ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮುಂಡೇಶ್ವರಿ: ಅರ್ಜಿ ಸಲ್ಲಿಸದೇ ಕಾಂಗ್ರೆಸ್ ಟಿಕೆಟ್ ಪಡೆದ ಸಿದ್ದೇಗೌಡ

ಜಿ.ಟಿ.ದೇವೇಗೌಡ ವಿರುದ್ಧ ಕಣಕ್ಕೆ ಒಕ್ಕಲಿಗ ಅಭ್ಯರ್ಥಿ
Last Updated 6 ಏಪ್ರಿಲ್ 2023, 9:14 IST
ಅಕ್ಷರ ಗಾತ್ರ

ಮೈಸೂರು: ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್‌ ಅಭ್ಯರ್ಥಿಗಳ 2ನೇ ಪಟ್ಟಿ ಗುರುವಾರ ಬಿಡುಗಡೆಯಾಗಿದ್ದು, ಜಿಲ್ಲೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದ ಮೈಮುಲ್ ಮತ್ತು ಎಪಿಎಂಸಿ ಮಾಜಿ ಅಧ್ಯಕ್ಷ ಸಿದ್ದೇಗೌಡ (ಮಾವಿನಹಳ್ಳಿ ಸಿದ್ದೇಗೌಡ) ಅವರಿಗೆ ಮಣೆ ಹಾಕಲಾಗಿದೆ.

ಈ ಕ್ಷೇತ್ರದಿಂದ ಕಾಂಗ್ರೆಸ್‌ ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್‌, ಕೆಪಿಸಿಸಿ ಸದಸ್ಯ ಕೆ.ಮರೀಗೌಡ, ರಾಕೇಶ್‌ ಪಾಪಣ್ಣ, ಲೇಖಾ ವೆಂಕಟೇಶ್‌, ಕೂರ್ಗಳ್ಳಿ ಮಹದೇವ್‌, ಅರುಣ್ ಕುಮಾರ್‌, ಕೃಷ್ಣಕುಮಾರ್ ಸಾಗರ್‌, ಬೆಳ್ಳುಳ್ಳಿ ಬಸವರಾಜ್‌, ಮೆಲ್ಲಳ್ಳಿ ಮಹದೇವಸ್ವಾಮಿ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ್ದರು. ಆದರೆ, ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ವಿರುದ್ಧ ಸಮರ ಸಾರಿ ಆ ಪಕ್ಷ ತೊರೆದು ಈಚೆಗೆ ಕಾಂಗ್ರೆಸ್ ಸೇರಿರುವ ಮಾವಿನಹಳ್ಳಿ ಸಿದ್ದೇಗೌಡ ಅವರಿಗೆ ಪಕ್ಷ ಅವಕಾಶ ನೀಡಿದೆ. ಅವರು ಪಕ್ಷದ ನಿಯಮದಂತೆ ಟಿಕೆಟ್‌ ಕೋರಿ ಅರ್ಜಿ ಸಲ್ಲಿಸಿರಲಿಲ್ಲ. ಅವರು ಪಕ್ಷಕ್ಕೆ ಸೇರ್ಪಡೆಯಾಗುವ ವೇಳೆಗಾಗಲೇ ಅರ್ಜಿ ಸ್ವೀಕರಿಸುವ ಸಮಯವೇ ಮುಗಿದು ಹೋಗಿತ್ತು! ಆದರೆ, ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವ ಸಮಾವೇಶದಲ್ಲಿ ಮಾತನಾಡಿದ್ದ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ‘ಈಗಾಗಲೇ ಅರ್ಜಿ ಸಲ್ಲಿಸಿರುವವರೊಂದಿಗೆ ಈಚೆಗ ಪಕ್ಷಕ್ಕೆ ಸೇರಿದವರೂ ಟಿಕೆಟ್ ಆಕಾಂಕ್ಷಿಗಳು ಇರಬಹುದು’ ಎಂದು ಹೇಳಿಕೆ ನೀಡಿದ್ದರು.

‘ಸಿದ್ದರಾಮಯ್ಯ ಅವರು ನನಗೇ ಬಿ ಫಾರಂ ಕೊಡುವುದಾಗಿ ತಿಳಿಸಿದ್ದಾರೆ’ ಎಂದು ಈಚೆಗೆ ಕಾಂಗ್ರೆಸ್‌ ಭವನದಲ್ಲಿ ನಡೆದ ಸಭೆಯಲ್ಲಿ ಸಿದ್ದೇಗೌಡ ಹೇಳಿಕೊಂಡಿದ್ದರು. ಕ್ಷೇತ್ರದಲ್ಲಿ ಒಕ್ಕಲಿಗರ ಪ್ರಾಬಲ್ಯವಿರುವುದರಿಂದಾಗಿ, ಜೆಡಿಎಸ್‌ನ ಜಿ.ಟಿ.ದೇವೇಗೌಡ ಅವರನ್ನು ಎದುರಿಸಲು ಒಕ್ಕಲಿಗ ಸಮಾಜದ ಅಭ್ಯರ್ಥಿಯನ್ನೇ ಕಣಕ್ಕಿಳಿಸಬೇಕು ಎಂಬ ಪಕ್ಷದ ಲೆಕ್ಕಾಚಾರ ಸಿದ್ದೇಗೌಡ ಅವರಿಗೆ ನೆರವಾಗಿದೆ ಎನ್ನಲಾಗುತ್ತಿದೆ.

ಮೊದಲ ಪಟ್ಟಿಯಲ್ಲಿ ಜಿಲ್ಲೆಯ 8 ಕ್ಷೇತ್ರಗಳಿಗೆ ಟಿಕೆಟ್‌ ಘೋಷಿಸಲಾಗಿತ್ತು. ಬಾಕಿ ಇದ್ದ ಮೂರು ಕ್ಷೇತ್ರಗಳಲ್ಲಿ ಚಾಮುಂಡೇಶ್ವರಿ ಟಿಕೆಟ್ ಅಖೈರುಗೊಳಿಸಿದೆ. ಬ್ರಾಹ್ಮಣರ ಪ್ರಾಬಲ್ಯವಿರುವ ಕೃಷ್ಣರಾಜ ಹಾಗೂ ಒಕ್ಕಲಿಗರ ಬಾಹುಳ್ಯವಿರುವ ಚಾಮರಾಜ ಕ್ಷೇತ್ರಗಳಿಗೆ ಇನ್ನೂ ಅಭ್ಯರ್ಥಿಗಳನ್ನು ಅಂತಿಮಗೊಳಿಸಿಲ್ಲ.

ಕೃಷ್ಣರಾಜ ಕ್ಷೇತ್ರದಿಂದ ಮಾಜಿ ಶಾಸಕ ಎಂ.ಕೆ.ಸೋಮಶೇಖರ್‌, ನಗರಪಾಲಿಕೆ ಮಾಜಿ ಸದಸ್ಯ ಎಂ.ಪ್ರದೀಪ್‌ಕುಮಾರ್ ಮತ್ತು ಮುಖಂಡ ಎನ್.ಎಂ.ನವೀನ್‌ ಕುಮಾರ್ ಆಕಾಂಕ್ಷಿಗಳಾಗಿದ್ದಾರೆ. ಚಾಮರಾಜದಲ್ಲಿ ಮಾಜಿ ಶಾಸಕ ವಾಸು ಮತ್ತು ಮುಖಂಡ ಕೆ.ಹರೀಶ್‌ಗೌಡ ನಡುವೆ ಪೈಪೋಟಿ ನಡೆಯುತ್ತಿದೆ.

ತಲೆನೋವಾದ ವೀರಶೈವ ಸಮಾಜದ ಆಗ್ರಹ: ಕೃಷ್ಣರಾಜ ಕ್ಷೇತ್ರದಲ್ಲಿ ಕುರುಬ ಸಮಾಜದ ಎಂ.ಕೆ.ಸೋಮಶೇಖರ್‌ ಅವರಿಗೆ ಟಿಕೆಟ್ ಕೊಡಬೇಕೋ ಅಥವಾ ವೀರಶೈವ ಲಿಂಗಾಯತ ಸಮಾಜದವರಿಗೋ ಎಂಬ ಜಿಜ್ಞಾಸೆಯಲ್ಲಿ ಪಕ್ಷದ ನಾಯಕರಿದ್ದಾರೆ ಎನ್ನಲಾಗುತ್ತಿದೆ.

‘ಕೃಷ್ಣರಾಜ ಕ್ಷೇತ್ರದಿಂದ ನಮ್ಮ ಸಮಾಜದವರಿಗೆ ಟಿಕೆಟ್ ಕೊಡಬೇಕು. ಇಲ್ಲದಿದ್ದರೆ ಚುನಾವಣೆಯಲ್ಲಿ ವ್ಯತಿರಿಕ್ತ ಪರಿಣಾಮ ಎದುರಿಸಬೇಕಾಗುತ್ತದೆ’ ಎಂದು ವೀರಶೈವ–ಲಿಂಗಾಯತ ಸಮಾಜದ ಮುಖಂಡರು ಈಚೆಗೆ ಪತ್ರಿಕಾಗೋಷ್ಠಿ ನಡೆಸಿ ಎಚ್ಚರಿಕೆ ನೀಡಿದ್ದಾರೆ. ‘ಪಕ್ಷವು ಜಿಲ್ಲೆಯಲ್ಲಿ ಸಮಾಜದ ಒಬ್ಬರಿಗಾದರೂ ಪ್ರಾತಿನಿಧ್ಯ ನೀಡಬೇಕು ಎನ್ನುವುದು’ ಆ ಸಮಾಜದವರ ಬೇಡಿಕೆ. ಇದು, ‘ಕೈ’ ಟಿಕೆಟ್‌ ಹಂಚಿಕೆ ವಿಚಾರವನ್ನು ಕಗ್ಗಂಟನ್ನಾಗಿ ಮಾಡಿದೆ ಎನ್ನಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT