ಮಂಗಳವಾರ, ಮಾರ್ಚ್ 28, 2023
33 °C
ಟಿಕೆಟ್ ಮಾರಾಟದ ಬಗ್ಗೆ ಪ್ರಕಟಣೆ ಸೆ.30ರಂದು

ದಸರಾ ‘ಗೋಲ್ಡ್‌ ಕಾರ್ಡ್‌’ ಸೋಲ್ಡ್‌ ಔಟ್!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಮೈಸೂರು ದಸರಾ ಹಿನ್ನೆಲೆಯಲ್ಲಿ ಪರಿಚಯಿಸಿದ್ದ ‘ಗೋಲ್ಡ್‌ ಕಾರ್ಡ್‌’ಗಳು ಬಿಕರಿಯಾಗಿವೆ.

ಸಾವಿರ ಗೋಲ್ಡ್‌ ಕಾರ್ಡ್‌ಗಳನ್ನು ಮಾರುವ ಉದ್ದೇಶವನ್ನು ಜಿಲ್ಲಾಡಳಿತ ಹೊಂದಿತ್ತು. 500 ಕಾರ್ಡ್‌ಗಳನ್ನು ಆನ್‌ಲೈನ್‌ನಲ್ಲಿ ಮಾರಾಟಕ್ಕೆ ಇಡಲಾಗಿತ್ತು. ಉಳಿದವು ಆಫ್‌ಲೈನ್‌ನಲ್ಲಿ ಮಾರಾಟವಾಗಿವೆ. ₹ 4,999 ಬೆಲೆಯ ಕಾರ್ಡ್ ಅನ್ನು ಸಾರ್ವಜನಿಕರು ಖರೀದಿಸಿದ್ದಾರೆ.

ವಿಜಯ ದಶಮಿಯಂದು ನಡೆಯುವ ಜಂಬೂಸವಾರಿ, ಪಂಜಿನ ಕವಾಯತು ವೀಕ್ಷಣೆಗೆ ಅವಕಾಶವನ್ನು ಈ ಕಾರ್ಡ್‌ ಕಲ್ಪಿಸುತ್ತದೆ. ಪ್ರತ್ಯೇಕವಾಗಿ ಆಸನದ ವ್ಯವಸ್ಥೆಯನ್ನು ಆ ಕಾರ್ಡ್‌ದಾರರಿಗೆ ಮಾಡಲಾಗುತ್ತದೆ. ಅಲ್ಲದೇ, ಮೈಸೂರು ಅರಮನೆ, ಚಾಮರಾಜೇಂದ್ರ ಮೃಗಾಲಯ, ಚಾಮುಂಡೇಶ್ವರಿ ದೇವಸ್ಥಾನ, ಫಲಪುಷ್ಪ ಪ್ರದರ್ಶನ, ದಸರಾ ವಸ್ತುಪ್ರದರ್ಶನ, ಸಂತ ಫಿಲೋಮಿನಾ ಚರ್ಚ್, ರೈಲ್ವೆ ಸಂಗ್ರಹಾಲಯ, ಮಂಡ್ಯ ಜಿಲ್ಲೆಯ ಕೆಆರ್‌ಎಸ್‌ ಉದ್ಯಾನಕ್ಕೆ ಒಮ್ಮೆ ಮಾತ್ರ ಉಚಿತವಾಗಿ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ. ಹೀಗಾಗಿ, ಜನರಿಂದ ಕಾರ್ಡ್‌ಗೆ ಬೇಡಿಕೆ ಕಂಡುಬಂದಿದೆ. ಅವು ದಿನದಲ್ಲೇ ಬಿಕರಿಯಾಗಿವೆ. ಇದರಿಂದ ಜಿಲ್ಲಾಡಳಿತಕ್ಕೆ ₹ 49 ಲಕ್ಷ ವರಮಾನ ಬಂದಿದೆ.

ಕಾರ್ಡ್‌ಗಳು ಬಿಕರಿಯಾದ್ದರಿಂದ ಗುರುವಾರ ಆನ್‌ಲೈನ್‌ನಲ್ಲಿ ಗೋಲ್ಡ್‌ ಕಾರ್ಡ್‌ ಖರೀದಿಗೆ ಅವಕಾಶವಾಗಲಿಲ್ಲ. ಜಾಲತಾಣದಲ್ಲಿ ಸಮರ್ಪಕ ಮಾಹಿತಿ ಇಲ್ಲದೇ ಆಸಕ್ತರು, ಪ್ರವಾಸಿಗರು ಪರದಾಡಿದರು. ಕೆಲವೇ ಮಂದಿ ಸಿಂಡಿಕೇಟ್ ಮಾಡಿಕೊಂಡು ಕಾರ್ಡ್‌ಗಳನ್ನು ಖರೀದಿಸಿರುವ ಹಾಗೂ ಅವುಗಳನ್ನು ಹೆಚ್ಚಿನ ಬೆಲೆಗೆ ಮಾರಲು ಯೋಜಿಸಿರುವ ಅನುಮಾನವೂ ವ್ಯಕ್ತವಾಗಿದೆ.

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ‘ಗೋಲ್ಡ್‌ ಕಾರ್ಡ್‌ಗಳಲ್ಲಿ ಆನ್‌ಲೈನ್‌ನಲ್ಲಿ 500 ಮಾರಾಟವಾಗಿವೆ. ಉಳಿದವು ಆಫ್‌ಲೈನ್‌ನಲ್ಲಿ ಬಿಕರಿಯಾಗಿವೆ. ಜಂಬೂಸವಾರಿ ಮೆರವಣಿಗೆ ಹಾಗೂ ಪಂಜಿನ ಕವಾಯತು ಕಾರ್ಯಕ್ರಮದ ಟಿಕೆಟ್‌ಗಳನ್ನು ಸೆ.30ರಂದು ಸಂಜೆ 5ರ ನಂತರ https://mysoredasara.gov.in/ ಜಾಲತಾಣದಲ್ಲಿ ಪ್ರಕಟಿಸಲಾಗುವುದು’ ಎಂದು ಮಾಹಿತಿ ನೀಡಿದರು.

‘₹ 1,500 ಹಾಗೂ ₹ 1000 ಬೆಲೆಯ ಟಿಕೆಟ್‌ಗಳನ್ನು ಮಾರಲಾಗುತ್ತದೆ. ಅರಮನೆ ಆವರಣದಲ್ಲಿ ವಿಜಯದಶಮಿ ಮೆರವಣಿಗೆ ವೀಕ್ಷಣೆಗೆ 1500 ಮತ್ತು ಬನ್ನಿಮಂಟಪದಲ್ಲಿ ಪಂಜಿನ ಕವಾಯತು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದಕ್ಕಾಗಿ 2ಸಾವಿರ ಟಿಕೆಟ್‌ಗಳನ್ನು ಮಾರಲಾಗುವುದು’ ಎಂದು ತಿಳಿಸಿದರು.

ಕಾಳ ಸಂತೆಯಲ್ಲಿ ಖರೀದಿಸದಿರಿ: ‘ಕೆಲವು ಟ್ರಾವೆಲ್ಸ್‌ ಏಜೆನ್ಸಿಯವರು ದಸರಾ ಗೋಲ್ಡ್ ಕಾರ್ಡ್‌ಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಖರೀದಿಸಿ ಹೆಚ್ಚಿನ ಬೆಲೆಗೆ ಕಾಳಸಂತೆಯಲ್ಲಿ ಮಾರುತ್ತಿರುವುದು ಗಮನಕ್ಕೆ ಬಂದಿದೆ. ಈ ಸಂಬಂಧ ಈಗಾಗಲೇ ಕಾನೂನು ಕ್ರಮ ಜರುಗಿಸಲಾಗಿದೆ. ಅನಧಿಕೃತ ವ್ಯಕ್ತಿ–ಸಂಸ್ಥೆಗಳಿಂದ ಕಾಳಸಂತೆಯಲ್ಲಿ ದಸರಾ ಟಿಕೆಟ್ ಅಥವಾ ಗೋಲ್ಡ್ ಕಾರ್ಡ್‌ಗಳನ್ನು ಖರೀದಿಸಬಾರದು’ ಎಂದು ಕೋರಿದರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು