ಬುಧವಾರ, 17 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಣಸೂರು: ತಂಬಾಕು ಬೆಳೆಗಾರರ ಬಳಿಗೆ ಹೊಸ ತಳಿ, ‘ಎಫ್.ಸಿ.ಎಚ್ 248’ ಮಾರುಕಟ್ಟೆಗೆ

Published 15 ಮಾರ್ಚ್ 2024, 6:42 IST
Last Updated 15 ಮಾರ್ಚ್ 2024, 6:42 IST
ಅಕ್ಷರ ಗಾತ್ರ

ಹುಣಸೂರು: ಕೇಂದ್ರೀಯ ತಂಬಾಕು ಸಂಶೋಧನ ಕೇಂದ್ರದ ಸತತ ಎರಡು ವರ್ಷದ ಪ್ರಯತ್ನದ ಬಳಿಕ ಇದೀಗ ತಂಬಾಕು ಬೆಳೆಗಾರರಿಗೆ ಉತ್ತಮ ಇಳುವರಿ ಮತ್ತು ರೋಗ ಮುಕ್ತ ಎಫ್.ಸಿ.ಎಚ್ 248 ತಂಬಾಕು ತಳಿಯ ಬಿತ್ತನೆ ಬೀಜ ವಿತರಿಸಲು ಸಜ್ಜಾಗಿದೆ.

ರಾಜ್ಯದಲ್ಲಿ 45 ಸಾವಿರಕ್ಕೂ ಹೆಚ್ಚು ತಂಬಾಕು ಬೆಳೆಗಾರರನ್ನು ಹೊಂದಿರುವ ಹಳೆ ಮೈಸೂರು ಪ್ರದೇಶದಲ್ಲಿ ನೂತನ ತಂಬಾಕು ಘಮಲು ಆರಂಭವಾಗುತ್ತಿದೆ. ಕಳೆದ ಸಾಲಿನವರೆಗೂ ಎಫ್.ಸಿ.ಎಚ್ 222 ತಳಿ ಬೆಳೆದು ಖುಷಿಯಾಗಿದ್ದ ರೈತರು, ಈ ಬಾರಿ ಮತ್ತಷ್ಟು ಇಳುವರಿ ನೀಡಬಲ್ಲ ತಳಿ ಬೆಳೆಯಲು ಉತ್ಸುಕರಾಗಿದ್ದಾರೆ.

ಈ ತಳಿಯ ಬಗ್ಗೆ ಎರಡು ವರ್ಷ 200 ರೈತರ ಹೊಲದಲ್ಲಿ ವೈಜ್ಞಾನಿಕ ಸಲಹೆಯೊಂದಿಗೆ ಬೆಳೆದ ಬಳಿಕ ಈಗ ಮಾರುಕಟ್ಟೆಗೆ ಲಗ್ಗೆಯಿಡಲು ಸಜ್ಜಾಗಿದೆ. ‘ಹೊಸ ತಳಿಯನ್ನು ರೈತರ ಹೊಲದಲ್ಲಿ ಬೆಳೆಸಿ ಸಂಶೋಧನೆ ನಡೆಸಿದ್ದೇವೆ. ಒಂದು ಹೆಕ್ಟೇರ್ ಪ್ರದೇಶದಲ್ಲಿ 2,200 ರಿಂದ 2,400 ಕೆಜಿ ಇಳುವರಿ ಸಿಕ್ಕಿದೆ. ಕೆಲವು ರೈತರಿಗೆ ನಿಗದಿಗಿಂತಲೂ ಹೆಚ್ಚಿನ ಇಳುವರಿ ಸಿಕ್ಕಿರುವುದು ವರದಿಯಾಗಿದೆ’ ಎಂದು ಹುಣಸೂರು ಕೇಂದ್ರೀಯ ಸಂಶೋಧನ ಕೇಂದ್ರದ ವಿಜ್ಞಾನಿ ರಾಮಕೃಷ್ಣನ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಈ ತಳಿಯು ಕರಿಕಡ್ಡಿ ರೋಗ ನಿಯಂತ್ರಿಸುವ ಶಕ್ತಿ ಹೊಂದಿದ್ದು, ಇದಲ್ಲದೆ ತಂಬಾಕು ಎಲೆ ಹಣ್ಣು (ಹಳದಿ) 6 ದಿನಕ್ಕೊಮ್ಮೆ ಕಟಾವಿಗೆ ಬರಲಿದೆ. ರೈತರು ಹದಗೊಳಿಸಲು ಪೂರಕವಾಗಿದೆ. 222 ತಳಿಯಲ್ಲಿ ಎಲೆ 3 ರಿಂದ 4 ದಿನಕ್ಕೆ ಒಮ್ಮೆ ಬರುವುದರಿಂದ ಹದಗೊಳಿಸಲು ರೈತರಿಗೆ ಕಷ್ಟ ಸಾಧ್ಯವಾಗಿ ನಷ್ಟವಾಗುತ್ತಿತ್ತು’ ಎಂದರು.

‘ಹೊಸ ತಳಿಯು ಈ ಹಿಂದಿನ ತಂಬಾಕಿಗಿಂತ ಶೇ 10 ರಷ್ಟು ಇಳುವರಿ ಹೆಚ್ಚಾಗಲಿದೆ. ಮೇ ಮೊದಲ ವಾರದಲ್ಲಿ ನಾಟಿ ಮಾಡಿದ ಬಳಿಕ ಎರಡು ಬಾರಿ ಶೇ 30ರಷ್ಟು ಡಿ.ಎ.ಪಿ ರಸಗೊಬ್ಬರ ನೀಡುವುದರಿಂದ ಸಸಿ ಉತ್ತಮವಾಗಿ ಬೆಳೆಯಲಿದೆ. ಇದಲ್ಲದೆ ಕ್ಯಾಲ್ಸಿಯಂ ನೈಟ್ರೇಟ್ ರಸಗೊಬ್ಬರ ಪ್ರತಿ ಎಕರೆಗೆ 50 ಕೆ.ಜಿ ನೀಡಿದಲ್ಲಿ ಇಳುವರಿ ನಿರೀಕ್ಷೆಗೂ ಮೀರಿ ಪಡೆಯಬುಹುದು ಎನ್ನುವುದು ಸಂಶೋಧನೆಯಿಂದ ತಿಳಿದು ಬಂದಿದೆ’ ಎನ್ನುತ್ತಾರೆ ರಾಮಕೃಷ್ಣನ್‌.

ಹದಗೊಳಿಸಿದ ಹೊಸ ತಳಿ ತಂಬಾಕಿನೊಂದಿಗೆ ಎಮ್ಮೆಕೊಪ್ಪಲು ಗ್ರಾಮದ ‌ರೈತ ದೇವರಾಜ್
ಹದಗೊಳಿಸಿದ ಹೊಸ ತಳಿ ತಂಬಾಕಿನೊಂದಿಗೆ ಎಮ್ಮೆಕೊಪ್ಪಲು ಗ್ರಾಮದ ‌ರೈತ ದೇವರಾಜ್

‘ಮಾರುಕಟ್ಟೆಯಲ್ಲಿ ಉತ್ತಮ ದರ’

‘ಎಫ್.ಸಿ.ಎಚ್ 248 ತಳಿಯಲ್ಲಿ ಶೇ 80ರಷ್ಟು ಗೋಲ್ಡನ್ ಹಳದಿ ಎಲೆ ಸಿಗುವುದರಿಂದ ಮಾರುಕಟ್ಟೆಯಲ್ಲಿ ಉತ್ತಮ ದರ ಸಿಗಲಿದೆ. ಕಡಿಮೆ ವಿಸ್ತೀರ್ಣದಲ್ಲಿ ಹೆಚ್ಚು ಇಳುವರಿ ಪಡೆಯುವುದರಿಂದ ಆರ್ಥಿಕ ಲಾಭ ಸಿಕ್ಕಿ ರೈತರು ಉಳಿದ ಭೂ ಪ್ರದೇಶದಲ್ಲಿ ಇತರೆ ಆರ್ಥಿಕ ಲಾಭದ ಬೆಳೆ ಬೇಸಾಯ ಮಾಡಲು ಸಹಕಾರಿ’ ಎಂದು ಎಮ್ಮೆಕೊಪ್ಪಲು ತಂಬಾಕು ಬೆಳೆಗಾರ ದೇವರಾಜ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT