ಮಂಗಳವಾರ, 27 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾಪ್ರಭುತ್ವದ ಯಶಸ್ಸಿಗೆ ಪತ್ರಿಕಾ ಸ್ವಾತಂತ್ರ್ಯ ಅಗತ್ಯ: ಸಿ.ಎಂ ಸಿದ್ದರಾಮಯ್ಯ

Published 22 ಡಿಸೆಂಬರ್ 2023, 11:12 IST
Last Updated 22 ಡಿಸೆಂಬರ್ 2023, 11:12 IST
ಅಕ್ಷರ ಗಾತ್ರ

ಮೈಸೂರು: ‘ಪ್ರಜಾಪ್ರಭುತ್ವ ಯಶಸ್ವಿಯಾಗಬೇಕಾದರೆ ಪತ್ರಿಕಾ ಹಾಗೂ ವಾಕ್‌ ಸ್ವಾತಂತ್ರ್ಯ ಅತ್ಯಗತ್ಯ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಜಿಲ್ಲಾ ಪತ್ರಕರ್ತರ ಸಂಘದಿಂದ ಇಲ್ಲಿನ ಚಾಮುಂಡಿಬೆಟ್ಟ ತಪ್ಪಲಿನ ಕೆಎನ್‌ಎಸ್‌ ಬಡಾವಣೆಯ ಸಿಎ ನಿವೇಶನದಲ್ಲಿ ನೂತನ ಪತ್ರಿಕಾ ಭವನ ಹಾಗೂ ತರಬೇತಿ ಕೇಂದ್ರದ ನಿರ್ಮಾಣಕ್ಕೆ ಶುಕ್ರವಾರ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

‘ಊಹಾಪೋಹದ ಸುದ್ದಿ ಮಾಡುವುದೇ ವೃತ್ತಿಪರತೆಯೇ? ಕಲ್ಪಿಸಿಕೊಂಡು ಸುದ್ದಿ ಮಾಡುವವರು ಹೆಚ್ಚಾಗಿರುವುದು ಕೆಟ್ಟ ಬೆಳವಣಿಗೆ’ ಎಂದು ವಿಷಾದ ವ್ಯಕ್ತಪಡಿಸಿದರು.

‘ಸಂವಿಧಾನ ವಿರೋಧಿಗಳನ್ನೂ ಪ್ರಶ್ನಿಸದೇ ಹೋದರೆ, ಅವರನ್ನೂ ಗೌರವದಿಂದ ನಡೆಸಿಕೊಂಡರೆ ಮಾಧ್ಯಮವನ್ನು ಪ್ರಜಾಪ್ರಭುತ್ವದ 4ನೇ ಅಂಗ ಎನ್ನಲಾಗುತ್ತದೆಯೇ? ವಸ್ತುನಿಷ್ಠ ಸುದ್ದಿ-ಸತ್ಯದ ವರದಿ ಮಾತ್ರ ಸಮಾಜಮುಖಿ ಆಗಿರುತ್ತದೆ’ ಎಂದರು.

‘ಈಗ ಪತ್ರಿಕಾ ಕ್ಷೇತ್ರದಲ್ಲಿ ವೃತ್ತಿಪರತೆ ಇಲ್ಲವಾಗಿ ವ್ಯಾಪಾರ–ವಾಣಿಜ್ಯ ಉದ್ದೇಶ ಹೆಚ್ಚಾಗಿರುವುದು ಅನಾರೋಗ್ಯಕಾರಿ ಬೆಳವಣಿಗೆ. ಓದುಗರು ಮಾಧ್ಯಮಗಳ ಬಗ್ಗೆ ಕುತೂಹಲ ಹಾಗೂ ಆಸಕ್ತಿ ಕಳೆದುಕೊಂಡರೆ ಅದಕ್ಕೆ ವೃತ್ತಿಪರತೆ ಇಲ್ಲವಾಗಿರುವುದೇ ಕಾರಣ’ ಎಂದು ಹೇಳಿದರು.

‘ನನ್ನ ಕಾರ್‌ ಮೇಲೆ ಕಾಗೆ ಕುಳಿತದ್ದನ್ನೂ ಸುದ್ದಿ ಮಾಡ್ತೀರಿ, ಚರ್ಚೆ ಮಾಡ್ತೀರಿ. ಕಾಗೆ ಕುಳಿತರೆ ನಿಮಗೆ ಅಥವಾ ಸಮಾಜಕ್ಕೇನು ನಷ್ಟ? ಗಂಡ– ಹೆಂಡತಿ ಜಗಳ ಸುದ್ದಿ ಮಾಡ್ತೀರಲ್ಲಾ ಅದರಿಂದ ಸಮಾಜಕ್ಕೆ ಏನು ಪ್ರಯೋಜನ?’ ಎಂದು ಕೇಳಿದರು.

