ಗುರುವಾರ, 10 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಅಭಿವೃದ್ಧಿ ಕಾಮಗಾರಿ: ಪರಿಸರ ಅಸಮತೋಲನ- ಗುರುಚರಣ್ ಗೊಲ್ಲರಕೇರಿ ವಿಷಾದ

ವಿಶ್ರಾಂತ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗುರುಚರಣ್ ಗೊಲ್ಲರಕೇರಿ ವಿಷಾದ
Published : 14 ಸೆಪ್ಟೆಂಬರ್ 2024, 15:49 IST
Last Updated : 14 ಸೆಪ್ಟೆಂಬರ್ 2024, 15:49 IST
ಫಾಲೋ ಮಾಡಿ
Comments

ಮೈಸೂರು: ‘ಹವಾಮಾನ ವೈಪರೀತ್ಯ, ಅತಿಯಾದ ಆರ್ಥಿಕ ಅಭಿವೃದ್ಧಿ, ರಾಜಕೀಯ ಹಿತಾಸಕ್ತಿಗಳು ‍ಪರಿಸರದ ಮೇಲೆ ದುಷ್ಪರಿಣಾಮ ಬೀರುತ್ತಿವೆ’ ಎಂದು ವಿಶ್ರಾಂತ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗುರುಚರಣ್ ಗೊಲ್ಲರಕೇರಿ ಅಭಿಪ್ರಾಯಪಟ್ಟರು.

ಡಾ.ಬಿ.ಆರ್. ಅಂಬೇಡ್ಕರ್ ಸಂಶೋಧನ ಹಾಗೂ ವಿಸ್ತರಣ ಕೇಂದ್ರ, ಭಾರತೀಯ ಸಾರ್ವಜನಿಕ ಆಡಳಿತ ಸಂಸ್ಥೆ ಹಾಗೂ ಮೈಸೂರು ಮುಕ್ತ ವೇದಿಕೆ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ಜಿಲ್ಲಾಡಳಿತ ಮತ್ತು ನಾಗರಿಕ ಕುರಿತ ತಜ್ಞರ ಅಭಿಮತ ಕಾರ್ಯಕ್ರಮದಲ್ಲಿ ‘ಹವಾಮಾನ ಬದಲಾವಣೆ: ಜಿಲ್ಲಾ ಮಟ್ಟದಲ್ಲಿ ಮುಖ್ಯವಾಹಿನಿ ಹವಾಮಾನ ಕ್ರಮ’ ಕುರಿತು ಅವರು ಮಾತನಾಡಿದರು.

‘ವಯನಾಡ್‌ನಲ್ಲಿ ಭೂಕುಸಿತದಿಂದ ದಾಖಲೆಯ ಪ್ರಮಾಣದಲ್ಲಿ ಅಂದರೆ 600 ಕೋಟಿ ಕ್ಯುಬಿಕ್ ಮೀಟರ್‌ನಷ್ಟು ಬಂಡೆಗಳು, ಕೆಸರು, ಭಗ್ನಾವಶೇಷ ಹರಡಿದ್ದವು ಎಂದು ಕೇರಳ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಅಂದಾಜಿಸಿದೆ. ರಾಜ್ಯ ಹಾಗೂ ಜಿಲ್ಲಾಡಳಿತಗಳು ಇದರ ಬಗ್ಗೆ ಗಮನಹರಿಸದೇ ಇರುವುದು ಕಾರಣ’ ಎಂದು ಹೇಳಿದರು.

‘2018–21ರ ಅವಧಿಯಲ್ಲಿ ಸಂಭವಿಸಿದ ಪ್ರವಾಹದಿಂದಾಗಿ ರಾಜ್ಯದಲ್ಲಿ 2 ಲಕ್ಷ ಮನೆಗಳು ಹಾನಿಗೊಳಗಾಗಿದ್ದು, ₹18 ಸಾವಿರ ಕೋಟಿಗೂ ಹೆಚ್ಚು ನಷ್ಟ ಸಂಭವಿಸಿದೆ ಎಂದು ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಅಂದಾಜು ಮಾಡಿದೆ.  ಶೇ 90ರಷ್ಟು ಹಣವನ್ನು ಕಟ್ಟಡ ನಿರ್ಮಾಣಕ್ಕೆ ವೆಚ್ಚ ಮಾಡಲಾಗುತ್ತಿದ್ದು, ಆರೋಗ್ಯ, ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿಲ್ಲ. ಅವೈಜ್ಞಾನಿಕ ನಿರ್ಮಾಣ ಕಾಮಗಾರಿಯೂ ಪರಿಸರದ ಅಸಮತೋಲನಕ್ಕೆ ಕಾರಣವಾಗಿವೆ ಎಂದು ಕೇಶವಕೊರ್ಸೆ ಅವರು 2020–21ರ ಅವಧಿಯಲ್ಲಿ ರಾಜ್ಯ ಸರ್ಕಾರಕ್ಕೆ ಸಲ್ಲಿಸಿರುವ ವರದಿಯಲ್ಲಿ ಉಲ್ಲೇಖಿಸಿದ್ದಾರೆ’ ಎಂದು ತಿಳಿಸಿದರು. ‍

‘ಪಂಚಾಯತ್ ರಾಜ್: ತತ್ವಗಳು ಮತ್ತು ಆಚರಣೆಗಳು’ ಕುರಿತು ಉಪನ್ಯಾಸ ನೀಡಿದ ಐಸೆಕ್ ಸಂದರ್ಶಕ ಪ್ರಾಧ್ಯಾಪಕ ಎನ್.ಶಿವಣ್ಣ, ‘ಬಹಳಷ್ಟು ಗ್ರಾಮಸಭೆಗಳು ಸಮರ್ಪಕವಾಗಿ ಆಗುತ್ತಿಲ್ಲ. ಒಂದು ರೀತಿ ಹಿಟ್ ಅಂಡ್ ರನ್ ಎಂಬಂತೆ ಆಗುತ್ತಿವೆ. ಜನರು ಗ್ರಾಮಸಭೆಯ ಪರಿಕಲ್ಪನೆಗಳನ್ನು ಅರ್ಥಮಾಡಿಕೊಳ್ಳುತ್ತಿಲ್ಲ. ಜಮಾಬಂಧಿ ಸೇರಿದಂತೆ ಜನರು ಭಾಗವಹಿಸಬಹುದಾದ ಸಭೆಗಳನ್ನೇ ಮುಂದೂಡುವ ಪರಿಪಾಠವಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಕ್ಕಳ ಗ್ರಾಮಸಭೆಯೂ ಪರಿಣಾಮಕಾರಿಯಾಗಿದೆ. ಸಭೆಗಳಲ್ಲಿ ವಿದ್ಯಾರ್ಥಿನಿಯರು, ಶಿಕ್ಷಕರು ಶಾಲೆಗೆ ಮೈದಾನ, ಕಾಂಪೌಂಡ್‌ ಬೇಕು ಎಂದು ಬೇಡಿಕೆ ಇಡುತ್ತಾರೆ. ಬಿಸಿಯೂಟ ಸರಿ ಇಲ್ಲದಿರುವುದು ಮುಂತಾದ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತುತ್ತಾರೆ’ ಎಂದು ಹೇಳಿದರು.

‘ಪೊಲೀಸ್ ಮತ್ತು ಸಮುದಾಯ’ ಕುರಿತು ಉಪನ್ಯಾಸ ನೀಡಿದ ಎಸ್.ಟಿ.ರಮೇಶ್, ಪೊಲೀಸರು ಎದುರಿಸುತ್ತಿರುವ ಸಮಸ್ಯೆಗಳನ್ನು ಬಿಚ್ಚಿಟ್ಟರು. ‘ಇಂದಿನ ದಿನಗಳಲ್ಲಿ ಅಪರಾಧ ನಡೆದರೆ ನಾಗರಿಕರು ಹಾಗೂ ಮಹಿಳೆಯರು ಪೊಲೀಸರಿಗೆ ದೂರು ನೀಡಬೇಕು’ ಎಂದು ಸಲಹೆ ನೀಡಿದರು.

ಪ್ರಸ್ತುತ ಜನಸಂಖ್ಯೆಗೆ ಅನುಗುಣವಾಗಿ ಪೊಲೀಸರು ಇಲ್ಲ. ಕಾನೂನು ಸುವ್ಯವಸ್ಥೆ ಮೇಲೆ ಇದು ಪರಿಣಾಮ ಬೀರುತ್ತಿದೆ. ಕೋಮುಗಲಭೆ, ಡಾ.ರಾಜ್‌ಕುಮಾರ್ ನಿಧನದ ಸಂದರ್ಭ ಆಗಿರುವ ಸಮಸ್ಯೆಗಳು ಇದಕ್ಕೆ ನಿದರ್ಶನ. ಪೊಲೀಸರು ಕಾನೂನು ಸುವ್ಯವಸ್ಥೆ ಕಾಪಾಡುವುದರ ಜೊತೆಗೆ ಕೋವಿಡ್ ಸಮಯದಲ್ಲಿ ಸಾಮಾಜಿಕ ಅಂತರ ಕಾಪಾಡುವುದು ಸವಾಲಿನ ಕೆಲಸವಾಗಿತ್ತು. ಪೊಲೀಸ್ ಸುಧಾರಣೆಗೆ ಹಲವು ಆಯೋಗಗಳು ವರದಿ ನೀಡಿದ್ದರೂ ಕಾರ್ಯರೂಪಕ್ಕೆ ಬಂದಿಲ್ಲ’ ಎಂದು ವಿಷಾದ ವ್ಯಕ್ತಪಡಿಸಿದರು.

ಮೈಸೂರು ಮುಕ್ತ ವೇದಿಕೆ ಸಂಚಾಲಕ ರವಿ ಜೋಶಿ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ನಿರ್ದೇಶಕ ಪ್ರೊ.ಜೆ.ಸೋಮಶೇಖರ್, ಶಾಲಿನಿ ಅರಸ್ ಇದ್ದರು.

ಎಲ್ಲ ಇಲಾಖೆಗಳಲ್ಲಿ ಭ್ರಷ್ಟಾಚಾರ’

‘ಎಲ್ಲ ಇಲಾಖೆಗಳಲ್ಲಿ ಭ್ರಷ್ಟಾಚಾರ ವ್ಯಾಪಕವಾಗಿದ್ದರೂ ಜನರು ಬರೀ ಪೊಲೀಸ್ ಇಲಾಖೆಯನ್ನೇ ದೂರುತ್ತಾರೆ. ಹೆಲ್ಮೆಟ್ ಹಾಕದಿದ್ದರೆ ದಂಡ ವಿಧಿಸಿದರೆ ಭ್ರಷ್ಟಾಚಾರ ಎಂದು ಹೇಳುತ್ತಾರೆ. ಬೇರೆ ಬೇರೆ ಇಲಾಖೆಗಳಲ್ಲಿ ಬಹಿರಂಗವಾಗಿಯೇ ಭ್ರಷ್ಟಾಚಾರ ನಡೆಯುತ್ತಿದೆ’ ಎಂದು ಎಸ್.ಟಿ.ರಮೇಶ್ ಬೇಸರ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT