ಮಂಗಳವಾರ, ಫೆಬ್ರವರಿ 7, 2023
27 °C
ಗೃಹ ಸಚಿವ ಆರಗ ಜ್ಞಾನೇಂದ್ರ ಮಾಹಿತಿ; ಎರಡು ಠಾಣೆ, ತರಬೇತಿ ಕೇಂದ್ರ, ಆಡಳಿತ ಕೇಂದ್ರ ಉದ್ಘಾಟನೆ

‘ಸಿಐಡಿ ವರದಿ ಬಂದ ನಂತರ ಪಿಎಸ್‌ಐ ಪರೀಕ್ಷೆ’: ಆರಗ ಜ್ಞಾನೇಂದ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ‘ಪಿಎಸ್‌ಐ ನೇಮಕಾತಿಯಲ್ಲಿ ನಡೆದ ಅಕ್ರಮದ ಕುರಿತಂತೆ ಸಿಐಡಿ ತನಿಖೆ ನಡೆಯುತ್ತಿದ್ದು, ಅಂತಿಮ ವರದಿ ಬರುವವರೆಗೂ ಪರೀಕ್ಷೆ ನಡೆಸುವುದಿಲ್ಲ’ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.

ಮೈಸೂರಿನ ಹೆಬ್ಬಾಳ ಪೊಲೀಸ್‌ ಠಾಣೆಯ ನೂತನ ಕಟ್ಟಡವನ್ನು ಗುರುವಾರ ಉದ್ಘಾಟಿಸಿ ಮಾತನಾಡಿದ ಅವರು, ‘ಪಿಎಸ್‌ಐ ಅಕ್ರಮಕ್ಕೆ ಸಂಬಂಧಿಸಿದಂತೆ ಹಿರಿಯ ಅಧಿಕಾರಿ ಸೇರಿದಂತೆ 107 ಮಂದಿ ಬಂಧನದಲ್ಲಿದ್ದಾರೆ. ಈ ಪ್ರಕರಣ ನ್ಯಾಯಾಂಗದಲ್ಲಿದ್ದು ಹೆಚ್ಚು ಮಾತನಾಡುವುದಿಲ್ಲ. ಅಂತಿಮ ವರದಿ ಬರುವವರೆಗೂ ತನಿಖೆ ನಡೆಸಲು ಸಾಧ್ಯವಿಲ್ಲ’ ಎಂದು ಅವರು ಸ್ಪಷ್ಟಪಡಿಸಿದರು.

‘ಪೊಲೀಸ್‌ ಅಧಿಕಾರಿ ವರ್ಗಾವಣೆಯೂ ಪಾರದರ್ಶಕವಾಗಿ ನಡೆಯುತ್ತಿದ್ದು, ಲಾಭಿ, ಒತ್ತಡಕ್ಕೆ ಮಣಿದಿಲ್ಲ’ ಎಂದರು.

ಇಲಾಖೆ ಸುಧಾರಣೆಗೆ ಆದ್ಯತೆ: ‘ಪೊಲೀಸ್‌ ಇಲಾಖೆಯ ಸುಧಾರಣೆಗೆ ಹಲವು ಕ್ರಮ ಕೈಗೊಳ್ಳಲಾಗಿದ್ದು, ಆನ್‌ಲೈನ್‌ ಮೂಲಕ ಎಫ್‌ಐಆರ್‌ ವ್ಯವಸ್ಥೆ, ತನಿಖಾ ವಿಧಾನ ಚುರುಕು, 112 ಸಹಾಯವಾಣಿ ಮೂಲಕ ಜನರಿಗೆ ನೆರವು, ಸೈಬರ್‌ ವಿಭಾಗದ ಆಧುನೀಕರಣಕ್ಕೂ ಕ್ರಮ ಕೈಗೊಳ್ಳಲಾಗಿದೆ. ಸಹಾಯವಾಣಿಗೆ ಕರೆಮಾಡಿದರೆ ನಗರ ಪ್ರದೇಶದಲ್ಲಿ 9 ನಿಮಿಷ ಹಾಗೂ ಗ್ರಾಮಾಂತರ ಭಾಗದಲ್ಲಿ 20 ನಿಮಿಷದ ಒಳಗಾಗಿ ಸ್ಥಳಕ್ಕೆ ತೆರಳಿ ಕ್ರಮ ಕೈಗೊಳ್ಳಲಾಗುತ್ತಿದೆ’ ಎಂದು ತಿಳಿಸಿದರು.

