ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಿಲ್ ಬಾಕಿ ಇದ್ದರೆ ವಿದ್ಯುತ್ ಪೂರೈಕೆ ಸ್ಥಗಿತ: ಸೆಸ್ಕ್‌

Published : 26 ಸೆಪ್ಟೆಂಬರ್ 2024, 16:12 IST
Last Updated : 26 ಸೆಪ್ಟೆಂಬರ್ 2024, 16:12 IST
ಫಾಲೋ ಮಾಡಿ
Comments

ಮೈಸೂರು: ಅವಧಿ ಮೀರಿದ್ದರೂ ವಿದ್ಯುತ್‌ ಶುಲ್ಕ ಪಾವತಿಸದೆ ಬಾಕಿ ಉಳಿಸಿಕೊಂಡಿರುವವರ ವಿರುದ್ಧ ಕ್ರಮಕ್ಕೆ ಸೆಸ್ಕ್‌ ಮುಂದಾಗಿದೆ. ನಿಗದಿತ ಅವಧಿಯೊಳಗೆ ಶುಲ್ಕ ಕಟ್ಟದಿದ್ದಲ್ಲಿ, ಅಂತಹ ಎಲ್ಲ ಸ್ಥಾವರಗಳಿಗೆ ವಿದ್ಯುತ್ ಕಡಿತಗೊಳಿಸಲು ತೀರ್ಮಾನಿಸಿದೆ.

ಕೆಲ ಗ್ರಾಹಕರು, ಸರ್ಕಾರಿ ಇಲಾಖೆಗಳು, ಗ್ರಾಮ ಪಂಚಾಯಿತಿ ಕುಡಿಯುವ ನೀರು ಮತ್ತು ಬೀದಿದೀಪ ಸ್ಥಾವರಗಳನ್ನು ಒಳಗೊಂಡಂತೆ ವಿದ್ಯುತ್‌ ಶುಲ್ಕ ಪಾವತಿ ಬಾಕಿ ಇದೆ.

ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ ಪ್ರಕಾರ ವಿದ್ಯುತ್ ಸರಬರಾಜಿನ, ವಿತರಣಾ ಲೈಸೆನ್ಸ್‌ದಾರರ ಷರತ್ತುಗಳು 2004 ಅನುಬಂಧ-04ರ ನಿಯಮ 4.18(ಜೆ) ಪ್ರಕಾರ, ‘ಗ್ರಾಹಕರು ಬಿಲ್‌ ಪಾವತಿಗೆ ನೀಡಿರುವ ದಿನಾಂಕದೊಳಗೆ ಬಿಲ್‌ ಪಾವತಿಸದಿದ್ದರೆ, ನಿಗದಿತ ಗಡುವಿನ ದಿನಾಂಕದ ನಂತರ ಶುಲ್ಕ ಪಾವತಿಸದ ಗ್ರಾಹಕರಿಗೆ 15 ದಿನಗಳ ಸ್ಪಷ್ಟ ನೋಟಿಸ್ ನೀಡಿ, ಬಾಕಿ ಪಾವತಿಸದ ಕಾರಣಕ್ಕೆ ವಿದ್ಯುತ್ ಸ್ಥಾವರದ ವಿದ್ಯುತ್ ಸಂಪರ್ಕ ಕಡಿತಗೊಳಿಸುವ ಹಕ್ಕನ್ನು ಲೈಸೆನ್ಸ್‌ದಾರರು ಹೊಂದಿರುತ್ತಾರೆ’ ಎಂದು ಹೇಳಲಾಗಿದೆ.

ನಿಯಮ 2.11ರ ಪ್ರಕಾರ, ‘ಬಿಲ್‌ ವಿತರಿಸಿದ ಬಳಿಕ 15 ದಿನಗಳ ಅವಧಿ ಬಿಲ್‌ ಪಾವತಿಗೆ ಅಂತಿಮ ಗಡುವಾಗಿರುತ್ತದೆ. ಗ್ರಾಹಕರಿಗೆ ನೀಡುವ ಬಿಲ್‌ನ ಹಿಂಬದಿಯ ಸೂಚನೆ–1ರಲ್ಲಿ ನಿಗದಿತ ದಿನದೊಳಗೆ ಬಿಲ್‌ ಪಾವತಿಸದಿದ್ದಲ್ಲಿ ಈ ಬಿಲ್‌ ಅನ್ನೇ ವಿದ್ಯುತ್‌ ಸರಬರಾಜು ನಿಲ್ಲಿಸುವ 15 ದಿನಗಳ ನೋಟಿಸ್‌ ಎಂದು ಪರಿಗಣಿಸಬೇಕು ಎಂದು ನಮೂದಿಸಲಾಗಿದೆ ಹಾಗೂ ಹಿಂದಿನ ಬಾಕಿಗೆ ವಾಯ್ದೆ ದಿನಾಂಕ ಅನ್ವಯಿಸುವುದಿಲ್ಲ’ ಎಂದು ತಿಳಿಸಲಾಗಿರುತ್ತದೆ. ಆದ್ದರಿಂದ, ತುರ್ತು ಸೇವೆಗಳಾದ ಸರ್ಕಾರಿ ಆಸ್ಪತ್ರೆಗಳು, ಪೊಲೀಸ್‌ ಸೇವೆಗಳನ್ನು ಹೊರತುಪಡಿಸಿ ಎಲ್ಲ ಪ್ರವರ್ಗದ ವಿದ್ಯುತ್‌ ಗ್ರಾಹಕರು, ಸರ್ಕಾರಿ ಇಲಾಖೆ ಒಳಗೊಂಡಂತೆ ತಮ್ಮ ಸ್ಥಾವರಗಳ ವಿದ್ಯುತ್‌ ಶುಲ್ಕ ಬಾಕಿಯನ್ನು 7 ದಿನದೊಳಗೆ ಸೆಸ್ಕ್‌ನ ಅಧಿಕೃತ ನಗದು ಕೌಂಟರ್‌ನಲ್ಲಿ ಅಥವಾ ಆನ್‌ಲೈನ್‌ನಲ್ಲಿ ಪಾವತಿಸಬೇಕು ಎಂದು ಸೆಸ್ಕ್‌ ವ್ಯವಸ್ಥಾಪಕ ನಿರ್ದೇಶಕಿ ಜಿ.ಶೀಲಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT