ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಯುವ ಬ್ರಿಗೇಡ್’ ಸಂಚಾಲಕನ ಕೊಲೆ: ತಿ.ನರಸೀಪುರ ಬಂದ್, 6 ಮಂದಿ ವಿರುದ್ಧ ಪ್ರಕರಣ ದಾಖಲು

Published 10 ಜುಲೈ 2023, 15:57 IST
Last Updated 10 ಜುಲೈ 2023, 15:57 IST
ಅಕ್ಷರ ಗಾತ್ರ

ತಿ.ನರಸೀಪುರ (ಮೈಸೂರು ಜಿಲ್ಲೆ): ಪಟ್ಟಣದಲ್ಲಿ ಹನುಮ ಜಯಂತಿ ಆಚರಣೆ ವೇಳೆ ನಡೆದ ಜಗಳವು ವಿಕೋಪಕ್ಕೆ ತಿರುಗಿ ದುಷ್ಕರ್ಮಿಗಳು ‘ಯುವ ಬ್ರಿಗೇಡ್‌’ ಸಂಚಾಲಕ ವೇಣುಗೋಪಾಲ್‌ (31) ಅವರನ್ನು ಭಾನುವಾರ ರಾತ್ರಿ ಕೊಲೆ ಮಾಡಿದ್ದಾರೆ.

ಶ್ರೀರಾಂಪುರ ಕಾಲೊನಿ ನಿವಾಸಿ, ಬಾಳೆ ಮಂಡಿ ವರ್ತಕರಾಗಿದ್ದ ಅವರಿಗೆ ಪತ್ನಿ ಹಾಗೂ ಪುತ್ರಿ ಇದ್ದಾರೆ.

ಹತ್ಯೆ ಖಂಡಿಸಿ, ಸೋಮವಾರ ಪಟ್ಟಣ ಬಂದ್‌ಗೆ ಕರೆ ನೀಡಲಾಗಿತ್ತು. ಬಹುತೇಕ ಅಂಗಡಿಗಳು, ಮಳಿಗೆಗಳು ಮುಚ್ಚಿದ್ದವು. ವ್ಯಾಪಾರ– ವಹಿವಾಟು ಸಂಪೂರ್ಣ ಸ್ಥಗಿತಗೊಂಡಿತ್ತು. ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಬಂದೋಬಸ್ತ್‌ ಮುಂದುವರಿಸಲಾಗಿದೆ.

ವಿವರ: ಪಟ್ಟಣದಲ್ಲಿ ಜು.8ರಂದು ನಡೆದ ಹನುಮ ಜಯಂತಿಯ ನೇತೃತ್ವವನ್ನು ವೇಣುಗೋಪಾಲ್‌ ಹಾಗೂ ಸ್ನೇಹಿತರು ವಹಿಸಿದ್ದರು. ಗುಂಜಾ ನರಸಿಂಹಸ್ವಾಮಿ ದೇವಾಲಯದ ಆವರಣಕ್ಕೆ ಬೈಕ್‌ಗಳನ್ನು ತರುತ್ತಿದ್ದ ಮಣಿಕಂಠ ಹಾಗೂ ಸಂದೇಶ್‌ ಅವರನ್ನು ತಡೆದಾಗ ಮಾತಿನ ಚಕಮಕಿ ನಡೆದಿತ್ತು.

ಬಳಿಕ ಮೆರವಣಿಗೆ ವೇಳೆ ಜೀಪ್‌ನಲ್ಲಿ ಹನುಮಂತನ ಫೋಟೊ ಜೊತೆಗೆ ನಟ ಪುನೀತ್‌ ರಾಜ್‌ಕುಮಾರ್‌ ಫೋಟೊ ಹಾಕಲಾಗಿತ್ತು. ‘ದೇವರ ಫೋಟೊ ಸಾಕು, ಪುನೀತ್‌ ಫೋಟೊ ಬೇಡ’ ಎಂದು ಹೇಳಿದ್ದ ವೇಣುಗೋಪಾಲ್‌ ಅದನ್ನು ತೆರವುಗೊಳಿಸಿದ್ದರು. ಆಗಲೂ ಜಗಳ ನಡೆದಿತ್ತು. ‘ನಾಳೆ ನಿನ್ನನ್ನು ನೋಡಿಕೊಳ್ಳುತ್ತೇನೆ’ ಎಂದು ಕೆಲವರು ಬೆದರಿಕೆ ಹಾಕಿದ್ದರು ಎನ್ನಲಾಗಿದೆ.

ಭಾನುವಾರ ಸಂಜೆ ರಾಮಾನುಜಂ ಹಾಗೂ ವೇಣುಗೋಪಾಲ್‌ ಶಾಮಿಯಾನ ಅಂಗಡಿಗೆ ವಸ್ತುಗಳನ್ನು ಹಿಂತಿರುಗಿಸುತ್ತಿದ್ದಾಗ, ಅಲ್ಲಿಗೆ ಬಂದ ಮಣಿಕಂಠ ಹಾಗೂ ಸ್ನೇಹಿತರು, ಜಗಳದ ವಿಚಾರ ಪ್ರಸ್ತಾಪಿಸಿ ಹಲ್ಲೆ ನಡೆಸಿದ್ದರು ಎಂದು ದೂರಿನಲ್ಲಿ ಆರೋಪಿಸಲಾಗಿದೆ.

‘ಮಣಿಕಂಠ, ಸಂದೇಶ್, ಅನಿಲ್, ಶಂಕರ್, ಮಂಜು ಹಾಗೂ ಹ್ಯಾರಿಸ್ ಭಾನುವಾರ ರಾತ್ರಿ 8ಕ್ಕೆ ಮಾತುಕತೆಗೆಂದು ಅಗ್ನಿಶಾಮಕ ದಳದ ಕಚೇರಿ ಬಳಿಗೆ ವೇಣುಗೋಪಾಲ್ ಅವರನ್ನು ಕರೆಸಿಕೊಂಡಿದ್ದರು. ಅವರೊಂದಿಗೆ ಸ್ನೇಹಿತರಾದ ಚೇತನ್ ಹಾಗೂ ಸಂಜಯ್‌ ಜೊತೆ ತೆರಳಿದ್ದೆ. ಅಲ್ಲಿ ವೇಣುಗೋಪಾಲ್‌ಗೆ ಬಾಟಲಿಯಿಂದ ತಲೆಗೆ ಹೊಡೆದು, ದೇಹಕ್ಕೆ ಚುಚ್ಚಿದರು. ನಾವು ಜಗಳ ಬಿಡಿಸಿ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆ ಮೃತಪಟ್ಟರು’ ಎಂದು ರಾಮಾನುಜಂ ದೂರು ನೀಡಿದ್ದಾರೆ. ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆಕ್ರೋಶ: ಘಟನೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ, ‘ಹಿಂದೂ ಕಾರ್ಯಕರ್ತರ ಹತ್ಯೆಗೆ ಕೊನೆ ಇಲ್ಲವೇ?’ ಎಂಬ ಆಕ್ರೋಶ ವ್ಯಕ್ತವಾಗಿದೆ. ಅವರ ಕುಟುಂಬಕ್ಕೆ ಆರ್ಥಿಕ ನೆರವು ನೀಡುವಂತೆ ಪತ್ನಿಯ ಬ್ಯಾಂಕ್‌ ಖಾತೆ ವಿವರ ಹಾಕಿ ಪೋಸ್ಟ್‌ಗಳನ್ನು ಹಂಚಿಕೊಳ್ಳಲಾಗಿದೆ.

ಕೊಲೆ ಘಟನೆಯನ್ನು ಖಂಡಿಸಿ ಯುವ ಬ್ರಿಗೇಡ್‌ ಕಾರ್ಯಕರ್ತರು ಮೈಸೂರಿನ ವೈದ್ಯಕೀಯ ಕಾಲೇಜು ಶವಾಗಾರದ ಮುಂದೆ ಸೋಮವಾರ ಸಂಜೆ ಪ್ರತಿಭಟನೆ ನಡೆಸಿದರು.

ತಿ.ನರಸೀಪುರ ಪಟ್ಟಣದ ವಿದ್ಯೋದಯ ಕಾಲೇಜು ರಸ್ತೆಯಲ್ಲಿ ಅಂಗಡಿಗಳು ಸೋಮವಾರ ಮುಚ್ಚಿದ್ದವು
ತಿ.ನರಸೀಪುರ ಪಟ್ಟಣದ ವಿದ್ಯೋದಯ ಕಾಲೇಜು ರಸ್ತೆಯಲ್ಲಿ ಅಂಗಡಿಗಳು ಸೋಮವಾರ ಮುಚ್ಚಿದ್ದವು

Quote - ಫೋಟೊ ತೆರವು ವಿಚಾರದಲ್ಲಿ ಗುಂಪುಗಳ ನಡುವೆ ಗಲಾಟೆ ನಡೆದಿದ್ದು ಒಬ್ಬರ ಕೊಲೆಯಾಗಿದೆ. ತಲೆಮರೆಸಿಕೊಂಡಿರುವ ಆರು ಆರೋಪಿಗಳ ಪತ್ತೆಗೆ ಕ್ರಮ ವಹಿಸಲಾಗಿದೆ –ಸೀಮಾ ಲಾಟ್ಕರ್ ಎಸ್ಪಿ

Quote - ಕ್ಷುಲಕ ಕಾರಣವನ್ನು ಪ್ರತಿಷ್ಠೆಯಾಗಿಸಿಕೊಂಡು ಮಾತುಕತೆ ಮೂಲಕ ಬಗೆಹರಿಸಿಕೊಳ್ಳೋಣವೆಂದು ನಂಬಿಸಿ ಪತಿಯನ್ನು ಕೊಲೆ ಮಾಡಿದ್ದಾರೆ. ನನಗೆ ಮಗಳಿಗೆ ಯಾರು ದಿಕ್ಕು? –ಪೂರ್ಣಿಮಾ ವೇಣುಗೋಪಾಲ್ ಪತ್ನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT