ಸೋಮವಾರ, 27 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಮಿಳುನಾಡಿಗೆ ಕಾವೇರಿ ನೀರು: ರಾಜ್ಯಕ್ಕೆ ಅನ್ಯಾಯ- ಎಚ್. ವಿಶ್ವನಾಥ್

ಅಡಗೂರು ಎಚ್. ವಿಶ್ವನಾಥ್ ತರಾಟೆ
Published 23 ಏಪ್ರಿಲ್ 2024, 13:35 IST
Last Updated 23 ಏಪ್ರಿಲ್ 2024, 13:35 IST
ಅಕ್ಷರ ಗಾತ್ರ

ಹುಣಸೂರು: ‘ಇಂಡಿಯಾ ಒಕ್ಕೂಟದ ಕಾಂಗ್ರೆಸ್ ಡಿಎಂಕೆ ದೋಸ್ತಿಗಾಗಿ ರಾಜ್ಯದ ರೈತರನ್ನು ಬಲಿ ನೀಡಿ, ತಮಿಳುನಾಡಿಗೆ ಕಾವೇರಿ ನೀರು ಹರಿಸಿ ಮತ ರಾಜಕಾರಣ ನಡೆಸಿದ್ದು, ಮತದಾರ ತಕ್ಕ ಪಾಠ ಕಲಿಸಲಿದ್ದಾನೆ’ ಎಂದು ವಿಧಾನ ಪರಿಷತ್ ಸದಸ್ಯ ಅಡಗೂರು ಎಚ್. ವಿಶ್ವನಾಥ್ ತರಾಟೆಗೆ ತೆಗೆದುಕೊಂಡರು.

‘ಇಂಡಿಯಾ ಒಕ್ಕೂಟದ ಮಿತ್ರಪಕ್ಷವಾಗಿರುವ ಡಿಎಂಕೆಗೆ ರಾಜ್ಯ ಕಾಂಗ್ರೆಸ್ ಸಂಪೂರ್ಣ ಶರಣಾಗಿ ನಮ್ಮ ರೈತರಿಗೆ ನೀರಿಲ್ಲದಿದ್ದರೂ ಕಾವೇರಿ ಹರಿಬಿಟ್ಟು ವರಿಷ್ಟರನ್ನು ಮೆಚ್ಚಿಸಿ ಖುರ್ಚಿ ಉಳಿಸಿಕೊಳ್ಳುವ ರಾಜಕಾರಣ ನಡೆಸಿರುವುದು ತಲೆ ತಗ್ಗಿಸುವ ಸಂಗತಿ’ ಎಂದು ಇಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹರಿಹಾಯದ್ದರು.

‘ಬೆಂಗಳೂರು ಮತ್ತು ಸುತ್ತಮುತ್ತ ಕುಡಿಯುವ ನೀರಿಗೆ ಹಾಹಾಕಾರ ಎದುರಾಗಿದ್ದರೂ ಸಿದ್ದರಾಮಯ್ಯ ಬರ ಎನ್ನುತ್ತಿದ್ದಾರೆ. ಹಾಗಿದ್ದರೆ ತಮಿಳುನಾಡಿಗೆ ನೀರು ಹರಿಸಲು ಬರ ಇಲ್ಲವೆ’ ಎಂದು ಪ್ರಶ್ನಿಸಿದರು.

‘ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಆರ್ಥಿಕ ಸಮಾನತೆ ಬಗ್ಗೆ ಪ್ರಸ್ತಾಪಿಸಿ, ಉಳ್ಳವರಿಂದ ಸಂಪತ್ತನ್ನು ಕಿತ್ತುಕೊಂಡು ಇಲ್ಲದವರಿಗೆ ಸಮನಾಗಿ ಹಂಚುವ ಬಗ್ಗೆ ಮಾತನಾಡಿದ್ದಾರೆ. ರಾಜಕೀಯ ನಾಯಕತ್ವದ ಅನುಭವ ಕೊರತೆ ಈ ಹೇಳಿಕೆಗೆ ಸಾಕ್ಷಿಯಾಗಿದೆ. ಸಂವಿಧಾನದಲ್ಲಿ ಈ ರೀತಿ ಮಾಡುವ ಅವಕಾಶವೇ ಇಲ್ಲ. ಹೀಗಿರುವಾಗ ಆರ್ಥಿಕ ಸಮಾನತೆ ಹೇಗೆ ಮಾಡುತ್ತಾರೆ’ ಎಂದು ಹರಿಹಾಯದ್ದರು.

‘ರಾಜ್ಯದಲ್ಲಿ ನೆಲ, ಜಲಕ್ಕಾಗಿ ಹೋರಾಟ ನಡೆಸುತ್ತಿರುವ ಜೆಡಿಎಸ್‌ ವರಿಷ್ಠ ದೇವೇಗೌಡ ಅವರು ಕಾವೇರಿ ನದಿ ವಿಷಯಕ್ಕೆ ಸಂಬಂಧಿಸಿದಂತೆ ನಿರಂತರ ಹೋರಾಟ ನಡೆಸಿದ್ದು, ಸಿದ್ದರಾಮಯ್ಯ ಈ ವಿಷಯದ ಬಗ್ಗೆ ಅಸಭ್ಯವಾಗಿ  ಟೀಕಿಸುತ್ತಿದ್ದಾರೆ. ಈ ಎಲ್ಲದಕ್ಕೂ ಮತದಾರ ಉತ್ತರ ನೀಡಲಿದ್ದಾನೆ’ ಎಂದರು.

‘ಗ್ಯಾರಂಟಿ ಯೋಜನೆ ಜಾರಿಗೊಳಿಸಿ ಆ ಯೋಜನೆಗೆ ಅನುದಾನ ಕ್ರೂಢೀಕರಿಸಲು ಇತರೆ ಅಗತ್ಯ ವಸ್ತುಗಳಿಗೆ ದರ ದುಪ್ಪಟ್ಟು ಹೆಚ್ಚಿಸಲಾಗಿದೆ. ಅಬಕಾರಿ ಇಲಾಖೆಯಲ್ಲಿ ವಾರ್ಷಿಕ ₹ 28 ಸಾವಿರ ಕೋಟಿ ಸಂಗ್ರಹವಾಗುತ್ತಿತ್ತು, ಈಗ ₹40 ಸಾವಿರ ಕೋಟಿ ಸಂಗ್ರಹವಾಗುತ್ತಿದೆ. ಆ ಹಣವನ್ನೇ ಮಹಿಳೆಯರಿಗೆ ನೀಡುತ್ತಿದ್ದಾರೆ’ ಎಂದು ಲೇವಡಿ ಮಾಡಿದರು.

‘ಮೈಸೂರು ‍‍‍–ಕೊಡಗು ಹಾಗೂ ಮಂಡ್ಯ ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿ ಗೆಲುವಿಗೆ ಸಕಾರಾತ್ಮಕ ಸ್ಪಂದನೆ ಮತದಾರರಿಂದ ಎದುರಾಗಿದ್ದು, ಅರಸು ವಂಶದವರನ್ನು ಚುನಾವಣೆಯಲ್ಲಿ ಸ್ಪರ್ಧಿಸದಂತೆ ಅವಿರೋಧವಾಗಿ ಆಯ್ಕೆ ಮಾಡುವ ಉದಾರ ಮನಸ್ಥಿತಿ ಕಾಂಗ್ರೆಸ್ ಹೊಂದಬೇಕಿತ್ತು’ ಎಂದರು.

ಸುದ್ದಿಗೋಷ್ಠಿಯಲ್ಲಿ ನಗರಸಭೆ ಸದಸ್ಯ ಶರವಣ, ಸತ್ಯಪ್ಪ, ಶಿವಕುಮಾರ್ ಮತ್ತು ಉದಯ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT