ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರಾಜ್ಯಪಾಲರಿಗೆ ಅಪಮಾನ ಖಂಡನೀಯ: ಬಿಜೆಪಿ ಮುಖಂಡರು, ಕಾರ್ಯಕರ್ತರಿಂದ ಪ್ರತಿಭಟನೆ

Published : 23 ಆಗಸ್ಟ್ 2024, 6:33 IST
Last Updated : 23 ಆಗಸ್ಟ್ 2024, 6:33 IST
ಫಾಲೋ ಮಾಡಿ
Comments

ಮೈಸೂರು: ‘ರಾಜ್ಯಪಾಲರು ದಲಿತ ಎಂಬ ಕಾರಣಕ್ಕೆ ಕಾಂಗ್ರೆಸ್‌ ನಾಯಕರು ಅವರನ್ನು ಅವಮಾನಿಸುವ ಹೇಳಿಕೆ ನೀಡುತ್ತಿದ್ದಾರೆ’ ಎಂದು ಆರೋಪಿಸಿ ಭಾರತೀಯ ಜನತಾ ಪಾರ್ಟಿ ಮೈಸೂರು ನಗರ (ಜಿಲ್ಲೆ) ಹಾಗೂ ಮೈಸೂರು ಗ್ರಾಮಾಂತರದ ಮುಖಂಡರು ಹಾಗೂ ಕಾರ್ಯಕರ್ತರು ಗುರುವಾರ ಪ್ರತಿಭಟನೆ ನಡೆಸಿದರು.

ನಗರದ ಗಾಂಧಿ ವೃತ್ತದಲ್ಲಿ ಜಮಾವಣೆಗೊಂಡ ನೂರಾರು ಕಾರ್ಯಕರ್ತರು ‘ನುಂಗಿದರಣ್ಣ, ನುಂಗಿದರಣ್ಣ, ಸಿದ್ದರಾಮಣ್ಣ ಬಡವರ ಭೂಮಿ ನುಂಗಿದರಣ್ಣ’ ಹಾಡು ಹಾಡಿದರು.

‘ವಾಲ್ಮೀಕಿ ನಿಗಮದ ದುಡ್ಡು, ರಾಹುಲ್‌ ಗಾಂಧಿ ಜೇಬಿಗೆಷ್ಟು’, ‘ಬಡಜನರ ಭೂಮಿ ನುಂಗಿದ ಸಿದ್ದರಾಮಯ್ಯಗೆ ಧಿಕ್ಕಾರ’, ‘ಎಲ್ಲಿಯವರೆಗೆ ಹೋರಾಟ, ಕಾಂಗ್ರೆಸ್‌ ಕೊನೆಗಾಣಿಸುವವರೆಗೆ ಹೋರಾಟ’, ‘ಭ್ರಷ್ಟ ಕಾಂಗ್ರೆಸ್ ಸರ್ಕಾರಕ್ಕೆ ಧಿಕ್ಕಾರ’ ಇತ್ಯಾದಿ ಬರಹವುಳ್ಳ ಫಲಕ ಪ್ರದರ್ಶಿಸಿದರು. ರಾಜ್ಯ ಸರ್ಕಾರದ ವಿರುದ್ಧ ಘೋಷಣೆ‌ ಕೂಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜಿನಾಮೆಗೆ ಒತ್ತಾಯಿಸಿದರು.

ಮಾಜಿ ಸಂಸದ ಪ್ರತಾಪ್ ಸಿಂಹ ಮಾತನಾಡಿ, ‘ರಾಜ್ಯಪಾಲರು ಕಾನೂನು ಬದ್ಧವಾಗಿ ನಡೆದುಕೊಂಡಿರುವುದನ್ನು ಕಾಂಗ್ರೆಸ್‌ ನಾಯಕರಿಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ವಾಲ್ಮೀಕಿ ಹಗರಣದ ಕುರಿತು ರಾಜ್ಯಪಾಲರು ಟೀಕಿಸಿಲ್ಲ. ಅವರು ಸಾಮಾಜಿಕ ಕಾರ್ಯಕರ್ತರ ದೂರಿಗೆ ವಿವರಣೆ ಕೇಳಿದ್ದು, ತನಿಖೆಗೆ ಅವಕಾಶ ನೀಡುವ ಅಧಿಕಾರ ಅವರಿಗಿದೆ’ ಎಂದರು.

‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಡಾಕ್ಕೆ ಪತ್ರವನ್ನೇ ಬರೆದಿಲ್ಲ ಎಂದಿದ್ದರು. ಆದರೆ ಈಗ ಆ ಪತ್ರ ಬಹಿರಂಗವಾಗಿದೆ. ದಾಖಲೆ ತಿದ್ದುಪಡಿ ಮಾಡಿ ಅಕ್ರಮ ಮುಚ್ಚಿ ಹಾಕಲು ಹುನ್ನಾರ ನಡೆಸಿರುವುದೂ ಬಯಲಾಗಿದೆ. ಈಗಲಾದರೂ ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಿ ಮೇಲ್ಪಂಕ್ತಿ ಹಾಕುತ್ತಾರೆಂದು ಭಾವಿಸಿದ್ದೇವು. ಆದರೆ ಅವರಿಗೆ ಅಧಿಕಾರ ಬಿಟ್ಟು ಹೋಗುವ ಮನಸ್ಸಿಲ್ಲ’ ಎಂದು ಟೀಕಿಸಿದರು.

‘ಕಾನೂನಿನ ತೀರ್ಮಾನ ಗೌರವಿಸದೆ, ನಿಯಮಗಳನ್ನು ಗಾಳಿಗೆ ತೂರಿರುವ ಸಿದ್ದರಾಮಯ್ಯ ಅವರಿಗೆ ಮುಖ್ಯಮಂತ್ರಿಯಾಗಿ ಮುಂದುವರಿಯುವ ನೈತಿಕ ಹಕ್ಕಿಲ್ಲ’ ಎಂದರು.

ಶಾಸಕ ಟಿ.ಎಸ್‌.ಶ್ರೀವತ್ಸ, ಪಕ್ಷದ ರಾಜ್ಯ ಉಪಾಧ್ಯಕ್ಷ ಎಂ.ರಾಜೇಂದ್ರ, ಹಿಂದುಳಿದ ವರ್ಗಗಳ ಮೋರ್ಚಾ ರಾಜ್ಯಾಧ್ಯಕ್ಷ ಆರ್.ರಘು ಕೌಟಿಲ್ಯ, ನಗರಾಧ್ಯಕ್ಷ ಎಲ್.ನಾಗೇಂದ್ರ, ಗ್ರಾಮಾಂತರ ಅಧ್ಯಕ್ಷ ಎಲ್.ಆರ್.ಮಹದೇವಸ್ವಾಮಿ, ಮುಖಂಡರಾದ ಎಸ್.ಡಿ.ಮಹೇಂದ್ರ, ಮಂಗಳಾ ಸೋಮಶೇಖರ್, ಎಂ.ಶಿವಕುಮಾರ್, ಎ.ಹೇಮಂತ ಕುಮಾರ್ ಗೌಡ, ಎಸ್.ಮಹದೇವಯ್ಯ, ಮಿರ್ಲೆ ಶ್ರೀನಿವಾಸಗೌಡ, ಎನ್.ಆರ್.ಕೃಷ್ಣಪ್ಪ ಗೌಡ, ಎನ್.ವಿ.ಫಣೀಶ್, ಜೋಗಿ ಮಂಜು, ಪ್ರಪುಲ್ಲಾ ಮಲ್ಲಾಡಿ, ಎಚ್.ಜಿ.ಗಿರಿಧರ್, ಬಿ.ಎಂ.ರಘು, ಕೇಬಲ್ ಮಹೇಶ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT