ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮೈಸೂರು | ರಂಜಾನ್‌; ಇಫ್ತಾರ್‌ ಕೂಟದ ಸಂಭ್ರಮ

ಮಸೀದಿಗಳ ಬಳಿ ವಿವಿಧ ಖಾದ್ಯಗಳ ಮಾರಾಟ, ಲಸ್ಸಿ, ಜ್ಯೂಸ್‌ಗಳಿಗೆ ಬೇಡಿಕೆ
Published 4 ಏಪ್ರಿಲ್ 2024, 5:29 IST
Last Updated 4 ಏಪ್ರಿಲ್ 2024, 5:29 IST
ಅಕ್ಷರ ಗಾತ್ರ

ಮೈಸೂರು: ‘ಬಯ್ಯ ಇದರ್‌ ಆವೋ, ಬೆಹನ್‌ಜೀ ದೇಖಿಯೇ.. ಮ್ಯಾಂಗೊ ಲಸ್ಸಿ, ಬಾದಾಮ್‌ ಮಿಲ್ಕ್ ಶೇಖ್‌, ಕ್ಯಾ ಚಾಯಿಯೇ.. ಆಯಿಯೇ’ ಎಂಬ ಕೂಗು ಸಂಜೆಯಾದೊಡನೆ ಮಂಡಿಮೊಹಲ್ಲಾ, ಉದಯಗಿರಿಯ ಮಸೀದಿಗಳ ಆವರಣದ ಗಲ್ಲಿಗಳಲ್ಲಿ ಕೇಳತೊಡಗುತ್ತದೆ.

ನಸುಕಿನಿಂದ ಸೂರ್ಯ ಮುಳುಗುವವರೆಗೆ ರಂಜಾನಿನ ಉಪವಾಸ ಕೈಗೊಳ್ಳುವ ಮುಸ್ಲಿಂ ಸಮುದಾಯದವರು ಸಂಜೆ ಅಸರ್‌ ಪ್ರಾರ್ಥನೆ ಮುಗಿದೊಡನೆಯೇ ಇಫ್ತಾರ್‌ಗಾಗಿ ಆಹಾರ ಮಾರುಕಟ್ಟೆಯತ್ತ ಧಾವಿಸುತ್ತಾರೆ. ಮಾರುಕಟ್ಟೆಯಲ್ಲಿ ವಿವಿಧ ಬಗೆಯ ಭಕ್ಷ್ಯ, ಪಾನೀಯಗಳ ಘಮಲು ಆವರಿಸುವ ಸಂಭ್ರವೇ ಅದ್ಭುತ.

ಮೀನಾ ಬಜಾರ್‌ನ ಅಂಗಡಿಗಳೆಲ್ಲಾ ಒಮ್ಮೆಲೆ ಇಫ್ತಾರ್‌ ಕೂಟದ ತಾಣಗಳಾಗಿ ಬದಲಾಗುತ್ತವೆ. ಪುಟ್ಟ ಅಂಗಡಿಯೊಳಗೆ ಮನೆಯಿಂದ, ಬಜಾರಿನಿಂದ ತಂದ ಆಹಾರದ ಗಂಟುಗಳು ಬಿಚ್ಚತೊಡಗುತ್ತವೆ. ಎಲ್ಲರೂ ಒಟ್ಟಿಗೆ ಕುಳಿತು, ಖರ್ಜೂರ, ನೀರು ಸೇವಿಸಿ ಉಪವಾಸ ಮುರಿಯುವುದು ಸಾಮಾನ್ಯವಾಗಿ ಕಂಡು ಬರುತ್ತದೆ.

ಸಾಡೇ ರಸ್ತೆ ಆಸುಪಾಸಿನ ಹೋಟೆಲ್‌ಗಳು, ಲಸ್ಸಿ ಅಂಗಡಿಗಳು, ಜ್ಯೂಸ್‌ ಸೆಂಟರ್‌, ಕತ್ತರಿಸಿದ ಹಣ್ಣುಗಳ ಮಾರಾಟಗಾರರು, ವಿವಿಧ ರೀತಿಯ ಸಸ್ಯಾಹಾರ ಹಾಗೂ ಮಾಂಸಾಹಾರದ ಚಾಟ್ಸ್‌ ಅಂಗಡಿಗಳು ಜನರಿಂದ ಕಿಕ್ಕಿರಿದು ತುಂಬುತ್ತಿದ್ದು, ಜೋಡಿಸಿಟ್ಟ ಖಾದ್ಯಗಳ ರಾಶಿ ಒಮ್ಮೆಲೆ ಕರಗತೊಡಗುತ್ತವೆ.

‘ದಣಿದ ದೇಹಕ್ಕೆ ಚೈತನ್ಯ ಬೇಕು’ ಎನ್ನುತ್ತಾ ಕಾಜೂ ಗುಲ್ಕನ್, ಪಿಸ್ತಾ, ವೆನಿಲ್ಲಾ,  ರಸ್ಮಲಾಯ್, ಫಲೂದಾ, ಕಲ್ಲಂಗಡಿ ಶರಬತ್‌ ಮುಂತಾದ ತಂಪಾದ ಪಾನೀಯಗಳತ್ತ ಹೋಗುವ ಜನರನ್ನು ‘ಚಿಕನ್ ರೋಲ್, ಶಾಮಿ ಕಬಾಬ್, ಚಿಕನ್ ಸಮೋಸಾ’ ಕೇವಲ ₹ 30ಕ್ಕೆ ಎನ್ನುತ್ತಾ ಸೆಳೆಯುವ ಅಂಗಡಿಗಳೂ ಅನೇಕ.

‘ಖೀಮಾ, ಮೋಮೊಸ್, ಚಿಕನ್‌ ರೋಲ್‌, ಕಬಾಬ್, ಚಿಕನ್‌ ಲಾಲಿಪಾಪ್, ಹೈದರಾಬಾದಿ ಹಲೀಂ, ಶವರ್ಮಾ, ಕಟ್ಲೆಟ್‌ ಖಾದ್ಯಗಳು ಹಾಗೂ ವಿವಿಧ ರೀತಿಯ ಬಿರಿಯಾನಿಗಳೂ ಮಾರಾಟವಾಗುತ್ತಿದ್ದು, ವ್ಯಾಪಾರ ಉತ್ತಮವಾಗಿದೆ. ಇಫ್ತಾರ್‌ಗಾಗಿಯೇ ದಿನವೆಲ್ಲಾ ತಯಾರಿ ನಡೆಸುತ್ತೇವೆ’ ಎಂಬುದು ವ್ಯಾಪಾರಿ ಸಲೀಂ ಮಾತು.

ಸಹರಿ ಕಸರತ್ತು: ‘ಬೆಳಿಗಿನ ಜಾವ 3ಕ್ಕೆ ಎದ್ದು ಮನೆಮಂದಿಗೆಲ್ಲ ಸಹರಿ ಅಡುಗೆ ಮಾಡುವುದು ಒಂದು ಸಾಹಸಮಯ ಕಸರತ್ತೇ ಸರಿ. ಸಹರಿಯಲ್ಲಿ ಮನೆಯವರು ತೀರ ವೈವಿಧ್ಯ ಅಡುಗೆಗಳ ನಿರೀಕ್ಷೆ ಮಾಡುವುದಿಲ್ಲ. ಸಾಧಾರಣವಾಗಿ ಅನ್, ಮುದ್ದೆ, ಸಾರು ಮಾಡುತ್ತೇವೆ. ರಾತ್ರಿಯ ಅಡುಗೆ ಉಳಿದಿದ್ದರೆ ಬಳಸುತ್ತೇವೆ. ಆದರೆ ಇಫ್ತಾರ್‌ ಮಾತ್ರ ವಿಶೇಷ’ ಎನ್ನುತ್ತಾರೆ ಲಷ್ಕರ್‌ ಮೊಹಲ್ಲಾದ ಶಮೀನಾ.

ಫರ್ಹಾನ್ ಪಾಶಾ
ಫರ್ಹಾನ್ ಪಾಶಾ
ರಂಜಾನ್‌ನಲ್ಲಿ ಇಫ್ತಾರ್‌ ಕೂಟ ಎಲ್ಲರೂ ಒಟ್ಟಿಗೆ ಕುಳಿತು ಆಹಾರ ಸೇವಿಸುವ ಸಂಭ್ರಮ ನೀಡುತ್ತದೆ. ಆಹಾರದ ಮಹತ್ವವೂ ಅರ್ಥವಾಗುತ್ತದೆ
ಫರ್ಹಾನ್ ಪಾಶಾ ವ್ಯಾಪಾರಿ ಮೀನಾ ಬಜಾರ್‌
ಉತ್ತರ ಪ್ರದೇಶದಿಂದ ದೂದ್ ಶಾವಿಗೆ
ಮೀನಾ ಬಜಾರ್‌ನಲ್ಲಿ ಉತ್ತರ ಪ್ರದೇಶದಿಂದ ದೂದ್‌ ಶಾವಿಗೆ ಮತ್ತು ಕುಂಬಳಕಾಯಿ ಮಿಠಾಯಿಗಳನ್ನು ತಂದು ಮಾರಲಾಗುತ್ತಿದೆ. ವ್ಯಾಪಾರಿ ಇಸ್ಮಾಯಿಲ್ ಮಾತನಾಡಿ ‘ಒಟ್ಟು 7 ಮಂದಿ ಉತ್ತರ ಪ್ರದೇಶದಿಂದ ಬಂದಿದ್ದೇವೆ. ಅಲ್ಲಿಂದಲೇ ಪದಾರ್ಥಗಳನ್ನು ರೈಲಿನ ಮೂಲಕ ತರಲಾಗಿದೆ. ಉತ್ತಮ ವ್ಯಾಪಾರವಾಗುತ್ತಿದ್ದು ‘ಶಾವಿಗೆಯನ್ನು ಕೆ.ಜಿಗೆ ₹320 ಹಾಗೂ ಕುಂಬಳಕಾಯಿ ಮಿಠಾಯಿ ಕೆ.ಜಿಗೆ ₹280ರಂತೆ ಮಾರಾಟ ಮಾಡುತ್ತಿದ್ದೇವೆ. ರಂಜಾನ್ ಹಬ್ಬಕ್ಕೆ ಊರಿಗೆ ಮರಳಲಿದ್ದೇವೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT