ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತವರಿನಲ್ಲಿ ಶುಕ್ರವಾರ ಮಧ್ಯಾಹ್ನದಿಂದ ರಾತ್ರಿ 9.35ರವರೆಗೂ ಕೆಡಿಪಿ ಪ್ರಗತಿ ಪರಿಶೀಲನಾ ಸಭೆ ನಡೆಸಿ, ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದರು.
‘ನಾನು ಮೈಸೂರಿಗೆ ಬಂದಾಗಲೆಲ್ಲಾ ಜನ ಸಣ್ಣ-ಪುಟ್ಟ ಸಮಸ್ಯೆಗಳಿಗೂ ನನ್ನ ಬಳಿಗೆ ಬರುತ್ತಾರೆ. ಇದರ ಅರ್ಥವೇನು? ಅಧಿಕಾರಿಗಳು ಸರಿಯಾಗಿ ಕೆಲಸ ಮಾಡಿದ್ದರೆ ಜನ ನನ್ನ ಬಳಿಗೆ ನೂರಾರು ಸಂಖ್ಯೆಯಲ್ಲಿ ಏಕೆ ಬರುತ್ತಿದ್ದರು’ ಎಂದು ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ಪ್ರಶ್ನಿಸಿದರು.
‘ಅಧಿಕಾರಿಗಳು ಆಸ್ಪತ್ರೆ, ಹಾಸ್ಟೆಲ್, ಬಾರ್‌ಗಳು ಮೊದಲಾದ ಕಡೆಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲಿಸುವುದು ನಿಲ್ಲಿಸಿದ್ದೀರಿ. ಹೀಗಾಗಿ ಭಯ ಇಲ್ಲವಾಗಿದೆ. ದಿಢೀರ್ ಭೇಟಿ ನೀಡಿ ಗುಣಮಟ್ಟ ಪರಿಶೀಲಿಸಬೇಕು; ನಿಯಮ ಬಾಹಿರ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕು’ ಎಂದು ಸೂಚಿಸಿದರು.
‘ಮೈಸೂರು ನನ್ನ ಜಿಲ್ಲೆ. ಇದು ಉಳಿದ ಜಿಲ್ಲೆಗಳಿಗೆ ಮಾದರಿ ಆಗಬೇಕು. ಈ ಜವಾಬ್ದಾರಿಯನ್ನು ಜಿಲ್ಲಾ ಮಟ್ಟದ ಅಧಿಕಾರಿಗಳು ತೆಗೆದುಕೊಳ್ಳಬೇಕು. ಬಹಳ ವರ್ಷಗಳಿಂದ ಬಾಕಿ ಇರುವ ಫೈಲ್‌ಗಳನ್ನು ಪರಿಶೀಲಿಸಬೇಕು. ಏಕೆ ವಿಲೇವಾರಿ ಮಾಡುತ್ತಿಲ್ಲ? ಮೂರು, ನಾಲ್ಕು ಹಾಗೂ ಐದು ವರ್ಷಗಳ ಕಡತಗಳೂ ಏಕೆ ಬಾಕಿ ಇವೆ? ಏಕೆ ಇತ್ಯರ್ಥ ಮಾಡುತ್ತಿಲ್ಲ’ ಎಂದು ಕೇಳಿದರು.
‘ವಿಭಾಗೀಯ ಅಧಿಕಾರಿಗಳು ಚುರುಕಾಗಿದ್ದರೆ ಜಿಲ್ಲಾ ಮಟ್ಟದ ಅಧಿಕಾರಿಗಳೂ ಅಲರ್ಟ್ ಆಗಿರುತ್ತಾರೆ. ಕಚೇರಿ ಬಾಗಿಲಿಗೆ ಬರುವ ರೈತರನ್ನು ಲಘುವಾಗಿ ನೋಡುವುದನ್ನು ನಾನು ಸಹಿಸುವುದಿಲ್ಲ. ಬಹಳ ಮಂದಿ ಅಧಿಕಾರಿಗಳು ಕಚೇರಿಯಲ್ಲೇ ಇರುವುದಿಲ್ಲ; ಪಿಡಿಒಗಳು ತಾಲ್ಲೂಕು ಕೇಂದ್ರದಲ್ಲೂ ಇರುವುದಿಲ್ಲ ಎನ್ನುವ ದೂರುಗಳೂ ನನಗೆ ಬರುತ್ತಿವೆ. ವೈದ್ಯರು ಕರ್ತವ್ಯದ ಸ್ಥಳದಲ್ಲಿ ನೆಲೆಸುತ್ತಿಲ್ಲ. ದೂರದ ಊರಿಂದ ಓಡಾಡುತ್ತಿದ್ದಾರೆ. ಇದನ್ನು ಸಹಿಸಬೇಕಾ’ ಎಂದು ಪ್ರಶ್ನಿಸಿದರು.
‘ಹೊಣೆಗಾರಿಕೆಗಳನ್ನು ನೀವು ಸೂಕ್ತವಾಗಿ ನಿರ್ವಹಿಸಿದರೆ, ಸಮಸ್ಯೆಗಳನ್ನು ಬಗೆಹರಿಸುವುದು ಕಷ್ಟವೇನಲ್ಲ. ನಿಮ್ಮ ಹಂತದಲ್ಲೇ ಬಗೆಹರಿಯುವ ಸಮಸ್ಯೆಗಳನ್ನು ಉದಾಸೀನ ಮಾಡದೆ ಪರಿಹರಿಸಬೇಕು. ಜನ ನನ್ನ ಬಳಿಗೆ ಬರುತ್ತಿದ್ದಾರೆ ಎಂದರೆ ನಿಮ್ಮ ಹಂತದಲ್ಲಿ ಕೆಲಸಗಳು ಆಗುತ್ತಿಲ್ಲ ಎಂದೇ ಅರ್ಥ; ನೀವು ಜನರ ಪರವಾಗಿ ಇಲ್ಲ ಎಂದೇ ಅರ್ಥ. ಕೆಲಸವನ್ನು ಗಂಭೀರವಾಗಿ ಪರಿಗಣಿಸಿ ಜನರ ಸಮಸ್ಯೆ ಪರಿಹರಿಸಬೇಕು’ ಎಂದು ತಾಕೀತು ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.