ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮೈಸೂರು: ಮುಂಗಾರಿನತ್ತ ಚಿತ್ತ, ಸಿದ್ಧತೆಯತ್ತ ರೈತ

Published 20 ಮೇ 2024, 7:12 IST
Last Updated 20 ಮೇ 2024, 7:12 IST
ಅಕ್ಷರ ಗಾತ್ರ

ಮೈಸೂರು: ಆಶಾದಾಯಕ ಮುಂಗಾರಿನ ಆಶಯದಲ್ಲಿರುವ ಜಿಲ್ಲೆಯ ರೈತರು ಹಂಗಾಮಿನ ಕೃಷಿಗೆ ಸಿದ್ಧತೆಯಲ್ಲಿ ತೊಡಗಿದ್ದಾರೆ.

ಎಲ್ಲರ ಚಿತ್ತ ಮಳೆಯತ್ತ ಇದ್ದು, ಬೇಸಾಯಕ್ಕೆ ಅಗತ್ಯವಾದ ತಯಾರಿಯನ್ನು ಕೃಷಿ ಇಲಾಖೆಯಿಂದಲೂ ಮಾಡಿಕೊಳ್ಳಲಾಗಿದೆ.

ಹೋದ ವರ್ಷ ಬರಗಾಲದಿಂದ ಸಂಕಷ್ಟಕ್ಕೆ ಒಳಗಾಗಿರುವ ರೈತರು, ‘ಸರ್ಕಾರವು ಅವಶ್ಯ ಬಿತ್ತನೆ ಬೀಜಗಳು, ರಸಗೊಬ್ಬರ ಮೊದಲಾದ ಪರಿಕರಗಳನ್ನು ಉಚಿತವಾಗಿ ನೀಡಬೇಕು ಮತ್ತು ಸಾಲವನ್ನು ಮನ್ನಾ ಮಾಡಬೇಕು’ ಎಂಬ ಹಕ್ಕೊತ್ತಾಯವನ್ನು ಮಂಡಿಸಿದ್ದಾರೆ.

ಮುಂಗಾರು ಹಂಗಾಮಿನಲ್ಲಿ 2.80 ಲಕ್ಷ ಹೆಕ್ಟೇರ್‌ ಮಳೆ ಆಶ್ರಿತ, ನೀರಾವರಿ 1.10 ಲಕ್ಷ ಹೆಕ್ಟೇರ್ ಸೇರಿ ಒಟ್ಟು 3.90 ಲಕ್ಷ ಹೆಕ್ಟೇರ್‌ ಬಿತ್ತನೆ ಗುರಿ ಹೊಂದಲಾಗಿದೆ. ಈವರೆಗೆ ಶೇ 11ರಷ್ಟು ಬಿತ್ತನೆಯಾಗಿದೆ ಎಂದು ಕೃಷಿ ಇಲಾಖೆ ತಿಳಿಸಿದೆ. ಹೋದ ವರ್ಷವೂ ಇಷ್ಟೇ ಪ್ರಮಾಣದ ಗುರಿ ಹೊಂದಲಾಗಿತ್ತು. ಆದರೆ, ಮಳೆಕೊರತೆ ಹಾಗೂ ಬರಗಾಲದ ಕಾರಣದಿಂದ ಕೃಷಿಯು ಸಮರ್ಪಕವಾಗಿ ನಡೆದಿರಲಿಲ್ಲ. ಆಗ, ಕೃಷಿ ಇಲಾಖೆಯ ಮಾಹಿತಿ ಪ್ರಕಾರ 56,985 ಹೆಕ್ಟೇರ್‌ ಮಾತ್ರ ಬಿತ್ತನೆಯಾಗಿತ್ತು.

ಬೀಜ ವಿತರಣೆ ಬೇಗ ಆರಂಭ: ‘ಜಿಲ್ಲೆಯಲ್ಲಿ ಕೃಷಿ ಇಲಾಖೆಯಿಂದ ಈ ಬಾರಿ ಏ. 15ರಿಂದಲೇ ಬಿತ್ತನೆ ಬೀಜಗಳನ್ನು ವಿತರಿಸಲಾಗುತ್ತಿದೆ. 85ಸಾವಿರ ಮೆಟ್ರಿಕ್‌ ಟನ್‌ ರಸಗೊಬ್ಬರ ಲಭ್ಯವಿದೆ. ಭತ್ತವನ್ನು ಜುಲೈ ಮೇಲೆ ನಾಟಿ ಮಾಡಲಾಗುತ್ತದೆ. ಆದ್ದರಿಂದ ಸದ್ಯಕ್ಕೆ ಭತ್ತವನ್ನು ಬಿಟ್ಟು ಇತರೆಲ್ಲ ಬೀಜಗಳನ್ನೂ ಕೊಡಲಾಗುತ್ತಿದೆ’ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಬಿ.ಎಸ್.ಚಂದ್ರಶೇಖರ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಈ ವರ್ಷ ಸಹಾಯಧನದಲ್ಲಿ ಬಿತ್ತನೆ ಬೀಜ ವಿತರಣೆಯನ್ನು ಬೇಗ ಆರಂಭಿಸಿದ್ದೇವೆ. ಮಾರುಕಟ್ಟೆಯ ದೊರೆಯುವುದು, ನಾವು ಮಾರುವುದು, ಸೊಸೈಟಿಗಳಿಂದ ವಿತರಿಸುವುದು ಸೇರಿದಂತೆ ಎಲ್ಲ ರೀತಿಯ ಬಿತ್ತನೆ ಬೀಜ, ರಸಗೊಬ್ಬರ, ಕೀಟನಾಶಕಗಳ ಮಾದರಿಗಳನ್ನು ಪಡೆದು ವಿಶ್ಲೇಷಣೆಗೆ ಒಳಪಡಿಸಲಾಗಿದೆ. ಕಳಪೆಯಾಗಿರುವ ಬಗ್ಗೆ ವರದಿ ಬಂದಿಲ್ಲ. ಬಿತ್ತನೆ ಬೀಜಗಳನ್ನು ‘ಕೆ–ಕಿಸಾನ್‌’ ಮೂಲಕ ‘ಕ್ಯೂ ಆರ್‌ ಕೋಡ್’ ಸ್ಕ್ಯಾನಿಂಗ್ ಮಾಡಿ ವಿತರಿಸಲಾಗುತ್ತಿದೆ. ಇದರಿಂದ, ಬೀಜವು ಯಾವ ರೈತರಿಗೆ ಹಂಚಿಕೆಯಾಗಿದೆ ಎಂಬುದು ಗೊತ್ತಾಗುತ್ತದೆ’ ಎಂದು ಮಾಹಿತಿ ನೀಡಿದರು.

ಜಯಪುರದಲ್ಲಿ ಚಟುವಟಿಕೆ ಬಿರುಸು: ಜಯಪುರ ಹೋಬಳಿಯಲ್ಲಿ ಶೇ.70ರಷ್ಟು ಕೃಷಿ ಮಳೆ ಆಶ್ರಿತವಾಗಿದೆ. ಪೂರ್ವ ಮುಂಗಾರಿನಲ್ಲಿ ಭರಣಿ ಮಳೆ ಉತ್ತಮವಾಗಿ ಸುರಿದಿದ್ದರಿಂದ ರೈತರು ಜಮೀನು ಹದಗೊಳಿಸಿದ್ದಾರೆ. ಜಯಪುರ ರೈತ ಸಂಪರ್ಕ ಕೇಂದ್ರದಲ್ಲಿ ಲಭ್ಯವಿರುವ 16ಕ್ವಿಂಟಲ್ ಅಲಸಂದೆ, 8ಕ್ವಿಂಟಲ್ ಹೆಸರು ಬಿತ್ತನೆ ಬೀಜಗಳನ್ನು ರೈತರಿಗೆ ವಿತರಿಸಲಾಗಿದೆ.

ಕೃಷಿ ಇಲಾಖೆಯಲ್ಲಿ ಹತ್ತಿ ಬೀಜ, ಅವರೆ, ಉದ್ದು, ಬಿಳಿಜೋಳ ಮತ್ತು ರಸಗೊಬ್ಬರಗಳು ದೊರೆಯದೆ ಇರುವುದರಿಂದ ರೈತರು ಆಗ್ರೊ ಕೇಂದ್ರಗಳನ್ನು ಆಶ್ರಯಿಸಿದ್ದಾರೆ. ಹೆಚ್ಚು ಬೆಲೆ ನೀಡಿ ಕೊಳ್ಳುತ್ತಿದ್ದಾರೆ. ಕೃಷಿ ಚಟುವಟಿಕೆ ಭರದಿಂದ ಸಾಗಿದೆ.

‘ಅಲಸಂದೆ, ಹೆಸರು ಕಾಳು ಬಿತ್ತನೆ ಬೀಜ ರೈತ ಸಂಪರ್ಕ ಕೇಂದ್ರದಲ್ಲಿ ಲಭ್ಯವಿದೆ. ರೈತರು ಆರ್‌ಟಿಸಿ ನೀಡಿ ಸಹಾಯಧನದಲ್ಲಿ ಖರೀದಿಸಬಹುದು’ ಎಂದು ಕೃಷಿ ಅಧಿಕಾರಿ ಕುಮಾರ್ ತಿಳಿಸಿದರು.

ಕೋಟೆಯಲ್ಲೂ ತಯಾರಿ: ಎಚ್‌.ಡಿ. ಕೋಟೆ ತಾಲ್ಲೂಕಿನಲ್ಲಿ ಹತ್ತಿ, ರಾಗಿ, ಜೋಳ ಮುಸುಕಿನ ಜೋಳ ಸೇರಿದಂತೆ ಇತರ ಬೆಳೆಗಳಿಗಾಗಿ ರೈತರು ಜಮೀನು ಉಳುಮೆ ಮಾಡಿ ತಯಾರಿ ಮಾಡಿಕೊಳ್ಳುತ್ತಿದ್ದಾರೆ.

ತಾಲ್ಲೂಕಿನಲ್ಲಿ ಹತ್ತಿಯನ್ನು ಪ್ರಮುಖ ವಾಣಿಜ್ಯ ಬೆಳೆಯಾಗಿ ಬೆಳೆಯಲಾಗುತ್ತಿತ್ತು, ಇತ್ತೀಚಿನ ದಿನಗಳಲ್ಲಿ ಮಳೆಯ ಪ್ರಮಾಣ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಬೇರೆ ಬೆಳಗಳಿಗೆ ರೈತರು ಮುಖ ಮಾಡುತ್ತಿದ್ದಾರೆ. ತರಕಾರಿ, ಮುಸುಕಿನ ಜೋಳ ಹಾಕುವುದು ಕಂಡುಬರುತ್ತಿದೆ. 

ಮಂದಹಾಸ ಮೂಡಿಸಿದ ಮಳೆ: ತಿ. ನರಸೀಪುರ ತಾಲೂಕಿನಲ್ಲಿ ಪೂರ್ವ ಮುಂಗಾರು ಮಳೆಯು ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಪೂರ್ವ ಮುಂಗಾರಿನಲ್ಲಿ ಸಾಮಾನ್ಯವಾಗಿ ಹುರುಳಿ, ಅಲಸಂದೆ, ಉದ್ದು ಬೆಳೆಯಲಾಗುತ್ತಿದೆ. ಮೂಗೂರು ಹೋಬಳಿಯ ಬನ್ನಳ್ಳಿ ಹುಂಡಿ, ಯರಗನಹಳ್ಳಿ, ಧರ್ಮಯ್ಯನಹುಂಡಿ ಹಾಗೂ ಸಮೀಪದ ಗ್ರಾಮಗಳಲ್ಲಿ ಶೇಂಗಾ ಬೆಳೆಯಲಾಗುತ್ತದೆ. ಸೋಸಲೆ ಹೋಬಳಿಯಲ್ಲಿ ಉದ್ದು ಅಲಸಂದೆ, ಹುರುಳಿ ಜತೆಗೆ ಈ ಬಾರಿ ಸೂರ್ಯಕಾಂತಿಯನ್ನು ಹಾಕಲಾಗುತ್ತಿದೆ.

ರೈತರು ಉತ್ಸುಕ: ಕೆ.ಆರ್.ನಗರ ತಾಲ್ಲೂಕಿನಲ್ಲಿ ಪ್ರಮುಖವಾಗಿ ಮಳೆ ಆಶ್ರಿತ ಬೆಳೆಗಳಾದ ತಂಬಾಕು, ಮುಸುಕಿನ ಜೋಳ, ರಾಗಿ, ಅಲಸಂದೆ, ಹುರುಳಿ ಮೊದಲಾದವುಗಳನ್ನು ಪೂರ್ವ ಮುಂಗಾರಿನಲ್ಲಿ ಬೆಳೆಯಲಾಗುತ್ತದೆ.

ಕಳೆದ ಬಾರಿ ಬರಗಾಲದಿಂದ ಕಂಗೆಟ್ಟಿದ್ದ ರೈತರು, ಈ ಬಾರಿ ಪೂರ್ವ ಮುಂಗಾರು ಮಳೆ ಉತ್ತಮವಾಗಿ ಬರುತ್ತಿರುವುದರಿಂದ ಕೃಷಿಗೆ ಉತ್ಸುಕರಾಗಿದ್ದಾರೆ.

‘4 ಎಕರೆ ನೀರಾವರಿ, 4 ಎಕರೆ ಮಳೆ ಆಶ್ರಿತ ಜಮೀನಿದೆ. ನೀರಾವರಿ ಜಮೀನಿನಲ್ಲಿ ತರಕಾರಿ ಬೆಳೆಯುತ್ತೇವೆ. ಉಳಿದದ್ದರಲ್ಲಿ ಹುರುಳಿ ಹಾಕಲು ಸಿದ್ಧತೆ ಮಾಡಿಕೊಳ್ಳುತ್ತಿದ್ದೇನೆ. ಬೀಜ ಖರೀದಿಸಿದ್ದೇನೆ. ರೈತರಿಗೆ ಸಕಾಲದಲ್ಲಿ ಕಡಿಮೆ ದರದಲ್ಲಿ ಬಿತ್ತನೆ ಬೀಜ ಸೇರಿದಂತೆ ಎಲ್ಲ ಪರಿಕರ ಸಿಗುವಂತೆ ಮಾಡಿಕೊಟ್ಟರೆ ಸಾಕು’ ಎಂದು ಕೆ.ಆರ್.ನಗರ ತಾಲ್ಲೂಕು ಹೊಸೂರು ಕಲ್ಲಹಳ್ಳಿಯ ರೈತ ನಟರಾಜ್ ಕೋರಿದರು.

ಪೂರಕ ಮಾಹಿತಿ: ಪಂಡಿತ್ ನಾಟಿಕರ್, ಎಚ್‌.ಎಸ್. ಸಚ್ಚಿತ್, ಸತೀಶ್ ಆರಾಧ್ಯ, ಎಂ.ಮಹದೇವ್, ಗಣೇಶ್, ಬಿಳಿಗಿರಿ.

ಜಯಪುರದ ರೈತ ಸಂಪರ್ಕ ಕೇಂದ್ರದಲ್ಲಿ ಅಲಸಂದೆ ಹೆಸರು ಬಿತ್ತನೆಬೀಜ ದಾಸ್ತಾನು ಮಾಡಲಾಗಿದೆ
ಜಯಪುರದ ರೈತ ಸಂಪರ್ಕ ಕೇಂದ್ರದಲ್ಲಿ ಅಲಸಂದೆ ಹೆಸರು ಬಿತ್ತನೆಬೀಜ ದಾಸ್ತಾನು ಮಾಡಲಾಗಿದೆ
ಹುಣಸೂರು ತಾಲ್ಲೂಕಿನಲ್ಲಿ ತಂಬಾಕು ನಾಟಿ ಚಟುವಟಿಕೆಯಲ್ಲಿ ತೊಡಗಿರುವ ಕೃಷಿಕರು
ಹುಣಸೂರು ತಾಲ್ಲೂಕಿನಲ್ಲಿ ತಂಬಾಕು ನಾಟಿ ಚಟುವಟಿಕೆಯಲ್ಲಿ ತೊಡಗಿರುವ ಕೃಷಿಕರು
ತಂಬಾಕು ಶುಂಠಿ ‘ಸಿಂಹಪಾಲು’!
ಹುಣಸೂರು: ತಾಲ್ಲೂಕಿನಲ್ಲಿ 40ಸಾವಿರ ಹೆಕ್ಟೇರ್ ಭೂಮಿ ಕೃಷಿ ಬೇಸಾಯಕ್ಕೆ ಯೋಗ್ಯವಿದ್ದು ಈ ಪೈಕಿ ಸಿಂಹಪಾಲನ್ನು ವಾಣಿಜ್ಯ ಬೆಳೆ ತಂಬಾಕು ಮತ್ತು ಶುಂಠಿ ಪಡೆದುಕೊಂಡಿವೆ. ಒಂದು ವಾರದಿಂದ ಬಿದ್ದ ಮಳೆಗೆ ತಂಬಾಕು ಬೇಸಾಯ ಚುರುಕಾಗಿದೆ. ಪರ್ಯಾಯ ವಾಣಿಜ್ಯ ಬೆಳೆಯಾಗಿ ಶುಂಠಿ ಬೇಸಾಯ ಅವಲಂಬಿಸಿದ ರೈತರು ಏಪ್ರಿಲ್ ಅಂತ್ಯದಿಂದಲೇ ನಾಟಿ ಕಾರ್ಯ  ಆರಂಭಿಸಿದ್ದಾರೆ. ಈವರೆಗೆ 20ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ನಾಟಿ ಕಾರ್ಯ ಮುಗಿದಿದೆ. ವಾಡಿಕೆಯಂತೆ ಮೇ 16ವರಗೆ 65 ಮಿ.ಮೀ. ಮಳೆ ಆಗಬೇಕಿತ್ತು. ವಾಸ್ತವವಾಗಿ 110 ಮಿ.ಮೀ. ಬಿದ್ದಿದೆ. ಹೋದ ವರ್ಷ ಈ ಅವಧಿಯಲ್ಲಿ 149 ಮಿ.ಮೀ. ಸುರಿದಿತ್ತು. ಉತ್ತಮ ಮಳೆಯ ಕಾರಣ ರಾಗಿ ಬೇಸಾಯಕ್ಕೂ ರೈತರು ಸಜ್ಜಗುತ್ತಿದ್ದು ಈ ಸಾಲಿನಲ್ಲಿ 18ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಇದೆ. ಅಲಸಂದೆ ಹುರುಳಿ ಕಡಲೆ ಉದ್ದು ಹೆಸರು ಅವರೆಯನ್ನು 50ಸಾವಿರ ಎಕರೆ ಪ್ರದೇಶದಲ್ಲಿ ಹಾಕುವ ನಿರೀಕ್ಷೆ ಇದ್ದು ಈಗಾಗಲೇ 4ಸಾವಿರ ಎಕರೆಯಲ್ಲಿ ಬಿತ್ತನೆ ನಡೆದಿದೆ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಅನಿಲ್ ಕುಮಾರ್ ಕೆ.ಎಸ್. ತಿಳಿಸಿದರು. ‘ಕಳೆದ ಸಾಲಿನಲ್ಲಿ ಬೇಸಾಯ ಕೈ ಕಚ್ಚಿತ್ತು. ಈ ಸಾಲಿನಲ್ಲಿ ಪೂರಕವಾಗಿದ್ದು ಖುಷಿಯಿಂದ ಆರಂಭಿಸಿದ್ದೇವೆ. ಇದೇ ವಾತಾವರಣ ಮುಂದುವರಿದರೆ ವಾಣಿಜ್ಯ ಬೆಳೆ ಸೇರಿದಂತೆ ತರಕಾರಿ ಕೈ ಹಿಡಿಯುವ ವಿಶ್ವಾಸವಿದೆ’ ಎಂದು ಅಗ್ರಹಾರ ಗ್ರಾಮದ ರೈತ ರಾಮೇಗೌಡ ಪ್ರತಿಕ್ರಿಯಿಸಿದರು.
ಪಿರಿಯಾಪಟ್ಟಣದಲ್ಲಿ ನೆರವಾದ ‘ದುಪ್ಪಟ್ಟು ಮಳೆ’
ಪಿರಿಯಾಪಟ್ಟಣ: ಮೇ ತಿಂಗಳಿನಲ್ಲಿ ತಾಲ್ಲೂಕಿನಲ್ಲಿ ವಾಡಿಕೆಗಿಂತ ದುಪ್ಪಟ್ಟು ಮಳೆಯಾಗಿದ್ದು ಕೃಷಿ ಚಟುವಟಿಕೆ ಚುರುಕುಗೊಂಡಿದೆ. ತಂಬಾಕು ಮತ್ತು ಮುಸುಕಿನ ಜೋಳ ಹಲಸಂದೆ ಬಿತ್ತನೆ ಕಾರ್ಯ ನಡೆಯುತ್ತಿದೆ. ತಂಬಾಕು 28ಸಾವಿರ ಹೆಕ್ಟೇರ್‌ ಬಿತ್ತನೆ ಗುರಿ ಇದೆ. ಈಗಾಗಲೇ ಶೇ. 70ರಷ್ಟು ನಾಟಿ ಕಾರ್ಯ ಮುಗಿದಿದೆ. ಹತ್ತು ಸಾವಿರ ಹೆಕ್ಟೇರ್‌ ಮುಸುಕಿನ ಜೋಳ ಬಿತ್ತನೆ ಗುರಿ ಇದೆ. ತಾಲ್ಲೂಕಿನ 4 ಹೋಬಳಿ ಕೇಂದ್ರಗಳಲ್ಲಿ ಬಿತ್ತನೆ ಬೀಜ ದಾಸ್ತಾನಿದೆ. ಹಸಿರೆಲೆ ಗೊಬ್ಬರ ಸಾಕಷ್ಟು ಲಭ್ಯವಿದೆ. ‘ತಂಬಾಕು ಮಂಡಳಿಯಿಂದ ರಸಗೊಬ್ಬರ ಪೂರೈಕೆ ಆಗುತ್ತಿದ್ದು ಖಾಸಗಿ ಅಂಗಡಿಗಳಲ್ಲೂ ಲಭ್ಯವಿದೆ. ಹೀಗಾಗಿ ಕೊರತೆ ಆಗದು’ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ವೈ.ಪ್ರಸಾದ್ ತಿಳಿಸಿದರು. ‘ತಡವಾಗಿಯಾದರೂ ಉತ್ತಮ ಮಳೆ ಆಗುತ್ತಿರುವುದು ವರದಾನವಾಗಿದೆ. ಬಿತ್ತನೆ ಮಾಡುತ್ತಿದ್ದೇವೆ. ತಂಬಾಕು ಮತ್ತು ಮುಸುಕಿನಜೋಳವನ್ನು ಉತ್ತಮ ಬೆಲೆಗೆ ಖರೀದಿಸಬೇಕು’ ಎನ್ನುವುದು ರೈತ ಸಣ್ಣತಮ್ಮೇಗೌಡ ಅವರ ಒತ್ತಾಯ.

ಕೃಷಿ ಇಲಾಖೆಯಿಂದ ಅಲಸಂದೆ ಹೆಸರು ಕಾಳುಗಳ ಜತೆಗೆ ಹತ್ತಿ ಅವರೆ ಉದ್ದು ಎಳ್ಳು ಮುಸುಕಿನ ಜೋಳ ಬಿಳಿಜೋಳ ಬಿತ್ತನೆ ಬೀಜಗಳು ಹಾಗೂ ರಸಗೊಬ್ಬರವನ್ನೂ ಸಹಾಯಧನದಡಿ ನೀಡಬೇಕು

-ನರ್ಸರಿ ಗುರು ರೈತ. ದಾರಿಪುರ ಮೈಸೂರು ತಾಲ್ಲೂಕು

ಬರಗಾಲದಿಂದ ಸಂಕಷ್ಟಕ್ಕೆ ಸಿಲುಕಿದ ರೈತರಿಗೆ ನ್ಯಾಯಯುತ ಪರಿಹಾರ ಒದಗಿಸಬೇಕು. ಬಿತ್ತನೆ ಬೀಜ ರಸ ಗೊಬ್ಬರ ಕ್ರಿಮಿನಾಶಕ ಕೀಟನಾಶಕವನ್ನು ಉಚಿತವಾಗಿ ನೀಡಬೇಕು. ಸಾಲ ಮನ್ನಾ ಮಾಡಬೇಕು

- ಅತ್ತಹಳ್ಳಿ ದೇವರಾಜ್ ರಾಜ್ಯ ಸಂಘಟನಾ ಕಾರ್ಯದರ್ಶಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟ

ರಸಗೊಬ್ಬರಕ್ಕೆ ತೊಂದರೆ ಆಗದಂತೆ ಈಗಾಗಲೇ ದಾಸ್ತಾನು ಮಾಡಲಾಗಿದೆ. ಖಾಸಗಿ ಗೊಬ್ಬರ ಅಂಗಡಿಗಳಲ್ಲಿ ಲಭ್ಯವಿದೆ. ಕೊರತೆ ಆಗದಂತೆ ನೋಡಿಕೊಳ್ಳಲಾಗುವುದು

- ಅನಿಲ್ ಕುಮಾರ್ ಕೆ.ಎಸ್. ಕೃಷಿ ಸಹಾಯಕ ನಿರ್ದೇಶಕ ಹುಣಸೂರು

ಮುಂಗಾರು ಕೃಷಿಗೆ ಭೂಮಿ ಹದಗೊಳಿಸಿದ್ದು ವಾಣಿಜ್ಯ ತರಕಾರಿ ಮತ್ತು ದ್ವಿದಳ ಧಾನ್ಯ ಬೆಳೆಯುತ್ತಿದ್ದು ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ಖರೀದಿಸಿದ್ದೇನೆ.

-ಕೃಷ್ಣ ಪ್ರಗತಿಪರ ರೈತ ಕುಪ್ಪೆಕೊಳಗಟ್ಟ ಹುಣಸೂರು ತಾಲ್ಲೂಕು

ಮುಂಗಾರು ಪೂರ್ವ ಮಳೆ ತಡವಾಗಿ ಆಗಿರುವುದರಿಂದ ರೈತರು ಜಮೀನುಗಳನ್ನು ಹದ ಮಾಡುವುದು ಕೂಡ ತಡವಾಗಿದೆ. ಕೃಷಿಗೆ ಸಿದ್ಧವಾಗುತ್ತಿದ್ದೇವೆ

-ಕೆಂಡಗಣ್ಣಸ್ವಾಮಿ ರೈತ ಮುಖಂಡ ಆಲತ್ತಾಳಹುಂಡಿ

ರಸಗೊಬ್ಬರ ಕೃಷಿ ಪರಿಕರಗಳ ವಿತರಣಾ ಕೇಂದ್ರಗಳಿಗೆ ಭೇಟಿ ನೀಡಿ ದಾಸ್ತಾನು ಪರಿಶೀಲಿಸಲಾಗುತ್ತಿದೆ. ಅಗತ್ಯ ಪರಿಕರಗಳೆಲ್ಲವೂ ಲಭ್ಯ ಇವೆ.

- ಕೆ.ಎಸ್. ಸುಹಾಸಿನಿ ಸಹಾಯಕ ಕೃಷಿ ನಿರ್ದೇಶಕಿ ತಿ.ನರಸೀಪುರ ತಾಲ್ಲೂಕು

ಕೆ.ಆರ್.ನಗರ ತಾಲ್ಲೂಕಿನಲ್ಲಿ 81.01 ಮಿ.ಮೀ. ಮಳೆಯಾಗಿದೆ. ತಂಬಾಕು ನಾಟಿ ಆಗಿದೆ. ಮುಸುಕಿನ ಜೋಳ ಅಲಸಂದೆ ಬೆಳೆಗೆ ರೈತರು ಭೂಮಿ ಹದಗೊಳಿಸುತ್ತಿದ್ದಾರೆ.

- ಮಲ್ಲಿಕಾರ್ಜುನ ಸಹಾಯಕ ನಿರ್ದೇಶಕ ಕೃಷಿ ಇಲಾಖೆ ಕೆ.ಆರ್.ನಗರ

ಕಾಲುವೆಯಲ್ಲಿನ ಹೂಳು ಎತ್ತಿಸಿದರೆ ಕೊನೆಯ ಹಂತದವರೆಗೂ ನೀರು ದೊರೆಯುತ್ತದೆ. ಆಗ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಲು ರೈತರಿಗೆ ಅನುಕೂಲ

-ಆಗುತ್ತದೆನಟರಾಜ್ ರೈತ. ಹೊಸೂರು ಕಲ್ಲಹಳ್ಳಿ. ಕೆ.ಆರ್.ನಗರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT