ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಮಿನಲ್‌ ಹಿನ್ನೆಲೆಯ ಶಾರಿಂದ ಪ್ರಗತಿ ಅಸಾಧ್ಯ: ಲಕ್ಷ್ಮಣ ಆರೋಪ

Published 5 ಏಪ್ರಿಲ್ 2024, 15:56 IST
Last Updated 5 ಏಪ್ರಿಲ್ 2024, 15:56 IST
ಅಕ್ಷರ ಗಾತ್ರ

ಮೈಸೂರು: ‘ಕೇಂದ್ರ ಗೃಹ ಸಚಿವ ಅಮಿತ್ ಶಾ ಕ್ರಿಮಿನಲ್ ಅಪರಾಧ ಹಿನ್ನೆಲೆ ಹೊಂದಿದ್ದು, ಅವರಿಂದ ದೇಶದ ಅಭಿವೃದ್ಧಿ ನಿರೀಕ್ಷಿಸಲು ಸಾಧ್ಯವಿಲ್ಲ’ ಎಂದು ಮೈಸೂರು–ಕೊಡಗು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ ಆರೋಪಿಸಿದರು.

ನಗರದ ಇಂದಿರಾ ಗಾಂಧಿ ಕಾಂಗ್ರೆಸ್ ಭವನದಲ್ಲಿ ನಗರ ಮತ್ತು ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಸಮಿತಿಯ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ಮಾಜಿ ಉಪ ಪ್ರಧಾನಿ ಬಾಬು ಜಗಜೀವನರಾಂ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಮಾಜಿ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಅವರು ಅಮಿತ್ ಶಾ ವಿರುದ್ಧ ನೀಡಿದ ಹೇಳಿಕೆಯಲ್ಲಿ ಯಾವುದೇ ತಪ್ಪಿಲ್ಲ. ಗುಜರಾತ್‌ನಲ್ಲಿ ಶಾ ಅವರ ವಿರುದ್ಧ 15ಕ್ಕೂ ಹೆಚ್ಚು ಪ್ರಕರಣಗಳಿವೆ’ ಎಂದು ಸಮರ್ಥಿಸಿಕೊಂಡರು.

‘ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಅವರಿಗೆ ದೇಶದ ಮೇಲೆ ಅಪಾರವಾದ ಕಾಳಜಿ ಇದೆ. ದೇಶಕ್ಕೆ ಆಪತ್ತು ತಂದೊಡ್ಡಿರುವ ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸಲು ಹೋರಾಟ ನಡೆಸುತ್ತಿದ್ದಾರೆ. ಅವರಿಗೆ ಅಧಿಕಾರದ ದಾಹವಿಲ್ಲ. ಈ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ’ ಎಂದರು.

‘ರಾಹುಲ್ ಗಾಂಧಿ ಅವರ ತೇಜೋವಧೆಗೆ ಬಿಜೆಪಿಯು ಬರೋಬ್ಬರಿ ₹8 ಸಾವಿರ ಕೋಟಿ ಖರ್ಚು ಮಾಡಿದೆ. ಆದರೂ ಅವರ ವರ್ಚಸ್ಸೇನೂ ಕಡಿಮೆ ಆಗಿಲ್ಲ’ ಎಂದು ತಿಳಿಸಿದರು.

ಸೀಮಿತಗೊಳಿಸಬಾರದು: ‘ಬಿ.ಆರ್.ಅಂಬೇಡ್ಕರ್ ಅವರ ಕೊಡುಗೆಯನ್ನು ಎಲ್ಲ ಜಾತಿ– ಧರ್ಮದವರೂ ಪಡೆದಿದ್ದಾರೆ; ಪಡೆಯುತ್ತಿದ್ದಾರೆ. ಆದರೆ, ಅವರನ್ನು ಒಂದು ಜಾತಿಗೆ ಸೀಮಿತಗೊಳಿಸಲಾಗಿದೆ. ಅಂಬೇಡ್ಕರ್, ಗಾಂಧೀಜಿ, ಬಾಬು ಜಗಜೀವನರಾಂ ಮೊದಲಾದವರ ಜಯಂತಿ ಆಚರಣೆಯೊಂದಿಗೆ ಅವರ ಆದರ್ಶ–‌ಸಿದ್ಧಾಂತವನ್ನು ನಾವೆಲ್ಲರೂ ಅಳವಡಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

‘ಜಗಜೀವನ ರಾಂ ಅವರನ್ನು ಒಂದು ಜಾತಿಗೆ ಸೀಮಿತಗೊಳಿಸಬಾರದು. ಅವರು ದೇಶದ ಸ್ವಾತಂತ್ರ್ಯ ಹೋರಾಟಗಾರರಾಗಿ, ಸಮಾಜ ಸೇವಕರಾಗಿ ದೇಶದ ಕಟ್ಟ ಕಡೆಯ ವ್ಯಕ್ತಿಗೂ ಸಮಾನತೆ ಸಿಗಬೇಕು ಎಂದು ಹೋರಾಟ ಮಾಡಿದ ಮಹಾನ್ ಚೇತನ. ಅವರನ್ನು ಸ್ಮರಿಸುವುದು ನಮ್ಮೆಲ್ಲರ ಜವಾಬ್ದಾರಿ’ ಎಂದರು.‌

ಪತ್ರಕರ್ತ ಕೆ.ದೀಪಕ್ ಮಾತನಾಡಿ, ‘ಪ್ರಸ್ತುತ ಸಂವಿಧಾನ ವಿರೋಧಿಗಳು ಪ್ರಬಲ ಮತ್ತು ಬಲಾಢ್ಯರಾಗಿದ್ದಾರೆ. ಇದನ್ನು ಅರಿತುಕೊಂಡು ಸಂವಿಧಾನ ಉಳಿಸುವಂತಹ ಕೆಲಸವನ್ನು ನಾವೆಲ್ಲರೂ ಮಾಡಬೇಕು’ ಎಂದು ಹೇಳಿದರು.

ವಿಧಾನಪರಿಷತ್ ಸದಸ್ಯ ಡಾ.ಡಿ. ತಿಮ್ಮಯ್ಯ, ಮಾಜಿ ಮೇಯರ್ ನಾರಾಯಣ, ಪಕ್ಷದ ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಜೆ.ವಿಜಯ್ ಕುಮಾರ್, ಜಿ.ಪಂ. ಮಾಜಿ ಅಧ್ಯಕ್ಷ ಬಿ.ಎಂ.ರಾಮು, ಡಿಸಿಸಿ ಪ್ರದಾನ ಕಾರ್ಯದರ್ಶಿ ಎಂ.ಶಿವಣ್ಣ, ಈಶ್ವರ್ ಚಕ್ಕಡಿ, ಶಿವಪ್ರಸಾದ್ ಪಾಲ್ಗೊಂಡಿದ್ದರು.

ದೇಶವು ಶಾಂತಿ– ಸುವ್ಯವಸ್ಥೆ ಸುಭದ್ರತೆಯಿಂದ ಇರಬೇಕಾದರೆ ಜನ ಕಾಂಗ್ರೆಸ್ ಬೆಂಬಲಿಸಬೇಕು. ಪ್ರಧಾನಿ ನರೇಂದ್ರ ಮೋದಿ ಅವರ ಸುಳ್ಳುಗಳನ್ನು ನಂಬಬಾರದು
ಎಂ.ಲಕ್ಷ್ಮಣ ಕಾಂಗ್ರೆಸ್ ಅಭ್ಯರ್ಥಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT