ಮೈಸೂರು: ಕುವೆಂಪುನಗರದ ಜೆಎಸ್ಎಸ್ ಕಾನೂನು ಕಾಲೇಜಿನಲ್ಲಿ ಶನಿವಾರ ನಡೆದ ಪದವೀಧರರ ದಿನಾಚರಣೆಯಲ್ಲಿ ವಿದ್ಯಾರ್ಥಿಗಳು ಪದವಿ ಪ್ರಮಾಣಪತ್ರ, ಫಲಕ ಪಡೆದ ಸಂಭ್ರಮದಲ್ಲಿದ್ದರೆ, ಪದವೀಧರರಾದ ಮಕ್ಕಳನ್ನು ನೋಡಿದ ಪೋಷಕರಲ್ಲಿ ಹೆಮ್ಮೆಯ ಭಾವ ಮೂಡಿತ್ತು.
ಅಲ್ಫೋನ್ಸಾ ಜಾರ್ಜ್, ಅಖಿತಾ ತಾಜಿ, ಶಿವಾನಿ ಪಿ.ಮೂರ್ತಿ, ವಿ.ಝಲಕ್ ಡರ್ಲಾ, ಎಲ್.ಕೇಶವ್ ಗೌಡ, ಪಿ.ಸಿಂಚನಾ, ನೀರಜ್ ಚಂದ್ರನ್ ಸೇರಿದಂತೆ ಬಿ.ಎ–ಎಲ್ಎಲ್‌ಬಿ, ಬಿಬಿಎ ಎಲ್‌ಎಲ್‌ಬಿಯ ತಲಾ 45, ಎಲ್‌ಎಲ್‌ಬಿಯ 36 ಹಾಗೂ ಎಲ್‌ಎಲ್‌ಎಂನ ಮೂವರು ಪದವೀಧರರಿಗೆ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಸರಸ ವೆಂಕಟನಾರಾಯಣ ಭಟ್ಟಿ ಪದವಿ ಪ್ರದಾನ ಮಾಡಿದರು.
ನಂತರ ಮಾತನಾಡಿ, ‘ಕುದುರೆ ಸವಾರಿ ಮಾಡುವಾಗ ಕೆಳಗೆ ಬಿದ್ದರೂ ಮತ್ತೆ ಮೇಲೇಳಬಹುದು. ವಕೀಲ ವೃತ್ತಿಯು ಹುಲಿ ಸವಾರಿಯಂತೆ. ಒಮ್ಮೆ ಆಯತಪ್ಪಿ ಬಿದ್ದರೂ ಇಡೀ ವೃತ್ತಿ ಜೀವನ ನಾಶವಾಗಿ ಬಿಡುತ್ತದೆ. ಹೀಗಾಗಿ ಜನರ ವಿಶ್ವಾಸ ಗಳಿಸಬೇಕು. ಪ್ರಾಮಾಣಿಕತೆ, ಸೇವಾ ನಿಷ್ಠತೆಯಿಂದ ಕಾರ್ಯನಿರ್ವಹಿಸಬೇಕು’ ಎಂದು ಕಿವಿಮಾತು ಹೇಳಿದರು.
‘ವೃತ್ತಿ ಜೀವನದ ಮ್ಯಾರಥಾನ್‌ನಲ್ಲಿ ವಕೀಲರು, ನ್ಯಾಯಾಧೀಶರು ಸೇರಿದಂತೆ ಯಾವುದೇ ಹುದ್ದೆ ಅಲಂಕರಿಸಿದರೂ ವೃತ್ತಿಪರರಾಗಿ ಕೆಲಸ ಮಾಡಬೇಕು. ಮಾನವೀಯವಾಗಿ ನಡೆದುಕೊಳ್ಳಬೇಕು. ದನಿ ಇಲ್ಲದವರಿಗೆ ದನಿಯಾದರೆ ಸಮಾಜ ಗೌರವದಿಂದ ಕಾಣುತ್ತದೆ’ ಎಂದು ಹೇಳಿದರು.
‘ಬಡವರ ಪರವಾಗಿ ವಕಾಲತ್ತು ವಹಿಸಿ ನ್ಯಾಯಕ್ಕಾಗಿ ಹೋರಾಟ ನಡೆಸಬೇಕು. ಅದರಲ್ಲಿ ಸಿಗುವ ಆತ್ಮತೃಪ್ತಿ ಲಕ್ಷಾಂತರ ರೂಪಾಯಿ ಗಳಿಸಿದಾಗಲೂ ಸಿಗದು. ಹೀಗಾಗಿ ಜನಸಾಮಾನ್ಯರ ದನಿಯಾಗಿ ವಕೀಲರು ಕೆಲಸ ಮಾಡಬೇಕು’ ಎಂದು ಸಲಹೆ ನೀಡಿದರು.
‘ವಕೀಲ ವೃತ್ತಿಯಲ್ಲಿ ಮತ್ಸರ, ಹೊಟ್ಟೆಕಿಚ್ಚು ಇರಬಾರದು. ಶ್ರದ್ಧೆ, ವಿನಯತೆ ಇರಬೇಕು. ಈ ವೃತ್ತಿಗೆ ಬರುವವರಿಗೆ ಮಾದರಿ ವ್ಯಕ್ತಿತ್ವ ನಿಮ್ಮದಾಗಬೇಕು’ ಎಂದು ಸಲಹೆ ನೀಡಿದರು.
ರಾಜ್ಯ ಕಾನೂನು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಸಿ.ಬಸವರಾಜು, ‘ಸ್ವಾತಂತ್ರ್ಯ ಬಂದು 75 ವರ್ಷವಾದರೂ ಸಮಾಜದಲ್ಲಿ ಅಸಮಾನತೆ, ಲಿಂಗ ತಾರತಮ್ಯ ಸೇರಿದಂತೆ ಸಾಮಾಜಿಕ ಪಿಡುಗುಗಳು ಜೀವಂತವಾಗಿವೆ. ಕಾನೂನು ವಿದ್ಯಾರ್ಥಿಗಳು ಶೋಷಿತ ಸಮುದಾಯಗಳು, ಬಡವರ ಪರವಾಗಿ ದುಡಿಯಬೇಕು’ ಎಂದರು.
ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ‘ಪರಿಶ್ರಮಪಟ್ಟರೆ ಜೀವನದಲ್ಲಿ ಉತ್ತಮ ಸಾಧನೆ ಸಾಧ್ಯ. ಸಾಮಾಜಿಕ ಕಾಳಜಿ ಹಾಗೂ ಸೇವಾ ಮನೋಭಾವ ಬೆಳೆಸಿಕೊಳ್ಳಬೇಕು’ ಎಂದು ಹೇಳಿದರು.
ಹೈಕೋರ್ಟ್ ನ್ಯಾಯಮೂರ್ತಿ ಎಂ.ಜಿ.ಉಮಾ, ಜೆಎಸ್ಎಸ್ ಮಹಾ ವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಸಿ.ಜಿ.ಬೆಟಸೂರಮಠ, ಕಾನೂನು ಕಾಲೇಜಿನ ಕಾರ್ಯನಿರ್ವಾಹಕ ಅಧಿಕಾರಿ ಪ್ರೊ.ಕೆ.ಎಸ್.ಸುರೇಶ್, ಪ್ರಾಂಶುಪಾಲೆ ಪ್ರೊ.ಎನ್.ವಾಣಿಶ್ರೀ, ಪರೀಕ್ಷಾ ನಿಯಂತ್ರಣಾಧಿಕಾರಿ ಪ್ರೊ.ಪಿ.ಶಿವಾನಂದ ಭಾರತಿ ಹಾಜರಿದ್ದರು.
‘ಭಾಷೆ ತರ್ಕ ಕೌಶಲ ಬೆಳೆಸಿಕೊಳ್ಳಿ’
‘ಕಾನೂನು ವಿದ್ಯಾರ್ಥಿಗಳು ವಕೀಲರು ಪ್ರಶ್ನೋತ್ತರ ಸಿದ್ಧಗೊಳಿಸಲು ಚಾಟ್ ಜಿಪಿಟಿಯ ಮೊರೆ ಹೋಗುತ್ತಿದ್ದಾರೆ’ ಎಂದು ಸರಸ ವೆಂಕಟನಾರಾಯಣ ಭಟ್ಟಿ ಬೇಸರ ವ್ಯಕ್ತಪಡಿಸಿದರು. ‘ನ್ಯಾಯಾಧೀಶರ ಮುಂದೆ ವಾದಕ್ಕೆ ನಿಂತಾಗ ಭಾಷೆ ತರ್ಕ ಕೌಶಲ ಅಭಿವ್ಯಕ್ತಿ ದೇಹಭಾಷೆ ಮುಖ್ಯವಾಗುತ್ತದೆ. ಪ್ರಕರಣವನ್ನು ನೀವು ಪರಿಭಾವಿಸಿರುವ ದೃಷ್ಟಿಯನ್ನು ಸಮರ್ಥವಾಗಿ ನಿರೂಪಿಸಬೇಕಾಗುತ್ತದೆ. ಅಧ್ಯಯನಶೀಲರೂ ಅಭ್ಯಾಸಿಗಳೂ ಆಗಬೇಕು’ ಎಂದರು. ‘ತಂತ್ರಜ್ಞಾನವನ್ನು ಯೋಜಿತ ರೀತಿಯಲ್ಲಿ ಬಳಸಿಕೊಳ್ಳಬೇಕು. ಅದು ನಮ್ಮ ಸೃಜನಶೀಲತೆ ಹಾಗೂ ಅಧ್ಯಯನಶೀಲತೆಯನ್ನು ಕಸಿಯಬಾರದು. ಭಾಷೆ ವಾದದಲ್ಲಿ ಕೌಶಲ ಸಾಧಿಸಿ’ ಎಂದು ಸಲಹೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.