ಶನಿವಾರ, 14 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚಾಮುಂಡಿ ಬೆಟ್ಟ ಪ್ರಾಧಿಕಾರ ರಚನೆ ಅಸಾಂವಿಧಾನಿಕ:ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್

ಹೈಕೋರ್ಟ್‌ ತಡೆಯಾಜ್ಞೆ ಆದೇಶ: ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಸಂತಸ
Published : 13 ಆಗಸ್ಟ್ 2024, 5:05 IST
Last Updated : 13 ಆಗಸ್ಟ್ 2024, 5:05 IST
ಫಾಲೋ ಮಾಡಿ
Comments

ಮೈಸೂರು: ‘ಚಾಮುಂಡಿ ಬೆಟ್ಟ ಅಭಿವೃದ್ಧಿ ಪ್ರಾಧಿಕಾರದ ರಚನೆಯು ಅಸಾಂವಿಧಾನಿಕವೆಂದು ಪ್ರತಿಪಾದಿಸಿ ಸಲ್ಲಿಸಿದ್ದ ನಮ್ಮ ರಿಟ್‌ ಅರ್ಜಿಯನ್ನು ಪರಿಗಣಿಸಿದ ಹೈಕೋರ್ಟ್‌ ಜುಲೈ 26ರಂದು ತಡೆಯಾಜ್ಞೆ ನೀಡಿದೆ’ ಎಂದು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ತಿಳಿಸಿದರು.

ನಗರದ ಅರಮನೆಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ರಾಜಮನೆತನವು ನಿರ್ವಹಣೆಗಷ್ಟೇ ಬೆಟ್ಟವನ್ನು ಸರ್ಕಾರಕ್ಕೆ ವಹಿಸಿದ್ದೇ ಹೊರತು ಸ್ವಂತ ಆಸ್ತಿಯಾಗಿ ಮಾಡಿಕೊಳ್ಳುವುದಕ್ಕಲ್ಲ. ಆದರೆ, ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಕಾಯ್ದೆ–2024 ಮೂಲಕ ಸರ್ಕಾರವು ಬೆಟ್ಟವನ್ನು ಸ್ವಂತದ್ದಾಗಿ ಮಾಡಿಕೊಳ್ಳುತ್ತಿತ್ತು’ ಎಂದರು.

‘ಒಕ್ಕೂಟದಲ್ಲಿ ವಿಲೀನವಾದಾಗ ನಡೆದ ಒಪ್ಪಂದದಲ್ಲಿ ರಚನೆಯಾದ ಮೈಸೂರು ಸಂಸ್ಥಾನದ ಖಾಸಗಿ ಆಸ್ತಿಗಳ ಪಟ್ಟಿಯಲ್ಲಿ ಚಾಮುಂಡಿ ಬೆಟ್ಟವೂ ಇದೆ. 1972ರಲ್ಲಿ ಕೇಂದ್ರ ಗೃಹ ಸಚಿವಾಲಯವು ಖಾಸಗಿ ಆಸ್ತಿಗಳು ರಾಜವಂಶಸ್ಥರಿಗೆ ಸೇರಿದ್ದೆಂದು, ಅವುಗಳಿಗೆ ಸಂವಿಧಾನದ 26ನೇ ತಿದ್ದುಪಡಿ ಅನ್ವಯವಾಗುವುದಿಲ್ಲವೆಂದು ಕಳಿಸಿದ್ದ ಮೆಮೊವನ್ನು ಸರ್ಕಾರವೂ ಒಪ್ಪಿಕೊಂಡಿದೆ’ ಎಂದು ವಿವರಿಸಿದರು.

‘ಚಾಮುಂಡಿ ಬೆಟ್ಟದ ದೇಗುಲ, ಹೊಂದಿಕೊಂಡ ಕಟ್ಟಡಗಳು, ರಾಜೇಂದ್ರ ವಿಲಾಸ, ಉದ್ಯಾನ, ಮಹಾಬಲೇಶ್ವರ, ನಾರಾಯಣಸ್ವಾಮಿ, ಉತ್ತನಹಳ್ಳಿ ಜ್ವಾಲಾಮುಖಿ ತ್ರಿಪುರ ಸುಂದರಿ ದೇವಿ ದೇಗುಲಗಳು, ದೇವಿಕೆರೆ, ಉದ್ಯಾನ, 700ನೇ ಮೆಟ್ಟಿಲಿನಲ್ಲಿರುವ ನಂದಿ, ಲಲಿತಾದ್ರಿ ಕಾಟೇಜ್, ಮೂರು ಪಂಪ್‌ ಹೌಸ್‌ಗಳು ಖಾಸಗಿ ಆಸ್ತಿ ಪಟ್ಟಿಯಲ್ಲಿವೆ’ ಎಂದರು.

‘ಬೆಟ್ಟವನ್ನು ಮುಜರಾಯಿ ಇಲಾಖೆಗೆ ವಹಿಸಿದ್ದನ್ನು 2001ರಲ್ಲಿ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಅವರು ಪ್ರಶ್ನಿಸಿರುವ ವ್ಯಾಜ್ಯವು ಹೈಕೋರ್ಟ್‌ಲ್ಲಿದ್ದು, ವಿಚಾರಣೆ ನಡೆಯುತ್ತಿದೆ. ಹೀಗಿರುವಾಗ ಪ್ರಾಧಿಕಾರ ರಚಿಸಿದ್ದನ್ನು ಪ್ರಶ್ನಿಸಿದ್ದೆವು’ ಎಂದರು.  

‘ಅಭಿವೃದ್ಧಿಯಿಂದ ವಯನಾಡ್‌, ಕೊಡಗಿನಲ್ಲಿ ಏನಾಗಿದೆಯೆಂಬುದು ಎಲ್ಲರಿಗೂ ಗೊತ್ತಿದೆ. ಬೆಟ್ಟದಲ್ಲಿ ಪ್ರವಾಸಿ ಕೇಂದ್ರಿತ ಅಭಿವೃದ್ಧಿಯಾಗುತ್ತಿದೆ. ದೇಗುಲದ ಪರಂಪರೆ, ಬೆಟ್ಟವನ್ನು ಬೆಟ್ಟದಂತೆಯೇ ಉಳಿಸಿಕೊಳ್ಳಬೇಕು’ ಎಂದು ಪ್ರತಿಪಾದಿಸಿದರು.

‘ಸ್ವಾತಂತ್ರ್ಯದ ನಂತರ ಬಂದ ಎಲ್ಲ ಸರ್ಕಾರಗಳೂ ಒಂದಲ್ಲಾ ಒಂದು ತೊಂದರೆ ನೀಡುತ್ತಿದ್ದು, ಎದುರಿಸುತ್ತಲೇ ಸಾಗಿದ್ದೇವೆ. ಕುರುಬಾರಹಳ್ಳಿ ಸರ್ವೆ ಸಂಖ್ಯೆ 4ರ ಪ್ರಕರಣ, ದೊಡ್ಡಕೆರೆ ಮೈದಾನದ ಪ್ರಕರಣದಲ್ಲಿ ನಮ್ಮ ಪರ ತೀರ್ಪಾಗಿದೆ. ಈಗ ಖಾತೆ ಮಾಡಿಕೊಡದಿದ್ದರೆ 30 ವರ್ಷದ ನಂತರವಾದರೂ ಮಾಡಿ ಕೊಡಲೇಬೇಕು’ ಎಂದು ಹೇಳಿದರು.

‘ದೇಶದ ಕಾನೂನು ಎಲ್ಲರಿಗೂ ಒಂದೇ. ಆಸ್ತಿ ಕಳೆದುಕೊಂಡರೆ ಬದಲಿ ಆಸ್ತಿ ಅಥವಾ ಅದರ ಮೌಲ್ಯವನ್ನು ಪಾವತಿಸಬೇಕು. ಆದರೆ, ನಮಗಿದು ಪಾಲನೆಯಾಗುತ್ತಿಲ್ಲ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ದಶಕಗಳ ಹಿಂದೆ ಬೆಟ್ಟವನ್ನು ನಿರ್ವಹಣೆ ಮಾಡಲಾಗುವುದಿಲ್ಲವೆಂದು ಸರ್ಕಾರಕ್ಕೆ ಪತ್ರ ಬರೆದಿದ್ದು ನಿಜ. ಅಂದಿನ ಪರಿಸ್ಥಿತಿ, ಕಾರಣಗಳು ಬೇರೆಯೇ ಆಗಿದ್ದವು. ತೀರ್ಪು ನಮ್ಮಂತೆಯೇ ಬಂದರೆ ದೇಗುಲ ನಿರ್ವಹಣೆಗೆ ತಯಾರಿದ್ದೇವೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT