ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ್‌ ಜೋಡೊ ಯಾತ್ರೆಗೆ ಬಿಜೆಪಿ ಕಪ್ಪು ಬಾವುಟ: ಡಿ.ಕೆ.ಶಿವಕುಮಾರ್ ಆರೋಪ

Last Updated 2 ಅಕ್ಟೋಬರ್ 2022, 12:40 IST
ಅಕ್ಷರ ಗಾತ್ರ

ಬದನವಾಳು (ಮೈಸೂರು ಜಿಲ್ಲೆ): ‘ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ನೇತೃತ್ವದ ಭಾರತ್‌ ಜೋಡೊ ಯಾತ್ರೆಯು ಅ.3ರಂದು ಮೈಸೂರು ನಗರದಲ್ಲಿ ಸಂಚರಿಸಲಿದ್ದು, ಆಗ ಪ್ರದರ್ಶಿಸಲೆಂದು ಬಿಜೆಪಿಯವರು ತಮ್ಮ ಕಾರ್ಯಕರ್ತರಿಗೆ ಕಪ್ಪು ಬಾವುಟಗಳನ್ನು ಹಂಚಿದ್ದಾರೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆರೋಪಿಸಿದರು.

ಇಲ್ಲಿ ಪತ್ರಕರ್ತರೊಂದಿಗೆ ಭಾನುವಾರ ಮಾತನಾಡಿದ ಅವರು, ‘ಈ ವಿಷಯವನ್ನು ನಗರ ಪೊಲೀಸ್ ಆಯುಕ್ತರ ಗಮನಕ್ಕೆ ತಂದಿದ್ದೇನೆ. ಕಪ್ಪು ಬಾವುಟ ತೋರಿಸುವುದು, ಮೊಟ್ಟೆ, ಕಲ್ಲು ಎಸೆಯುವುದು ಅಥವಾ ಧಿಕ್ಕಾರ ಕೂಗುವುದು ಮಾಡಿದರೆ ಅದರ ಫಲವನ್ನು ಮುಂದಕ್ಕೆ ತಿಳಿಸುತ್ತೇನೆ’ ಎಂದು ಬಿಜೆಪಿ ನಾಯಕರಿಗೆ ಎಚ್ಚರಿಕೆ ನೀಡಿದರು.

‘ಎಲ್ಲಿ ನೋವು, ಶ್ರಮ ಇದೆಯೋ ಅಲ್ಲಿ ಫಲವಿದೆ ಎಂದು ನಂಬಿ ಯಾತ್ರೆ ಮುಂದುವರಿಸುತ್ತಿದ್ದೇವೆ’ ಎಂದರು.

‘ಮನಸ್ಸುಗಳನ್ನು ಜೋಡಿಸುವ ಕೆಲಸ ಬದನವಾಳು ಗ್ರಾಮದಲ್ಲಿ ನಡೆದಿದೆ. ದೇಶದಲ್ಲೇ ಮೊದಲ ಬಾರಿಗೆ ಇಂತಹ ಪ್ರಯತ್ನವಾಗಿದೆ. ಇದೇ ಭಾರತ ಜೋಡೊ ಯಾತ್ರೆಯ ಮೂಲ ಉದ್ದೇಶ’ ಎಂದು ತಿಳಿಸಿದರು.

‘ಯಂಗ್ ಇಂಡಿಯಾ ಹಾಗೂ ನ್ಯಾಷನಲ್ ಹೆರಾಲ್ಡ್ ಪ್ರಕರಣ ವಿಚಾರವಾಗಿ ಅ.7ರಂದು ವಿಚಾರಣೆಗೆ ಬರುವಂತೆ ಜಾರಿ ನಿರ್ದೇಶನಾಲಯದಿಂದ ನೋಟಿಸ್ ಕೊಡಲಾಗಿದೆ. ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿಗೆ ಕಿರುಕುಳ ನೀಡಿದ ನಂತರ ನನ್ನನ್ನು ವಿಚಾರಣೆಗೆ ಕರೆದಿದ್ದಾರೆ. ಬೇರೆ ಪ್ರಕರಣಗಳೊಂದಿಗೆ ಇದನ್ನೂ ಸೇರಿಸುವ ಪ್ರಯತ್ನ ಮಾಡುತ್ತಿದ್ದಾರೆ. ಯಾತ್ರೆ ನಡುವಯೇ ನನಗೆ ಹಾಗೂ ಸಹೋದರ ಡಿ.ಕೆ.ಸುರೇಶ್‌ಗೆ ನೊಟೀಸ್ ನೀಡಲಾಗಿದೆ’ ಎಂದು ದೂರಿದರು.

‘ವಿಚಾರಣೆಗೆ ಸಹಕಾರ ನೀಡುತ್ತೇನೆ. ಆದರೆ ಅ.7ರಂದು ರಾಹುಲ್ ಅವರೊಂದಿಗೆ ಸಮಾಜದ ಆದಿಚುಂಚನಗಿರಿ ಮಠಕ್ಕೆ ತೆರಳಿ ಸ್ವಾಮೀಜಿ ಭೇಟಿ ನೀಡುವ ಮುಖ್ಯ ಕಾರ್ಯಕ್ರಮವಿದೆ. ಅದರಲ್ಲಿ ನಾನು ಭಾಗವಹಿಸಲೇಬೇಕು. ಹೀಗಾಗಿ, ಕೆಲವು ದಿನಗಳ ಕಾಲಾವಕಾಶ ಕೇಳುತ್ತೇನೆ’ ಎಂದು ಪ್ರತಿಕ್ರಿಯಿಸಿದರು.

‘ಸಿ.ಟಿ.ರವಿ ಹತಾಶರಾಗಿದ್ದಾರೆ. ಹೃದಯವಿಲ್ಲ. ಮಾನವೀಯತೆಯೂ ಇಲ್ಲ. ಹೀಗಾಗಿ, ನಾನು ಕಣ್ಣೀರು ಹಾಕಿದ್ದನ್ನು ಟೀಕಿಸುತ್ತಿದ್ದಾರೆ. ಯಾತ್ರೆಗೆ ಸಿಗುತ್ತಿರುವ ಬೆಂಬಲ ಸಹಿಸಲಾಗದೆ ಗಮನ ಬೇರೆಡೆ ಸೆಳೆಯಲು ಯತ್ನಿಸುತ್ತಿದ್ದಾರೆ’ ಎಂದು ತಿರುಗೇಟು ನೀಡಿದರು.

ಶಾಸಕ ಪ್ರಿಯಾಂಕ್ ಖರ್ಗೆ ಮಾತನಾಡಿ, ‘ನಮ್ಮ ಶಾಂತಿಯುತ ಯಾತ್ರೆಗೆ ಅಡ್ಡಿಪಡಿಸಿದರೆ ಸುಮ್ಮನಿರುವುದಿಲ್ಲ. ಇದು ಸಂವಿಧಾನ ಉಳಿಸಲು ನಮ್ಮ ಕೊನೆಯ ಹೋರಾಟ. ಬಿಜೆಪಿಯವರಿಗೆ ಅದೇ ದಾಟಿಯಲ್ಲಿ ಉತ್ತರಿಸಲು ಸಿದ್ಧವಿದ್ದೇವೆ’ ಎಂದರು.

ಕಡಕೊಳ (ಮೈಸೂರು ಜಿಲ್ಲೆ): ಕಾಂಗ್ರೆಸ್ ನಾಯಕ ರಾಹುಲ್‌ ಗಾಂಧಿ ಭಾನುವಾರ ಸಂಜೆ ಭಾರತ್ ಜೋಡೊ ಪಾದಯಾತ್ರೆಯನ್ನು ಇಲ್ಲಿಂದ ಆರಂಭಿಸಿದರು. ಅವರೊಂದಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿಧಾನಸಭೆಯ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ, ವಿಧಾನಪರಿಷತ್‌ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್, ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್‌ಸಿಂಗ್ ಸುರ್ಜೇವಾಲಾ ಹೆಜ್ಜೆ ಹಾಕಿದರು. ರಾಜ್ಯದಲ್ಲಿ ಮೂರನೇ ದಿನದ ಯಾತ್ರೆಯು ಮೈಸೂರು ಸಮೀಪದ ಬಂಡಿಪಾಳ್ಯದ ಬಳಿ ಅಂತ್ಯಗೊಳ್ಳಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT