ಮೈಸೂರು: ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ ನೇತೃತ್ವದ ಕಾಂಗ್ರೆಸ್ ನಿಯೋಗವು ಬುಧವಾರ ಸಂಸದ ಪ್ರತಾಪ ಸಿಂಹ ಕಚೇರಿಗೆ ತೆರಳಿ ಮುಖ್ಯಮಂತ್ರಿಯಾಗಿ ಮೈಸೂರಿಗೆ ಸಿದ್ದರಾಮಯ್ಯರ ಕೊಡುಗೆಗಳ ಕುರಿತು ದಾಖಲೆ ಸಲ್ಲಿಸಿತು. ಆದರೆ ಸಂಸದರು ನಗರದಲ್ಲೇ ಇದ್ದರೂ ಕಚೇರಿಯತ್ತ ಸುಳಿಯಲಿಲ್ಲ.
ಮೈಸೂರಿಗೆ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಕೊಡುಗೆ ಹಾಗೂ ಸಂಸದರಾಗಿ ಪ್ರತಾಪ ಸಿಂಹ ಕೊಡುಗೆಗಳ ಕುರಿತು ಚರ್ಚಿಸಲು ಸೆ.6ರಂದು ಸಂಸದರ ಕಚೇರಿಗೆ ಬರುವುದಾಗಿ ಕಾಂಗ್ರೆಸ್ ಮುಖಂಡರು ಸಂಸದರಿಗೆ ಪತ್ರ ಬರೆದಿದ್ದರು. ಅದರಂತೆ ಬುಧವಾರ ಬೆಳಿಗ್ಗೆ 11ರ ಸುಮಾರಿಗೆ ಜಲದರ್ಶಿನಿ ಅತಿಥಿಗೃಹದ ಮುಂಭಾಗ ಕಾಂಗ್ರೆಸ್ ಮುಖಂಡರು ಸಮಾವೇಶಗೊಂಡರು. ಆದರೆ ಸಂಸದರ ಕಚೇರಿಯ ಒಳಗೆ ತೆರಳಲು ಪೊಲೀಸರು ಬಿಡಲಿಲ್ಲ. ಇದರಿಂದಾಗಿ ಪೊಲೀಸರು ಹಾಗೂ ಕಾರ್ಯಕರ್ತರ ನಡುವೆ ಕೆಲಕಾಲ ತಳ್ಳಾಟ ನಡೆಯಿತು. ಕಡೆಗೆ ನಾಲ್ಕೈದು ಮಂದಿ ಮುಖಂಡರನ್ನು ಮಾತ್ರ ಒಳಗೆ ಬಿಡಲಾಯಿತು. ಈ ಮುಖಂಡರು ಸಿದ್ದರಾಮಯ್ಯ ಕೊಡುಗೆಗಳ ಪಟ್ಟಿಯನ್ನು ಸಂಸದರ ಕಚೇರಿಗೆ ಸಲ್ಲಿಸಿ ಹೊರಬಂದರು.
ಈ ಸಂದರ್ಭ ಮಾತನಾಡಿದ ಎಂ. ಲಕ್ಷ್ಮಣ್ ‘ಪ್ರತಾಪ ಸಿಂಹ ಅವರನ್ನು ಇದು ನಾಲ್ಕನೇ ಬಾರಿ ಚರ್ಚೆಗೆ ಆಹ್ವಾನಿಸಿದ್ದೇವೆ. ಇಂದು ಮೈಸೂರಿನಲ್ಲೇ ಇದ್ದರೂ ಚರ್ಚೆಗೆ ಬಂದಿಲ್ಲ. ತೆವಲು ಬಂದಾಗ ಮಾತ್ರ ಕಾಂಗ್ರೆಸ್ ಸರ್ಕಾರದ ವಿರುದ್ಧ ಮಾತನಾಡುತ್ತಾರೆ’ ಎಂದು ಟೀಕಿಸಿದರು.
ಸಿದ್ದರಾಮಯ್ಯ 2013ರಿಂದ 2018ರವರೆಗೆ ರಾಜ್ಯದ ಮುಖ್ಯಮಂತ್ರಿಯಾಗಿದ್ದು, ಈ ಸಂದರ್ಭ ತವರು ಜಿಲ್ಲೆ ಮೈಸೂರಿಗೆ ಉದಾರ ಕೊಡುಗೆಗಳನ್ನು ನೀಡಿದ್ದಾರೆ. ಈ ಅವಧಿಯಲ್ಲಿ ಮಹಾನಗರ ಪಾಲಿಕೆಗೆ ಒಟ್ಟು ₹700 ಕೋಟಿ ಹಾಗೂ ಮೈಸೂರು ನಗರಕ್ಕೆ ಒಟ್ಟಾರೆ ₹2212 ಕೋಟಿ ಅನುದಾನ ನೀಡಿದ್ದಾರೆ. ಜಿಲ್ಲಾ ಆಸ್ಪತ್ರೆ ನಿರ್ಮಾಣ, ಜಯದೇವ ಆಸ್ಪತ್ರೆ, ಹೊಸ ಜಿಲ್ಲಾಧಿಕಾರಿ ಕಚೇರಿ, ಹೊಸ ಮಹಾರಾಣಿ ಕಾಲೇಜು, ಹೊಸ ನ್ಯಾಯಾಲಯಗಳ ಸಂಕೀರ್ಣ, ಕೆ.ಆರ್. ಆಸ್ಪತ್ರೆ, ಚೆಲುವಂಬ ಆಸ್ಪತ್ರೆಗಳ ನವೀಕರಣ, ಹೊಸ ಕಾಲೇಜು ಕಟ್ಟಡಗಳ ಸ್ಥಾಪನೆ, ಹೊಸ ಪೊಲೀಸ್ ಕಮಿಷನರ್ ಕಚೇರಿ, ಆರ್‌ಟಿಒ ಕಚೇರಿ... ಹೀಗೆ ಸಾಕಷ್ಟು ಮೂಲ ಸೌಕರ್ಯ ಕಲ್ಪಿಸಿದ್ದಾರೆ. ಈ ಎಲ್ಲವನ್ನೂ ಇಂದು ದಾಖಲೆ ಸಮೇತ ಸಂಸದರಿಗೆ ತಲುಪಿಸುತ್ತಿದ್ದೇವೆ ಎಂದರು.
ಪ್ರತಾಪ ಸಿಂಹ ಕಳೆದ ಎರಡು ಅವಧಿಯಲ್ಲಿ ಸಂಸದರಾಗಿ ಎಷ್ಟು ಅನುದಾನ ತಂದಿದ್ದಾರೆ? ವಿಮಾನ ನಿಲ್ದಾಣ ಅಭಿವೃದ್ಧಿಗೆ, ರಿಂಗ್ ರಸ್ತೆಗೆ ಕೇಂದ್ರ ಎಷ್ಟು ಅನುದಾನ ಕೊಟ್ಟಿದೆ? ಮೈಸೂರು ಇಂಟರ್ ನ್ಯಾಷನಲ್ ಟೂರಿಸಂ ಹಬ್ ಅಗಿದೆಯಾ? ಎಂಬುದರ ಕುರಿತು ಅಂಕಿಅಂಶಗಳ ದಾಖಲೆ ಸಮೇತ ಮಾಹಿತಿ ನೀಡಬೇಕು. ಅದನ್ನು ಬಿಟ್ಟು ಬರೀ ಮಾತಿನ ಬೊಗಳೆ ಬಿಡಬಾರದು ಎಂದು ಟೀಕಿಸಿದರು.
ಪ್ರತಾಪ ಸಿಂಹ ಕೋಮು ಹೆಸರಿನಲ್ಲಿ ಕಿಡಿ ಹಚ್ಚುವ ಕೆಲಸ ಮಾಡಿದ್ದು, ಜನರು ಅದಕ್ಕೆ ಈ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ. ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪ್ರಾಮಾಣಿಕ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಲಿದ್ದು, 3 ಲಕ್ಷ ಮತಗಳ ಅಂತರದಿಂದ ಗೆಲ್ಲಲಿದ್ದಾರೆ ಎಂದರು.
ಕಾಂಗ್ರೆಸ್ ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ವಿಜಯ್‌ಕುಮಾರ್ ಮಾತನಾಡಿ, ಮುಖಾಮುಖಿ ಚರ್ಚೆಗಾಗಿ ಇಂದು ಸಂಸದರನ್ನು ಅವರ ಕಚೇರಿಯಲ್ಲೇ ಭೇಟಿ ಮಾಡಲು ಉದ್ದೇಶಿಸಿದ್ದೆವು. ಈ ಬಗ್ಗೆ ಸಂಸದರಿಗೆ ಮೊದಲೇ ಮಾಹಿತಿ ನೀಡಿದ್ದರೂ ಅವಕಾಶ ನೀಡಿಲ್ಲ. ಇನ್ನಾದರೂ ಕಾಂಗ್ರೆಸ್ ಸರ್ಕಾರ ಹಾಗೂ ಸಿದ್ದರಾಮಯ್ಯರ ಬಗ್ಗೆ ಮಾತನಾಡುವುದನ್ನು ಬಿಡಬೇಕು ಎಂದು ಆಗ್ರಹಿಸಿದರು.
ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಆರ್. ಮೂರ್ತಿ, ಪಕ್ಷದ ಮುಖಂಡರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.