‘ಭವನವನ್ನು ಎಷ್ಟು ತ್ವರಿತವಾಗಿ ಕಟ್ಟಿಸುತ್ತೀರೋ ಅಷ್ಟು ಒಳ್ಳೆಯದು. ನಾನೇ ಉದ್ಘಾಟಿಸುತ್ತೇನೆ. ಪತ್ರಕರ್ತರ ಭವನ ಹಾಗೂ ತರಬೇತಿ ಕೇಂದ್ರ ಎರಡೂ ಅಗತ್ಯವಾದವು. ಯುವ ಪತ್ರಕರ್ತರಿಗೆ ತರಬೇತಿ ಕೊಡಲು ಮುಂದಾಗಿರುವುದು ಸ್ವಾಗತಾರ್ಹ’ ಎಂದರು.

‘ಮಾಧ್ಯಮ ಪ್ರಜಾಪ್ರಭುತ್ವದ ನಾಲ್ಕನೇ ಅಂಗ. ಅದು ಇದ್ದಾಗ ಮಾತ್ರ ಪ್ರಜಾಪ್ರಭುತ್ವ ಯಶಸ್ವಿಯಾಗುತ್ತದೆ. ಮಾಧ್ಯಮ ವಸ್ತುನಿಷ್ಠ ಸುದ್ದಿಗಳನ್ನು ಜನರಿಗೆ ಮುಟ್ಟಿಸಬೇಕು. ಸತ್ಯವನ್ನು ತಿಳಿಸಬೇಕು. ಆಗ ಮಾತ್ರ ಸಮಾಜದಲ್ಲಿ ಬದಲಾವಣೆ ಹಾಗೂ ಜಾಗೃತಿ ತರಬಹುದು. ತಪ್ಪು ಮಾಹಿತಿ ಹೋದರೆ ಸಮಾಜಕ್ಕೆ ಹಾಗೂ ಯಾರಿಗೂ ಉಪಯೋಗ ಆಗುವುದಿಲ್ಲ. ವ್ಯವಸ್ಥೆ ಏನಿದೆಯೋ ಅದನ್ನು ಜನರಿಗೆ ತಿಳಿಸಬೇಕು’ ಎಂದು ಸಲಹೆ ನೀಡಿದರು.

‘ನಮ್ಮಲ್ಲಿ ಸಾಮಾಜಿಕ ಅಸಮಾನತೆ ಇಂದಿಗೂ ಇದೆ. ಅದರ ಚಿತ್ರವನ್ನು ಜನರ ಮುಂದೆ ಇಡಬೇಕು. ಅಸಮಾನತೆ ಹೋಗಲಾಡಿಸಲು ಪ್ರಯತ್ನ ನಡೆಯುತ್ತಿದೆಯೆ, ಇಲ್ಲವೇ, ಅದಕ್ಕೆ ಕಾರಣ ಯಾರು ಎಂಬುದನ್ನು ಜನರಿಗೆ ತಿಳಿಸಬೇಕು. ಸಂವಿಧಾನದ ವಿರುದ್ಧ ಮಾತನಾಡುವವರಿಂದ ಸಮಾಜಕ್ಕೆ ಆಗುವ ಹಾನಿಯನ್ನೂ ಮುಂದಿಡಬೇಕು. ವೃತ್ತಿಪರತೆ ಹಾಗೂ ಸಾಮಾಜಿಕ ಕಾಳಜಿ ಇರಬೇಕು. ಇಲ್ಲದಿದ್ದರೆ ಪತ್ರಿಕಾ ರಂಗ ಜವಾಬ್ದಾರಿಯನ್ನು ಮರೆತಿದೆ ಎನ್ನಬೇಕಾಗುತ್ತದೆ’ ಎಂದರು.

‘ಅನಗತ್ಯ ವಿಚಾರಗಳನ್ನು ವೈಭವೀಕರಿಸುವುದು ಸರಿಯಲ್ಲ. ಮೌಢ್ಯ, ಕಂದಾಚಾರಗಳನ್ನು ಬೆಳೆಸಬಾರದು. ಜನರಲ್ಲಿ ಜಾಗೃತಿ ‌ಮೂಡಿಸಬೇಕು, ವೈಚಾರಿಕತೆ ಬೆಳೆಸಬೇಕು’ ಎಂದು ತಿಳಿಸಿದರು.

‘ಅವರು ಹೀಗೆ ಹೇಳಿದ್ದಾರೆ, ನೀವೇನು ಹೇಳುತ್ತೀರಿ ಎಂದು ಕೇಳುವುದು ಶುರುವಾಗಿದೆ. ಸುದ್ದಿ ಕೊಡುವ ಮುನ್ನ, ಅದರಿಂದ ಸಮಾಜಕ್ಕೆ ‌ಒಳಿತಾಗುತ್ತದೆಯೇ ಎಂಬುದನ್ನು ‌ನೋಡಬೇಕು’ ಎಂದು ಸಲಹೆ ನೀಡಿದರು.

‘ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಬದ್ಧವಾಗಿರುವವನು. ಅದನ್ನು ಬಂದ್ ಮಾಡಬಾರದು. ಆದ್ದರಿಂದಲೇ ನಾನು ನನ್ನ ಬಗ್ಗೆ ಏನೇ ಬರೆದರೂ ಕೇಳುವುದಿಲ್ಲ. ಮಾಧ್ಯಮದ ಪಾತ್ರ ಬಹಳ ಮುಖ್ಯ ಎಂದು ಸಂವಿಧಾನದಲ್ಲಿ ಹೇಳಲಾಗಿದೆ. ಸಂವಿಧಾನದ ಆಶಯದ ಸಮಾಜ ನಿರ್ಮಾಣಕ್ಕೆ ನಾವೆಲ್ಲ ಶ್ರಮಿಸೋಣ’ ಎಂದರು.

ಸಾನ್ನಿಧ್ಯ ವಹಿಸಿದ್ದ ಸುತ್ತೂರು ಮಠಾಧೀಶ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ‘ಮೈಸೂರು ಪತ್ರಕರ್ತರು ರಾಜ್ಯದಲ್ಲೇ ವಿಶೇಷ ಸ್ಥಾನಮಾನ ಗಳಿಸಿದ್ದಾರೆ. ವಸ್ತುನಿಷ್ಠ ವಿಷಯವನ್ನು ಜನರಿಗೆ ತಲುಪಿಸುವಲ್ಲಿ ಮುಂದಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಮಾಧ್ಯಮದ ಪಾತ್ರ ಬಹಳ ದೊಡ್ಡದು. ಅಧಿಕಾರಿಗಳಿಗೆ ತಿಳಿಯದ ಸಂಗತಿಗಳನ್ನು ತಿಳಿಸುವ ಕೆಲಸವನ್ನು ಮಾಧ್ಯಮ ಮಾಡುತ್ತಿದೆ’ ಎಂದರು.

‘ಈ ಭವನವನ್ನು ಸಿದ್ದರಾಮಯ್ಯ ಅವರೇ ಉದ್ಘಾಟಿಸುವ ಶುಭ ದಿನ ಬರಲಿ’ ಎಂದು ಹಾರೈಸಿದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ, ‘ಗ್ರಾಮೀಣ ಪತ್ರಕರ್ತರಿಗೆ ಬಸ್‌ ಪಾಸ್ ನೀಡಬೇಕು’ ಎಂದು ಕೋರಿದರು.

ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್‌.ಟಿ.ರವಿಕುಮಾರ್‌ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ. ಮಹದೇವಪ್ಪ, ಶಾಸಕರಾದ ಜಿ.ಟಿ.ದೇವೇಗೌಡ, ಕೆ.ಹರೀಶ್‌ಗೌಡ, ಡಿ.ರವಿಶಂಕರ್‌, ಅನಿಲ್ ಚಿಕ್ಕಮಾದು, ವಿಧಾನಪರಿಷತ್‌ ಸದಸ್ಯರಾದ ಮರಿತಿಬ್ಬೇಗೌಡ, ಡಾ.ಡಿ.ತಿಮ್ಮಯ್ಯ, ಸಿ.ಎನ್.ಮಂಜೇಗೌಡ, ವರುಣ ಕ್ಷೇತ್ರದ ಆಶ್ರಯ ಸಮಿತಿ ಅಧ್ಯಕ್ಷ ಡಾ.ಯತೀಂದ್ರ ಸಿದ್ದರಾಮಯ್ಯ, ‘ಮುಡಾ’ ಮಾಜಿ ಅಧ್ಯಕ್ಷರಾದ ಎಚ್‌.ವಿ.ರಾಜೀವ್, ಯಶಸ್ವಿನಿ ಸೋಮಶೇಖರ್‌, ಮಾಜಿ ಸಂಸದ ಎಂ.ಶಿವಣ್ಣ, ಸಂಘದ ಪ್ರಧಾನ ಕಾರ್ಯದರ್ಶಿ ಎಂ.ಸುಬ್ರಹ್ಮಣ್ಯ ಹಾಗೂ ಪದಾಧಿಕಾರಿಗಳು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT