ಮೈಸೂರು: ಇಲ್ಲಿನ ನಂಜರಾಜ ಬಹದ್ದೂರ್ ಛತ್ರದಲ್ಲಿ ಮೂರು ದಿನಗಳವರೆಗೆ ಹಮ್ಮಿಕೊಂಡಿರುವ ‘ದೇಸಿ ಎಣ್ಣೆ ಮೇಳ’ಕ್ಕೆ ಶುಕ್ರವಾರ ಚಾಲನೆ ನೀಡಲಾಯಿತು.

ಸಹಜ ಸಮೃದ್ಧ ಸಂಸ್ಥೆ ಹಾಗೂ ದೇಸಿರಿ ನ್ಯಾಚುರಲ್ಸ್ ಸಹಯೋಗದಲ್ಲಿ ಆಯೋಜಿಸಿರುವ ಮೇಳವನ್ನು ಕಪ್ಪಡಿ ಕ್ಷೇತ್ರ ಹಾಗೂ ಮಂಟೇಸ್ವಾಮಿ ಮಠದ ಪೀಠಾಧಿಪತಿ ಎಂ.ಎಲ್. ವರ್ಚಸ್ವಿ ಶ್ರೀಕಂಠ ಸಿದ್ದಲಿಂಗರಾಜೇ ಅರಸ್ ಉದ್ಘಾಟಿಸಿದರು. ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಸಾಂಪ್ರದಾಯಿಕ ಎಣ್ಣೆ ಗಾಣಕ್ಕೆ ಚಾಲನೆ ನೀಡಿ, ವೀಕ್ಷಿಸಿದರು.

ಸಿಎಫ್ಟಿಆರ್ಐ ನಿರ್ದೇಶಕ ಗಿರಿಧರ್ ಪರ್ವತಮ್, ಅಮೆರಿಕದ ವಿಜ್ಞಾನಿ ಡಾ.ಮಮತಾ ಶೇಖರ್, ಮೈಸೂರು ಕಲ್ಯಾಣ ಮಂಟಪಗಳ ಸಂಘದ ಅಧ್ಯಕ್ಷ ಎಸ್.ಮೂರ್ತಿ, ಸಹಜ ಸಮೃದ್ಧ ಸಂಸ್ಥೆಯ ನಿರ್ದೇಶಕ ಜಿ.ಕೃಷ್ಣಪ್ರಸಾದ್, ದೇಸಿರಿ ನ್ಯಾಚುರಲ್ಸ್ ಸಂಸ್ಥೆಯ ಸಹ ಸಂಸ್ಥಾಪಕ ಎಂ.ಮಹೇಶ, ಸಹ ಸಂಸ್ಥಾಪಕ ಎನ್.ಯೋಗೀಶ್, ಸಹಜ ಸೀಡ್ಸ್ನ ಮಂಜು ಕೆ.ಎಸ್. ಪಾಲ್ಗೊಂಡಿದ್ದರು.

‘ಇತ್ತೀಚಿನ ದಿನಗಳಲ್ಲಿ ಸಾಂಪ್ರದಾಯಿಕ ಅಡುಗೆ ಎಣ್ಣೆಗಳು, ಅವುಗಳ ಆರೋಗ್ಯ ಲಾಭಗಳ ಕಾರಣದಿಂದ ಮತ್ತೆ ಹೆಚ್ಚಿನ ಮಹತ್ವ ಪಡೆದುಕೊಳ್ಳುತ್ತಿವೆ. ಇದಕ್ಕೆ ಪೂರಕವಾಗಿ ಮೇಳವನ್ನು ಆಯೋಜಿಸಲಾಗಿದೆ’ ಎಂದು ಕೃಷ್ಣಪ್ರಸಾದ್ ತಿಳಿಸಿದರು.

‘ಕೋವಿಡ್ ನಂತರ ಗ್ರಾಹಕರಲ್ಲಿ ಅರಿವು ಹೆಚ್ಚುತ್ತಿರುವುದರಿಂದ, ಮೂಲೆಗುಂಪಾಗಿದ್ದ ಹುಚ್ಚೆಳ್ಳು, ಎಳ್ಳು, ಕುಸುಬೆ, ಹರಳು, ಅಗಸೆ ಮೊದಲಾದ ಎಣ್ಣೆಕಾಳು ಬೆಳೆಗಳಿಂದ ತಯಾರಾಗುವ ಎಣ್ಣೆಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಇದು ರೈತರಿಗೆ ಬೆಳೆ ವೈವಿಧ್ಯ ಹೆಚ್ಚಿಸಿಕೊಳ್ಳಲು, ಮತ್ತು ಆದಾಯ ವೃದ್ಧಿಸಿಕೊಳ್ಳಲು ಅವಕಾಶ ಕಲ್ಪಿಸಿದೆ. ಹವಾಮಾನ ವೈಪರೀತ್ಯಕ್ಕೆ ಹೈರಾಣಾಗಿರುವ ರೈತರು ಸುಲಭನಾಗಿ ಎಣ್ಣೆಕಾಳು ಬೆಳೆಗಳನ್ನು ಬೆಳೆದುಕೊಳ್ಳಬಹುದು’ ಎಂದು ಹೇಳಿದರು.

ಮೇಳದಲ್ಲಿ ಏನಿದೆ?:

‘ಸಾಂಪ್ರದಾಯಿಕ ಎಣ್ಣೆಗಳ ಕೃಷಿ ಮತ್ತು ಬಳಕೆಯ ಬಗ್ಗೆ ರೈತರು ಹಾಗೂ ಗ್ರಾಹಕರಿಗೆ ಅರಿವು ಮೂಡಿಸುವುದು ಮೇಳದ ಉದ್ದೇಶವಾಗಿದೆ’ ಎಂದು ಹೇಳಿದರು.

ಮೇಳದಲ್ಲಿ 50ಕ್ಕೂ ಹೆಚ್ಚು ಸಾಂಪ್ರದಾಯಿಕ ಎಣ್ಣೆಗಳನ್ನು ಪರಿಚಯಿಸಲಾಗಿದೆ. ಎತ್ತಿನ ಗಾಣದಿಂದ ಅಡುಗೆ ಎಣ್ಣೆ ಹಾಗೂ ಹರಳೆಣ್ಣೆ ತೆಗೆಯುವ ಪ್ರಾತ್ಯಕ್ಷಿಕೆಯನ್ನೂ ಖುದ್ದಾಗಿ ವೀಕ್ಷಿಸಬಹುದು. ಸಿಎಫ್ಟಿಆರ್ಐ ವಿಜ್ಞಾನಿಗಳು ಕಲಬೆರಕೆ ಎಣ್ಣೆಯನ್ನು ಪತ್ತೆ ಹಚ್ಚುವ ವಿಧಾನವನ್ನು ಪ್ರದರ್ಶಿಸುತ್ತಾರೆ. ಆಯುರ್ವೇದ ವೈದ್ಯರಿಂದ ಉಚಿತ ಸಲಹೆ ಮತ್ತು ಎಣ್ಣೆ ಬಳಕೆಯ ಮಾರ್ಗದರ್ಶನ ನೀಡಲಾಗುತ್ತಿದೆ. ಆಹಾರ ತಜ್ಞರು ದೇಹ ಪ್ರಕೃತಿಗಳಿಗೆ ಯೋಗ್ಯವಾದ ಎಣ್ಣೆಗಳ ಬಳಕೆಯ ಕುರಿತು ತಿಳಿಸಿಕೊಡಲಿದ್ದಾರೆ.

ಶನಿವಾರ (ಜ.10) ಬೆಳಿಗ್ಗೆ 11ಕ್ಕೆ ಎಣ್ಣೆ ಬೆಳೆಗಳ ಕೃಷಿ ಮತ್ತು ಮೌಲ್ಯವರ್ಧನೆಯ ಬಗ್ಗೆ ತರಬೇತಿ ನಡೆಯಲಿದೆ. 11ರಂದು (ಭಾನುವಾರ) ಬೆಳಿಗ್ಗೆ 10.30ಕ್ಕೆ ಸಾಂಪ್ರದಾಯಿಕ ಎಣ್ಣೆಗಳ ಬಗ್ಗೆ ಅರಿವು ಮೂಡಿಸಲು 5ರಿಂದ 12 ವರ್ಷದ ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆ ಏರ್ಪಡಿಸಲಾಗಿದೆ. ಎಣ್ಣೆ ಬೀಜಗಳು ಮತ್ತು ಕೃಷಿ, ಎತ್ತುಗಳಿಂದ ಚಾಲಿತವಾಗುವ ಗಾಣ, ರೈತರು ಮತ್ತು ಎಣ್ಣೆ ಹೊರತೆಗೆಯುವ ಪ್ರಕ್ರಿಯೆಯನ್ನು ಚಿತ್ರದ ಮೂಲಕ ತೋರಿಸಬೇಕು. ‘ಆರೋಗ್ಯಕರ ಎಣ್ಣೆ, ಹಳ್ಳಿಯ ಆರ್ಥಿಕತೆ, ಮತ್ತು ಪರಿಸರ ಸ್ನೇಹಿ’ ಎಂಬ ಸಂದೇಶಗಳನ್ನು ಚಿತ್ರವು ಒಳಗೊಂಡಿರಬೇಕು.

ಭಾನುವಾರ ಮಧ್ಯಾಹ್ನ 12ಕ್ಕೆ ‘ಸಾಂಪ್ರದಾಯಿಕ ಎಣ್ಣೆಗಳ ಅಡುಗೆ ಸ್ಪರ್ಧೆ’ ಏರ್ಪಡಿಸಲಾಗಿದೆ. ಸಾಂಪ್ರದಾಯಿಕ ಎಣ್ಣೆಗಳಿಂದ ತಯಾರಿಸಿದ ಅಡುಗೆಗಳನ್ನು ತರಬೇಕು. ಅಪರೂಪದ ಎಣ್ಣೆ ಬಳಸಿದ ಅಡುಗೆಗಳಿಗೆ ಆದ್ಯತೆ ನೀಡಲಾಗುವುದು. ವಿಜೇತರಿಗೆ ನಗದು ಬಹುಮಾನ ನೀಡಲಾಗುವುದು.

ಮೇಳದಲ್ಲಿ ವೈವಿಧ್ಯಮಯ ದೇಸಿ ಆಹಾರ ಸವಿಯಲು ಅವಕಾಶವಿದೆ. ಸಾವಯವ ಉತ್ಪನ್ನಗಳು, ಸಿರಿಧಾನ್ಯ, ನಾಟಿ ಬೀಜ ಮತ್ತು ಹಣ್ಣಿನ ಗಿಡಗಳನ್ನು ಖರೀದಿಸಬಹುದು. ದೇಸಿ ಬೀಜ, ಹಣ್ಣಿನ ಗಿಡ, ಸಾವಯವ ಬೆಲ್ಲ, ಅಕ್ಕಿ , ಸಿರಿಧಾನ್ಯ ಮತ್ತು ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತಿದೆ. ಸಂಕ್ರಾಂತಿಗಾಗಿ ಸಾವಯವ ಎಳ್ಳು ಬೆಲ್ಲ, ಅವರೆ, ಶೇಂಗಾ, ಗೆಣಸು ಕೊಳ್ಳಬಹುದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.