ಮಂಗಳವಾರ, 8 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪಿರಿಯಾಪಟ್ಟಣ | ಕೂಲಿ ನೀಡದೆ ಗುಜರಿ ಮಾಲೀಕ ಪರಾರಿ; ಅಧಿಕಾರಿಗಳ ಹುಡುಕಾಟ

Published : 20 ಜುಲೈ 2023, 7:20 IST
Last Updated : 20 ಜುಲೈ 2023, 7:20 IST
ಫಾಲೋ ಮಾಡಿ
Comments

ಪಿರಿಯಾಪಟ್ಟಣ: ತಾಲ್ಲೂಕಿನ ಪಂಚವಳ್ಳಿ ಗ್ರಾಮದ ಗುಜರಿ ಅಂಗಡಿ ಮಾಲೀಕ ರಿಯಾಜ್‌ ಪಾಷಾ ಕಾರ್ಮಿಕರಿಗೆ ಕೂಲಿ ಹಣ ನೀಡದೇ ಪರಾರಿಯಾಗಿದ್ದು, ಪೊಲೀಸರು ಮತ್ತು ಕಾರ್ಮಿಕ ಇಲಾಖೆ ಅಧಿಕಾರಿಗಳು ಆತನ ಮಾಹಿತಿ ಕಲೆಹಾಕುತ್ತಿದ್ದಾರೆ.

ಅಸ್ಸಾಂ ರಾಜ್ಯದಿಂದ ಕೆಲಸ ಅರಸಿ ಬಂದಿದ್ದ 19 ಜನ ಕೂಲಿ ಕಾರ್ಮಿಕರ ಗುಂಪನ್ನು ಗುಜರಿ ಅಂಗಡಿಯ ಕೆಲಸಕ್ಕೆ ನೇಮಿಸಿಕೊಂಡಿದ್ದ ರಿಯಾಜ್‌ ಸುಮಾರು ₹ 2 ಲಕ್ಷ ಕೂಲಿ ಹಣ ನೀಡದೇ ನಾಪತ್ತೆಯಾಗಿದ್ದಾನೆ ಎಂದು ಆರೋಪಿಸಿರುವ ಕಾರ್ಮಿಕರು, ನ್ಯಾಯ ಒದಗಿಸುವಂತೆ ತಹಶೀಲ್ದಾರ್‌ಗೆ ಮನವಿ ಮಾಡಿದ್ದಾರೆ.

ಕಾರ್ಮಿಕರಲ್ಲಿ 10 ಪುರುಷರು, 9 ಮಹಿಳೆಯರಲ್ಲದೇ ಮಕ್ಕಳೂ ಇದ್ದಾರೆ. ಪಂಚವಳ್ಳಿ ಸಮೀಪದ ಮುದ್ದನಹಳ್ಳಿ ಗ್ರಾಮದಲ್ಲಿ ಕಾರ್ಮಿಕರಿಗೆ ಎರಡು ಬಾಡಿಗೆ ಮನೆ ಮಾಡಿಕೊಟ್ಟಿದ್ದ ರಿಯಾಜ್‌, ಪುರುಷರಿಗೆ ₹ 500, ಮಹಿಳೆಯರಿಗೆ ₹ 400 ಕೂಲಿ ನೀಡುವುದಾಗಿ ಭರವಸೆ ನೀಡಿದ್ದ. ಆದರೆ 2 ತಿಂಗಳಿನಿಂದ ಸರಿಯಾಗಿ ವೇತನ ನೀಡದೆ ಸತಾಯಿಸಿದ್ದ ಆತ, ಗುಜರಿಯನ್ನು ಮಾರಾಟ ಮಾಡಿ ಹಣ ನೀಡುವುದಾಗಿ ತಿಳಿಸಿ ಜುಲೈ 6ರಂದು ತೆರಳಿದವನು ವಾರವಾದರೂ ಬರಲಿಲ್ಲ.

‘ಜಿಲ್ಲೆಯ ತಿತಿಮತಿ, ಗೋಣಿಕೊಪ್ಪ, ಸಿದ್ದಾಪುರ, ಶ್ರೀಮಂಗಲ ಸೇರಿದಂತೆ ವಿವಿಧೆಡೆಗೆ ತನ್ನ ಗೂಡ್ಸ್ ವಾಹನದಲ್ಲಿ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ರಿಯಾಜ್, ಬಾರ್ ಮತ್ತು ವೈನ್ ಸ್ಟೋರ್‌ಗಳಲ್ಲಿ ಖಾಲಿ ಬಾಟಲಿಗಳನ್ನು ಮತ್ತು ಪ್ಲಾಸ್ಟಿಕ್ ಬಾಟಲ್‌ಗಳನ್ನು ಸಂಗ್ರಹಿಸಿಕೊಂಡು ತರುತ್ತಿದ್ದ. ಅವನ್ನೆಲ್ಲಾ ಪಂಚವಳ್ಳಿ ಬಳಿಯ ಗುಜರಿಗೆ ಅಂಗಡಿಯಲ್ಲಿ ದಾಸ್ತಾನು ಮಾಡಿ ಬೇರೆಡೆಗೆ ಮಾರಾಟ ಮಾಡುತ್ತಿದ್ದ’ ಎಂದು ‌ಕಾರ್ಮಿಕರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಊಟಕ್ಕೂ ಪರದಾಡುವಂತಾಗಿದ್ದ ಕಾರ್ಮಿಕರು, ಜುಲೈ 14ರಂದು ತಾಲ್ಲೂಕು ಕಚೇರಿಯ ಕಾರ್ಮಿಕ ಅಧಿಕಾರಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಜುಲೈ 18ರಂದು ತಹಶೀಲ್ದಾರ್‌ ಭೇಟಿಯಾಗಿ ಸಮಸ್ಯೆ ಹೇಳಿದಾಗ, ಕೂಡಲೇ ತಹಶೀಲ್ದಾರ್‌ ಕುಂಇ ಅಹಮದ್ ಕಾರ್ಮಿಕ ಇಲಾಖೆ ನಿರೀಕ್ಷಕರಿಂದ ಮಾಹಿತಿ ಪಡೆದು, ಕಂದಾಯ ಅಧಿಕಾರಿ ಪಾಂಡುರಂಗ, ಪೊಲೀಸ್ ಇನ್‌ಸ್ಪೆಕ್ಟರ್ ಕೆ.ವಿ.ಶ್ರೀಧರ್ ಅವರನ್ನು ಸ್ಥಳಕ್ಕೆ ಕಳುಹಿಸಿ ಮಾಹಿತಿ ಸಂಗ್ರಹಕ್ಕೆ ಸೂಚಿಸಿದ್ದಾರೆ. ತಾತ್ಕಾಲಿಕವಾಗಿ 2 ಚೀಲ ಅಕ್ಕಿ ಒದಗಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT