ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೀಪಾವಳಿಗೆ ಸಿಎಂ ಕಚೇರಿಯಿಂದ ಪತ್ರಕರ್ತರಿಗೆ ಹಣ: ತನಿಖೆಗೆ ವಿಶ್ವನಾಥ್ ಆಗ್ರಹ

Last Updated 30 ಅಕ್ಟೋಬರ್ 2022, 11:02 IST
ಅಕ್ಷರ ಗಾತ್ರ

ಮೈಸೂರು: ‘ಮುಖ್ಯಮಂತ್ರಿ ಕಚೇರಿಯಿಂದ ಪತ್ರಕರ್ತರಿಗೆ ದೀಪಾವಳಿ ಅಂಗವಾಗಿ ಸ್ವೀಟ್ ಬಾಕ್ಸ್‌ನೊಂದಿಗೆ ಹಣ ನೀಡಿರುವ ಘಟನೆಯ ಕುರಿತು ಸರ್ಕಾರ ತ್ವರಿತವಾಗಿ ತನಿಖೆ ನಡೆಸಬೇಕು’ ಎಂದು ಬಿಜೆಪಿಯ ವಿಧಾನಪರಿಷತ್ ಸದಸ್ಯ ಎ.ಎಚ್.ವಿಶ್ವನಾಥ್ ಆಗ್ರಹಿಸಿದರು.

ಇಲ್ಲಿ ಪತ್ರಕರ್ತರೊಂದಿಗೆ ಭಾನುವಾರ ಮಾತನಾಡಿದ ಅವರು, ‘ಹಣ ಕೊಟ್ಟಿರುವುದು ಮಾಧ್ಯಮಕ್ಕೆ ಮಾಡಿದ ಅಪಮಾನವಾಗಿದೆ. ಪತ್ರಕರ್ತರೊಂದಿಗೆ 40 ವರ್ಷಗಳಿಂದ ಕೆ.ಆರ್.ನಗರ, ಮೈಸೂರು, ಬೆಂಗಳೂರಿನಿಂದ ಹಿಡಿದು ದೆಹಲಿಯವರೆಗೆ ಪತ್ರಕರ್ತರೊಂದಿಗೆ ಒಡನಾಟವಿದೆ. ಆದರೆ, ಯಾವತ್ತೂ ಅವರನ್ನು ಭ್ರಷ್ಟರನ್ನಾಗಿ ಮಾಡಿಲ್ಲ’ ಎಂದರು.

‘ಮುಖ್ಯಮಂತ್ರಿ ಕಚೇರಿಯಿಂದ ಪತ್ರಕರ್ತರಿಗೆ ಸ್ವೀಟ್ ಬಾಕ್ಸ್ ಜತೆ ಹಣ ನೀಡಿರುವುದನ್ನು ಒಪ್ಪಲು ಸಾಧ್ಯವಿಲ್ಲ. ವಾಚ್, ಸ್ಕಾಚ್ ಕೂಡ ಕೊಡಲಾಗಿದೆ. ಈ ವಿಚಾರವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯಿಸಬೇಕು. ಅವರ ಮಾಧ್ಯಮ ಕಾರ್ಯದರ್ಶಿಯನ್ನು ಕೂಡಲೇ ಹೊರ ಹಾಕಬೇಕು’ ಎಂದು ಒತ್ತಾಯಿಸಿದರು.

‘ಜನತಂತ್ರ ವ್ಯವಸ್ಥೆಯಲ್ಲಿ ಮಾಧ್ಯಮ ಪ್ರಮುಖ ಅಂಗ. ಆ ಅಂಗವನ್ನು ಹಾಳು ಮಾಡುವುದು ಸರಿಯಲ್ಲ. ಕರ್ನಾಟಕದ ಮಾಧ್ಯಮಕ್ಕೆ ಬಹಳ ಹೆಸರಿಗೆ; ತನ್ನದೇ ಆದ ಪ್ರತಿಷ್ಠೆ ಇದೆ. ಅದರ ಗೌರವ, ಪ್ರಖರತೆ, ವ್ಯಕ್ತಿತ್ವ, ಶಕ್ತಿಯನ್ನು ನಾವೇ ಹಾಳು ಮಾಡುತ್ತಿದ್ದೇವೆಯೇ ಎನಿಸುತ್ತಿದೆ’ ಎಂದರು.

‘ಪತ್ರಕರ್ತರಿಗೆ ಆಮಿಷ ಒಡ್ಡಿರುವುದನ್ನು ಗಮನಿಸಿದರೆ ಮುಂಬರುವ ಚುನಾವಣೆಗೆ ಈಗಲೇ ಹಣ ಹೂಡಿಕೆ ಆರಂಭವಾಯಿತೇ ಎಂಬ ಪ್ರಶ್ನೆ ಬರುವಂತೆ ಮಾಡಿದೆ. ಹೀಗಾಗಿ, ಯಾರು ತಪ್ಪು ಮಾಡಿದ್ದಾರೆಯೋ ಅವರ ವಿರುದ್ಧ ಕ್ರಮ ಜರುಗಿಸಬೇಕು’ ಎಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಗೂ ಮುನ್ನ, ಮಾಧ್ಯಮ ಪ್ರತಿನಿಧಿಗಳಿಗೆ ಮೈಸೂರು ಪಾಕ್ ವಿತರಿಸಿ ದೀಪಾವಳಿ ಶುಭಾಶಯ ಕೋರಿದರು. ‘ನಾನು ಕೊಟ್ಟಿರುವ ಬಾಕ್ಸ್‌ನಲ್ಲಿ ಮೈಸೂರು ಪಾಕ್ ಮಾತ್ರವೇ ಇದೆ. ವಾಚ್‌, ಸ್ಕಾಚು, ಹಣ, ಚಿನ್ನವೇನೂ ಇಲ್ಲ’ ಎಂದು ಹಾಸ್ಯ ಚಟಾಕಿ ಹಾರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT