ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮೈಸೂರು | 'ರೌಡಿಶೀಟರ್‌ ಗಡಿಪಾರಿಗೆ ಆಗ್ರಹ'

ಜಿಲ್ಲಾಧಿಕಾರಿ ಕಚೇರಿ ಎದುರು ರೈತ ಸಂಘ ‍ಪ್ರತಿಭಟನೆ
Published 6 ಡಿಸೆಂಬರ್ 2023, 14:47 IST
Last Updated 6 ಡಿಸೆಂಬರ್ 2023, 14:47 IST
ಅಕ್ಷರ ಗಾತ್ರ

ಮೈಸೂರು: ‘ದರೋಡೆ, ಅಪಹರಣ, ವಂಚನೆ ಆರೋಪ ಎದುರಿಸುತ್ತಿರುವ ಹಾಗೂ ಸಂಘದ ರಾಜ್ಯಾಧ್ಯಕ್ಷರ ಮೇಲೆ ಹಲ್ಲೆ ನಡೆಸಿರುವ ಪಾಂಡವಪುರ ತಾಲ್ಲೂಕಿನ ಇಂಗಲಗುಪ್ಪೆ ಗ್ರಾಮದ ರೌಡಿಶೀಟರ್‌ ಕೃಷ್ಣೇಗೌಡ ಎಂಬುವವರನ್ನು ಗಡಿಪಾರು ಮಾಡಬೇಕು’ ಎಂದು ರೈತ ಸಂಘದ ಸದಸ್ಯರು ಬುಧವಾರ ಪ್ರತಿಭಟನೆ ನಡೆಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿದ ಪ್ರತಿಭಟನಕಾರರು, ‘ಪ್ರಕರಣ ದಾಖಲಾಗಿದ್ದರೂ ಅಕ್ರಮ ಚಟುವಟಿಕೆಗಳು ಮುಂದುವರಿದಿವೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು. 

‘ಹಸಿರು ಶಾಲು ಧರಿಸುವ ನಕಲಿ ಹೋರಾಟಗಾರನಾಗಿದ್ದು, ಮಂಡ್ಯ, ಮೈಸೂರು ಮತ್ತು ಚಾಮರಾಜನಗರದ ಪೊಲೀಸ್ ಠಾಣೆಗಳಲ್ಲಿ ಅಪಹರಣ, ದರೋಡೆ, ವಂಚನೆ ಪ್ರಕರಣಗಳು ದಾಖಲಾಗಿದ್ದು, ದೋಷಾರೋಪಣ ಪಟ್ಟಿ ಸಲ್ಲಿಸಲಾಗಿದೆ. ಪಾಂಡವಪುರ ಠಾಣೆಯಲ್ಲಿ ರೌಟಿಶೀಟರ್ ತೆರೆಯಲಾಗಿದೆ’ ಎಂದರು.

‘ಆರೋಪಗಳಿದ್ದರೂ ಬೆದರಿಕೆಯನ್ನು ಮುಂದುವರಿಸಿದ್ದಾರೆ. ಹಲವು ಬಡ ಕುಟುಂಬಗಳು ತೊಂದರೆಗೆ ಸಿಲುಕಿವೆ’ ಎಂದು ಆರೋಪಿಸಿದರು.

‘ಆರೋಪಿ ವಿರುದ್ಧ ಗೃಹ ಕಚೇರಿ, ಮುಖ್ಯ ಕಾರ್ಯದರ್ಶಿ, ಡಿಜಿಪಿಗೆ ಪತ್ರ ಬರೆದು ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ ಮೇರೆಗೆ ಹಲವು ಕ್ರಮ ಜರುಗಿಸಲಾಗಿದೆ. ಆದರೂ ತಮ್ಮ ಹಗರಣಗಳನ್ನು ನಿಲ್ಲಿಸಿಲ್ಲ. ರೈತ ಸಂಘದ ಅಧ್ಯಕ್ಷನೆಂದು ಹೇಳಿಕೊಂಡು ಹಣ ಸುಲಿಗೆ ಮಾಡುತ್ತಿದ್ದಾರೆ. ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಅವರ ಮೇಲೆ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿದ್ದಾನೆ’ ಎಂದು ದೂರಿದರು.

ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್, ಪ್ರಧಾನ ಕಾರ್ಯದರ್ಶಿ ಹೊಸಕೋಟೆ ಬಸವರಾಜ್, ಮುಖಂಡರಾದ ಪ್ರಸನ್ನ ಎನ್.ಗೌಡ, ಕೆಂಪೂಗೌಡ, ನೇತ್ರಾವತಿ ಸೇರಿದಂತೆ ಹಲವರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT