ಭಾನುವಾರ, 4 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು: ‘ಚೀನಿ ನಮ್ಮೊಳಗೆ ನುಡಿಯುವ ಹೃದಯ..’

ರಂಗ ಸಂಗೀತ ನಿರ್ದೇಶಕ ‘ಶ್ರೀನಿವಾಸ ಭಟ್‌ ‘ಸಂಗೀತ ನಮನ’; ಗೆಳೆಯರು ಭಾಗಿ
Last Updated 13 ಫೆಬ್ರವರಿ 2023, 5:18 IST
ಅಕ್ಷರ ಗಾತ್ರ

ಮೈಸೂರು: ಅಲ್ಲಿ ಮಾತುಗಳು ಹಾಡಾಗಿದ್ದವು.. ಎದೆಯಲ್ಲಿ ಉಳಿದಿದ್ದ ಹಾಡುಗಳು ನುಡಿಗಳಾದವು..

ನಗರದ ಕಿರು ರಂಗಮಂದಿರದಲ್ಲಿ ಭಾನುವಾರ ರಂಗಾಯಣ ಹಾಗೂ ಹವ್ಯಾಸಿ ರಂಗತಂಡಗಳ ನೂರಾರು ಕಲಾವಿದರು, ರಂಗಕರ್ಮಿಗಳು, ರಂಗ ತಂತ್ರಜ್ಞರು ಸೇರಿದ್ದರು. ಇತ್ತೀಚೆಗೆ ನಿಧನರಾದ ರಂಗ ಸಂಗೀತ ನಿರ್ದೇಶಕ ಶ್ರೀನಿವಾಸ ಭಟ್‌ಗೆ (ಚೀನಿ) ‘ಸಂಗೀತ ನಮನ’ ಸಲ್ಲಿಸಲಾಯಿತು.

‘ಚೀನಿ ರಂಗ ಬಳಗ’ ಆಯೋಜಿಸಿದ್ದ ‘ಚೀನಿ ಮಾಮನಿಗಾಗಿ ಒಂದು ಕ್ಷಣ’– ಗೀತ ನುಡಿ ನಮನ ಸಲ್ಲಿಸುವಾಗ ಕೆಲವರ ಕಣ್ಣಾಲಿಗಳು ತುಂಬಿಬಂದರೆ, ರಂಗಕರ್ಮಿಗಳಾದ ಸಿ.ಬಸವಲಿಂಗಯ್ಯ, ರಘುನಂದನ್, ಪ್ರೊ.ಎಸ್‌.ಆರ್‌.ರಮೇಶ್‌ ಅವರು ನೆನಪುಗಳಿಗೆ ಜಾರಿದರು.

ಎಚ್‌.ಜನಾರ್ಧನ್ ಅವರು ‘ಹಯವದನ’ ನಾಟಕದ ‘ಗಜವದನ ಹೇರಂಭ’ ರಂಗಗೀತೆ ಹಾಡಿದರು. ರಂಗಭೀಷ್ಮ ಬಿ.ವಿ.ಕಾರಂತರು ಹಾಗೂ ಅವರ ರಂಗ ಸಂಗೀತ ಮಾದರಿ ಮುಂದುವರಿಸಿದ ‘ಚೀನಿ’ ಅವರ ಒಡನಾಟವನ್ನು ನೆನೆದರು. ‘ಚೀನಿ ಎಲ್ಲೂ ಹೋಗಿಲ್ಲ.. ನಮ್ಮೊಳಗೆ ನುಡಿಯುವ ಹೃದಯ’ ಎಂದರು.

‘ರಿದಂ ಅಡ್ಡ’ ಗುಂಗು: ಚೀನಿ ಅವರು ಆರಂಭಿಸಿದ್ದ ‘ರಿದಂ ಅಡ್ಡ’ ಬ್ಯಾಂಡ್‌ ಪ್ರಸ್ತುತಿ ಎಲ್ಲರನ್ನು ಸೆಳೆಯಿತು. ಶ್ರೀಕಂಠಸ್ವಾಮಿ (ಡ್ರಮ್ಸ್), ಅನುಷ್‌ ಎ.ಶೆಟ್ಟಿ (ತಬಲಾ), ಕೃಷ್ಣಚೈತನ್ಯ (ಚಂಡೆ, ಡೋಲಾಕ್ ಹಾಗೂ ಇತರೆ ತಾಳವಾದ್ಯ) ಹಾಗೂ ಮುನ್ನ (ಗಿಟಾರ್‌) ಪ್ರಸ್ತುತಪಡಿಸಿದ ಲಯ ಲಹರಿಯು ಮೋಡಿ ಮಾಡಿತು.

‘ಜಿಪಿಇಆರ್‌’ ರಂಗತಂಡ, ‘ಚೀನಿ’ ಅವರ ‘ಮೂರುಕಾಸಿನ ಸಂಗೀತ ನಾಟಕ’ದ ‘ಇಲ್ದಿದ್ದರೇನಂತೆ ಪಾದ್ರಿ ಪುರಾಣ’ ರಂಗಗೀತೆ ಪ್ರಸ್ತುತಪಡಿಸಿದರೆ, ‘ನಿರಂತರ’ದ ಕಲಾವಿದರು ‘ಜುಂಜಪ್ಪ’ ನಾಟಕದ ‘ಮೊದಲೇ ನೆನೆದೇವೂ’ ಗೀತೆ ಹಾಡಿದರು. ಮೈಮ್‌ ರಮೇಶ್, ರಂಗ ಸಂಗೀತ ನಿರ್ದೇಶಕ ಚಂದ್ರಶೇಖರ್‌ ಆಚಾರ್‌, ದಿನೇಶ್‌ ಚಮ್ಮಾಳಿಗೆ, ಅರುಣ್‌ ಪಡುವಾರಹಳ್ಳಿ, ಬಿ.ಕೆ.ಕಿರಣ್, ‘ಏಕತಾರಿ’ಯ ದೇವಾನಂದ ವರಪ್ರಸಾದ, ಶಿರಾ ಸೋಮಶೇಖರ್‌ ಸೇರಿದಂತೆ ಹತ್ತಾರು ಕಲಾವಿದರು ಮೇಳದಲ್ಲಿ ಸಾಥ್ ನೀಡಿದರು.

‘ಬಿ.ವಿ.ಕಾರಂತರ ಬಲಗೈಯಂತಿದ್ದ ಅವರು ಎಲ್ಲರ ಗೆಳೆಯರಿಗೂ, ಮಕ್ಕಳಿಗೆ ಅಕ್ಕರೆಯ ‘ಚೀನಿ ಮಾಮ’ ಆಗಿದ್ದರು. ರಾಜ್ಯದ ಯಾವುದೇ ನಾಟಕದಲ್ಲೂ ಚೀನಿ ಅವರ ಪಾತ್ರ ಇದ್ದೇ ಇರುತ್ತಿತ್ತು. ಅವರೊಂದಿಗೆ ಕಾರಂತ ಸಂಗೀತದ ಅಧ್ಯಾಯವೇ ಮುಗಿದಿದೆ’ ಎಂದು ರಂಗಕರ್ಮಿ ಸಿ.ಬಸವಲಿಂಗಯ್ಯ ಬೇಸರ ವ್ಯಕ್ತಪಡಿಸಿದರು.

ವರ್ಚ್ಯವಲ್‌ನಲ್ಲಿ ಮಾತನಾಡಿದ ಸಂಗೀತ ನಿರ್ದೇಶಕ ಗುರುಕಿರಣ್, ‘40 ವರ್ಷದ ಪರಿಚಯ. ಅವರ ಹಾಡು ಕೇಳುವುದೇ ಒಂದು ಸೌಭಾಗ್ಯವಾಗಿತ್ತು’ ಎಂದರು.

ರಂಗಕರ್ಮಿಗಳಾದ ರಾಮೇಶ್ವರಿ ವರ್ಮ, ಪ್ರಸನ್ನ, ಪ್ರಶಾಂತ ಹಿರೇಮಠ, ಶಶಿಕಲಾ, ಸುರೇಶ್‌ ಬಾಬು, ರಾಜಶೇಖರ ಕದಂಬ, ಕೃಷ್ಣಕುಮಾರ್ ನಾರ್ಣಕಜೆ, ಮಹದೇವ್‌, ರಾಮು, ಪ್ರಮೀಳಾ ಬೇಂಗ್ರೆ, ನಂದಿನಿ, ಬಿ.ಎಂ.ರಾಮಚಂದ್ರ, ಸುಗುಣ, ದೀಪಕ್‌ ಮೈಸೂರು, ಗೋಪಾಲಕೃಷ್ಣ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT