ಭಾನುವಾರ, 21 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನಧಿಕೃತ ಹೋಂಸ್ಟೇ ಮುಚ್ಚಿಸಲು ಕ್ರಮ

ಅಧಿಕೃತವಾಗಿ ನೋಂದಣಿ ಮಾಡಿಕೊಳ್ಳುವುದು ಕಡ್ಡಾಯ: ಜಿಲ್ಲಾಧಿಕಾರಿ
Published 7 ಮಾರ್ಚ್ 2024, 5:47 IST
Last Updated 7 ಮಾರ್ಚ್ 2024, 5:47 IST
ಅಕ್ಷರ ಗಾತ್ರ

ಮೈಸೂರು: ‘ಅನಧಿಕೃತ ಹೋಂಸ್ಟೇಗಳನ್ನು ಮುಚ್ಚಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ತಿಳಿಸಿದರು.

ಪ್ರವಾಸೋದ್ಯಮ ಇಲಾಖೆಯಿಂದ ಜಿಲ್ಲಾ ಪಂಚಾಯಿತಿಯ ಡಿ. ದೇವರಾಜ ಅರಸು ಸಭಾಂಗಣದಲ್ಲಿ ಬುಧವಾರ ನಡೆದ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಇತ್ತೀಚಿನ ದಿನಗಳಲ್ಲಿ ಅನಧಿಕೃತ ಹೋಂಸ್ಟೇ ನಿರ್ಮಾಣ ಹೆಚ್ಚಾಗುತ್ತಿದ್ದು, ಅದರ ಬಗ್ಗೆ ವರದಿ ಪಡೆದು ಕ್ರಮ ಕೈಗೊಳ್ಳಬೇಕು’ ಎಂದು ಅಧಿಕಾರಿಗಳು ಸೂಚಿಸಿದರು.

‘ಜಿಲ್ಲೆಯಾದ್ಯಂತ ಇರುವ ಅಧಿಕೃತವಾಗಿ ನೋಂದಾಯಿಸಿರುವ ಹೋಂಸ್ಟೇಗಳ ಪಟ್ಟಿ ಪಡೆಯಲಾಗುವುದು. ಅನಧಿಕೃತವಾಗಿ ಕಾರ್ಯನಿರ್ವಹಿಸುತ್ತಿದ್ದಲ್ಲಿ ಮುಚ್ಚಲು ಕ್ರಮ ವಹಿಸಲಾಗುವುದು’ ಎಂದರು.

ನಿಯಮಿತವಾಗಿ ಸಭೆ ನಡೆಸಿ: ‘ಜಿಲ್ಲೆಯಲ್ಲಿ ಎಲ್ಲ ಇಲಾಖೆಗಳ ಅಧಿಕಾರಿಯನ್ನು ಪ್ರವಾಸೋದ್ಯಮ ಅಭಿವೃದ್ಧಿ ಇಲಾಖೆಯ ಸದಸ್ಯರನ್ನಾಗಿ ನೇಮಿಸಬೇಕು. ನೇರ ಪಾಲುದಾರರೊಂದಿಗೆ ಪ್ರತಿ ಮೂರು ತಿಂಗಳಿಗೊಮ್ಮೆ ಸಭೆ ಕರೆದು, ಪ್ರವಾಸಿ ತಾಣಗಳ ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳಬೇಕು’ ಎಂದು ಹೇಳಿದರು.

‘ಮೈಸೂರು ಪ್ರವಾಸೋದ್ಯಮವನ್ನು ಹೆಚ್ಚಾಗಿ ಪ್ರಚಾರ ಮಾಡಲು ಇಲಾಖೆಯ ಜಾಲತಾಣಗಳನ್ನು ಬಳಸಿಕೊಳ್ಳಬೇಕು. ಸಾರ್ವಜನಿಕರಿಗೆ ಎಲ್ಲಾ ಮಾಹಿತಿಯೂ ತಿಳಿಯುವಂತೆ ಮಾಡಬೇಕು. ಯಾವುದೇ ಹೋಟೆಲ್, ರೆಸ್ಟೋರೆಂಟ್ ಮೊದಲಾದವುಗಳನ್ನು ಪ್ರಾರಂಭಿಸಲು ಗ್ರಾಮ ಪಂಚಾಯಿತಿ ಅಥವಾ ಸ್ಥಳೀಯ ಸಂಸ್ಥೆಯಿಂದ ಅನುಮತಿ ನೀಡುವ ಮೊದಲು ‘ನಿಧಿ’ ಪೋರ್ಟಲ್‌ನಲ್ಲಿ ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳುವಂತೆ ತಿಳಿಸಬೇಕು. ಇದರಿಂದ ಹೆಚ್ಚಿನ ಜನರಿಗೆ ನಿಧಿ ಪೋರ್ಟಲ್ ಹಾಗೂ ಅದರ ಸೌಲಭ್ಯದ ಬಗ್ಗೆ ತಿಳಿಯುತ್ತದೆ’ ಎಂದರು.

‘ಈಗಾಗಲೇ ಗುರುತಿಸಿರುವ ಪ್ರವಾಸಿತಾಣಗಳಲ್ಲಿನ ಕುಂದು ಕೊರತೆಯನ್ನು ಗಮನಿಸಬೇಕು. ಅಭಿವೃದ್ಧಿಗೆ ಬೇಕಾದ ಕಾಮಗಾರಿಗಳನ್ನು ಕೈಗೊಳ್ಳಬೇಕು. ಇದಕ್ಕೆ ಜಿಲ್ಲಾಧಿಕಾರಿ ಅನುಮತಿಯನ್ನು ಕಡ್ಡಾಯ ಮಾಡಬೇಕು. ಅಲ್ಲದೇ, ಇತರ ಬಿಟ್ಟು ಹೋದ ಪ್ರವಾಸಿ ತಾಣಗಳೇನಾದರೂ ಇದ್ದರೆ ಅದರ ಬಗ್ಗೆ ಜನರಿಂದ ಮಾಹಿತಿ ಪಡೆದುಕೊಂಡು ಅವುಗಳನ್ನು ಪಟ್ಟಿಯಲ್ಲಿ ಸೇರಿಸಬೇಕು’ ಎಂದು ತಿಳಿಸಿದರು.

ಸ್ಪರ್ಧೆ ಆಯೋಜಿಸಬೇಕು: ‘ಪ್ರವಾಸಿಗರನ್ನು ಸೆಳೆಯಲು ಚಿಕ್ಕ ವಿಡಿಯೊಗಳ ಮೂಲಕ ಪ್ರಚಾರ ಮಾಡಬೇಕು. ಅದಕ್ಕೆ ಪ್ರಸಿದ್ಧ ಬ್ಲಾಗರ್‌ಗಳು ಹಾಗೂ ಛಾಯಾಗ್ರಾಹಕರಿಗೆ ಮೈಸೂರು ಪ್ರವಾಸಿ ತಾಣಗಳ ಬಗ್ಗೆ ಸ್ಪರ್ಧೆಯನ್ನು ಏರ್ಪಡಿಸಿ ನಗದು ಬಹುಮಾನವನ್ನು ನೀಡಬೇಕು. ಇದರಿಂದ ಬಂದ ಉತ್ತಮ ವಿಡಿಯೊ ಮತ್ತು ಫೋಟೊಗಳನ್ನು ಆಯ್ದುಕೊಂಡು ಕಾಫಿ ಟೇಬಲ್ ಬುಕ್ ತಯಾರಿಸಬೇಕು. ಪ್ರವಾಸೋದ್ಯಮ ಇಲಾಖೆಯಿಂದ ಪ್ರವಾಸಿಗರಿಗೆ ವಿವಿಧ ರೀತಿಯ ಪ್ಯಾಕೇಜ್‌ಗಳನ್ನು ನೀಡಿ ಅವರನ್ನು ಸೆಳೆಯಬೇಕು’ ಎಂದು ಸಲಹೆ ನೀಡಿದರು.

ಜಿಲ್ಲಾ ಪಂಚಾಯಿತಿ ಸಿಇಒ ಕೆ.ಎಂ.ಗಾಯತ್ರಿ, ಮಹಾನಗರ ಪಾಲಿಕೆ ಆಯುಕ್ತೆ ಎನ್.ಎಸ್. ಮಧು, ಎಸ್ಪಿ ಸೀಮಾ ಲಾಟ್ಕರ್, ಪ್ರವಾಸೋದ್ಯಮ ಇಲಾಖೆಯ ಜಂಟಿ ನಿರ್ದೇಶಕಿ ಎಂ.ಕೆ. ಸವಿತಾ, ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕ ಟಿ.ಕೆ.ಹರೀಶ್, ಜಿಲ್ಲಾ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ.ನಾರಾಯಣಗೌಡ
ಪಾಲ್ಗೊಂಡಿದ್ದರು.

ಪ್ರವಾಸೋದ್ಯಮ ಇಲಾಖೆಯಿಂದ ರೂಪಿಸಿರುವ ಬ್ರಾಂಡ್ ಮೈಸೂರು ಲೋಗೊ ಅನ್ನು ಜಿಲ್ಲೆಯಾದ್ಯಂತ ಪ್ರಮುಖ ಸ್ಥಳಗಳಲ್ಲಿ ಹಾಕಿ ಅದರ ಪ್ರಚಾರ ಮಾಡಬೇಕು

ಡಾ.ಕೆ.ವಿ.ರಾಜೇಂದ್ರ ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT