ಹಿಮಾಲಯ ದಾಟಿ ಬಂದ ಹಕ್ಕಿಗಳು ಬೇಸಿಗೆ ಆರಂಭಕ್ಕೂ ಮೊದಲು ವಾಪಸು ಮಾರ್ಚ್ 2ನೇ ವಾರದೊಳಗೆ ಆವಾಸಸ್ಥಾನಕ್ಕೆ
5ನೇ ಬಾರಿಗೆ ಬಂದ ‘ಎಫ್–88’
‘ಹದಿನಾರು ಕೆರೆಗೆ 5ನೇ ಬಾರಿಗೆ ‘ಎಫ್– 88’ ಹೆಸರಿನ ಹೆಬ್ಬಾತು ಬಂದಿದ್ದು ಇದು ದಾಖಲೆಯಾಗಿದೆ’ ಎಂದು ಪಕ್ಷಿತಜ್ಞ ಎ.ಶಿವಪ್ರಕಾಶ್ ‘ಪ್ರಜಾವಾಣಿ’ಗೆ ತಿಳಿಸಿದರು. ‘ಜುಲೈ 13 2019ರಲ್ಲಿ ಮಂಗೋಲಿಯಾದ ಅರ್ಕಾನ್‌ಗಾಯ್ ಪ್ರಾಂತ್ಯದ ಉಪ್ಪು ನೀರಿನ ಸರೋವರದಲ್ಲಿ ಹಸಿರು ಟ್ಯಾಗ್ ಅನ್ನು ಅಲ್ಲಿನ ‘ವನ್ಯಜೀವಿ ಸಂರಕ್ಷಣೆ ಮತ್ತು ವಿಜ್ಞಾನ ಕೇಂದ್ರ’ದ ವಿಜ್ಞಾನಿಗಳು ಹಾಕಿದ್ದರು. 2021ರಿಂದ ಹದಿನಾರು ಕೆರೆಗೆ ಬರುತ್ತಿದೆ’ ಎಂದು ಅವರು ತಿಳಿಸಿದರು. ‘15 ಸಾವಿರ ಕಿ.ಮೀ ದಾಟಿದ್ದು ಕಳಲೆ ಹಾಗೂ ಹದಿನಾರು ಕೆರೆಗಳಲ್ಲಿ ಕಾಣಸಿಕ್ಕಿದೆ. ಕಳೆದ ವರ್ಷ ಜನವರಿಯಂದು 1500 ಹೆಬ್ಬಾತುಗಳು ಬಂದಿದ್ದವು. ಈ ಬಾರಿ ಅವುಗಳ ಸಂಖ್ಯೆ 2500 ದಾಟಿದೆ’ ಎಂದರು.
ಬ್ರಿಟಿಷರ ಅವಧಿಯಲ್ಲಿ ನಿಶಾಚರಿಗಳಾದವು
‘ಯೂರೋಪಿಯನ್ನರಿಗೆ ಬಾತುಗಳು ಬೇಟೆ ಹಕ್ಕಿಗಳಾಗಿದ್ದವು. ಹೆಬ್ಬಾತುಗಳ ಪ್ರಭೇದಕ್ಕೆ ಸೇರಿದ ಬೂದು ತಲೆಯ ಹೆಬ್ಬಾತು (ಗ್ರೇ ಹೆಡ್ಡೆಡ್ ಗೂಸ್) ಬೇಟೆಯನ್ನು ಈಗಲೂ ನಡೆಸುತ್ತಾರೆ. ಭಾರತದಲ್ಲಿ ಬ್ರಿಟಿಷರ ಅವಧಿಯಲ್ಲಿ ಪಟ್ಟೆ ತಲೆ ಹೆಬ್ಬಾತುಗಳ ಬೇಟೆ ನಡೆಯುತ್ತಿತ್ತು. ಆದ್ದರಿಂದ ಅವು ನಿಶಾಚರಿಗಳಾಗಿ ಬದಲಾದವು. ಹಗಲಿನ ವೇಳೆ ಕೆರೆಗಳ ಮಧ್ಯೆ ಈಜುವ ಅವು ರಾತ್ರಿ ವೇಳೆ ಆಹಾರ ಹುಡುಕಿ ಹೊರಡುತ್ತವೆ’ ಎಂದು ಪರಿಸರ ತಜ್ಞ ಕೆ.ಮನು ಹೇಳಿದರು.