ಮೈಸೂರು: ಬಹುರೂಪಿ ನಾಟಕೋತ್ಸವವು ನಾಟಕದ ಜೊತೆಗೆ ಇತರೆ ಕಲೆಗಳ ಅಭಿವ್ಯಕ್ತಿ ಸಾಧ್ಯತೆಗಳತ್ತಲೂ ಗಮನ ಹರಿಸಿತ್ತು ಎಂಬುದಕ್ಕೆ ಇಲ್ಲಿನ ರಂಗಾಯಣದ ಪ್ರವೇಶ ದ್ವಾರದಲ್ಲೇ ಗಮನ ಸೆಳೆಯುವ ಶಿಲ್ಪವನ ಸಾಕ್ಷಿಯಾಗಿ ಮೈದಳೆದಿದೆ.

ಒಂದೂವರೆ ದಶಕದ ಹಿಂದೆ ಉತ್ಸವದ ಅಂಗವಾಗಿಯೇ ರೂಪುತಳೆದ ಶಿಲ್ಪ ಕಲಾಕೃತಿಗಳೊಂದಿಗೆ ಸಹೃದಯರು ನಿರಂತರ ಮೌನ ಸಂವಾದ ನಡೆಸುತ್ತಿದ್ದಾರೆ. ಈ ವನಕ್ಕೆ ತೋರಣದ ರೂಪದಲ್ಲಿ ರಂಗಾಯಣದ ಮೂಲಕರ್ತರಾದ ಬಿ.ವಿ.ಕಾರಂತರ ಪುತ್ಥಳಿ ಕಾಣುತ್ತದೆ.

2008ರಲ್ಲಿ ಅಂದಿನ ಪ್ರಭಾರ ನಿರ್ದೇಶಕರಾಗಿದ್ದ ಕಾ.ತ.ಚಿಕ್ಕಣ್ಣ ಅವರ ನೇತೃತ್ವದಲ್ಲಿ ಐದು ದಿನಗಳ ಕಾಲ ನಡೆದಿದ್ದ ಉತ್ಸವದಲ್ಲಿ ಮೊದಲ ಬಾರಿಗೆ ಶಿಲ್ಪ ಕಲಾ ಶಿಬಿರವನ್ನು ಏರ್ಪಡಿಸಲಾಗಿತ್ತು. ಕರ್ನಾಟಕ ಶಿಲ್ಪಕಲಾ ಅಕಾಡೆಮಿಯ ಮಾಜಿ ಅಧ್ಯಕ್ಷ ವೆಂಕಟಾಚಲಪತಿ ಅವರ ನಿರ್ದೇಶನದಲ್ಲಿ ಹದಿನೈದು ದಿನಗಳ ಕಾಲ ಶಿಬಿರ ನಡೆದಿತ್ತು. ಟಿ.ಎಸ್.ನಾಗಾಭರಣ ಉತ್ಸವದ ಸಂಚಾಲಕರಾಗಿದ್ದರು.

ಶಿಲ್ಪಿಗಳಾದ ಬೆಂಗಳೂರಿನ ಎಸ್.ಗೋಪಿನಾಥ್, ಧಾರವಾಡದ ಕೆ.ಎಂ. ಸಾಬಣ್ಣನವರ್, ಎಂ.ಸಿ.ರಮೇಶ್, ಬದಾಮಿಯ ದಾನೇಶ್ವರಮಠ, ಮುರಳಿ ಶೃಂಗೇರಿ, ಎಸ್.ಗೋಪಿನಾಥ್, ಬೆಳಗಾವಿಯ ಗೋಪಾಲ್ ಕಮ್ಮಾರ್, ಮೈಸೂರು ರಂಗಾಯಣದ ಕಲಾವಿದರಾದ ಎಚ್.ಕೆ. ದ್ವಾರಕಾನಾಥ್, ಪಿ.ಪ್ರದೀಪ್, ಕಾವಾದ ಗುರುರಾಜ ಎಸ್. ನಾಯಕ್, ಬೆಂಗಳೂರಿನ ನರಸಿಂಹ ಹಾಗೂ ಉತ್ತರಪ್ರದೇಶದ ಉದಯವೀರ್ ಸಿಂಗ್ ಸೇರಿ 12 ಕಲಾಕೃತಿಗಳನ್ನು ರಚಿಸಿದ್ದರು. ಶಿಬಿರಕ್ಕೆ ಬೇಕಾಗಿದ್ದ ಶಿಲೆಗಳನ್ನು ಎಚ್.ಡಿ.ಕೋಟೆಯಿಂದ ತರಿಸಲಾಗಿತ್ತು. ಶಿಬಿರವನ್ನು ಚಿತ್ರಕಲಾವಿದ ವಿ.ಎಂ.ಸೋಲಾಪುರಕರ್ ಉದ್ಘಾಟಿಸಿದ್ದರು.

ಪುಸ್ತಕದ ಭಾರ ಹೊತ್ತು ಕುಸಿದ ಬಾಲಕಿ, ಹೊದಿಕೆ ಹೊದ್ದ ಮಹಿಳೆ, ಆಗಸದತ್ತ ದೃಷ್ಟಿ ನೆಟ್ಟ ಗೋಸುಂಬೆ, ಬಸವನಹುಳು, ಶ್ರೀರಂಗ, ಇಬ್ಬರು ಮನುಷ್ಯರ ಅಪ್ಪುಗೆ, ಧ್ಯಾನನಿರತ ನಟ, ಮಡಿಲಲ್ಲಿ ಮಗುವನ್ನಿರಿಸಿಕೊಂಡ ತಾಯಿ, ಗುಹಾ ಮುಖ, ಕಾಳಿಂಗ ಮರ್ದನ ಮಾಡುತ್ತಿರುವ ಬಾಲಕೃಷ್ಣ, ಉಳಿಪೆಟ್ಟು ತಿಂದ ಶಿಲೆಯ ಮೇಲೆ ಕುಳಿತ ಸಪಾಟು ಶಿಲೆ ಹೀಗೆ ಕಲ್ಪನೆಗೆ ನಿಲುಕುವ ಕಲಾಕೃತಿಗಳ ಜೊತೆಗೆ ಅರ್ಥಗಳ ಅನಂತ ಸಾಧ್ಯತೆಗಳನ್ನು ತೋರುವ ಕಲಾಕೃತಿಗಳೂ ಈ ವನದಲ್ಲಿ ಅನಾವರಣಗೊಂಡಿವೆ. ರಂಗಾಯಣ ಆವರಣದ ಪುಟ್ಟ ತೋಟಗಾರಿಕೆ ಕ್ಷೇತ್ರದಲ್ಲಿ ಈ ಶಿಲೆಗಳ ವನವು ಹೊಸದೇನನ್ನೋ ಹೇಳಲು ಬಯಸುತ್ತಿರುವಂತೆ ಕಾಣುತ್ತವೆ.

ನಿರ್ವಹಣೆ ಕೊರತೆ: ‘ರಂಗಾಯಣದ ಬಾಗಿಲಲ್ಲೇ ಎದುರುಗೊಳ್ಳುವ ಈ ವನದ ನಿರ್ವಹಣೆ ಸಮರ್ಪಕವಾಗಿಲ್ಲ’ ಎಂಬ ದೂರೂ ಇದೆ.

ಕಲಾಕೃತಿಗಳ ಮೇಲೆ ದೂಳು, ಮಣ್ಣು ನೆರೆದು ಮಸುಕಾಗಿವೆ. ಕೆಲವು ಮಣ್ಣಿನ ಬಣ್ಣಕ್ಕೇ ತಿರುಗಿವೆ. ಕನಿಷ್ಠ ನೀರು ಹಾಕಿ ತೊಳೆದರೂ ಇವು ಹೊಳೆಯುತ್ತವೆ ಎನ್ನುತ್ತಾರೆ ಇಲ್ಲಿನ ಸಿಬ್ಬಂದಿಯೊಬ್ಬರು.

‘ಪ್ರಭಾರ’ ಅವಧಿಯಲ್ಲೂ ಉತ್ಸವ ಯಶಸ್ವಿ

ರಂಗಾಯಣಕ್ಕೆ ಪೂರ್ಣಾವಧಿ ನಿರ್ದೇಶಕರು ಇಲ್ಲದ ವರ್ಷಗಳಲ್ಲೂ ಬಹುರೂಪಿ ನಾಟಕೋತ್ಸವ ಎಂದಿನಂತೆ ನಡೆದಿದೆ.

ಮೂರು ಬಾರಿ ಪ್ರಭಾರಿ ನಿರ್ದೇಶಕರಾಗಿದ್ದ ಕಾ.ತ.ಚಿಕ್ಕಣ್ಣ 2008 ಹಾಗೂ 2010ರಲ್ಲಿ ಉತ್ಸವದ ನೇತೃತ್ವ ವಹಿಸಿದ್ದರು. ಆಗ ಶಿಲ್ಪಕಲಾ ಶಿಬಿರದ ಜೊತೆಗೆ ಕಾವ್ಯ ವಾಚನ, ಗಾಯನ ವ್ಯಾಖ್ಯಾನದ 'ಹಾಡು ಮೂಡ್ಯಾವ ಬಾಯಾಗ’, 'ಪೂರ್ವರಂಗ ಪ್ರದರ್ಶನ', 'ಬಹುರೂಪಿ ರಂಗ ನಡೆ’ ಎಂಬ ವಿನೂತನ ಕಾರ್ಯಕ್ರಮಗಳು ನಡೆದಿದ್ದವು.

2024ರಲ್ಲಿ ಅಧಿಕಾರಿಗಳ ನೇತೃತ್ವದಲ್ಲೇ ‘ಇವ ನಮ್ಮ ಇವ ನಮ್ಮವ’ ಆಶಯದ ಉತ್ಸವವನ್ನು ನಡೆಸಲಾಗಿತ್ತು.

ಟಿಕೆಟ್ ದರ ಹೆಚ್ಚಳ ವಿವಾದ

‘ಉತ್ಸವದ ಟಿಕೆಟ್ ದರ ಹೆಚ್ಚಿಸಿದ್ದನ್ನು ವಿರೋಧಿಸಿ ವಿವಿಧ ಸಂಘಟನೆಗಳ ಮುಖಂಡರು ರಂಗಾಯಣದ ಮುಂದೆ ಪ್ರತಿಭಟನೆ ನಡೆಸಿದ್ದರು. ಟಿಕೆಟ್ ದರ ಹೆಚ್ಚಿಸುವುದನ್ನು ರಂಗಾಯಣದ ಕಾರ್ಯಕಾರಿ ಸಮಿತಿ ಒಪ್ಪಿಕೊಂಡಿತ್ತು’ ಎಂದು ಸ್ಮರಿಸುತ್ತಾರೆ ಕಾ.ತ.ಚಿಕ್ಕಣ್ಣ.

‘ಈ ಸಾಲಿನ ನನ್ನ ಅವಧಿಯಲ್ಲೇ ನನೆಗುದಿಗೆ ಬಿದ್ದಿದ್ದ ರಂಗಾಯಣದ ಬೇಲಿ ದುರಸ್ತಿಗೊಳಿ
ಸಲಾಯಿತು. ರಂಗಾಯಣದ ಮುಂದೆ ಕೈ ಮುರಿದುಕೊಂಡು ನಿಂತಿದ್ದ ಕಿನ್ನರಜೋಗಿ ವಿಗ್ರಹವನ್ನು ಸರಿಪಡಿಸಲಾಯಿತು. ಬೃಹತ್ ಕಟ್ಟಡಕ್ಕೆ ಮೊದಲ ಬಾರಿಗೆ ಸುಣ್ಣಬಣ್ಣ ಬಳಿಸಲಾಯಿತು. ವನರಂಗಕ್ಕೆ ಕಾಯಂ ಆಗಿ ಉಪಯುಕ್ತ ಕೇಬಲ್, ವಿದ್ಯುತ್ ದೀಪಗಳನ್ನು ಅಳವಡಿಸಲಾಯಿತು’ ಎಂದು ಅವರು ತಿಳಿಸಿದರು.