ಮೈಸೂರು: ಮುಖ್ಯಮಂತ್ರಿ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ–ಜೆಡಿಎಸ್ ನಾಯಕರು ಪಾದಯಾತ್ರೆ ಹೆಸರಿನಲ್ಲಿ ಅಬ್ಬರಿಸುತ್ತಿದ್ದರೆ, ಇತ್ತ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳವಾರ ಸಂಜೆ ತವರಿನಲ್ಲಿ ವಿರಾಮದ ಮೂಡಿನಲ್ಲಿದ್ದು, ಸಾರ್ವಜನಿಕ ಸ್ಥಳದಲ್ಲಿ ಕಾಫಿ ಆಸ್ವಾದಿಸಿ ಗಮನ ಸೆಳೆದರು.
ಮಳವಳ್ಳಿ ತಾಲ್ಲೂಕಿನ ಪೂರಿಗಾಲಿ ಗ್ರಾಮದಲ್ಲಿ ಶಾಸಕ ನರೇಂದ್ರಸ್ವಾಮಿ ತಂದೆಯ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದ ತರುವಾಯ ರಸ್ತೆ ಮಾರ್ಗವಾಗಿ ಮೈಸೂರಿಗೆ ಬಂದ ಸಿದ್ದರಾಮಯ್ಯ, ಶಾರದಾದೇವಿ ನಗರದಲ್ಲಿರುವ ತಮ್ಮ ನಿವಾಸದಲ್ಲಿ ಸರ್ಕಾರಿ ಕಾರು ಬಿಟ್ಟು, ಹುಣಸೂರಿನ ಮಾಜಿ ಶಾಸಕ ಎಚ್.ಪಿ. ಮಂಜುನಾಥ್ ಕಾರನ್ನೇರಿದರು. ಸ್ವತಃ ಮಂಜುನಾಥ್ ಅವರೇ ಕಾರು ಚಲಾಯಿಸುತ್ತ ಮುಖ್ಯಮಂತ್ರಿಯನ್ನು ನಗರ ಪ್ರದಕ್ಷಿಣೆ ಮಾಡಿಸಿದರು.
ಕುವೆಂಪು ನಗರದ ವಿಶ್ವಮಾನವ ಜೋಡಿ ರಸ್ತೆಯಲ್ಲಿ ನಿರ್ಮಾಣ ಹಂತದಲ್ಲಿ ಇರುವ ತಮ್ಮ ಮನೆಯ ಕಾಮಗಾರಿ ವೀಕ್ಷಿಸಿದ ಅವರು ಅಲ್ಲಿಂದ ಅಲ್ಲಿಂದ ನಗರದ ಕೋರ್ಟ್ ಬಳಿ ಇರುವ ‘ಕಿಂಗ್ಸ್ ಕಾಫಿ’ಗೆ ಬಂದರು. ಕಾರಿನಲ್ಲೇ ಕುಳಿತು ಕಾಫಿ ಕುಡಿದರು. ಅಲ್ಲಿದ್ದವರಿಗೋ ಹೀಗೆ ರಸ್ತೆಯಲ್ಲೇ ಮುಖ್ಯಮಂತ್ರಿಯನ್ನು ಕಂಡು ಆಶ್ಚರ್ಯ. ಮಕ್ಕಳು, ಮಹಿಳೆಯರೂ ಸಿದ್ದರಾಮಯ್ಯ ಜೊತೆಗೆ ಸೆಲ್ಫಿ ತೆಗೆದು ಸಂಭ್ರಮಿಸಿದರು. ಅಂಗರಕ್ಷಕರ ರಕ್ಷಣೆಯ ಕೋಟೆ ಇಲ್ಲದೆಯೇ ಜನಸಾಮಾನ್ಯರ ಜೊತೆ ಸಹಜವಾಗಿ ಮಾತನಾಡಿದ ಬಳಿಕ ಮುಖ್ಯಮಂತ್ರಿ ಅಲ್ಲಿಂದ ನಿರ್ಗಮಿಸಿದರು.
ಪ್ರತಿಭಟನಾ ಸ್ಥಳಕ್ಕೆ ಭೇಟಿ: ಮೈಸೂರು ವಿಶ್ವವಿದ್ಯಾನಿಲಯ ಅತಿಥಿ ಉಪನ್ಯಾಸಕರ ಸಂಘದ ವತಿಯಿಂದ ನಗರದ ಕ್ರಾರ್ಡ್ ಹಾಲ್ ಮುಂಭಾಗ ನಡೆಯುತ್ತಿರುವ ಅಹೋರಾತ್ರಿ ಪ್ರತಿಭಟನಾ ಸ್ಥಳಕ್ಕೆ ಮುಖ್ಯಮಂತ್ರಿ ಭೇಟಿ ನೀಡಿ ಮಾಹಿತಿ ಪಡೆದರು. ಮನವಿ ಸ್ವೀಕರಿಸಿ ದೂರವಾಣಿ ಮೂಲಕ ಕುಲಪತಿ ಎನ್.ಕೆ.ಲೋಕನಾಥ್ ಜೊತೆ ಮಾತನಾಡಿ, ಇದೇ ಉಪನ್ಯಾಸಕರನ್ನು ಮುಂದುವರಿಸುವಂತೆ ಸೂಚಿಸಿದರು.
ಜನಾಂದೋಲನ ಸಮಾವೇಶ ಸಂಬಂಧ ತಮ್ಮ ನಿವಾಸದಲ್ಲಿ ಸಂಜೆ ಸ್ಥಳೀಯ ಮುಖಂಡರೊಂದಿಗೆ ಸಭೆ ನಡೆಸಿ ಚರ್ಚಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.