ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವ್ವಾಸ್‌: ಒಂದು ಗಾಣದ ಕ್ರಾಂತಿ! ಎಂಬಿಎ ‍ಪದವೀಧರ ನವೋದ್ಯಮಿ ಆದ ಬಗೆ...

Last Updated 21 ಸೆಪ್ಟೆಂಬರ್ 2021, 8:32 IST
ಅಕ್ಷರ ಗಾತ್ರ

ಮೈಸೂರು: ಖಾಸಗಿ ಕಂಪನಿಯ ಉತ್ತಮ ಸಂಬಳದ ನೌಕರಿ ತೊರೆದ ನಗರದ ಶ್ರೀರಾಂಪುರದ ಎಂಬಿಎ ಪದವೀಧರ ಎಸ್‌.ಮಹದೇವಸ್ವಾಮಿ ಈಗ ಗಾಣದ ಎಣ್ಣೆಯ ಯಶಸ್ವಿ ನವೋದ್ಯಮಿ.

ನಗರದ ಮೂರು ಕಡೆ ‘ಅವ್ವಾಸ್‌’ ಮರದ ಗಾಣದ ಎಣ್ಣೆ ಘಟಕಗಳನ್ನು ತೆರೆದಿರುವ ಅವರು, ಎಂಟು ಮಂದಿಗೆ ಉದ್ಯೋಗ ನೀಡಿ, ನೂರಾರು ರೈತರಿಗೂ ನೆರವಾಗಿದ್ದಾರೆ.

‘ಚಾಮರಾಜನಗರದ ಉಡಿಗಾಲದಲ್ಲಿ ತಾತ ಗಾಣದ ಎಣ್ಣೆ ವ್ಯಾಪಾರ ಮಾಡುತ್ತಿದ್ದರು. ಅದನ್ನು ಮುಂದುವರಿಸಬೇಕು ಎಂಬ ಕನಸಿತ್ತು. ಗಟ್ಟಿ ನಿರ್ಧಾರ ಮಾಡಿ ನೌಕರಿಯಿಂದ ಕೂಡಿಟ್ಟ ₹ 14 ಲಕ್ಷ ಬಂಡವಾಳ ಹೂಡಿ 2015ರಲ್ಲಿ ಉದ್ಯಮ ಆರಂಭಿಸಿದೆ. ಈಗ ವಾರ್ಷಿಕ ₹ 1 ಕೋಟಿ ವಹಿವಾಟು ಇದೆ’ ಎಂದು ಅವರು ‘ಪ್ರಜಾವಾಣಿ’ಯೊಂದಿಗೆ ನೆನಪುಗಳನ್ನು ಹಂಚಿಕೊಂಡರು.

ಶ್ರೀರಾಂಪುರದಲ್ಲಿ ಮೊದಲ ಬಾರಿಗೆ ಗಾಣ ಸ್ಥಾಪಿಸಿ ಅಲ್ಲಿಯೇ ಎಣ್ಣೆ ಮಳಿಗೆ ಆರಂಭಿಸಿದಾಗ ದಿನಕ್ಕೆ ಒಬ್ಬ ಗ್ರಾಹಕರು ಬಂದರೆ ಅದೇ ಹೆಚ್ಚಾಗಿತ್ತು. ಎಣ್ಣೆಯಲ್ಲಿ ನೊರೆಯಿದೆ ಎಂದು ಅನುಮಾನಿಸುತ್ತಿದ್ದರು. ನಂತರ, ಎಣ್ಣೆಯ ಶುದ್ಧತೆ, ರುಚಿಯಿಂದಾಗಿ ಸಿಕ್ಕ ಬಾಯಿಮಾತಿನ ಪ್ರಚಾರವು ವ್ಯಾಪಾರವನ್ನು ಲಾಭದಾಯಕವಾಗಿಸಿತು. ಅದೇ ಮಾದರಿಯನ್ನೇ ಹಲವರು ಅನುಸರಿಸಿದ್ದರಿಂದ ಈಗ ಮೈಸೂರಿನಲ್ಲಿ 50ಕ್ಕಿಂತ ಹೆಚ್ಚು ಗಾಣ ಸಹಿತ ಅಡುಗೆ ಎಣ್ಣೆ ಮಳಿಗೆಗಳಿವೆ.

ಸರಸ್ವತಿಪುರಂನ ಜವರೇಗೌಡ ಉದ್ಯಾನದ ಎದುರು ಹಾಗೂ ಕುವೆಂಪುನಗರ ಎಂ ಬ್ಲಾಕ್‌ನಲ್ಲಿರುವಅವ್ವಾಸ್‌’ ಮಳಿಗೆಗಳಲ್ಲಿ ಗಾಣಗಳು ನಿತ್ಯ ಕಡಲೆಕಾಯಿ, ಹುಚ್ಚೆಳ್ಳು, ಕೊಬ್ಬರಿ, ಸೂರ್ಯಕಾಂತಿ, ಹರಳು ಬೀಜಗಳನ್ನು ಅರೆಯುತ್ತಿವೆ. ನೂರಾರು ಲೀಟರ್‌ ಎಣ್ಣೆ ತಯಾರಿಸುತ್ತಿವೆ.

‘ಮಾರುಕಟ್ಟೆಯಲ್ಲಿರುವ ಕಲಬೆರಕೆ ಎಣ್ಣೆಗಳಿಂದ ಹಲವು ರೋಗಗಳು ಬರುತ್ತವೆ. ಗಾಣದ ಎಣ್ಣೆಯ ಬೆಲೆ ಸ್ವಲ್ಪ ಹೆಚ್ಚಿರಬಹುದು. ಆದರೆ, ಅದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಉಚ್ಚಳ್ಳೆಣ್ಣೆ ರಕ್ತದ ಸಂಚಾರವನ್ನು ಸರಾಗವಾಗಿಸಿ ಹೃದ್ರೋಗದಿಂದ ರಕ್ಷಿಸುತ್ತದೆ’ ಎಂದು ಮಹದೇವಸ್ವಾಮಿ ತಿಳಿಸಿದರು.

ರೈತರಿಗೆ ಬೆಂಬಲ; ಮೈಸೂರು, ಚಾಮರಾಜನಗರ, ಚಳ್ಳಕೆರೆಯಲ್ಲಿ ಬೆಳೆಯುವ ಶೇಂಗಾ, ಸೂರ್ಯಕಾಂತಿ, ಹುಚ್ಚೆಳ್ಳು, ಅರಳು, ಹಾಗೂ ಚಾಮರಾಜನಗರ ಮತ್ತು ಅರಸೀಕರೆಯಿಂದಕೊಬ್ಬರಿಯನ್ನು ರೈತರಿಂದ ಖರೀದಿಸಿ ಅವ್ವಾಸ್‌ ಬೆಂಬಲ ನೀಡುತ್ತಿದೆ.

ಶೇಂಗಾ ಬೀಜಗಳನ್ನು ಅರೆದ ಬಳಿಕ ಗಾಣದಲ್ಲಿ ಉಳಿವ ಹಿಂಡಿಯನ್ನು ಇಟ್ಟುಕೊಂಡು ಎಣ್ಣೆಯನ್ನು ಮಾತ್ರ ಉಚಿತವಾಗಿ ತೆಗೆದುಕೊಡಲಾಗುತ್ತದೆ. ಕೊಬ್ಬರಿ, ಹುಚ್ಚೆಳ್ಳು ಸೇರಿದಂತೆ ಉಳಿದ ಬೀಜಗಳನ್ನು ಅರೆಯಲು ಕೆ.ಜಿ.ಗೆ ₹ 15 ಶುಲ್ಕ. ಕೊಬ್ಬರಿ ಎಣ್ಣೆ ಬೇಕೆಂದರೆ 15 ಕೆ.ಜಿ ಕೊಬ್ಬರಿ ತರಬೇಕು. ಉಳಿದವು ಸಾಮಾನ್ಯವಾಗಿ 12 ಕೆ.ಜಿ ಇದ್ದರೆ ಸಾಕು. ಪ್ರತಿ ಲೀಟರ್ ಎಣ್ಣೆಗೆ 2.5 ಕೆ.ಜಿ ಶೇಂಗಾ ಬೀಜ ಬೇಕು.

ಗ್ರಾಹಕರಿಗೆ ಪ್ರತಿ ಲೀಟರ್‌ ಕೊಬ್ಬರಿ ಎಣ್ಣೆ ₹ 340, ಕಡಲೆಕಾಯಿ ಎಣ್ಣೆ ₹ 300, ಸೂರ್ಯಕಾಂತಿ ಎಣ್ಣೆ ₹ 340, ಹರಳೆಣ್ಣೆ ₹ 340, ಹುಚ್ಚೆಳ್ಳೆಣ್ಣೆ ₹ 500, ಎಳ್ಳೆಣ್ಣೆ 400, ಸಾಸಿವೆ ಎಣ್ಣೆ ₹ 400 ದರವಿದೆ.

ಮಕ್ಕಳಿಗೆ ಸಿರಿಧಾನ್ಯದ ಪುಡಿ: ‌‘ಅವ್ವಾಸ್‌’ ಸಿರಿಧಾನ್ಯಗಳ ಪುಡಿಯ ಸಿದ್ಧಪೊಟ್ಟಣಗಳನ್ನು ಮಾರಾಟ ಮಾಡಲಾಗುತ್ತಿದೆ. ರಾಗಿ, ಸಜ್ಜೆ, ನವಣೆ, ಸಾಮೆ ಧಾನ್ಯದಿಂದ ಪುಡಿ ತಯಾರಿಸಿ ಪ್ಯಾಕೆಟ್‌ ರೂಪದಲ್ಲಿ ತರಲಾಗಿದೆ. ಇದು ಮಕ್ಕಳಿಗೆ ಪೌಷ್ಟಿಕ ಆಹಾರ. ಯುವಕರಿಗೆ ಕಂಪನಿಯ ಫ್ರ್ಯಾಂಚೈಸ್‌ ಅನ್ನು ನೀಡಿ ಬದುಕು ಕಟ್ಟಿಕೊಳ್ಳಲು ನೆರವಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT