ಮೈಸೂರು: ಕೆ.ಆರ್. ಆಸ್ಪತ್ರೆಯ ಲಿಫ್ಟ್ ಕೆಟ್ಟು ನಿಂತಿದ್ದ ಕಾರಣ ಚಿಕಿತ್ಸೆಗಾಗಿ ಸೋಮವಾರ ಬಂದಿದ್ದ ವೃದ್ಧೆಯನ್ನು ಯುವಕರಿಬ್ಬರು ಪ್ಲಾಸ್ಟಿಕ್ ಕುರ್ಚಿಯಲ್ಲಿ ಕರೆದೊಯ್ದಿದ್ದಾರೆ. ಈ ಕುರಿತ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ಸರ್ಕಾರಿ ಆಸ್ಪತ್ರೆಯಲ್ಲಿನ ಅವ್ಯವಸ್ಥೆ ಬಗ್ಗೆ ಸಾರ್ವಜನಿಕರು ಟೀಕಿಸಿದ್ದಾರೆ.
ವೃದ್ಧೆಯೊಬ್ಬರು ಕಣ್ಣಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ಬಂದಿದ್ದರು. ಎರಡನೇ ಅಂತಸ್ತಿನಲ್ಲಿದ್ದ ವೈದ್ಯರ ಕಚೇರಿಗೆ ಅವರು ತೆರಳಬೇಕಿತ್ತು. ಲಿಫ್ಟ್ ಕೆಟ್ಟು ಹೋಗಿದ್ದು, ಗಾಲಿ ಕುರ್ಚಿಗಳೂ ಬಳಸಲು ಸಾಧ್ಯವಾಗದ ಸ್ಥಿತಿಯಲ್ಲಿದ್ದವು. ಕೆಲವೊಂದರ ಚಕ್ರಕ್ಕೆ ಸಂಕೋಲೆ ಹಾಕಿ ಬೀಗ ಜಡಿಯಲಾಗಿತ್ತು. ಹೀಗಾಗಿ ಯುವಕರಿಬ್ಬರು ವೃದ್ಧೆಯನ್ನು ಪ್ಲಾಸ್ಟಿಕ್ ಕುರ್ಚಿಯಲ್ಲಿ ಕೂರಿಸಿ ಮೆಟ್ಟಿಲು ಮೂಲಕ ಕರೆದೊಯ್ದರು. ಇದನ್ನು ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಹಾಕಲಾಗಿತ್ತು.
ವಿಷಯ ತಿಳಿದು ಆಸ್ಪತ್ರೆಗೆ ದೌಡಾಯಿಸಿದ ಶಾಸಕ ಕೆ.ಹರೀಶ್ ಗೌಡ ಅವರು ಆಸ್ಪತ್ರೆ ಡೀನ್ ಡಾ.ಕೆ.ಆರ್.ದಾಕ್ಷಾಯಿಣಿ ಅವರಿಂದ ಮಾಹಿತಿ ಪಡೆದರು.
‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆಯಲ್ಲಿನ ಆಸ್ಪತ್ರೆಯ ಬಗ್ಗೆ ಕಾಳಜಿ ಇಲ್ಲವೇ? ಸುಮಾರು 60 ಮಂದಿ ಪರಿಚಾರಕರಿದ್ದು, ಯಾಕೆ ಯಾರೂ ಸಹಕರಿಸಿಲ್ಲ. ಎಲ್ಲರಿಗೂ ಸರಿಯಾಗಿ ವೇತನ ನೀಡುತ್ತಿಲ್ಲವೇ? ಯಾಕೆ ಸರ್ಕಾರಿ ವ್ಯವಸ್ಥೆಗೆ ಕೆಟ್ಟ ಹೆಸರು ತರುತ್ತೀರಿ’ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು.
ಗಾಲಿಕುರ್ಚಿ ಹಾಗೂ ಸ್ಟ್ರೆಕ್ಚರ್‌ಗಳಿಟ್ಟಿದ್ದ ಕೊಠಡಿಯ ಬೀಗದ ಕೀ ದೊರೆಯದಿದ್ದಾಗ, ಶಾಸಕರ ನೇತೃತ್ವದಲ್ಲಿ ಬೀಗ ಮುರಿಯಲಾಯಿತು. ಅದರೊಳಗೆ ಸಣ್ಣ–ಪುಟ್ಟ ಹಾನಿಯಾಗಿದ್ದ ಗಾಲಿಕುರ್ಚಿಗಳನ್ನು ರಿಪೇರಿ ಮಾಡಿಸದಿದ್ದಕ್ಕೆ ಶಾಸಕರು ಮೇಲ್ವಿಚಾರಕಿಯನ್ನು ತರಾಟೆಗೆ ತೆಗೆದುಕೊಂಡರು.
ಅವ್ಯವಸ್ಥೆಯ ಬಗ್ಗೆ ಮೇಲ್ವಿಚಾರಕಿ ಶೋಭಾ ಅವರನ್ನು ಪ್ರಶ್ನಿಸಿದಾಗ ಅವರು, ‘ನಾನು ರಾಜೀನಾಮೆ ನೀಡುತ್ತೇನೆ’ ಎಂದು ಹೇಳಿ ಕಣ್ಣೀರು ಸುರಿಸಿ ತೆರಳಿದರು. ನಂತರ ಶಾಸಕರೇ ಅವರನ್ನು ಮನವೊಲಿಸಿದರು ಎಂದು ಮೂಲಗಳು ತಿಳಿಸಿವೆ.
‘ಡೀನ್ ಹಾಗೂ ಮೇಲ್ವಿಚಾರಕಿ ಸರಿಯಾಗಿ ಕೆಲಸ ಮಾಡುತ್ತಿದ್ದಾರೆ. ಸಿಬ್ಬಂದಿಯು ಅಧಿಕಾರಿಗಳ ಮಾತು ಕೇಳುತ್ತಿಲ್ಲ. ಸಮಸ್ಯೆ ಬಗೆಹರಿಸಲು ಸೂಚಿಸಿದ್ದೇನೆ’ ಎಂದು ಶಾಸಕ ಹರೀಶ್ ಗೌಡ ತಿಳಿಸಿದರು.
‘ಪ್ರಕರಣಕ್ಕೆ ಕಾರಣರಾದವರಿಗೆ ನೋಟಿಸ್ ನೀಡಿದ್ದೇವೆ. ಕೆಟ್ಟು ಹೋಗಿರುವ ಲಿಫ್ಟ್ ಹಾಗೂ ಗಾಲಿ ಕುರ್ಚಿ ರಿಪೇರಿ ಮಾಡಿಸಲು ಸೂಚಿಸಲಾಗಿದೆ. ಆಸ್ಪತ್ರೆಗೆ ತಲಾ 25 ಗಾಲಿ ಕುರ್ಚಿ ಹಾಗೂ ಸ್ಟ್ರಕ್ಚರ್ ಅಗತ್ಯವಿದ್ದು, ಪೂರೈಕೆಗೆ ಕ್ರಮ ವಹಿಸಲಾಗುವುದು’ ಎಂದು ಡಾ.ಕೆ.ಆರ್.ದಾಕ್ಷಾಯಿಣಿ ‘ಪ್ರಜಾವಾಣಿ’ಗೆ ತಿಳಿಸಿದರು.
ಆಸ್ಪತ್ರೆ ವ್ಯವಸ್ಥೆ ಕುರಿತು ಅಪಸ್ವರ ಶಾಸಕ ಕೆ.ಹರೀಶ್ ಗೌಡ ಭೇಟಿ ಅಗತ್ಯ ದುರಸ್ತಿ ಕಾರ್ಯ ಕೈಗೊಳ್ಳುವಂತೆ ಸೂಚನೆ
ವಯೋವೃದ್ಧರಿಗೆ ವೈದ್ಯರೇ ಕೆಳಗೆ ತೆರಳಿ ಚಿಕಿತ್ಸೆ ನೀಡಲು ಸೂಚಿಸಿದ್ದೇನೆ. ಕೆಳಭಾಗದಲ್ಲಿ ರೋಗಿಗಳ ವಿಚಾರಣೆಗೆ ಹಾಗೂ ಮಾಹಿತಿ ನೀಡಲು ಪರಿಚಾರಕರನ್ನು ನೇಮಿಸಿದ್ದೇವೆ-ಡಾ.ಕೆ.ಆರ್.ದಾಕ್ಷಾಯಿಣಿ ಕೆ.ಆರ್. ಆಸ್ಪತ್ರೆ ಡೀನ್
ಅಧಿಕಾರಿ ಸಿಬ್ಬಂದಿ ನಡುವೆ ಆರೋಪ– ಪ್ರತ್ಯಾರೋಪ
ಶಾಸಕರು ಭೇಟಿ ನೀಡಿ ಮಾಹಿತಿ ಪಡೆಯುವಾಗ ಅಧಿಕಾರಿ ಹಾಗೂ ಸಿಬ್ಬಂದಿ ಆರೋಪ ಪ್ರತ್ಯಾರೋಪ ಮಾಡಿದರು. ‘ಗಾಲಿ ಕುರ್ಚಿ ಹಾಳಾಗಿರುವ ಬಗ್ಗೆ ಮಾಹಿತಿ ನೀಡದೇ ಅವನ್ನು ಕೊಠಡಿಯಲ್ಲಿ ಇಟ್ಟಿದ್ದಾರೆ’ ಎಂದು ಆಸ್ಪತ್ರೆಯ ಮೇಲ್ವಿಚಾರಕಿ ಶೋಭಾ ಸಿಬ್ಬಂದಿ ಕಡೆ ಬೆರಳು ತೋರಿಸಿದರು. ಅವರೂ ಅದನ್ನು ತಮ್ಮದೇ ರೀತಿಯಲ್ಲಿ ಸಮರ್ಥಿಸಿಕೊಂಡರು. ‘ಮೇಲ್ವಿಚಾರಕಿ ಶೋಭಾ ಅವರು 15 ಗಾಲಿ ಕುರ್ಚಿ ಇರುವುದಾಗಿ ತಿಳಿಸಿದ್ದರು. ದಾಖಲೆಯಲ್ಲೂ ಇದೇ ರೀತಿ ಉಲ್ಲೇಖಿಸಲಾಗಿದೆ’ ಎಂದು ಆಸ್ಪತ್ರೆ ಡೀನ್ ಡಾ.ಕೆ.ಆರ್.ದಾಕ್ಷಾಯಿಣಿ ತಿಳಿಸಿದರು. ಒಟ್ಟಿನಲ್ಲಿ ಎಲ್ಲರೂ ತಮ್ಮ ತಪ್ಪಿಲ್ಲ ಎಂದು ಜಾರಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.