ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಣ್ಮರೆಯಾಗಿದ್ದ ಗುಬ್ಬಿಗಳು ನಗರಕ್ಕೆ ಬಂದವು!

ಗುಬ್ಬಚ್ಚಿಗಳ ರಕ್ಷಣೆಗೆ ಸಿದ್ಧಾರ್ಥನಗರದ ಕೋಕಿಲಾ 6 ವರ್ಷದ ನಿರಂತರ ಶ್ರಮ
Published : 20 ಮಾರ್ಚ್ 2024, 8:31 IST
Last Updated : 20 ಮಾರ್ಚ್ 2024, 8:31 IST
ಫಾಲೋ ಮಾಡಿ
Comments

ಮೈಸೂರು: ನಗರದಲ್ಲಿ ಮರೆಯಾಗುತ್ತಿರುವ ಗುಬ್ಬಚ್ಚಿಗಳನ್ನು ಮರಳಿ ತರುವ ಸಾಹಸದಲ್ಲಿ ಸಿದ್ಧಾರ್ಥನಗರದ ಕೋಕಿಲಾ ರಮೇಶ್‌ ಜೈನ್‌ ಅವರು 6 ವರ್ಷದಿಂದ ದುಡಿಯುತ್ತಿದ್ದು, ಇದುವರೆಗೂ ನೂರಾರು ಗುಬ್ಬಿಗೂಡುಗಳನ್ನು ಕಟ್ಟಿದ್ದಾರೆ.

‘ಒಂದು ಕಾಲದಲ್ಲಿ ಮನೆಯ ಮುಂದೆ, ತಾರಸಿಯ ಮೇಲೆ ಧಾನ್ಯಗಳನ್ನು ಒಣಗಲು ಹಾಕಿದರೆ ಗುಬ್ಬಚ್ಚಿಗಳ ಸೈನ್ಯವೇ ಹಾಜರಾಗುತ್ತಿತ್ತು. ಚಿಂವ್‌ ಚಿಂವ್‌ಗುಡುತ್ತ ಮನೆ ಅಂಗಳದಲ್ಲಿ ಕುಪ್ಪಳಿಸುತ್ತ ಹಾರಾಡುತ್ತಿದ್ದರೆ ಮಕ್ಕಳ ಕಣ್ಣಿನಲ್ಲಿ ತೀವ್ರ ಕುತೂಹಲವಿತ್ತು’ ಎನ್ನುವ ಕೋಕಿಲಾ, ‘ಮಿತಿಮೀರಿದ ನಗರೀಕರಣವು ಅವುಗಳ ಅಸ್ತಿತ್ವವನ್ನೇ ಇಲ್ಲವಾಗಿಸಿದೆ’ ಎಂದು ಬೇಸರಿಸುತ್ತಾರೆ.

ಗುಬ್ಬಿಗಳ ಮೇಲಿನ ಪ್ರೀತಿ ಅವರನ್ನು ಪರಿಸರ ಕಾಯಕದಲ್ಲಿ ತೊಡಗಿಸಿಕೊಳ್ಳಲು ಕಾರಣವಾಯಿತು. 2019ರಿಂದಲೂ ನಗರದ ದೇವರಾಜ ಮಾರುಕಟ್ಟೆ, ಶಿವರಾಂಪೇಟೆ ಮೊದಲಾದವೆಡೆ ಗೂಡುಗಳನ್ನು ವ್ಯಾಪಾರಿಗಳಿಗೆ ಉಚಿತವಾಗಿ ನೀಡುತ್ತಿದ್ದರು. ಅಲ್ಲಿ ಗುಬ್ಬಿಗಳ ಕಲರವ ಮತ್ತೆ ಕೇಳಿ ಬರುತ್ತಿದೆ. 

‘ಮೊದಲು ₹ 100 ಮೌಲ್ಯದ ಗುಬ್ಬಿಗೂಡುಗಳನ್ನು ಉಚಿತವಾಗಿ ನೀಡಲಾಗುತ್ತಿತ್ತು. ವಿಶಿಷ್ಟ ವಿನ್ಯಾಸದ ಗೂಡುಗಳನ್ನು ಅಂಗಡಿಗಳ ಮಾಲೀಕರಿಗೆ ವಿತರಿಸಿ, ಒಂದು ತಟ್ಟೆಯಲ್ಲಿ ನವಣೆ ಸೇರಿದಂತೆ ಧಾನ್ಯ ಹಾಕುವಂತೆ ಕೋರಲಾಗಿತ್ತು. ಅದರಿಂದ ಮಾರುಕಟ್ಟೆಯಲ್ಲಿ ಕಲರವ ಕೇಳಿಬಂದಿದೆ’ ಎಂದು ಕೋಕಿಲಾ ಹೇಳಿದರು.

‘ಗುಬ್ಬಿಯನ್ನು ಹಿಡಿದು ತರಬಾರದು. ರಟ್ಟಿನ ಡಬ್ಬದಲ್ಲಿ, ಮಣ್ಣಿನಲ್ಲಿ ಗೂಡುಗಳನ್ನು ಮಾಡಿ, ಒಣ ಹುಲ್ಲು ಹಾಕಿದರೆ ಅವಾಗಿಯೇ ಬರುತ್ತವೆ’ ಎಂದು ಅಭಿಪ್ರಾಯಪಟ್ಟರು. 

‘ಮೊದಲು ಹೆಂಚಿನ ಮನೆಗಳಿದ್ದವು. ಪ್ರತಿಯೊಂದು ರಸ್ತೆ, ಫುಟ್‌ಪಾತ್‌, ಉದ್ಯಾನಗಳಲ್ಲಿ ಸ್ವಾಭಾವಿಕ ಹುಲ್ಲುಗಳು ಬೆಳೆಯುತ್ತಿದ್ದೆವು. ಇದೀಗ ಎಲ್ಲರ ಮನಯೂ ಮಹಡಿ ಮನೆಗಳೇ, ನೈಸರ್ಗಿಕ ಹುಲ್ಲುಗಳಿಲ್ಲ. ಹೀಗಾಗಿ ನಗರದಲ್ಲಿ ಗುಬ್ಬಿ ಮಾಯವಾಗಿವೆ’ ಎಂದು ತಿಳಿಸಿದರು.

‘ಧಾನ್ಯಗಳು ಇಂದು ಸೋಸಿರಲಾಗುತ್ತಿದೆ. ಮೊದಲಿನಂತೆ ಒಣಗಿಸುವುದಾಗಲಿ, ಕೇರುವುದಾಗಲಿ ಮಾಡಿ ನುಚ್ಚು, ಕಸ–ಕಡ್ಡಿ ತೆಗೆಯುತ್ತಿಲ್ಲ’ ಎಂದರು.

‘ಶಾಲಾ– ಕಾಲೇಜುಗಳಲ್ಲಿ ಗುಬ್ಬಚ್ಚಿ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಮನೆಯಲ್ಲಿ ಗೂಡಿಲ್ಲದಿದ್ದರೆ ಶೂ ಬಾಕ್ಸ್‌ಗೆ ರಂಧ್ರ ಮಾಡಿದರೆ ಗುಬ್ಬಿ ಬರುತ್ತವೆ. ಇದುವರೆಗೂ 800ಕ್ಕೂ ಗೂಡುಗಳನ್ನು ಉಚಿತವಾಗಿ ಹಂಚಲಾಗಿದೆ’ ಎಂದು ಮಾಹಿತಿ ನೀಡಿದರು.

‘ಗೂಡುಗಳಿಗೆ ಗುಬ್ಬಿಗಳು ಬಂದರೆ ಅವುಗಳಿಗೆ ನೀಡಲು ಧಾನ್ಯಗಳನ್ನು ತಿಂಗಳಿಗೊಮ್ಮೆ ಪೂರೈಸಲಾಗುತ್ತದೆ’ ಎಂದು ತಿಳಿಸಿದರು.

ಗುಬ್ಬಿಗೂಡು
ಗುಬ್ಬಿಗೂಡು
ಕೋಕಿಲಾ ರಮೇಶ್‌ ಜೈನ್
ಕೋಕಿಲಾ ರಮೇಶ್‌ ಜೈನ್

ದೇವರಾಜ ಮಾರುಕಟ್ಟೆಯಲ್ಲಿ ಈ ಬಾರಿ ಹೊಸದಾಗಿ 15 ಗೂಡುಗಳನ್ನು ತಿಂಗಳ ಹಿಂದೆ ಹಾಕಲಾಗಿತ್ತು. ಗುಬ್ಬಿಗಳು ಗೂಡುಗಳಿಗೆ ಬಂದಿವೆ

–ಕೋಕಿಲಾ ರಮೇಶ್‌ ಜೈನ್ ಗುಬ್ಬಿ ಸಂರಕ್ಷಕಿ

‘ಗುಬ್ಬಚ್ಚಿ ಕಲರವ ಕೇಳುವುದೇ ಚಂದ’

‘ಗುಬ್ಬಿಗಳು ಮೊದಲಿಗಿಂತ ಹೆಚ್ಚು ಬಂದಿವೆ. ನಾಲ್ಕು ಗೂಡುಗಳನ್ನು ನನ್ನ ಅಂಗಡಿಯಲ್ಲಿ ಹಾಕಿರುವೆ. ಹಕ್ಕಿಗಳು ಹಾರಾಡುವುದೇ ಚಂದ. ಅವುಗಳ ಕಲರವ ಕೇಳುವುದೇ ಚಂದ’ ಎಂದು ದೇವರಾಜ ಮಾರುಕಟ್ಟೆಯ ಹೂವಿನ ವ್ಯಾಪಾರಿ ಮೋಯಿಬ್ ‘ಪ್ರಜಾವಾಣಿ’ ಜೊತೆ ಸಂತಸ ಹಂಚಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT