ಮಂಗಳವಾರ, 28 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಕ್ತ ವಿವಿಯಲ್ಲಿ ಸೆಮಿಸ್ಟರ್ ಪದ್ಧತಿ: ಉದ್ಯೋಗಿಗಳ ಓದಿನ ಕನಸಿಗೆ ಅಡ್ಡಿ

ಮುಕ್ತ ವಿವಿ; ವಾರ್ಷಿಕ ಪರೀಕ್ಷೆ ಪದ್ಧತಿಯನ್ನೇ ಮುಂದುವರಿಸಲು ಆಗ್ರಹ
Published 9 ಜೂನ್ 2023, 1:32 IST
Last Updated 9 ಜೂನ್ 2023, 1:32 IST
ಅಕ್ಷರ ಗಾತ್ರ

ಮೈಸೂರು: ಇಲ್ಲಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯವು ಸ್ನಾತಕೋತ್ತರ ಪದವಿ ಕೋರ್ಸುಗಳಿಗೆ ಸೆಮಿಸ್ಟರ್‌ ಪದ್ಧತಿ ಜಾರಿಗೊಳಿಸಿದ್ದು, ಉದ್ಯೋಗದ ಜೊತೆಗೇ ಉನ್ನತ ಶಿಕ್ಷಣದ ಆಸೆ ಹೊತ್ತ ಸಾವಿರಾರು ಮಂದಿಗೆ ತೊಂದರೆ ಎದುರಾಗಿದೆ.

ಮುಕ್ತ ವಿವಿಗೆ ಪದವಿ ಹಾಗೂ ಸ್ನಾತಕೋತ್ತರ ಪದವಿ ಶಿಕ್ಷಣಕ್ಕಾಗಿ ದಾಖಲಾಗುವವರಲ್ಲಿ ಶೇ 70–80ರಷ್ಟು ಮಂದಿ ವಿವಿಧ ಕ್ಷೇತ್ರಗಳ ಉದ್ಯೋಗಿಗಳೇ ಇದ್ದಾರೆ.

ಈ ಹಿಂದೆ ಕೋರ್ಸುಗಳಿಗೆ ವಾರ್ಷಿಕ ಪರೀಕ್ಷೆ ಪದ್ಧತಿ ಇತ್ತು. ಆದರೆ, 2021–22ನೇ ಸಾಲಿನಿಂದ ವಿಶ್ವವಿದ್ಯಾಲಯವು ಸಿಬಿಸಿಎಸ್‌ ಪದ್ಧತಿ ಅಳವಡಿಸಿಕೊಂಡಿದೆ. ಅದರಂತೆ ಸ್ನಾತಕೋತ್ತರ ಕೋರ್ಸುಗಳಿಗೆ ವಾರ್ಷಿಕ ಪರೀಕ್ಷೆಗೆ ಬದಲಾಗಿ ಸೆಮಿಸ್ಟರ್ ಪದ್ಧತಿ ಪರಿಚಯಿಸಲಾಗಿದೆ. ಅದರಿಂದಾಗಿ ಪ್ರತಿ ಸೆಮಿಸ್ಟರ್‌ಗೆ 5 ದಿನ ಪರೀಕ್ಷೆ ಹಾಗೂ 10 ದಿನ ಸಂಪರ್ಕ ತರಗತಿಯಂತೆ 15 ದಿನವನ್ನು ಅಭ್ಯರ್ಥಿಗಳು ಮೀಸಲಿಡಬೇಕಿದೆ.

‘ಇಗ್ನೋ ಮೊದಲಾದ ವಿಶ್ವವಿದ್ಯಾಲಯಗಳು ಸಿಬಿಸಿಎಸ್‌ ಪದ್ಧತಿಯನ್ನು ಅಳವಡಿಸಿಕೊಂಡಿದ್ದರೂ ವಾರ್ಷಿಕ ಪರೀಕ್ಷೆ ಮಾನದಂಡವನ್ನೇ ಅನುಸರಿಸುತ್ತಿವೆ. ಅದರಂತೆ ಮುಕ್ತ ವಿ.ವಿಯೂ ಸ್ನಾತಕೋತ್ತರ ಪದವಿ ದೂರಶಿಕ್ಷಣ ಕೋರ್ಸುಗಳಿಗೆ ವಾರ್ಷಿಕ ಪರೀಕ್ಷೆ ಪದ್ಧತಿಯನ್ನೇ ಮುಂದುವರಿಸಬೇಕು’ ಎನ್ನುವುದು ಶಿಕ್ಷಣ ಆಕಾಂಕ್ಷಿಗಳ ಆಗ್ರಹ.

‘ವಾರ್ಷಿಕ ಪರೀಕ್ಷೆ ಪದ್ಧತಿಯಲ್ಲಿ ಅಭ್ಯರ್ಥಿಗಳಿಗೆ ಕನಿಷ್ಠ 15 ದಿನ ರಜೆ ಸಾಕಿತ್ತು. ಈಗ ವರ್ಷಕ್ಕೆ ಕನಿಷ್ಠ 30 ದಿನವಾದರೂ ರಜೆ ಬೇಕು. ಉದ್ಯೋಗದಲ್ಲಿರುವವರಿಗೆ ಅಷ್ಟು ದಿನ ರಜೆ ಸಿಗುವುದೇ ಕಷ್ಟ. ಅದರಿಂದ ಸ್ನಾತಕೋತ್ತರ ಪದವಿಗೆ ಪ್ರವೇಶ ಪಡೆಯಲು ಯೋಚನೆ ಮಾಡುವಂತಾಗಿದೆ’ ಎಂದು ಮೈಸೂರು ಜಿಲ್ಲೆಯ ಸರಗೂರು ತಾಲ್ಲೂಕಿನ ಅಡಹಳ್ಳಿಯ ಆರ್. ನವೀನ್‌ಕುಮಾರ್ ಅಸಹಾಯಕತೆ ವ್ಯಕ್ತಪಡಿಸುತ್ತಾರೆ.

35 ಕೋರ್ಸ್‌: ವಿಶ್ವವಿದ್ಯಾಲಯವು ಒಟ್ಟು 35 ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಅಧ್ಯಯನಕ್ಕೆ ಅವಕಾಶ ನೀಡಿದೆ. ಕಲಾ ವಿಭಾಗದ ಒಟ್ಟು 16 ವಿಷಯಗಳ ಪೈಕಿ 12 ವಿಷಯಗಳಿಗೆ ಸೆಮಿಸ್ಟರ್ ಪದ್ಧತಿ ಜಾರಿಯಾಗಿದ್ದು, ಉಳಿದ ನಾಲ್ಕು ವಿಷಯಗಳಿಗೆ ವಾರ್ಷಿಕ ಪರೀಕ್ಷೆಯೇ ಮುಂದುವರಿದಿದೆ. ಎಂ.ಕಾಂನ 4, ಎಂಬಿಎನ 7, ಎಂ.ಎಸ್ಸಿಯಲ್ಲಿನ 15 ಕೋರ್ಸುಗಳಿಗೆ ಸೆಮಿಸ್ಟರ್‌ ಪದ್ಧತಿ ಜಾರಿಗೆ ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT