೆಯಲ್ಲಿ ಸಂಘದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಮೇಶ್ ಲೆಕ್ಕ ಮಂಡಿಸಿದರು.
ಗೌರವ: ಪ್ರಾಥಮಿಕ ಪತ್ತಿನ ಸಹಕಾರಿ ಸಂಘಕ್ಕೆ ಜಿಲ್ಲಾ ಪ್ರಶಸ್ತಿ ಬರಲು ಯಶಸ್ವಿಯಾಗಿ ಕಾರ್ಯನಿರ್ವಹಿಸಿದ ಮುಖ್ಯಕಾರ್ಯನಿರ್ವಹಣಾಧಿಕಾರಿ ರಮೇಶ್ ಅವರನ್ನು ಸಂಘದ ಸದಸ್ಯರು ಗೌರವಿಸಿದರು.
ಸಭೆಯಲ್ಲಿ ಸಂಘದ ನಿರ್ದೇಶಕರಾದ ರತ್ನಾಪುರಿ ಪುಟ್ಟಸ್ವಾಮಿ,ನಂದೀಶ್, ದಯಾನಂದ, ಮುಜೀಬ್, ಮೊಹಮ್ಮದ್ ರಫೀಕ್, ಮುರುಳಿ, ವೆಂಕಟೇಶ್, ಚಿಕ್ಕತಿಮ್ಮನಾಯಕ, ಬೇಬಿ ಸರೋಜ, ಮುಖಂಡರಾದ ಪ್ರಭಾಕರ್, ಗಿರಿ ಸಿಂಧೆ, ಸ್ವಾಮಿನಾಥ್, ಆಲಿಜಾನ್, ಕೃಷ್ಣಕುಮಾರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.