ಸಿಬ್ಬಂದಿ ಭರ್ತಿಗೂ ಕ್ರಮ: ‘ಈ ಹಿಂದೆ ಪೊಲೀಸ್‌ ಇಲಾಖೆಯಲ್ಲಿ ಶೇಕಡಾ 37ರಷ್ಟು ಹುದ್ದೆಗಳು ಖಾಲಿ ಉಳಿದಿದ್ದವು. ಈಗ 12 ಸಾವಿರ ಹುದ್ದೆಗಳು ಮಾತ್ರ ಖಾಲಿಯಿದ್ದು, ಈ ಪೈಕಿ 5 ಸಾವಿರ ಪೊಲೀಸ್‌ ಕಾನ್‌ಸ್ಟೆಬಲ್‌ಗಳ ನೇಮಕಾತಿ ಪ್ರಕ್ರಿಯೆ ಆರಂಭವಾಗಿದೆ. ಸ್ವಂತ ಕಟ್ಟಡ ಹೊಂದಿಲ್ಲದ ಠಾಣೆಗಳಿಗೆ ಹೊಸದಾಗಿ ಠಾಣೆಗಳನ್ನು ನಿರ್ಮಿಸಲಾಗುತ್ತಿದ್ದು, ಹೊಸತಾಗಿ 117 ಠಾಣೆಗಳನ್ನು ನಿರ್ಮಿಸಲಾಗುತ್ತಿದೆ’ ಎಂದು ಸಚಿವರು ತಿಳಿಸಿದರು.

ಕಾರ್ಯಕ್ರಮದಲ್ಲಿ ಶಾಸಕ ಎಸ್‌.ಎ.ರಾಮದಾಸ್‌, ಮೈಲಾಕ್‌ ಅಧ್ಯಕ್ಷ ರಘು ಕೌಟಿಲ್ಯ, ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಶಿವಕುಮಾರ್‌, ವಸ್ತು ಪ್ರದರ್ಶನ ಪ‍್ರಾಧಿಕಾರದ ಅಧ್ಯಕ್ಷ ಮಿರ್ಲೆ ಶ್ರೀನಿವಾಸ ಗೌಡ, ಮೇಯರ್ ಶಿವಕುಮಾರ್, ಉಪ ಮೇಯರ್ ಡಾ. ರೂಪಾ, ಪಾಲಿಕೆ ಸದಸ್ಯರಾದ ಫೈಲ್ವಾನ್ ಶ್ರೀನಿವಾಸ್, ಕೆ ವಿ ಶ್ರೀಧರ, ಪ್ರೇಮಾ ಶಂಕರೇಗೌಡ, ಲಕ್ಷ್ಮೀ ಶಿವಣ್ಣ, ಡಿಜಿಪಿ ಡಾ.ಪಿ.ರವೀಂದ್ರನಾಥ, ಎಡಿಜಿಪಿ ಅರುಣ್‌ ಚಕ್ರವರ್ತಿ, ದಕ್ಷಿಣ ವಲಯ ಐಜಿಪಿ ಮಧುಕರ್‌ ಪವಾರ್‌, ನಗರ ಪೊಲೀಸ್‌ ಆಯುಕ್ತ ಡಾ.ಚಂದ್ರಗುಪ್ತಾ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಆರ್‌.ಚೇತನ್‌ ಇದ್ದರು.

ಎರಡು ಠಾಣೆಗಳ ಕಟ್ಟಡ ಉದ್ಘಾಟನೆ: ಇದಕ್ಕೂ ಮುನ್ನ ಗೃಹಸಚಿವರು ತಲಾ ₹2.5 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಆಲನಹಳ್ಳಿ, ಹೆಬ್ಬಾಳ ಪೊಲೀಸ್‌ ಠಾಣೆಯ ನೂತನ ಕಟ್ಟಡವನ್ನು ಉದ್ಘಾಟಿಸಿದರು. 

ಆಲನಹಳ್ಳಿ ಠಾಣೆಯು ಹೊರವರ್ತುಲ ರಸ್ತೆಯ ಮಾದೇಗೌಡ ವೃತ್ತದಲ್ಲಿದ್ದು, ಹೆಬ್ಬಾಳ ಮುಖ್ಯರಸ್ತೆಯ ಕುವೆಂಪು ವೃತ್ತದಲ್ಲಿರುವ ಸಾರ್ವಜನಿಕ ಗ್ರಂಥಾಲಯದ ಹಿಂಭಾಗದಲ್ಲಿ ಹೆಬ್ಬಾಳ ಠಾಣೆ ನಿರ್ಮಾಣಗೊಂಡಿದೆ. ನೂತನ ಠಾಣೆಯಲ್ಲಿ ಸಾಕಷ್ಟು ಸ್ಥಳವಕಾಶವಿದ್ದು, ವಶಪಡಿಸಿಕೊಂಡ ವಾಹನಗಳನ್ನು ಇಟ್ಟುಕೊಳ್ಳಲು ಜಾಗ, ಇನ್ಸ್‌ಪೆಕ್ಟರ್‌, ಸಬ್‌ ಇನ್‌ಸ್ಪೆಕ್ಟರ್‌ಗೆ ಪ್ರತ್ಯೇಕ ವಿಭಾಗಗಳಿವೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು