ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಸರಾ ತಾಲೀಮು: ಸಿಡಿಮದ್ದಿನ ಮೊರೆತಕ್ಕೆ ಅಂಜದ ಅಭಿಮನ್ಯು

Published 11 ಅಕ್ಟೋಬರ್ 2023, 9:27 IST
Last Updated 11 ಅಕ್ಟೋಬರ್ 2023, 9:27 IST
ಅಕ್ಷರ ಗಾತ್ರ

ಮೈಸೂರು: ಏಳು ಫಿರಂಗಿಗಳಲ್ಲಿ ಹೊಮ್ಮಿದ ಸಿಡಿಮದ್ದಿನ ಶಬ್ದದ ಮೊರೆತಕ್ಕೆ ಕ್ಯಾಪ್ಟನ್ ‘ಅಭಿಮನ್ಯು’ ನೇತೃತ್ವದ ‘ಅನುಭವಿ’ ಗಜಪಡೆ ಅಂಜದೆ ಧೈರ್ಯ ಪ್ರದರ್ಶಿಸಿದರೆ, ಕಿರಿಯ ಆನೆಗಳಾದ ‘ರೋಹಿತ್‌’, ‘ಹಿರಣ್ಯ’ ಕೆಲ ಹೊತ್ತು ಹಿಂದಡಿ ಇಟ್ಟವು.

ದಸರಾ ವಸ್ತುಪ್ರದರ್ಶನದ ವಾಹನ ನಿಲ್ದಾಣದ ಅಂಗಳದಲ್ಲಿ ಬುಧವಾರ ಕುಶಾಲತೋಪಿನ ತಾಲೀಮು ಯಶಸ್ವಿಯಾಗಿ ನೆರವೇರಿತು.

ಜಂಬೂಸವಾರಿಯ ದಿನವಾದ ವಿಜಯದಶಮಿಯಂದು ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡಿದ ನಂತರ 21 ಸುತ್ತಿನ ಕುಶಾಲತೋ‍ಪು ಸಿಡಿಸುವಾಗ ಹೊಮ್ಮುವ ಕಿವಿಗಡಚಿಕ್ಕುವ ಶಬ್ದಕ್ಕೆ ಕುದುರೆ, ಆನೆಗಳು ಬೆಚ್ಚದಂತೆ ಮಾಡಲು, ಪೂರ್ವಭ್ಯಾಸ ನೀಡುವುದು ವಾಡಿಕೆ. ಅದರಂತೆ ಸಿಡಿಮದ್ದು ಸಿಡಿಸಲು 7 ಫಿರಂಗಿಗಳನ್ನು ಅಣಿಗೊಳಿಸಲಾಯಿತು. ಸಶಸ್ತ್ರ ಮೀಸಲು ಪಡೆಯ ‘ಫಿರಂಗಿ ದಳ’ದ 35 ಸಿಬ್ಬಂದಿ ಕುಶಾಲತೋಪು ಸಿಡಿಸಲು ಸಿದ್ದವಾಗಿದ್ದರು.

ತಾಲೀಮಿನಲ್ಲಿ ಗಜಪಡೆಯ 14 ಆನೆಗಳು ಹಾಗೂ ಅಶ್ವಾರೋಹಿ ದಳದ 43 ಕುದುರೆಗಳು ಪಾಲ್ಗೊಂಡಿದ್ದವು. ತಾಲೀಮಿಗೂ ಮುನ್ನ ಡಿಸಿಪಿ ಮುತ್ತುರಾಜ್ ಅವರಿಂದ ಕುಶಾಲತೋಪು ಸಿಡಿಸುವ ಕಾರ್ಯ ನಿರ್ವಹಿಸುವ ಸಶಸ್ತ್ರ ಮೀಸಲು ಪಡೆಯ ಸಿಬ್ಬಂದಿ, ಅನುಮತಿ ಪಡೆದು, ವಿಷಲ್‌ ಊದಿದರು. ಅದರೊಂದಿಗೆ ಕುಶಾಲತೋಪು ತಾಲೀಮು ವಿದ್ಯುಕ್ತವಾಗಿ ಆರಂಭವಾಯಿತು.

ಫಿರಂಗಿಗೆ ಸಿಡಿಮದ್ದನ್ನು ಹಾಕಿದ ನಂತರ ಅದಕ್ಕೆ ಬೆಂಕಿ ಹೊತ್ತಿಸಲು ರಂಜಕದ ಪುಡಿಯನ್ನು ಹಾಕಲಾಯಿತು. ಬೆಂಕಿಯನ್ನು ಸಿಬ್ಬಂದಿ ಹಚ್ಚಿದೊಡನೇ ಕುಶಾಲತೋಪುಗಳು ಸಿಡಿದವು. ನಂತರ ಮಿಂಚಿನ ವೇಗದಲ್ಲಿ ನೀರಿನಿಂದ ತೇವಗೊಂಡಿದ್ದ ತೆಂಗಿನನಾರಿನಲ್ಲಿ ಮಾಡಿರುವ ‘ಸಿಂಬ’ವನ್ನು ಬ್ಯಾರಲ್‌ಗೆ ತೂರಿಸಿ ಬೆಂಕಿ ಕಿಡಿ ಹಾಗೂ ಮದ್ದಿನ ಚೂರನ್ನು ಆರಿಸಿ ತೆಗೆಯಲಾಯಿತು. ಇದೇ ವಿಧಾನವನ್ನು ಮೂರು ಬಾರಿ ಸಿಬ್ಬಂದಿ ಮಾಡಿದರು.

ವಿಜಯದಶಮಿ ದಿನ ರಾಷ್ಟ್ರಗೀತೆ ಕೇಳಿಬರುವ 53 ಸೆಕೆಂಡುಗಳಲ್ಲಿ ಬ್ಯಾರಲ್‌ ಅನ್ನು 21 ಬಾರಿ ಸ್ವಚ್ಛಗೊಳಿಸಿ, 21 ಬಾರಿ ಕುಶಾಲತೋಪು ಸಿಡಿಸಲಾಗುತ್ತದೆ. ಹೀಗಾಗಿಯೇ ಈ ತಾಲೀಮು!

ಮೊದಲ ಸಾಲಿನಲ್ಲಿ ‘ಅಭಿಮನ್ಯು’, ‘ಅರ್ಜುನ’, ‘ವಿಜಯಾ’, ‘ವರಲಕ್ಷ್ಮಿ’, ‘ಭೀಮ’, ‘ಗೋಪಿ’, ‘ಕಂಜನ್‌’, ‘ಮಹೇಂದ್ರ’ ಆನೆಗಳು ಸಿಡಿಮದ್ದಿನ ಮೊರತಕ್ಕೆ ಕದಲದೇ ನಿಂತಿದ್ದವು. ಅದನ್ನು ಕಂಡ ಆನೆ ಪ್ರಿಯರಲ್ಲಿ ಸಂತಸ ಉಕ್ಕಿತ್ತು. ಹಿರಿಯ ಆನೆಗಳೊಂದಿಗೆ ಎರಡನೇ ಬಾರಿ ದಸರಾದಲ್ಲಿ ಪಾಲ್ಗೊಂಡಿರುವ ‘ಮಹೇಂದ್ರ’ ಗಂಭೀರವಾಗಿ ನಿಂತು ‘ಭವಿಷ್ಯದ ಭರವಸೆಯ ಅಂಬಾರಿ ಆನೆ ನಾನೇ’ ಎಂಬುದನ್ನು ಸಾಬೀತುಗೊಳಿಸಿದ!

ಬೆಚ್ಚಿದ ‘ಧನಂಜಯ’, ಧೈರ್ಯ ತೋರಿದ ‘ಕಂಜನ್‌’: ಇದೇ ಮೊದಲ ಬಾರಿ ದಸರೆಗೆ ಬಂದಿರುವ ಕಂಜನ್ ಕೂಡ ಕದಲಿಲ್ಲ. ಮೊದಲು ಸುತ್ತಿನ ಸಿಡಿಮದ್ದಿನ ಸದ್ದಿಗೆ ಬೆಚ್ಚಿದರೂ ನಂತರ ಧೈರ್ಯ ತಂದುಕೊಂಡ. ಆದರೆ, ಈಗಾಗಲೇ ಹಲವು ಬಾರಿ ದಸರೆಯಲ್ಲಿ ಭಾಗವಹಿಸಿರುವ, ಕೂಂಬಿಂಗ್‌ ಕಾರ್ಯಾಚರಣೆಯಲ್ಲಿ ಹುಲಿಗೆ ಹೆದರದ ‘ಧನಂಜಯ’ ಸಿಡಿಮದ್ದಿಗೆ ಬೆಚ್ಚಿದ. ಅವನಿಗೆ ಕಬ್ಬು ನೀಡಿ ಸಂತೈಸಲಾಯಿತು.

ಮುಂಜಾಗ್ರತಾ ಕ್ರಮವಾಗಿ ಅರ್ಜುನ, ಅಭಿಮನ್ಯು, ಮಹೇಂದ್ರ, ಭೀಮ ಹೊರತು ಪಡಿಸಿ ಉಳಿದ ಎಲ್ಲ ಆನೆಗಳ ಕಾಲಿಗೆ ಸರಪಳಿ ಕಟ್ಟಲಾಗಿತ್ತು. ಎರಡನೇ ಸಾಲಿನಲ್ಲಿ ನಿಂತಿದ್ದ ಸುಗ್ರೀವ, ರೋಹಿತ, ಪ್ರಶಾಂತ ಹಾಗೂ ಹಿರಣ್ಯ ಬೆಚ್ಚಿದವು. ಮೊದಲ ಸುತ್ತಿನ ಸಿಡಿಮದ್ದು ಸ್ಫೋಟಗೊಳ್ಳುತ್ತಿದ್ದಂತೆ ಬೆದರಿದ ಈ ಆನೆಗಳು ಹಿಂದೆ– ಮುಂದೆ ಚಲಿಸಲಾರಂಭಿಸಿದವು. ಶಬ್ಧಕ್ಕೆ ಬೆದರಿ ಘೀಳಿಟ್ಟವು. ಈ ವೇಳೆ ಮಾವುತರು ಆನೆಗಳನ್ನು ನಿಯಂತ್ರಿಸಿದರು. ಬೆಚ್ಚಿದ ಕುದುರೆಗಳನ್ನು ಸವಾರರು ಹತೋಟಿಗೆ ತಂದರು.

ಫಿರಂಗಿಯ ನಳಿಕೆಯಿಂದ ಹೊರಹೊಮ್ಮುತ್ತಿದ್ದ ಬೃಹತ್ ಬೆಂಕಿಯುಂಡೆಗಳು, ಅವುಗಳ ಜೊತೆಗೆ ಆವರಿಸುತ್ತಿದ್ದ ದಟ್ಟ ಹೊಗೆಯನ್ನು, ಅಂಬಾರಿ ಹೊರುವ ಅಭಿಮನ್ಯು, ಅರ್ಜುನ ಹಾಗೂ ಮಹೇಂದ್ರ ತದೇಕದೃಷ್ಟಿಯಿಂದ ದಿಟ್ಟಿಸುತ್ತಾ ಧ್ಯಾನಸ್ಥ ಸ್ಥಿತಿಯಲ್ಲಿ ಸೆಡ್ಡು ಹೊಡೆದದ್ದು ಅಧಿಕಾರಿಗಳು ಹಾಗೂ ನಾಗರಿಕರಲ್ಲಿ ಹೆಮ್ಮೆ ಮೂಡಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT