ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮೈಸೂರು | ಮಸುಕಾದ ಮಾಹಿತಿ ಫಲಕ: ಚಿಕಿತ್ಸಾ ಕೊಠಡಿ ಗುರುತಿಸಲು ರೋಗಿಗಳ ಪರದಾಟ

Published 20 ಆಗಸ್ಟ್ 2024, 5:39 IST
Last Updated 20 ಆಗಸ್ಟ್ 2024, 5:39 IST
ಅಕ್ಷರ ಗಾತ್ರ

ಮೈಸೂರು: ‘ದೊಡ್ಡಾಸ್ಪತ್ರೆಯಲ್ಲಿ ಔಷ್ದೀ ಪಡೆಯೋದ್ರ ಜೊತ್ಗೇ ಡಾಕ್ಟರ್‌ ರೂಂ ಎಲ್ಲಿಂತ ಹುಡ್ಕೋದು ಕಷ್ಟ ಸರ್‌. ಯಾರತ್ರನಾದ್ರೋ ಕೇಳಿಕೊಂಡು, ಕೇಳಿಕೊಂಡು ಮುಂದೆ ಹೋಗ್ಬೇಕು’ ಎಂದು ಗದ್ದಿಗೆ ನಿವಾಸಿ ಮಹದೇವಮ್ಮ ಅಲವತ್ತುಕೊಂಡರು. ‌

ಕೆ.ಆರ್‌. ಆಸ್ಪತ್ರೆ ಆವರಣದಲ್ಲಿ ಸೋಮವಾರ ಬ್ಲಡ್‌ ಬ್ಯಾಂಕ್ ಕಡೆಗೆ ತೆರಳಲು ಅವರು ಪರದಾಡುತ್ತಿದ್ದರು.

ಆಸ್ಪತ್ರೆಯಲ್ಲಿ ಒಟ್ಟು 32 ವಿಭಾಗಗಳಿದ್ದು, ವಿವಿಧ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ಗ್ರಾಮೀಣ ಭಾಗದವರೂ ಸೇರಿದಂತೆ ನಿತ್ಯ ಸಾವಿರಾರು ರೋಗಿಗಳು ಚಿಕಿತ್ಸೆಗೆಂದು ಬರುತ್ತಾರೆ. ಆದರೆ ಅವರೆಲ್ಲರ ಸಮಸ್ಯೆ ಒಂದೇ: ಮಾಹಿತಿ ಫಲಕಗಳಲ್ಲಿ ಮಾಹಿತಿ ಮಸುಕಾಗಿರುವುದು. ಹೀಗಾಗಿ, ಚಿಕಿತ್ಸೆ ನೀಡುವ ಕೊಠಡಿ ಎಲ್ಲಿದೆ ಎಂದು ಭದ್ರತಾ ಸಿಬ್ಬಂದಿಯನ್ನು, ಅಲ್ಲಲ್ಲಿ ಓಡಾಡುತ್ತಿರುವ ವೈದ್ಯಕೀಯ ವಿದ್ಯಾರ್ಥಿಗಳನ್ನು ಕೇಳಿಕೊಳ್ಳಬೇಕಾದ ಪರಿಸ್ಥಿತಿ ಮುಂದುವರಿದಿದೆ.

‘ಈ ಸಮಸ್ಯೆಯತ್ತ ಆಸ್ಪತ್ರೆಯ ಅಧಿಕಾರಿಗಳು ಯಾರೂ ಗಂಭೀರವಾಗಿ ಗಮನ ಹರಿಸಿಲ್ಲ’ ಎಂಬುದು ಬಹುತೇಕ ರೋಗಿಗಳು ಹಾಗೂ ಕುಟುಂಬದವರ ಆರೋಪ.

ಆಸ್ಪತ್ರೆಯ ಮುಂಭಾಗ ಮಾತ್ರ ವಿಭಾಗ, ಕೊಠಡಿ ಮತ್ತು ಕಟ್ಟಡದ ಮಾಹಿತಿಯುಳ್ಳ ಫಲಕವಿದೆ. ಅದರಲ್ಲೇ ದಿಕ್ಸೂಚಿಯೂ ಇದೆ. ಅಲ್ಲಿಂದ ಹೊರಟರೆ ಬೇರೆ ಕಡೆಗಳಲ್ಲಿ ಸೂಚನಾ ಫಲಕ ಕಡಿಮೆಯಾಗುತ್ತಾ ಹೋಗುತ್ತದೆ. ಇರುವ ಫಲಕಗಳ ಅಕ್ಷರಗಳೂ ಮಾಸಿದ್ದು, ಅಸ್ಪಷ್ಟವಾಗಿವೆ. ಕೆಳವು ಫಲಕಗಳು ಗೋಡೆ ಬದಿಗಿದ್ದು, ಅವನ್ನು ಹುಡುಕುವುದೇ ದೊಡ್ಡ ಸಾಹಸವೆಂಬಂತೆ ಆಗಿದೆ.

ಹಳೆಯ ಜಯದೇವ ಚಿಕಿತ್ಸಾ ಕೇಂದ್ರದ ಕಟ್ಟಡದಲ್ಲಿ ರೋಗಿಗಳನ್ನು ದಾಖಲಿಸಲಾಗುತ್ತದೆ. ಅದು ಮೂರು ಅಂತಸ್ತಿನ ಕಟ್ಟಡ. ಈ ಅಂತಸ್ತುಗಳಲ್ಲಿ ದಾಖಲಾಗಿರುವ ಪರಿಚಯಸ್ಥ ರೋಗಿಗಳನ್ನು ಹುಡುಕುವುದೇದು ಸಂಬಂಧಿಕರಿಗೆ ಕಷ್ಟ ಸಾಧ್ಯ ಎನ್ನುವಂಥ ಪರಿಸ್ಥಿತಿ ಇದೆ. 

ಆಸ್ಪತ್ರೆಯಲ್ಲಿ ಸುಮಾರು ಹತ್ತು ಕಟ್ಟಡಗಳಿವೆ. ಲ್ಯಾಬ್‌ಗಳೂ ವಿವಿಧ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ಶಸ್ತ್ರಚಿಕಿತ್ಸೆ ಹಾಗೂ ಐಸಿಯು ವಾರ್ಡ್‌ಗಳಿಗೆ ಭೇಟಿ ನೀಡುವ ವೈದ್ಯರು ಕಫ, ರಕ್ತ, ಮೂತ್ರ ಪರೀಕ್ಷೆ ನಡೆಸಲು ರೋಗಿಗಳೊಂದಿಗೆ ಬರುವ ಸಹಾಯಕರನ್ನು ಕಳಿಸುತ್ತಾರೆ. ಲ್ಯಾಬ್‌ಗಳೆಲ್ಲವೂ ಒಂದೊಂದು ದಿಕ್ಕಿನಲ್ಲಿ ಇದ್ದು, ಸೂಚನಾ ಫಲಕವೂ ಇಲ್ಲದೆ ಅದನ್ನು ಹುಡುಕಿಕೊಂಡು ಅಲೆದಾಡುವುದು ಅನಿವಾರ್ಯ.

‘ಕೆ.ಆರ್‌.ಆಸ್ಪತ್ರೆಯಿಂದ ಶಸ್ತ್ರಚಿಕಿತ್ಸೆ ನಿಗದಿಯಾಗಿರುವ ಸ್ಟೋನ್‌ ಬಿಲ್ಡಿಂಗ್‌ಗೆ ಹೋಗುವ ದಾರಿಯಲ್ಲಿ ಮಾಹಿತಿ ಫಲಕಗಳಿಲ್ಲ. ಆರೋಗ್ಯ ಸಮಸ್ಯೆಗಳು ಇದ್ದಾಗಲಷ್ಟೇ ಈ ಭಾಗಕ್ಕೆ ಬರುವ ನಮಗೆ ಯಾವ ವಿಭಾಗ ಎಲ್ಲಿ ಇದೆ ಎಂಬುದೂ ತಿಳಿದಿರುವುದಿಲ್ಲ. ಆರೋಗ್ಯ ಸಮಸ್ಯೆಯ ನಡುವೆ ಕೊಠಡಿ ಹುಡುಕುವುದಕ್ಕೆ ತೊಂದರೆಯಾಗುತ್ತದೆ’ ಎಂದು ಸರಗೂರಿನ ನಾಗಮ್ಮ ‘ಪ್ರಜಾವಾಣಿ’ಯೊಂದಿಗೆ ಅಲವತ್ತುಕೊಂಡರು.

ಆಸ್ಪತ್ರೆಯ ಒಳಗೂ ಇದೇ ರೀತಿಯ ಸಮಸ್ಯೆ ಇದೆ. ಕೊಠಡಿಗಳಿಗೆ ಫಲಕ ಇವೆ, ಆದರೆ ಅಲ್ಲಿಗೆ ತೆರಳುವ ಬಗ್ಗೆ ಸೂಚನೆ ಇರುವ ಫಲಕಗಳಿಲ್ಲ. ಫಲಕಗಳು ಯಾವಾಗ ಬರುತ್ತವೆ? ಈ ಪ್ರಶ್ನೆಗೆ ಉತ್ತರಕ್ಕಾಗಿ ಜನ ಕಾಯುತ್ತಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ಪಡೆಯಲು ಕೆ.ಆರ್‌.ಆಸ್ಪತ್ರೆಯ ಡೀನ್‌ ಡಾ.ದಾಕ್ಷಾಯಿಣಿ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿದರೂ ಲಭ್ಯರಾಗಲಿಲ್ಲ.

Highlights - ಲ್ಯಾಬ್‌ ಹುಡುಕುವುದೇ ಸವಾಲು ವಿವಿಧ ಕಟ್ಟಡಕ್ಕೆ ಓಡಾಡಲು ತೊಂದರೆ ಸ್ಪಷ್ಟವಾದ ಸೂಚನಾ ಫಲಕಕ್ಕೆ ಸಾರ್ವಜನಿಕರ ಆಗ್ರಹ

Quote - ವೈದ್ಯರು ಪ್ರತೀ ಬಾರಿ ರೌಂಡ್ಸ್‌ಗೆ ಬಂದಾಗಲೂ ಒಂದೊಂದು ಪರೀಕ್ಷೆಗಾಗಿ ಲ್ಯಾಬ್‌ಗೆ ಹೋಗಿ ರಿಪೋರ್ಟ್‌ ತರಲು ತಿಳಿಸುತ್ತಾರೆ. ಸ್ಪಷ್ಟವಾಗಿ ಕಾಣುವ ಸೂಚನಾ ಫಲಕ ಇದ್ದರೆ ರೋಗಿಗಳ ಸಹಾಯಕರಿಗೂ ಸಹಕಾರಿಯಾಗುತ್ತದೆ ದಿನೇಶ್‌ ಜಯಪುರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT