ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಣಸೂರು: ಹೆಚ್ಚಲಿದೆ ತಂಬಾಕು ಕೃಷಿ ಪ್ರದೇಶ

ದಶಕದ ಬಳಿಕ ₹250ರ ಗಡಿ ದಾಟಿದ ಬೆಲೆ, 70 ಸಾವಿರ ಹೆಕ್ಟೇರ್‌ನಲ್ಲಿ ಬೇಸಾಯ ನಿರೀಕ್ಷೆ
Published 2 ಏಪ್ರಿಲ್ 2024, 5:12 IST
Last Updated 2 ಏಪ್ರಿಲ್ 2024, 5:12 IST
ಅಕ್ಷರ ಗಾತ್ರ

ಹುಣಸೂರು: ದಶಕದ ಬಳಿಕ ತಂಬಾಕು ಬೆಳೆಗಾರರಿಗೆ ನಿರೀಕ್ಷೆಗೂ ಮೀರಿದ ದರ ಸಿಕ್ಕಿದ್ದು, ಮುಂದಿನ ಸಾಲಿಗೆ ಶೇ 15ರಷ್ಟು ಹೆಚ್ಚು ಪ್ರದೇಶದಲ್ಲಿ ಬೇಸಾಯ ಮಾಡುವ ನಿರೀಕ್ಷೆಯಿದೆ.

ಪ್ರತಿ ಕೆ.ಜಿ ತಂಬಾಕಿಗೆ 2023–24ರಲ್ಲಿ ₹257 ಸರಾಸರಿ, ಹುಡಿ ತಂಬಾಕಿಗೆ ₹ 140 ದರ ಸಿಕ್ಕಿದ್ದು, ಮುಂದಿನ ಸಾಲಿನಲ್ಲಿ 7ರಿಂದ 8 ಸಾವಿರ ಹೆಕ್ಟೇರ್ ಪ್ರದೇಶ ಹೆಚ್ಚಾಗಲಿದೆ. 70 ಸಾವಿರ ಹೆಕ್ಟೇರ್ ಗಡಿ ದಾಟುವ ನಿರೀಕ್ಷೆಯನ್ನು ತಂಬಾಕು ಸಂಶೋಧನಾ ಕೇಂದ್ರ ಹೊಂದಿದೆ.

ಕಳೆದ ಸಾಲಿನಲ್ಲಿ ರಾಜ್ಯದಲ್ಲಿ 63 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ತಂಬಾಕು ಬೆಳೆದಿದ್ದ ರೈತರು, 10 ಕೋಟಿ ಕೆ.ಜಿ ನಿರೀಕ್ಷೆಯಲ್ಲಿದ್ದರು. ಆದರೆ ಪ್ರಕೃತಿ ವಿಕೋಪದಿಂದಾಗಿ 8.86 ಕೋಟಿ ಕೆ.ಜಿ ಪಡೆದಿದ್ದರು. ಮುಂದಿನ ಬಾರಿಯೂ 10 ಕೋಟಿಗೂ ಕೆ.ಜಿ ಮೀರಿ ಇಳುವರಿ ಬರುವ ಸಾಧ್ಯತೆ ಇದೆ.

2014-15ರಲ್ಲಿ ₹107, 2015-16ರಲ್ಲಿ ₹135, 2016-17ರಲ್ಲಿ ₹134, 2017-18ರಲ್ಲಿ ₹139, 2018-19ರಲ್ಲಿ ₹142, 2019-20ರಲ್ಲಿ ₹124, 2020-21ರಲ್ಲಿ ₹119, 2021-22ರಲ್ಲಿ ₹163, 2022-23ರಲ್ಲಿ ₹228 ತಂಬಾಕು ದರ ಇತ್ತು.

‘ಸಸಿ ಮಡಿಯಲ್ಲಿ ಬಿತ್ತನೆ ಮುಗಿಸಿ ಸಸಿ ನಿರ್ವಹಣೆ ಅಷ್ಟೇ ನಡೆದಿದೆ. ಹೊಲ ಹದಗೊಳಿಸುವ ಕೆಲಸ ಈಗಷ್ಟೇ ಆರಂಭವಾಗಬೇಕಿದ್ದು, ಈ ಬಾರಿಯ ದರದಿಂದಾಗಿ ತಂಬಾಕು ನಿರೀಕ್ಷೆ ಹೆಚ್ಚಿದೆ’ ಎಂದು ಕಲ್ಲಹಳ್ಳಿಯ ತಂಬಾಕು ಬೆಳೆಗಾರರ ವಿಷಕಂಠಪ್ಪ ತಿಳಿಸಿದರು.

ತಂಬಾಕು ಮಡಿಯಲ್ಲಿ ಸಸಿ ಬೆಳೆಸುವಲ್ಲಿ ತೊಡಗಿರುವ ರೈತರು, ವೈಜ್ಞಾನಿಕವಾಗಿ 30 ದಿನಗಳ ಅವಧಿಗೆ ಮಡಿ ನಿರ್ವಹಣೆ ಮಾಡಬೇಕು. ಬೇಸಿಗೆ ಬಿಸಿಲು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕೊಳೆ ರೋಗವೂ ಕಾಣಿಸಿಕೊಳ್ಳುತ್ತಿದ್ದು, ನಿಯಂತ್ರಣಕ್ಕೆ ಕ್ರಮವಹಿಸುವುದು ಅಗತ್ಯವಾಗಿದೆ.

ತಂಬಾಕು ರೋಗ ನಿಯಂತ್ರಣಕ್ಕೆ ಕ್ರಮ: ‘ಬೇಸಿಗೆ ಹಿನ್ನೆಲೆಯಲ್ಲಿ ರೋಗ ನಿಯಂತ್ರಣಕ್ಕೆ 20ಗ್ರಾಂ ರೆಡೋಮಿಲ್ ಅಥವಾ ಮ್ಯಾಕ್ಟೋವನ್ನು 10 ಲೀ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು. ಮಡಿಯಿಂದ ಟ್ರೇ ಪದ್ಧತಿಗೆ ಸಸಿ ಸ್ಥಳಾಂತರಿಸಿದ ಬಳಿಕ ವಾರದ ನಂತರ ರಸಗೊಬ್ಬರವನ್ನು 15ಲೀ ನೀರಿಗೆ 100 ಗ್ರಾಂ ‍ಪ್ರಮಾಣದಲ್ಲಿ ಮಿಶ್ರಣ ಮಾಡಿ ಹಾಕಬೇಕು. ಸಸಿಯಲ್ಲಿ ಕಪ್ಪು ಚುಕ್ಕೆ ರೋಗ ಕಂಡುಬಂದಲ್ಲಿ ಗ್ಲೋ ಇಟ್ ಶಿಲೀಂದ್ರ ನಾಶಕ ಪ್ರತಿ 15ಲೀಟರ್‌ಗೆ 10 ಗ್ರಾಂ ಮಿಶ್ರಣ ಮಾಡಬೇಕು. ಅಥವಾ ಕೊಸೈಡ್ 2000, ಬಾವಿಸ್ಟಿನ್ ಶಿಲೀಂದ್ರ ಸಿಂಪಡಿಸಿ ಕರಿಕಡ್ಡಿ ರೋಗ ನಿಯಂತ್ರಿಸಬಹುದು’ ಎಂದು ಕೇಂದ್ರೀಯ ತಂಬಾಕು ಸಂಶೋಧನಾ ಕೇಂದ್ರದ ವಿಜ್ಞಾನಿ ಡಾ.ಎಸ್.ರಾಮಕೃಷ್ಣನ್ ತಿಳಿಸುವರು.

‘ಗುಣಮಟ್ಟದ ಕೋಕೋ ಪಿಟ್ ಗೊಬ್ಬರವನ್ನು ಟ್ರೇಗೆ ಭರ್ತಿ ಮಾಡಿ ಅದರಲ್ಲಿ ಸಸಿ ಬೆಳೆಸುವ ಕ್ರಮ ವಹಿಸಬೇಕು. ಇದರಿಂದ ಸಸಿ ಗುಣಮಟ್ಟದಿಂದ ಬೆಳೆಯಲಿದೆ. ಇದರೊಂದಿಗೆ ಜೈವಿಕ ಗೊಬ್ಬರದಲ್ಲಿ ಟ್ರೈಕೋಡರ್ಮಾ, ಸ್ಯೂಡೋಮೊನಾಸ್ ಮತ್ತು ಫೆಸಿಲೋಮೈಸಿಸ್ ಒಳಗೊಂಡಿರುವುದರಿಂದ ಸಸಿ ಉತ್ಕೃಷ್ಟ ಮತ್ತು ಆರೋಗ್ಯವಾಗಿ ಬೆಳೆದು ನಾಟಿ ಮಾಡಬಹುದು’ ಎಂದು ವಿಜ್ಞಾನಿ ಡಾ.ಮಹದೇವಸ್ವಾಮಿ ತಿಳಿಸಿದರು.

ಮಡಿಯಲ್ಲಿ ಕಾಣಿಸಿಕೊಳ್ಳುವ ಎಲೆ ಸುರುಳಿ ರೋಗಕ್ಕೆ ಔಷಧೋಪಚಾರ ಮಾಡುವ ಮುನ್ನ ರೈತರು ತಂಬಾಕು ಸಂಶೋಧನಾ ಕೇಂದ್ರದ ವಿಜ್ಞಾನಿ ಮೊ.9880054867 ಸಂಪರ್ಕಿಸಬಹುದು.

ವಿಷಕಂಠಪ್ಪ
ವಿಷಕಂಠಪ್ಪ

ತಂಬಾಕು ಸಸಿ ಮಡಿಯಿಂದ ಟ್ರೇ ಪದ್ಧತಿಗೆ ವರ್ಗಾವಣೆ ಕೆಲಸ ನಡೆದಿದ್ದು 6 ಎಕರೆ ಪ್ರದೇಶದಲ್ಲಿ ತಂಬಾಕು ಬೆಳೆಯಲು ಸಿದ್ಧತೆ ಮಾಡಿಕೊಳ್ಳುತ್ತಿದ್ದೇನೆ.

-ವಿಷಕಂಠಪ್ಪ ತಂಬಾಕು ಬೆಳೆಗಾರ ಕಲ್ಲಹಳ್ಳಿ

ಟ್ರೇ ಪದ್ಧತಿಯಲ್ಲಿ ರೋಗಮುಕ್ತ ಸಸಿ

‘ಟ್ರೇ ಪದ್ಧತಿಯಲ್ಲಿ ಎಲೆ ಬೇಗನೆ ಬೆಳೆದಲ್ಲಿ ಎಲೆ ಕತ್ತರಿಸಬೇಕು. ಕತ್ತರಿಸಲು ಬಳಸುವ ಕತ್ತರಿ ಚಾಕು ಸೋಪು ನೀರಿನಿಂದ ಸ್ವಚ್ಚಗೊಳಿಸಬೇಕು. ಇದರಿಂದ ರೋಗಮುಕ್ತ ಸಸಿ ಬೆಳೆಯಬಹುದು. ಈ ಕೆಲಸದಲ್ಲಿ ತೊಡಗುವ ರೈತರು ಶುಚಿತ್ವ ಕಾಪಾಡಿಕೊಳ್ಳುವುದು ಮುಖ್ಯ’ ಎಂದು ತಂಬಾಕು ಸಂಶೋಧನಾ ಕೇಂದ್ರದ ವಿಜ್ಞಾನಿ ಡಾ.ಎಸ್.ರಾಮಕೃಷ್ಣನ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT