ಭಾನುವಾರ, 26 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು: ಹೈನುಗಾರರಿಗೆ ನೆರವಾದ ‘ಕಿಟ್’

ಜಿಲ್ಲೆಯಲ್ಲಿ 34 ವಾರಗಳಿಗೆ ಆಗುವಷ್ಟು ಮೇವು ಲಭ್ಯ: ನಾಗರಾಜ್‌
Published 7 ಏಪ್ರಿಲ್ 2024, 0:28 IST
Last Updated 7 ಏಪ್ರಿಲ್ 2024, 0:28 IST
ಅಕ್ಷರ ಗಾತ್ರ

ಮೈಸೂರು: ತೀವ್ರ ಬರಗಾಲದ ಹಿನ್ನೆಲೆಯಲ್ಲಿ ಪಶುಸಂಗೋಪನಾ ಇಲಾಖೆಯಿಂದ ಉಚಿತವಾಗಿ ವಿತರಿಸಲಾದ ‘ಮಿನಿ ಮೇವಿನ ಬಿತ್ತನೆ ಬೀಜ’ದ ಕಿಟ್‌ಗಳಿಂದ ಜಿಲ್ಲೆಯಲ್ಲಿ ರೈತರು ಮತ್ತು ಹೈನುಗಾರರಿಗೆ ಅನುಕೂಲವಾಗಿದೆ. ಪರಿಣಾಮ, ಮೇವಿನ ಕೊರತೆಯು ಇನ್ನೂ ದೊಡ್ಡಮಟ್ಟದಲ್ಲಿ ತಲೆದೋರಿಲ್ಲ.

ಜಿಲ್ಲೆಯಲ್ಲಿ ಸರಾಸರಿ 34 ವಾರಗಳಿಗೆ ಆಗುವಷ್ಟು ಮೇವು ಲಭ್ಯವಿದೆ. ಮುಂಗಾರು ಪೂರ್ವ ಮಳೆಯು ಕೈಹಿಡಿಯಲಿದೆ ಎಂಬ ವಿಶ್ವಾಸದಲ್ಲಿ ಪಶುಸಂಗೋಪನಾ ಇಲಾಖೆ ಇದೆ.

ಪರಿಸ್ಥಿತಿ ಬಿಗಡಾಯಿಸಿದಲ್ಲಿ ಗೋಶಾಲೆಗಳನ್ನು ತೆರೆಯಲು ಯೋಜಿಸಲಾಗಿದೆ. ತಗಡೂರು, ದಾಸನೂರು, ಕವಲಂದೆ, ಜಯಪುರ ಹೋಹಳಿ, ಬೀರಿಹುಂಡಿ ಹಾಗೂ ಇಲವಾಲದ ಬಳಿಯ ಅಲೋಕದಲ್ಲಿ ಸೇರಿ ಒಟ್ಟು 6 ಗೋಶಾಲೆಗಳನ್ನು ತೆರೆಯುವ ಪ್ರಸ್ತಾವ ಸಿದ್ಧಪಡಿಸಲಾಗಿದೆ. ಪ್ರತಿ ತಾಲ್ಲೂಕಿಗೆ ಒಂದರಂತೆ ಹಾಗೂ ಪಶುಸಂಗೋ‍ಪನಾ ಸಚಿವ ಕೆ.ವೆಂಕಟೇಶ್ ತವರು ಪಿರಿಯಾಪಟ್ಟಣ ತಾಲ್ಲೂಕಿನಲ್ಲಿ ಮೂರು ಸೇರಿ ಒಟ್ಟು 12 ಮೇವು ಬ್ಯಾಂಕ್‌ ತೆರೆಯಲು ಮತ್ತು ಇದಕ್ಕಾಗಿ 2,820 ಮೆಟ್ರಿಕ್‌ ಟನ್‌ ಮೇವು ಬೇಕಾಗುತ್ತದೆ ಎಂದು ಇಲಾಖೆಯಿಂದ ಪ್ರಸ್ತಾವ ಸಲ್ಲಿಸಲಾಗಿದೆ’ ಎಂದು ಇಲಾಖೆಯ ಮೂಲಗಳು ತಿಳಿಸಿವೆ.

ಆತಂಕಪಡುವ ಸ್ಥಿತಿ ಏನಿಲ್ಲ: ‘ಜಿಲ್ಲೆಯಲ್ಲಿ ಪ್ರಸ್ತುತ 7,46,717 ಟನ್‌ ಮೇವು ಲಭ್ಯವಿದೆ. ಜಿಲ್ಲೆಯಲ್ಲಿ 5,14,280 ಎಮ್ಮೆ, ಎತ್ತು, ದನಗಳಿವೆ. 4,10,669 ಕುರಿ–ಮೇಕೆಗಳಿವೆ. ಇವುಗಳಿಗೆ ವಾರಕ್ಕೆ ಸರಾಸರಿ 22,044 ಟನ್‌ ಮೇವು ಬೇಕಾಗುತ್ತದೆ. ವಾರಕ್ಕೆ 82,980 ಟನ್ ಮೇವು ಉತ್ಪಾದನೆ ಆಗುತ್ತಿದೆ. ರೈತರು ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ’ ಎಂದು ಇಲಾಖೆಯ ಉಪ ನಿರ್ದೇಶಕ ಡಾ.ನಾಗರಾಜ್‌ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ಮೊದಲ ಹಂತದಲ್ಲಿ ಜಿಲ್ಲೆಗೆ 73,444 ಮೇವಿನ ಬೀಜದ ಮಿನಿ ಕಿಟ್‌ಗಳು (ತಲಾ 5 ಕೆ.ಜಿ.ಯದ್ದು) ಪೂರೈಕೆಯಾಗಿದ್ದವು. ಅದರಲ್ಲಿ 72,613 ಕಿಟ್‌ಗಳನ್ನು ವಿತರಣೆ ಮಾಡಲಾಗಿತ್ತು. ಕೊಳವೆಬಾವಿ ಹಾಗೂ ನೀರಾವರಿ ಸೌಲಭ್ಯ ಹೊಂದಿರುವವರಿಗೆ ಮಾತ್ರ ಅವುಗಳನ್ನು ನೀಡಲಾಗಿದೆ. ಒಟ್ಟು 55,093 ಮಂದಿ ಇದರಿಂದ ಪ್ರಯೋಜನ ಪಡೆದಿದ್ದಾರೆ. ಮಳೆಯಾಶ್ರಿತ ಜಮೀನು ಇರುವರಿಗೆ ಕೊಟ್ಟರೆ ಪ್ರಯೋಜನ ಆಗುವುದಿಲ್ಲ ಎಂಬ ಕಾರಣಕ್ಕೆ ಸರ್ಕಾರದ ನಿರ್ದೇಶನದಂತೆ ನೀರಾವರಿ ಸೌಲಭ್ಯ ಇರುವವರಿಗೆ ಮಾತ್ರವೇ ನೀಡಲಾಗಿದೆ. ಅವರೆಲ್ಲರೂ ಬೆಳೆಸಿದ್ದರಿಂದ ಮೇವಿನ ಸಮಸ್ಯೆ ಎದುರಾಗಿಲ್ಲ’ ಎಂದು ತಿಳಿಸಿದರು.

ಪ್ರಯೋಜನವಾಗಿದೆ: ‘ಬರಗಾಲದ ನಿರ್ವಹಣೆಯ ಮುಂಜಾಗ್ರತಾ ಕ್ರಮವಾಗಿ, ಅಕ್ಟೋಬರ್‌, ನವೆಂಬರ್‌ನಲ್ಲೆ ಕಿಟ್‌ಗಳನ್ನು ವಿತರಿಸಿದ್ದೆವು. ಎಲ್ಲರೂ ಮೇವು ಬೆಳೆದಿದ್ದಾರೆ. ಅಲ್ಲಲ್ಲಿ 2ನೇ ಬೆಳೆಯೂ ಬರುತ್ತಿದೆ. ಇದರಿಂದ ಸಾಕಷ್ಟು ಪ್ರಯೋಜನವಾಗಿದೆ ಎಂದು ರೈತರು ತಿಳಿಸುತ್ತಿದ್ದಾರೆ’ ಎನ್ನುತ್ತಾರೆ ಅವರು.

‘ಮೇವು ಲಭ್ಯತೆಗೆ ಕೆಎಂಎಫ್‌ನಿಂದಲೂ ಕೊಡುಗೆ ನೀಡಲಾಗುತ್ತಿದೆ. ನುಗ್ಗೆ ಹಾಗೂ ಅಗಸೆ ಸಸಿಗಳನ್ನು ವಿತರಿಸಲಾಗುತ್ತಿದೆ. ಜಿಲ್ಲೆಯಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಸದಸ್ಯರಾಗಿರುವವರಿಗೆ ಈವರೆಗೆ 4 ಲಕ್ಷ ನುಗ್ಗೆ ಹಾಗೂ ಅಗಸೆ ಸಸಿಗಳನ್ನು ವಿತರಿಸಲಾಗಿದೆ. ಅವುಗಳನ್ನು ಖರೀದಿಸಿರುವ ರೈತರು ಜಮೀನುಗಳ ಬದುಗಳಲ್ಲಿ ನೆಟ್ಟು–ಬೆಳೆಸುತ್ತಿದ್ದಾರೆ. ಇದರಿಂದ ಬೇಸಿಗೆಯಲ್ಲಿ ಮೇವಿಗೆ ಅನುಕೂಲವಾಗಿದೆ. ಹೆಚ್ಚು ನೀರಿಲ್ಲದಿದ್ದರೂ ಅವು ತಾಳಿಕೊಳ್ಳುತ್ತವೆ. ಹಸಿರು ಮೇವು ಕೂಡ ಲಭ್ಯವಿದೆ’ ಎನ್ನುತ್ತಾರೆ ಅವರು.

7,46,717 ಟನ್‌ ಮೇವು ಲಭ್ಯ ವಾರಕ್ಕೆ ಸರಾಸರಿ 22,044 ಟನ್ ಅಗತ್ಯ ನೀರಾವರಿ ಸೌಲಭ್ಯ ಇರುವವರಿಗೆ ಕಿಟ್

ರಾಸುಗಳ ಜೋಪಾನಕ್ಕೆ ಸಲಹೆ

‘ನಮ್ಮ ತಂಡದವರು ಹಳ್ಳಿಗಳಿಗೆ ಭೇಟಿ ನೀಡಿ ಜಾನುವಾರು ಸಂರಕ್ಷಣೆ ಬಗ್ಗೆ ತಿಳಿಸಿಕೊಡುತ್ತಿದ್ದಾರೆ. ತಾಪಮಾನ ಏರಿಕೆ ಆಗುತ್ತಿರುವುದರಿಂದ ರಾಸುಗಳು ಸೇರಿದಂತೆ ಜಾನುವಾರುಗಳನ್ನು ಬಿಸಿಲಿನ ವೇಳೆ ತಗಡಿನ ಶೀಟ್‌ ಕೆಳಗೆ ಕಟ್ಟಬಾರದು. ಮರಗಳ ಕೆಳಗೆ ಅಥವಾ ತಂಪಾದ ವಾತಾವರಣದ ಸ್ಥಳದಲ್ಲಿ ಕಟ್ಟಬೇಕು. ಅವುಗಳಿಗೆ ತಣ್ಣನೆಯ ನೀರು ಕೊಡಬೇಕು. ಸ್ವಲ್ಪ ಬೆಲ್ಲ ಅಥವಾ ಉಪ್ಪು ಸೇರಿಸಿಕೊಟ್ಟರೆ ಅವು ಜಾಸ್ತಿ ನೀರನ್ನು ಕುಡಿಯುತ್ತವೆ. ಈ ಮೂಲಕ ಅವುಗಳ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ಜಾಗೃತಿ ಮೂಡಿಸಲಾಗುತ್ತಿದೆ’ ಎಂದು ನಾಗರಾಜ್ ತಿಳಿಸಿದರು.

‘ಮತ್ತೆ 36 ಸಾವಿರ ಕಿಟ್ ಪೂರೈಕೆ’

‘ಜಿಲ್ಲೆಗೆ 2ನೇ ಹಂತದಲ್ಲಿ ಈಚೆಗೆ 36ಸಾವಿರ ಕಿಟ್ ಬಂದಿವೆ. ಇವುಗಳನ್ನೂ ನೀರಾವರಿ ಸೌಲಭ್ಯವುಳ್ಳ ರೈತರಿಗೆ ಉಚಿತವಾಗಿ ಕೊಡಲಾಗುವುದು. ಅದನ್ನು ಜಿಲ್ಲೆಯಲ್ಲಿರುವ ಎಲ್ಲ 194 ಪಶುಆಸ್ಪತ್ರೆಗಳ ಮೂಲಕ ನಿರ್ವಹಿಸಲಾಗುತ್ತದೆ’ ಎಂದು ಡಾ.ನಾಗರಾಜ್‌ ತಿಳಿಸಿದರು. ‘ನಂಜನಗೂಡು ತಾಲ್ಲೂಕಿನ ತಗಡೂರು ಹೊಮ್ಮ ಮೊದಲಾದ ಕಡೆಗಳಲ್ಲಿ ನೀರಿನ ಲಭ್ಯತೆ ಇರುವುದು ಶನಿವಾರ ಭೇಟಿ ನೀಡಿದಾಗ ಕಂಡುಬಂದಿತು. ರೈತರ ಮನವೊಲಿಸಿ ಮೇವು ಬೆಳೆದುಕೊಳ್ಳುವಂತೆ ತಿಳಿಸುತ್ತಿದ್ದೇವೆ. ಜಾನುವಾರುಗಳನ್ನು ಕಾಪಾಡಿಕೊಳ್ಳುವುದು ಮುಖ್ಯ ಎನ್ನುವುದನ್ನು ಮನವರಿಕೆ ಮಾಡಿಕೊಡುತ್ತಿದ್ದೇವೆ. ಚಿಕ್ಕಹೊಮ್ಮ ಡೇರಿಯಲ್ಲಿ ಪರಿಶೀಲಿಸಿದಾಗ ಹಾಲಿನ ಉತ್ಪಾದನೆ ಕಡಿಮೆ ಏನಾಗಿಲ್ಲದಿರುವುದು ಕಂಡುಬಂದಿತು. ಅಲ್ಲದೇ ಮೇವಿನ ಬೀಜದ ಕಿಟ್ ನೀಡಿದ್ದರಿಂದ ಪ್ರಯೋಜನವಾಗಿದೆ; ಹಾಲಿನ ಇಳುವರಿಯೂ ಜಾಸ್ತಿಯಾಗಿದೆ ಎಂಬ ಮಾತುಗಳು ಹೈನುಗಾರರಿಂದ ಬರುತ್ತಿವೆ’ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT