ಬುಧವಾರ, 19 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಐತಿಹಾಸಿಕ ದಾಖಲೆ ಮಹತ್ವ: ಜಾಗೃತಿ ಅವಶ್ಯ’

1.20 ಕೋಟಿ ಪುಟಗಳ ದಾಖಲೆ ವೆಬ್‌ಸೈಟ್‌ಗೆ ಅಳವಡಿಕೆ
Published 8 ಜೂನ್ 2024, 7:54 IST
Last Updated 8 ಜೂನ್ 2024, 7:54 IST
ಅಕ್ಷರ ಗಾತ್ರ

ಮೈಸೂರು: ‘ದಾಖಲೆಗಳು ಇತಿಹಾಸದ ಮೂಲಾಧಾರವಾಗಿದ್ದು, ಅವುಗಳ ಮಹತ್ವ ಅರಿಯುವ ಜೊತೆಗೆ ಸಂರಕ್ಷಣೆಯ ಹೊಣೆಯೂ ನಮ್ಮೆಲ್ಲರದಾಗಿದೆ’ ಎಂದು ರಾಜ್ಯ ಪತ್ರಾಗಾರ ಇಲಾಖೆ ಮೈಸೂರು ವಿಭಾಗೀಯ ಕಚೇರಿಯ ಹಿರಿಯ ಸಹಾಯಕ ನಿರ್ದೇಶಕ ಮಂಜುನಾಥ ಎಚ್.ಎಲ್. ತಿಳಿಸಿದರು.

ನಗರದ ಊಟಿ ರಸ್ತೆಯ ಜೆಎಸ್‍ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜು ಹಾಗೂ ರಾಜ್ಯ ಪತ್ರಾಗಾರ ಇಲಾಖೆ ಮೈಸೂರಿನ ವಿಭಾಗೀಯ ಪತ್ರಾಗಾರ ಕಚೇರಿ ಸಹಯೋಗದಲ್ಲಿ ಅಂತರರಾಷ್ಟ್ರೀಯ ಪತ್ರಾಗಾರ ಸಪ್ತಾಹದ ಅಂಗವಾಗಿ ಹಮ್ಮಿಕೊಂಡಿದ್ದ ‘ದಾಖಲೆಗಳ ಮಹತ್ವ’ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ದಾಖಲೆಗಳನ್ನು ಮುಂದಿನ ಪೀಳಿಗೆಯವರಿಗೂ ತಲುಪಿಸುವ ನಿಟ್ಟಿನಲ್ಲಿ ಪತ್ರಾಗಾರ ಇಲಾಖೆಯು ಹಲವು ಕಾರ್ಯ ಚಟುವಟಿಕೆಗಳನ್ನು ನಡೆಸುತ್ತಿದೆ’ ಎಂದರು.

‘ಪತ್ರಾಗಾರ ಇಲಾಖೆಯು ಇದುವರೆಗೂ ಒಟ್ಟು 1.20 ಕೋಟಿ ಪುಟಗಳ ದಾಖಲೆಗಳನ್ನು ಗಣಕೀಕರಣ ಮೂಲಕ ಜಾಲತಾಣದಲ್ಲಿ ಅಳವಡಿಸಿದೆ. ಈ ದಾಖಲೆಗಳನ್ನು ಅಧ್ಯಾಪಕರು, ವಿದ್ಯಾರ್ಥಿಗಳು, ಸಂಶೋಧಕರು ಮತ್ತು ಜನಸಾಮಾನ್ಯರು ಸಹ ವೀಕ್ಷಿಸಬಹುದು’ ಎಂದು ಮಾಹಿತಿ ನೀಡಿದರು.

ಕಾರ್ಯಕ್ರಮ ಉದ್ಘಾಟಿಸಿದ ಕಾಲೇಜಿನ ಮುಖ್ಯ ಕಾರ್ಯನಿರ್ವಾಹಕ ಪ್ರೊ.ಬಿ.ವಿ. ಸಾಂಬಶಿವಯ್ಯ, ‘ದಾಖಲೆಗಳನ್ನು ಸಂರಕ್ಷಿಸುತ್ತಿರುವ ರಾಜ್ಯ ಪತ್ರಾಗಾರ ಇಲಾಖೆಯ ಪಾತ್ರ ಗಣನೀಯವಾದುದು’ ಎಂದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಎಂ. ಪ್ರಭು ಮಾತನಾಡಿ, ‘ವಿದ್ಯಾರ್ಥಿ ದೆಸೆಯಿಂದಲೇ ಅಧಿಕೃತ ದಾಖಲೆಗಳ ಸಂಗ್ರಹ ಮಾಡುವ ಮತ್ತು ಅವುಗಳನ್ನು ಸಂರಕ್ಷಿಸುವ ಕಾರ್ಯದಲ್ಲಿ ತೊಡಗಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಇತಿಹಾಸ ವಿಭಾಗದ ಮುಖ್ಯಸ್ಥ ಎ.ಜಿ. ಧರ್ಮೇಶ್, ಇತಿಹಾಸ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಪ್ರೊ.ಆರ್. ಸುಜಾತಾಕುಮಾರಿ, ಪತ್ರಿಕೋದ್ಯಮ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಸುವರ್ಣ ಕಂಬಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT