ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಂಚರತ್ನ ಯೋಜನೆ ಜಾರಿಗೆ ತರಲು ಅಧಿಕಾರ ನೀಡಿ: ಕುಮಾರಸ್ವಾಮಿ

Published 7 ಮೇ 2023, 5:51 IST
Last Updated 7 ಮೇ 2023, 5:51 IST
ಅಕ್ಷರ ಗಾತ್ರ

ಪಿರಿಯಾಪಟ್ಟಣ: ‘ಟಿ.ವಿ.ವಾಹಿನಿಗಳು ಕಾಂಗ್ರೆಸ್ ಮತ್ತು ಬಿಜೆಪಿಯಿಂದ  ಹಣ ಪಡೆದು ಇಬ್ಬರೂ ಅಧಿಕಾರಕ್ಕೆ ಬರುತ್ತಾರೆ ಎಂದು ಸಮೀಕ್ಷೆಯಲ್ಲಿ ಹೇಳುತ್ತಿದ್ದಾರೆ. ನಾನು ಒಬ್ಬ ಕೃಷಿಕ. ನನ್ನ ಬಳಿ ₹ 20 ಕೋಟಿ ಹಣ ಇದ್ದಿದ್ದರೆ ನಾಲ್ಕೈದು ಕ್ಷೇತ್ರದ ಅಭ್ಯರ್ಥಿಗಳ ಚುನಾವಣಾ ವೆಚ್ಚಕ್ಕೆ ಹಣ ನೀಡುತ್ತಿದ್ದೆ’ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ಪಟ್ಟಣದಲ್ಲಿ ಶನಿವಾರ ಜೆಡಿಎಸ್ ಅಭ್ಯರ್ಥಿ ಕೆ.ಮಹದೇವ್ ಪರ ಹಮ್ಮಿಕೊಂಡಿದ್ದ ಕಾರ್ಯಕರ್ತರ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

‘ನಾನು ಎರಡು ಬಾರಿ ಮುಖ್ಯಮಂತ್ರಿಯಾಗಿದ್ದರೂ ರಾಜಕೀಯದಲ್ಲಿ ಹಣ ಮಾಡಲಿಲ್ಲ. ರೈತರ ಸಾಲ ₹ 25 ಸಾವಿರ ಕೋಟಿಯನ್ನು ಶಾಸಕರ ಕ್ಷೇತ್ರಗಳಿಗೆ ನೀಡಿ ಕಮಿಷನ್ ದಂಧೆ ನಡೆಸಬಹುದಿತ್ತು. ಆದರೆ, ರೈತರ ಸಾಲ ತೀರಿಸಿ ರೈತರ ಬಗ್ಗೆ ಇರುವ ಕಾಳಜಿಯನ್ನು ತೋರಿಸಿದ್ದೇನೆ’ ಎಂದರು.

‘ನಾವು ರೈತರಾಗಿ ಸಾಯಬೇಕು ಎಂದು ದೇವೇಗೌಡರ ಆಸೆಯಾಗಿದೆ. ನಾನು ಒಬ್ಬಂಟಿಯಾಗಿ ರಾಜ್ಯವನ್ನು ಸುತ್ತಿ 123 ಗುರಿ ತಲುಪಲು ಈಗಾಗಲೇ 40 ಕ್ಷೇತ್ರಗಳನ್ನು ಸುತ್ತಿದ್ದೇನೆ. ಕಾಂಗ್ರೆಸ್ ಮತ್ತು ಬಿಜೆಪಿಯವರಿಗೆ ಉತ್ತರ ಭಾರತದಿಂದ ಹಲವು ನಾಯಕರು ಬಂದು ಪ್ರಚಾರ ಮಾಡುತ್ತಿದ್ದಾರೆ. ಇಬ್ಬರಿಗೂ ಹಣದ ಕೊರತೆ ಇಲ್ಲ. ನಾನು ಮುಖ್ಯಮಂತ್ರಿಯಾದಾಗ ಪ್ರಾಮಾಣಿಕವಾಗಿದ್ದೆ. ನಾನೂ ಹಣ ಮಾಡಿದ್ದರೆ ಚುನಾವಣೆ ವೆಚ್ಚಕ್ಕೆ ಚಿಂತಿಸಬೇಕಿರಲಿಲ್ಲ’ ಎಂದರು.

ಶಾಸಕ ಕೆ.ಮಹದೇವ್ ಮಾತನಾಡಿ, ‘ಮಾಜಿ ಶಾಸಕ ಕೆ.ವೆಂಕಟೇಶ್ ರಾತ್ರಿ ವೇಳೆ ಜೆಡಿಎಸ್ ಮುಖಂಡರ ಮನೆಯ ಕದ ತಟ್ಟಿ ಹಣದಿಂದ ಅವರನ್ನು ಖರೀದಿಸಲು ಯತ್ನಿಸುತ್ತಿದ್ದಾರೆ. ನಮ್ಮ ಸ್ವಾಭಿಮಾನಿ ಕಾರ್ಯಕರ್ತರು ಎಂದಿಗೂ ಮಾರಿಕೊಳ್ಳುವುದಿಲ್ಲ ಎಂಬ ಭರವಸೆ ಇದೆ’ ಎಂದರು.

ಮೈಮುಲ್ ಅಧ್ಯಕ್ಷ ಪಿ.ಎಂ.ಪ್ರಸನ್ನ ಮಾತನಾಡಿದರು.

ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ನರಸಿಂಹಮೂರ್ತಿ, ತಾಲ್ಲೂಕು ಘಟಕದ ಅಧ್ಯಕ್ಷ ಅಣ್ಣಯ್ಯ ಶೆಟ್ಟಿ, ಕಾರ್ಯಾಧ್ಯಕ್ಷ ಆರ್.ಎಲ್.ಮಣಿ, ಪುರಸಭೆ ಅಧ್ಯಕ್ಷ ಕೆ.ಮಹೇಶ್, ಜಿ.ಪಂ.ಮಾಜಿ ಸದಸ್ಯರಾದ ಎಂ.ಪಿ.ಚಂದ್ರೇಶ್, ಕೆ.ಎಸ್. ಮಂಜುನಾಥ್, ಮುಖಂಡರಾದ ಗೋವಿಂದೇಗೌಡ, ಎಸ್.ರಾಮು, ಎಚ್.ಡಿ.ರಾಜೇಂದ್ರ, ಡಿ.ಎ.ನಾಗೇಂದ್ರ, ಸಿ.ಎನ್.ರವಿ, ಗಗನ್, ಅತ್ತಹರ್ ಮತೀನ್, ಲೋಕೇಶ್ ರಾಜೇ ಅರಸ್, ಮಾಜಿ ಮೇಯರ್ ರವಿಕುಮಾರ್ ಇದ್ದರು.

ಪಿರಿಯಾಪಟ್ಟಣದಲ್ಲಿ ಶನಿವಾರ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಭಾರಿ ಸಂಖ್ಯೆಯಲ್ಲಿ ಕಾರ್ಯಕರ್ತರ ನೆರೆದಿದ್ದರು
ಪಿರಿಯಾಪಟ್ಟಣದಲ್ಲಿ ಶನಿವಾರ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಭಾರಿ ಸಂಖ್ಯೆಯಲ್ಲಿ ಕಾರ್ಯಕರ್ತರ ನೆರೆದಿದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT