ಶನಿವಾರ, 15 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲೆ ಉಳಿವಿಗೆ ಬೇಕಿದೆ ಸಾಂಸ್ಕೃತಿಕ ನೀತಿ: ಬಿ.ವಿ.ರಾಜಾರಾಂ

ರಾಜ್ಯ ಸರ್ಕಾರಕ್ಕೆ ರಂಗಕರ್ಮಿ ಬಿ.ವಿ.ರಾಜಾರಾಂ ಸಲಹೆ
Published 25 ಮೇ 2024, 4:27 IST
Last Updated 25 ಮೇ 2024, 4:27 IST
ಅಕ್ಷರ ಗಾತ್ರ

ಮೈಸೂರು: ‘ಸಂಗೀತ ಹಾಗೂ ಪ್ರದರ್ಶಕ ಕಲೆಗಳಿಗೆ ಹೆಚ್ಚು ವೇದಿಕೆ ಸಿಗುತ್ತಿಲ್ಲ. ಸರ್ಕಾರವು ಕಲೆ ಹಾಗೂ ಕಲಾ ಪ್ರಕಾರಗಳ ಉಳಿವಿಗಾಗಿ ಸಾಂಸ್ಕೃತಿಕ ನೀತಿ ರೂಪಿಸಬೇಕಿದೆ’ ಎಂದು ರಂಗಕರ್ಮಿ ಬಿ.ವಿ.ರಾಜಾರಾಂ ಹೇಳಿದರು. 

ನಗರದ ರಾಜ್ಯ ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದಲ್ಲಿ ರಾಜ್ಯ ಸಂವಹನ ಮತ್ತು ಪತ್ರಿಕೋದ್ಯಮ ಶಿಕ್ಷಕರ ಸಂಘದ ಸಹಯೋಗದಲ್ಲಿ ‘ಪ್ರದರ್ಶಕ ಕಲೆ ಮತ್ತು ಮಾಧ್ಯಮ– ಸಾಂಸ್ಕೃತಿಕ ದೃಷ್ಟಿಕೋನಗಳು’ ಕುರಿತು ಬುಧವಾರ ನಡೆದ ಎರಡು ದಿನಗಳ ವಿಚಾರಸಂಕಿರಣದ ಸಮಾರೋಪದಲ್ಲಿ ಅವರು ಮಾತನಾಡಿದರು.

‘ಕಲೆಗಳು ಉತ್ಸವ, ಸಮಾರಂಭಗಳಲ್ಲಿ ಪ್ರದರ್ಶನ ನೀಡಲಷ್ಟೇ ಸೀಮಿತವಾಗಿವೆ. ಪ್ರದರ್ಶಕ ಕಲೆಗಳಿಗೆ ಹೆಚ್ಚು ಪ್ರಚಾರವೂ ಸಿಗುತ್ತಿಲ್ಲ. ಸಾಂಸ್ಕೃತಿಕ ನೀತಿ ರೂಪಿಸಿದರೆ, ಕಲೆಗಳನ್ನು ಮುಂದಿನ ಪೀಳಿಗೆಗೆ ಉಳಿಸಬಹುದು’ ಎಂದು ಅಭಿ‍ಪ್ರಾಯಪಟ್ಟರು. 

‘ಸಾಂಸ್ಕೃತಿಕ ರಂಗದ ಮಾಹಿತಿಗಳು ಜನರಿಗೆ ಹೆಚ್ಚು ತಲುಪುತ್ತಿಲ್ಲ. ಪತ್ರಿಕೆ ಹಾಗೂ ಮಾಧ್ಯಮಗಳಲ್ಲಿ ರಾಜಕಾರಣ, ಕ್ರೀಡೆ, ಸಿನಿಮಾಗೆ ನೀಡುವ ಪ್ರಾಶಸ್ತ್ಯ ಕಲೆ, ಸಾಹಿತ್ಯ ಹಾಗೂ ರಂಗಭೂಮಿಗೆ ನೀಡುತ್ತಿಲ್ಲ. ಪ್ರಸಾರ ಭಾರತಿ ದೂರದರ್ಶನದಲ್ಲಿ ಮಾತ್ರ ಕಲಾ ಪ್ರಕಾರಗಳು ಬಿತ್ತರವಾಗುತ್ತಿವೆ’ ಎಂದರು.

ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ನಿರಂಜನ ವಾನಳ್ಳಿ ಮಾತನಾಡಿ, ‘ಎಲ್ಲವನ್ನೂ ಹಣದಿಂದಲೇ ಅಳೆಯಲಾಗುತ್ತಿದೆ. ಸಾಂಸ್ಕೃತಿಕ, ಸಾಹಿತ್ಯಿಕ ಪತ್ರಿಕೆಗಳು ಆದಾಯ ತರುತ್ತಿಲ್ಲವೆಂದು ಮುಚ್ಚಲಾಗುತ್ತಿದೆ. ತಂತ್ರಜ್ಞಾನ ಮೇಲುಗೈ ಸಾಧಿಸಿದ್ದು, ಕಲೆಗಳಿಗೆ ಪ್ರೋತ್ಸಾಹ ಸಿಗುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ಹೊಸ ತಲೆಮಾರಿನ ವರದಿಗಾರರು ಪ್ರದರ್ಶಕ ಕಲೆಗಳ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳಬೇಕು. ಜನರಲ್ಲಿ ಸಾಂಸ್ಕೃತಿಕ, ಸಾಹಿತ್ಯಿಕ ಆಸಕ್ತಿ ಬೆಳೆಸಬೇಕು’ ಎಂದರು.

ನಾಟಕ ಅಕಾಡೆಮಿ ಅಧ್ಯಕ್ಷ ಕೆ.ವಿ.ನಾಗರಾಜ್ ಮೂರ್ತಿ, ರಾಷ್ಟ್ರೀಯ ಮೌಲ್ಯಾಂಕನ ಮತ್ತು ಮಾನ್ಯತಾ ಮಂಡಳಿಯ (ನ್ಯಾಕ್‌) ಮಾಜಿ ಅಧ್ಯಕ್ಷ ಪ್ರೊ.ಎಸ್.ಸಿ.ಶರ್ಮ ಮಾತನಾಡಿದರು.

ಸಂಗೀತ ಮತ್ತು ನೃತ್ಯ ಅಕಾಡೆಮಿ ಅಧ್ಯಕ್ಷೆ ಕೃಪಾ ಫಡ್ಕೆ, ಕುಲಪತಿ ಪ್ರೊ.ನಾಗೇಶ್ ವಿ. ಬೆಟ್ಟಕೋಟೆ, ಕುಲಸಚಿವೆ ರೇಖಾ ಹಾಜರಿದ್ದರು.

ಕಲಾ ಚಟುವಟಿಕೆಗೆ ಸಿಗದ ಪ್ರೋತ್ಸಾಹ ನವ ಪೀಳಿಗೆಗೆ ಕಲೆಗಳ ಪರಿಚಯ ಆಗಬೇಕು ಹಣದಿಂದಲೇ ಅಳೆಯುವುದು ಸಲ್ಲದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT