ಗುರುವಾರ, 10 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಅತ್ತ ತಮ್ಮ ವಿರುದ್ಧ ಎಫ್‌ಐಆರ್‌: ತವರಲ್ಲಿ 8 ತಾಸು ಸಿದ್ದರಾಮಯ್ಯ ಸಭೆ

Published : 27 ಸೆಪ್ಟೆಂಬರ್ 2024, 15:45 IST
Last Updated : 27 ಸೆಪ್ಟೆಂಬರ್ 2024, 15:45 IST
ಫಾಲೋ ಮಾಡಿ
Comments

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸತತ ಎಂಟು ತಾಸುಗಳವರೆಗೆ ‘ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮ’ಗಳ (ಕೆಡಿಪಿ) ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ ನಡೆಸಿ, ದಸರಾ ತಯಾರಿಯ ಗುಂಗಿನಲ್ಲಿದ್ದ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದರು. ‘ಅಭಿವೃದ್ಧಿ ಯೋಜನೆಗಳ ಅನುಷ್ಠಾನದಲ್ಲಿ ನಿರ್ಲಕ್ಷ್ಯ ವಹಿಸಿದರೆ ಮುಲಾಜಿಲ್ಲದೆ ಕಠಿಣ ಕ್ರಮ ಜರುಗಿಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ಬೆಳಿಗ್ಗೆ 11ಕ್ಕೆ ಸಭೆ ನಿಗದಿಯಾಗಿತ್ತು. ಮಧ್ಯಾಹ್ನ 12.50ಕ್ಕೆ ಬಂದು ರಾತ್ರಿವರೆಗೂ ಸಭೆ ನಡೆಸಿದರು. ಪ್ರತಿ ಇಲಾಖಾವಾರು ಪ್ರಗತಿ ಪರಿಶೀಲಿಸಿ, ಕ್ರಿಯಾಯೋಜನೆ ರೂಪಿಸಲು ವಿಳಂಬ ಮಾಡಿರುವ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ‘ಪಂಚ ಗ್ಯಾರಂಟಿ’ ಯೋಜನೆಗಳನ್ನು ಆದ್ಯತೆ ಮೇರೆಗೆ ಪರಿಗಣಿಸಿ ಅರ್ಹ ಫಲಾನುಭವಿಗಳಿಗೆ ತಲುಪಿಸಲು ಆದ್ಯತೆ ಕೊಡಬೇಕು’ ಎಂದು ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.

‘ಬಜೆಟ್‌ನಲ್ಲಿ ಘೋಷಿಸಿದ ಯೋಜನೆಗಳಿಗೆ ಹಣವನ್ನೂ ಒದಗಿಸಲಾಗಿದ್ದು, ಕ್ರಿಯಾಯೋಜನೆ ರೂಪಿಸಿ ಈ ಆರ್ಥಿಕ ವರ್ಷದಲ್ಲೇ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಬೇಕು’ ಎಂದು ತಾಕೀತು ಮಾಡಿದರು.

ಇತ್ತ ಅವರು ಸಭೆ ನಡೆಸುತ್ತಿದ್ದ ವೇಳೆಯಲ್ಲೇ, ಅವರ ವಿರುದ್ಧ ಲೋಕಾಯುಕ್ತ ಎಸ್ಪಿ ಕಚೇರಿಯಲ್ಲಿ ಎಫ್‌ಐಆರ್‌ ದಾಖಲಾಯಿತು. ಅದರ ನಡುವೆಯೂ ರಾತ್ರಿವರೆಗೂ ಸಭೆ ಮುಂದುವರಿಸಿದರು.

ಸಚಿವರಾದ ಡಾ.ಎಚ್‌.ಸಿ. ಮಹದೇವಪ್ ಹಾಗೂ ಕೆ.ವೆಂಕಟೇಶ್‌, ಶಾಸಕರು ಹಾಗೂ ವಿಧಾನಪರಿಷತ್‌ ಸದಸ್ಯರು ಪಾಲ್ಗೊಂಡಿದ್ದರು.

ನಗರದಲ್ಲೇ ವಾಸ್ತವ್ಯ ಹೂಡಿರುವ ಮುಖ್ಯಮಂತ್ರಿ, ಶನಿವಾರ ಹಾಗೂ ಭಾನುವಾರವೂ ಇಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ.

ಅಂಗನವಾಡಿಗಳಿಗೆ ಉಚಿತ ವಿದ್ಯುತ್‌: ‍ಪರಿಶೀಲನೆ

‘ಅಂಗನವಾಡಿ ಕೇಂದ್ರಗಳಿಗೆ ಉಚಿತವಾಗಿ ವಿದ್ಯುತ್‌ ಪೂರೈಸುವ ಬಗ್ಗೆ ‍ಪರಿಶೀಲಿಸಲಾಗುವುದು’ ಎಂದು ಸಿದ್ದರಾಮಯ್ಯ ಹೇಳಿದರು.

ವಿಷಯ ಪ್ರಸ್ತಾಪಿಸಿದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷೆ ಪುಷ್ಪಾ ಅಮರನಾಥ್, ‘ಸರ್ಕಾರಿ ಶಾಲೆಗಳಿಂದ ಸರ್ಕಾರದಿಂದ ಉಚಿತವಾಗಿ ವಿದ್ಯುತ್ ಕೊಡಲಾಗುತ್ತಿದೆ. ಅದನ್ನು ಅಂಗನವಾಡಿ ಕೇಂದ್ರಗಳಿಗೂ ವಿಸ್ತರಿಸಬೇಕು’ ಎಂದು ಕೋರಿದರು.

ಪ್ರತಿಕ್ರಿಯಿಸಿದ ಸಿಎಂ, ‘ರಾಜ್ಯದಲ್ಲಿ ಎಷ್ಟು ಅಂಗನವಾಡಿ ಕೇಂದ್ರಗಳಿವೆ, ವಿದ್ಯುತ್‌ ಬಿಲ್‌ ಪಾವತಿಗೆ ಎಷ್ಟು ತಗಲುತ್ತಿದೆ ಎಂಬ ವರದಿ ಸಲ್ಲಿಸಬೇಕು. ನಂತರ ಪರಿಶೀಲಿಸಲಾಗುವುದು’ ಎಂದು ಅಧಿಕಾರಿಗಳಿಗೆ ಸೂಚಿಸಿದರು.

‘ಅಂಗನವಾಡಿಗಳಿಗೆ ಗುಣಮಟ್ಟದ ಆಹಾರ ಪದಾರ್ಥ ತಲುಪುತ್ತಿದೆಯೇ, ಗುಣಮಟ್ಟವನ್ನು ನಿಯಮಿತವಾಗಿ ಪರೀಕ್ಷಿಸಲಾಗುತ್ತಿದೆಯೇ ಎಂಬುದನ್ನು ಖಾತ್ರಿಪಡಿಸಿಕೊಳ್ಳಬೇಕು’ ಎಂದು ತಾಕೀತು ಮಾಡಿದರು.

‘ಅಕ್ಕಿ ಕೇಳ್ತಿದಾರೋ, ಹಣವನ್ನೋ?’

‘ಅನ್ನಭಾಗ್ಯ ಯೋಜನೆಯಡಿ ನಾವು ಅಕ್ಕಿ ಜೊತೆ ಹಣವನ್ನೂ ಕೊಡುತ್ತಿದ್ದೇವೆ. ಜನರು ಅಕ್ಕಿ ಬೇಕು ಎನ್ನುತ್ತಿದ್ದಾರೆಯೇ, ಹಣವೇ ಇರಲಿ ಎನ್ನುತ್ತಿದ್ದಾರೆಯೇ?’ ಎಂದು ಸಿದ್ದರಾಮಯ್ಯ ಕೇಳಿದರು.

‘ಖಾತೆಗೆ ಹಣ ಬರುವುದನ್ನು ಮುಂದುವರಿಸುವಂತೆಯೇ ಹೆಚ್ಚಿನವರು ಬಯಸುತ್ತಿದ್ದಾರೆ. ಹೀಗಾಗಿ ಡಿಬಿಟಿ ಮುಂದುವರಿಸುವುದು ಉತ್ತಮ. ಇದರಿಂದ ಅಕ್ಕಿಯನ್ನು ಕಾಳಸಂತೆಯಲ್ಲಿ ಮಾರಿಕೊಳ್ಳುವುದಕ್ಕೂ ಕಡಿವಾಣ ಬೀಳುತ್ತದೆ. ಹಣ ಸಿಕ್ಕರೆ ಅದರಿಂದ ಇತರ ಅಗತ್ಯ ಪದಾರ್ಥ, ಔಷಧಿ ಖರೀದಿಸಬಹುದು ಎನ್ನುವ ಅಭಿಪ್ರಾಯ ಹೆಚ್ಚಾಗಿದೆ’ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

‘ಗ್ರೇಸ್‌ ಮಾರ್ಕ್ಸ್‌ ಕೊಡದೇ ಫಲಿತಾಂಶ ಸುಧಾರಿಸಿ’

‘ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಗ್ರೇಸ್ ಮಾರ್ಕ್ಸ್ ನೀಡದೆ ಉತ್ತಮ ಫಲಿತಾಂಶ ತರುವ ದಿಕ್ಕಿನಲ್ಲಿ ಎಲ್ಲಾ ಬಿಇಒಗಳ ಜೊತೆ ಸಭೆ ನಡೆಸಬೇಕು. ಕಲಿಕೆಯಲ್ಲಿ ಹಿಂದುಳಿದಿರುವ ಮಕ್ಕಳ ಸಾಮರ್ಥ್ಯವನ್ನು ವಿಶೇಷ ಕೋಚಿಂಗ್ ಕೊಟ್ಟು ಹೆಚ್ಚಿಸಬೇಕು. ಸರಣಿ ಪರೀಕ್ಷೆಗಳು ಸೇರಿದಂತೆ ಹಲವು ರೀತಿಯ ಶೈಕ್ಷಣಿಕ ಕಾರ್ಯಕ್ರಮಗಳನ್ನು ನಡೆಸಿ, ಫಲಿತಾಂಶದ ಪ್ರಮಾಣ ಹೆಚ್ಚಿಸಲು ಕ್ರಮ ಕೈಗೊಳ್ಳಬೇಕು’ ಎಂದು ಮುಖ್ಯಮಂತ್ರಿ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT